×
Ad

ಶತಮಾನಗಳಷ್ಟು ಪುರಾತನವಾದ ಮಸೀದಿಯ ಫೋಟೊ ಹಂಚಿಕೊಂಡ ಯೂಸುಫ್ ಪಠಾಣ್: ಅದು ಹಿಂದೂ ದೇವಾಲಯ ಎಂದ ಬಿಜೆಪಿ

Update: 2025-10-18 19:26 IST

 ಯೂಸುಫ್ ಪಠಾಣ್ |Photo Credit : X \ @iamyusufpathan

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ ಹಾಗೂ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಹಂಚಿಕೊಂಡಿರುವ ಶತಮಾನಗಳಷ್ಟು ಪುರಾತನವಾದ ಮಾಲ್ಡಾದಲ್ಲಿನ ಮಸೀದಿಯೊಂದರ ಚಿತ್ರ ಇದೀಗ ರಾಜಕೀಯ ವಿವಾದಕ್ಕೆ ಗ್ರಾಸವಾಗಿದೆ.

ಇದರ ಬೆನ್ನಿಗೇ, ಈ ಮಸೀದಿ ಮೂಲತಃ ‘ಆದಿನಾಥ ದೇವಾಲಯ’ವಾಗಿತ್ತು ಎಂದು ಬಿಜೆಪಿ ಆರೋಪಿಸಿದೆ. ಆ ಮಸೀದಿಯನ್ನು ದೇವಾಲಯದ ಮೇಲೆ ನಿರ್ಮಿಸಲಾಗಿದ್ದು, ಕಳೆದ ವರ್ಷ ಕೆಲವು ಅರ್ಚಕರು ಅಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸಿದ್ದರು ಎಂದು ಮತ್ತೆ ಕೆಲವು ಹಿಂದೂ ಗುಂಪುಗಳು ವಾದಿಸಿವೆ.

ಅಕ್ಟೋಬರ್ 16ರಂದು 14ನೇ ಶತಮಾನದ ಈ ಮಸೀದಿಗೆ ಭೇಟಿ ನೀಡಿದ್ದ ಯೂಸುಫ್ ಪಠಾಣ್, ಮಸೀದಿಯ ವಾಸ್ತುಶಿಲ್ಪ ಹಾಗೂ ಐತಿಹಾಸಿಕ ಮಹತ್ವಗಳನ್ನು ವಿವರಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು.

ಕ್ರಿ.ಶ. 1373ರಿಂದ ಕ್ರಿ.ಶ. 1375ರ ನಡುವೆ ಇಲ್ಯಾಸ್ ಶಾಹಿ ರಾಜವಂಶದ ಸುಲ್ತಾನ್ ಸಿಕಂದರ್ ಶಾ ನಿರ್ಮಿಸಿದ್ದ ಅದೀನಾ ಮಸೀದಿ ಒಂದು ಕಾಲದಲ್ಲಿ ಭಾರತ ಉಪಖಂಡದ ಅತಿ ದೊಡ್ಡ ಮಸೀದಿ ಎಂಬ ಹಿರಿಮೆಗೆ ಪಾತ್ರವಾಗಿತ್ತು. ಈ ಮಸೀದಿಯು ಬಂಗಾಳದ ಮಧ್ಯಕಾಲೀನ ಇಸ್ಲಾಮಿಕ್ ವಾಸ್ತುಶಿಲ್ಪಕ್ಕೆ ಪ್ರಮುಖ ನಿದರ್ಶನವಾಗಿ ಉಳಿದುಕೊಂಡು ಬಂದಿದೆ.

ಯೂಸುಫ್ ಪಠಾಣ್ ರ ಪೋಸ್ಟ್ ಬೆನ್ನಿಗೇ ಅಂತರ್ಜಾಲದಲ್ಲಿ ಪ್ರತಿಕ್ರಿಯಿಸಿದ್ದ ಬಿಜೆಪಿ, ಆ ಮಸೀದಿ ‘ಆದಿನಾಥ ದೇವಾಲಯ’ ಎಂದು ಹೇಳುವ ಮೂಲಕ, ಈ ಪ್ರಾಂತ್ಯದಲ್ಲಿ ಕೋಮಕಲಹಕ್ಕೆ ತುಪ್ಪ ಸುರಿದಿದ್ದ ಪ್ರತಿಪಾದನೆಗೆ ಮರುಜೀವ ನೀಡಿತ್ತು.

ಅದೀನ ಮಸೀದಿಯ ವಾಸ್ತುವಿನ್ಯಾಸವು ಬಂಗಾಳಿ, ಅರಬ್ ಮತ್ತು ಪರ್ಷಿಯನ್ ವಾಸ್ತುಶಿಲ್ಪದಿಂದ ಪ್ರಭಾವಿತವಾಗಿದ್ದು, ಡಮಾಸ್ಕಸ್ ನಲ್ಲಿರುವ ಉಮಯ್ಯಾದ್ ಮಸೀದಿಯ ಹೋಲಿಕೆ ಹೊಂದಿದೆ. ಆದರೆ, ವರ್ಷಗಳುರುಳಿದಂತೆ, ಮಸೀದಿಯ ಕಟ್ಟಡದೊಳಗೆ ಪತ್ತೆಯಾಗಿರುವ ವಸ್ತುಗಳು ಇಸ್ಲಾಮಿಕ್ ಪೂರ್ವದ ಕುರುಹುಗಳಂತೆ ಕಂಡು ಬಂದಿದ್ದು, ಈ ಮಸೀದಿಯನ್ನು ದೇವಾಲಯವೊಂದನ್ನು ನೆಲಸಮಗೊಳಿಸಿ ನಿರ್ಮಿಸಲಾಗಿದೆ ಎಂದು ಹಲವಾರು ಹಿಂದೂ ಗುಂಪುಗಳು ಆರೋಪಿಸಿದ್ದವು.

ಮಸೀದಿಯ ಸಂಕೀರ್ಣದಲ್ಲಿ ಹಿಂದೂ ದೇವತೆಗಳನ್ನು ಹೋಲುವಂತಹ ಕೆತ್ತನೆಗಳು ಹಾಗೂ ಸಂಕೇತಗಳು ಪತ್ತೆಯಾಗಿವೆ ಎಂದು ಪ್ರತಿಪಾದಿಸಿದ್ದ ಹಿಂದೂ ಅರ್ಚಕರ ಗುಂಪೊಂದು, 2024ರಲ್ಲಿ ಮಸೀದಿಯ ಆವರಣದಲ್ಲಿ ಧಾರ್ಮಿಕ ಆಚರಣೆಗಳನ್ನೂ ನಡೆಸಿತ್ತು. ಈ ಘಟನೆಯಿಂದ ಮಾಲ್ಡಾದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿ, ಈ ಸಂರಕ್ಷಿತ ಸ್ಮಾರಕದ ಸುತ್ತ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು.

ಆದರೆ, ಇಸ್ಲಾಮಿಕ್ ಪರಂಪರೆಯ ಸ್ಮಾರಕವಾದ ಅದೀನಾ ಮಸೀದಿಯನ್ನು ಬಂಗಾಳದ ಸುಲ್ತಾನರ ಆಡಳಿತದಲ್ಲಿ ನಿರ್ಮಿಸಲಾಗಿತ್ತು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸ್ಪಷ್ಟಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News