ವಾಸ್ತವ ಅಂಕಿ-ಅಂಶಗಳನ್ನಾದರೂ ಗಮನಿಸಿ | ಜಾತಿ ಗಣತಿ ಅನುಷ್ಠಾನ ಬೆಂಬಲಿಸಿ
ಎಚ್. ಕಾಂತರಾಜು ಮತ್ತು ಕೆ. ಜಯಪ್ರಕಾಶ್ ಹೆಗ್ಡೆ ಇವರ ನೇತೃತ್ವದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕರ್ನಾಟಕ ಸರಕಾರಕ್ಕೆ ಸಲ್ಲಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2018ರ ದತ್ತಾಂಶಗಳ ಅಧ್ಯಯನ ವರದಿ-2024ರಲ್ಲಿ ನಮೂದಿಸಿರುವ ಪ್ರಮುಖ ಅಂಶಗಳೆಂದರೆ ಕಾಂತರಾಜು ಆಯೋಗ ಕಾರ್ಯನಿರ್ವಹಿಸಲು ಅಂದಿನ ಸರಕಾರ ರೂ. 155.51 ಕೋಟಿ ವೆಚ್ಚ ಮಾಡಿದೆ. ರಾಜ್ಯದ 1,35,35,772 ಮನೆಗಳಿಂದ 5,98,14,942 ವ್ಯಕ್ತಿಗಳಿಂದ, 1,351 ಜಾತಿಗಳಿಂದ, 2011ರ ರಾಜ್ಯದ ಜನಸಂಖ್ಯೆ 6.35 ಕೋಟಿ ಜನಸಂಖ್ಯೆ ಪೈಕಿ, 5.98 ಕೋಟಿ ಜನಸಂಖ್ಯೆ(ಶೇ. 94.17)ಯಿಂದ ದತ್ತಾಂಶಗಳನ್ನು ಸಂಗ್ರಹ ಮಾಡಲಾಗಿದೆ. ಕೇವಲ 37 ಲಕ್ಷ ಜನಸಂಖ್ಯೆ ಮಾತ್ರ ಸಮೀಕ್ಷೆಯಲ್ಲಿ ಪಾಲ್ಗೊಂಡಿಲ್ಲ;
ದೇಶದ ಪ್ರಬಲ ಜಾತಿಗಳು, ಮೇಲ್ವರ್ಗದವರ ಮನೆಯೊಳಗಿನ ಕಣಜಗಳಲ್ಲಿ ಧಾನ್ಯಗಳು ರಾಶಿಗೊಳ್ಳಲು; ಅವರು ತಿಂದು ಮಿಕ್ಕಿದ್ದನ್ನು, ಬೆಲೆ ಹೆಚ್ಚಳವಾದಾಗ ಕಾಳಸಂತೆಯಲ್ಲಿ ಮಾರಾಟ ಮಾಡಿ ಅವರು ಲಾಭಗಳಿಸಲು; ಅವರ ಮನೆ/ಬ್ಯಾಂಕಿನ ತಿಜೋರಿಗಳಲ್ಲಿ ಹಣ ಶೇಖರಣೆಗೊಳ್ಳಲು; ತಲೆತಲಾಂತರಗಳಿಂದ ದಲಿತರ, ಶೂದ್ರರ, ಅಲ್ಪಸಂಖ್ಯಾತರ ಶ್ರಮದ ಬೆವರು ಸುರಿದಿದೆ, ಎದೆ ಬಗೆದಿದೆ, ದೇಹ, ಮೂಳೆ ಸವಿದಿದೆ. ಇಷ್ಟು ಸಾಲದೆಂಬಂತೆ, ರಾಜಪ್ರಭುತ್ವವಿದ್ದಾಗ ಮೇಲ್ವರ್ಗದವರು ಶಾನುಭೋಗ, ಪಟೇಲ, ಜೋಡಿದಾರ, ದಿವಾನ, ಸಾಮಂತ, ರಾಜರಾಗಲು ಕೆಳವರ್ಗದವರು ಹೆಗಲು ಕೊಟ್ಟಿದ್ದೇವೆ. ಜೈ ಕಾರ ಹಾಕಿದ್ದೇವೆ. ಈಗ ಪ್ರಜಾಪ್ರಭುತ್ವದಲ್ಲಿ ಅವರು ರಾಜಕಾರಣಿ, ಶಾಸಕ, ಮಂತ್ರಿ ಆಗಲು ವೋಟುಗಳನ್ನು ಹಾಕಿದ್ದೇವೆ. ಹೇಳಿ ನೀವು ನಮಗೆ ಏನನ್ನು ನೀಡಿದ್ದೀರಾ ಅಥವಾ ಮಾಡಿದ್ದೀರಾ? ಭಾರತ ಸಂವಿಧಾನ ಮತ್ತು ಕಾನೂನುಗಳಿದ್ದರೂ, ಬಡವರು ಸಾಂವಿಧಾನಿಕ ಹಕ್ಕುಗಳನ್ನು ಪಡೆಯಲು ಕಳೆದ 75 ವರ್ಷಗಳಿಂದಲೂ ಮೇಲ್ವರ್ಗ ಅಡ್ಡಿಯಾಗಿದೆ. ಈ ಕಾರಣಗಳಿಂದ ಈಗಲೂ ಸಮಾಜ ಅಸಮಾನತೆಯಿಂದ ಕೂಡಿದೆ.
ಸಮಾನತೆಗಾಗಿ-ದಾರ್ಶನಿಕರು, ರಾಷ್ಟ್ರ ನಾಯಕರ ಶ್ರಮ, ಸರಕಾರಿ ಆಯೋಗಗಳ ವರದಿಗಳು
1. ಜಾತಿ ಕೆಲವರಿಗೆ ವರ, ಹಲವರಿಗೆ ಶಾಪ, ಜಾತಿ ಹೆಸರಿನ ಮೇಲರಿಮೆಯಿಂದ ಕೆಲವರು ಮೆರೆಯುವುದುಂಟು, ಕೆಲವರು ನರಳುವುದುಂಟು. ಸಮಾಜದ ಒಳಗಿನ ಈ ಮೇಲು-ಕೀಳು ಬಡತನ, ಅಸಮಾನತೆ ಇವುಗಳನ್ನು ಹೋಗಲಾಡಿಸಲು ಬುದ್ಧ , ಬಸವ, ಕನಕದಾಸರು, ಸಮಾಜ ಸುಧಾರಕರು, ದಾರ್ಶನಿಕರು, ಶತಶತಮಾನಗಳ ಹಿಂದೆಯೇ ಶ್ರಮಿಸಿದ್ದರು;
2. 18ನೇ ಶತಮಾನದಲ್ಲಿ ಸಮಾಜದಲ್ಲಿ ಸಮಾನತೆ ತರುವ ಸಲುವಾಗಿ, ಮಹಾರಾಷ್ಟ್ರದಲ್ಲಿ ಸಾವಿತ್ರಿಬಾಯಿ ಫುಲೆ ದಲಿತರ ಕೇರಿಗಳಿಗೆ ಹೋಗಿ, ಅಸ್ಪಶ್ಯರಿಗೆ ಶಿಕ್ಷಣ ಕೊಡಿಸುವ ಪ್ರಯತ್ನ ಮಾಡಿದರು. ಅ ವೇಳೆಗೆ ಭಾರತವನ್ನು ಆಳ್ವಿಕೆ ಮಾಡುತ್ತಿದ್ದ ಬ್ರಿಟಿಷ್ ಸರಕಾರ ಬ್ರಾಹ್ಮಣರಿಗೆ ಮಾತ್ರವಿದ್ದ ಗುರುಕುಲಗಳನ್ನು ರದ್ದುಪಡಿಸಿ, ಸಾರ್ವಜನಿಕ ಶಿಕ್ಷಣವನ್ನು ಜಾರಿಗೊಳಿಸಿತು;
3. 1902ರಲ್ಲಿ ಮಹಾರಾಷ್ಟ್ರ (ಕೊಲ್ಲಾಪುರ)ದ ಶಾಹು ಮಹಾರಾಜರು ಸಮಾಜದಲ್ಲಿ ಸಮಾನತೆ ತರುವ ಸಲುವಾಗಿ, ಉದ್ಯೋಗದಲ್ಲಿ ಮೀಸಲಾತಿ ಜಾರಿ ಮಾಡಿದರು;
4. 1921ರಲ್ಲಿ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಸಮಾಜದಲ್ಲಿ ಸಮಾನತೆ ತರುವ ಸಲುವಾಗಿ ಉದ್ಯೋಗದಲ್ಲಿ ಮೀಸಲಾತಿ ಜಾರಿಗೊಳಿಸಿದರು;
5. 1933ರಲ್ಲಿ ಬ್ರಿಟಿಷ್ ಪ್ರಧಾನ ಮಂತ್ರಿ ರಾಮ್ಸ್ ಮಾಕ್ ಡೊನಾಲ್ಡ್ ಭಾರತದಾದ್ಯಂತ ಸಮಾನತೆ ತರುವ ಸಲುವಾಗಿ ಉದ್ಯೋಗದಲ್ಲಿ ಮೀಸಲಾತಿ ಜಾರಿ ಮಾಡಿದರು;
6. 1947ರಲ್ಲಿ ಭಾರತ ಸ್ವತಂತ್ರಗೊಂಡಾಗ, ಡಾ. ಬಿ.ಆರ್. ಅಂಬೇಡ್ಕರ್ ನೇತೃತ್ವದಲ್ಲಿ ಭಾರತ ಸಂವಿಧಾನ ರಚನೆ ಮಾಡಿ, ಬಹುತೇಕ ಶೋಷಿತ ಸಮಾಜಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲಾಯಿತು;
7. 1953ರಲ್ಲಿ ಭಾರತದಲ್ಲಿ ಹಿಂದುಳಿದ ವರ್ಗಗಳ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ಮಾಡುವ ಸಲುವಾಗಿ ಅಂದಿನ ಪ್ರಧಾನಿ ಜವಾಹರ ಲಾಲ್ ನೆಹರೂ ಕಾಕಾ ಕಾಲೇಲ್ಕರ್ ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗಗಳ ಆಯೋಗವನ್ನು ನೇಮಕ ಮಾಡಿದರು;
8. 1979ರಲ್ಲಿ ದೇಶದ ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು, ಹಿಂದುಳಿದ ವರ್ಗಗಳ ಸ್ಥಿತಿಗತಿ ಅಧ್ಯಯನ ಮಾಡಲು ಬಿ.ಪಿ. ಮಂಡಲ್ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಆಯೋಗವನ್ನು ನೇಮಕ ಮಾಡಿದರು;
9. 1990ರಲ್ಲಿ ಅಂದಿನ ಪ್ರಧಾನಿ ವಿ.ಪಿ. ಸಿಂಗ್, ಮಂಡಲ್ ವರದಿಯನ್ನು ಅನುಷ್ಠಾನಗೊಳಿಸಿ, ರಾಷ್ಟ್ರವ್ಯಾಪಿ ಹಿಂದುಳಿದ ವರ್ಗಗಳಿಗೆ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಜಾರಿ ತಂದರು;
ಕರ್ನಾಟಕ ರಾಜ್ಯದಲ್ಲಿ
1. 1960ರಲ್ಲಿ ಡಾ.ಆರ್. ನಾಗನಗೌಡ ಅಧ್ಯಕ್ಷತೆಯಲ್ಲಿ, ಹಿಂದುಳಿದ ವರ್ಗಗಳ ಆಯೋಗವನ್ನು ನೇಮಕ ಮಾಡಲಾಗಿತ್ತು; ಆ ವರದಿ ಶಿಫಾರಸುಗಳ ಮೇರೆಗೆ ರಾಜ್ಯದಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಅನುಷ್ಠಾನ ಮಾಡಲಾಗಿತ್ತು. ಈ ಮೀಸಲಾತಿಯನ್ನು ಮೇಲ್ವರ್ಗದವರು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದರು. ಬಾಲಾಜಿ v/s ಮೈಸೂರು ರಾಜ್ಯ ಪ್ರಕರಣದಲ್ಲಿ ಹಿಂದುಳಿದ ವರ್ಗದವರ ಈ ಮೀಸಲಾತಿ ರದ್ದಾಯಿತು;
2. 1972ರಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಎಲ್.ಜಿ. ಹಾವನೂರ್ ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗಗಳ ಆಯೋಗವನ್ನು ನೇಮಕ ಮಾಡಿದರು ಮತ್ತು ಆ ಆಯೋಗದ ವರದಿ ಆದರಿಸಿ, 1975ರಲ್ಲಿ ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗೆ ಮತ್ತು ಅಲ್ಪಸಂಖ್ಯಾತರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಜಾರಿ ಮಾಡಿದರು;
3. 1983ರಲ್ಲಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು, ವೆಂಕಟಸ್ವಾಮಿ ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗಗಳ ಆಯೋಗವನ್ನು ನೇಮಕ ಮಾಡಿದರು. ಸದರಿ ಆಯೋಗವು 1986ರಲ್ಲಿ ವರದಿ ನೀಡಿತು. ರಾಜ್ಯ ವ್ಯಾಪಿ ಒಕ್ಕಲಿಗ ಸಮಾಜದವರು ರಾಜ್ಯದ ದಕ್ಷಿಣ ಭಾಗದಲ್ಲಿ ಪ್ರತಿಭಟನೆ ಮಾಡಿದ್ದರಿಂದ ಸದರಿ ವರದಿಯನ್ನು ಸರಕಾರಗಳು ಅನುಷ್ಠಾನ ಮಾಡಲಿಲ್ಲ;
4. 1988ರಲ್ಲಿ ನ್ಯಾಯಮೂರ್ತಿ ಒ. ಚಿನ್ನಪ್ಪ ರೆಡ್ಡಿ, 1994ರಲ್ಲಿ ನ್ಯಾಯಮೂರ್ತಿ ಕುದೂರು ನಾರಾಯಣ ರೈ, 1997ರಲ್ಲಿ ಪ್ರೊ.ರವಿವರ್ಮ ಕುಮಾರ್, 2001ರಲ್ಲಿ ಮುನಿರಾಜು, 2003ರಲ್ಲಿ ಸಿದ್ದಗಂಗಯ್ಯ, 2007ರಲ್ಲಿ ಡಾ. ಸಿ.ಎಸ್. ದ್ವಾರಕಾನಾಥ್, 2011ರಲ್ಲಿ ಶಂಕ್ರಪ್ಪ ಇವರುಗಳ ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗಗಳ ಆಯೋಗವನ್ನು ನೇಮಕ ಮಾಡಲಾಗಿತ್ತು. ಆದರೆ ಆ ಆಯೋಗಗಳ ವರದಿ/ಶಿಫಾರಸುಗಳನ್ನು ರಾಜ್ಯದಲ್ಲಿ ಜಾರಿ ಮಾಡಲಿಲ್ಲ;
5. 2014ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಚ್.ಕಾಂತರಾಜು ಇವರ ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗಗಳ ಆಯೋಗವನ್ನು ನೇಮಕ ಮಾಡಿ, ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾಡಲು ಆದೇಶಿಸಿದರು; ಈ ಆಯೋಗ ವರದಿ ಸಿದ್ಧಪಡಿಸುವ ವೇಳೆಗೆ ಸಿದ್ದರಾಮಯ್ಯನವರ ಅವಧಿ ಮುಗಿದಿತ್ತು. ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರಕಾರ ರಾಜ್ಯದಲ್ಲಿ ಅಧಿಕಾರದಲ್ಲಿತ್ತು. ಸದರಿ ಆಯೋಗದ ವರದಿಯನ್ನೇ ಸರಕಾರ ಸ್ವೀಕರಿಸಲಿಲ್ಲ.
6. 2020ರಲ್ಲಿ ಬಿಜೆಪಿ ಸರಕಾರ ಜಯಪ್ರಕಾಶ್ ಹೆಗ್ಡೆ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಆಯೋಗವನ್ನು ನೇಮಕ ಮಾಡಿತು. ಈ ಆಯೋಗವು ಈ ಹಿಂದೆ ಕಾಂತರಾಜು ಆಯೋಗ ಸಂಗ್ರಹಿಸಿದ್ದ ದತ್ತಾಂಶಗಳನ್ನು ಅಧ್ಯಯನ ಮಾಡಿ ಹಾಲಿ ಸರಕಾರಕ್ಕೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015ರ ದತ್ತಾಂಶಗಳ ಅಧ್ಯಯನ ವರದಿ 2024ಯನ್ನು 2024ರಲ್ಲಿ ಹಾಲಿ ಸರಕಾರಕ್ಕೆ ನೀಡಿದೆ.
ಹಿಂದಿನಿಂದಲೂ ಆಯೋಗಗಳ ವರದಿ ಅನುಷ್ಠಾನಕ್ಕೆ ಅಡ್ಡಿ
ಈ ವರದಿ ಅನುಷ್ಠಾನಕ್ಕೆ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ವಿಳಂಬ ಮಾಡುತ್ತಾ ಮೀನಾ-ಮೇಷ ಎಣಿಸುತ್ತಿದೆ. ಮತ್ತೊಂದೆಡೆ, ಹಿಂದಿನ ಸರದಿಯಂತೆ ‘ನಮ್ಮ ಮನೆಗೆ ಜನಗಣತಿಗೆ ಬಂದಿಲ್ಲ’, ‘ವರದಿ ವೈಜ್ಞಾನಿಕವಾಗಿಲ್ಲ’ ‘ನಮ್ಮ ಜಾತಿಗಳ ಜನಸಂಖ್ಯೆ ಕಡಿಮೆ ನಮೂದಾಗಿದೆ’ ‘ನಮ್ಮನ್ನು ಎದುರು ಹಾಕಿಕೊಂಡು ರಾಜ್ಯಭಾರ ಮಾಡೋಕಾಗಲ್ಲ’, ’ಜಾತಿಗಣತಿ ಅನುಷ್ಠಾನ ಮಾಡಿದರೆ ಸರಕಾರವನ್ನು ಬೀಳಿಸುತ್ತೇವೆ’....ಹೀಗೆ ಹೆಚ್ಚುಕಮ್ಮಿ ರಾಜ್ಯದಲ್ಲಿರುವ ಎಲ್ಲಾ ರಾಜಕೀಯ ಪಕ್ಷಗಳ ಮೇಲ್ವರ್ಗದ ಮತ್ತು ಪ್ರಬಲ ಜಾತಿಗಳ ರಾಜಕೀಯ ಮುಖಂಡರು, ಸಂಘಟನೆಗಳು ಹೇಳಿವೆ. ಧರ್ಮ, ಜಾತಿ ಜಾತಿಗಳ ಮಧ್ಯೆ ವಿಷ ಬಿತ್ತಿವೆ. ಜಾತಿಗಣತಿ ಅನುಷ್ಠಾನಕ್ಕೆ ಅಡ್ಡಿಯಾಗಿವೆ.
ಕಾಂತರಾಜು ವರದಿಯ ವಸ್ತುನಿಷ್ಠತೆ
1. ಎಚ್. ಕಾಂತರಾಜು ಮತ್ತು ಕೆ. ಜಯಪ್ರಕಾಶ್ ಹೆಗ್ಡೆ ಇವರ ನೇತೃತ್ವದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕರ್ನಾಟಕ ಸರಕಾರಕ್ಕೆ ಸಲ್ಲಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2018ರ ದತ್ತಾಂಶಗಳ ಅಧ್ಯಯನ ವರದಿ-2024ರಲ್ಲಿ ನಮೂದಿಸಿರುವ ಪ್ರಮುಖ ಅಂಶಗಳೆಂದರೆ ಕಾಂತರಾಜು ಆಯೋಗ ಕಾರ್ಯನಿರ್ವಹಿಸಲು ಅಂದಿನ ಸರಕಾರ ರೂ. 155.51 ಕೋಟಿ ವೆಚ್ಚ ಮಾಡಿದೆ. ರಾಜ್ಯದ 1,35,35,772 ಮನೆಗಳಿಂದ 5,98,14,942 ವ್ಯಕ್ತಿಗಳಿಂದ, 1,351 ಜಾತಿಗಳಿಂದ, 2011ರ ರಾಜ್ಯದ ಜನಸಂಖ್ಯೆ 6.35 ಕೋಟಿ ಜನಸಂಖ್ಯೆ ಪೈಕಿ, 5.98 ಕೋಟಿ ಜನಸಂಖ್ಯೆ(ಶೇ. 94.17)ಯಿಂದ ದತ್ತಾಂಶಗಳನ್ನು ಸಂಗ್ರಹ ಮಾಡಲಾಗಿದೆ. ಕೇವಲ 37 ಲಕ್ಷ ಜನಸಂಖ್ಯೆ ಮಾತ್ರ ಸಮೀಕ್ಷೆಯಲ್ಲಿ ಪಾಲ್ಗೊಂಡಿಲ್ಲ;
2. ಮುಂದುವರಿದು, ಈ ವರದಿಯಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಾಸವಿರುವ ಕುಟುಂಬಗಳ ವಿವರಗಳು; ಜಾತಿ ಉಪಜಾತಿಗಳವಾರು ಜನಸಂಖ್ಯೆ ವಿವರಗಳು; ಪ್ರತೀ ಕುಟುಂಬಗಳ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಉದ್ಯೋಗ, ಸಾಂಪ್ರದಾಯಿಕ ವೃತ್ತಿ, ಆದಾಯ, ಆಸ್ತಿ, ಸೊತ್ತಿನ ಮಾಲಕತ್ವ ಇತ್ಯಾದಿ ದತ್ತಾಂಶಗಳು ಈ ವರದಿಯಲ್ಲಿ ಒಳಗೊಂಡಿವೆ.
3. ಎಚ್. ಕಾಂತರಾಜು ಮತ್ತು ಜಯಪ್ರಕಾಶ್ ಹೆಗ್ಡೆ ಇವರಿಬ್ಬರು ಇತ್ತೀಚೆಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಸಮೀಕ್ಷೆ ಬಹಳ ವೈಜ್ಞಾನಿಕವಾಗಿದೆ ಎಂದು ಸಮರ್ಥಿಸಿಕೊಂಡಿರುತ್ತಾರೆ.
ಮೇಲ್ವರ್ಗ/ಪ್ರಬಲ ಜಾತಿಗಳ/ ದುರ್ಬಲ ಜಾತಿಗಳ
ಪ್ರಸಕ್ತ ಶಕ್ತಿಗಳು
ಕರ್ನಾಟಕ ವಿಧಾನಸೆ
(ಮೇಲ್ವರ್ಗ/ಪ್ರಬಲ ಜಾತಿ)
ಬ್ರಾಹ್ಮಣರು-14 ಲಕ್ಷ ಜನಸಂಖ್ಯೆಗೆ 10 ಎಂಎಲ್‌ಎಗಳು, ಲಿಂಗಾಯತರು -66 ಲಕ್ಷ ಜನಸಂಖ್ಯೆಗೆ 54 ಎಂಎಲ್‌ಎಗಳು, ಗೌಡರು-61 ಲಕ್ಷ ಜನಸಂಖ್ಯೆಗೆ 46 ಎಂಎಲ್‌ಎಗಳು, ರೆಡ್ಡಿ-11 ಲಕ್ಷ ಜನಸಂಖ್ಯೆಗೆ 7 ಎಂಎಲ್‌ಎಗಳು ಹಾಗೂ ಬಂಟರು 5 ಎಂಎಲ್‌ಎಗಳು. (ಒಟ್ಟು 1.52 ಕೋಟಿ ಜನಸಂಖ್ಯೆಗೆ 122 ಎಂಎಲ್‌ಎಗಳು)
ದುರ್ಬಲ ಜಾತಿಗಳು
ಮುಸಲ್ಮಾನರು- 79 ಲಕ್ಷ ಜನಸಂಖ್ಯೆಗೆ 9 ಎಂಎಲ್‌ಎಗಳು, ಕ್ರೈಸ್ತರು-13 ಲಕ್ಷ ಜನಸಂಖ್ಯೆಗೆ 1 ಎಂಎಲ್‌ಎ, ಕುರುಬರು-43 ಲಕ್ಷ ಜನಸಂಖ್ಯೆಗೆ 13 ಎಂಎಲ್‌ಎಗಳು, ಒಬಿಸಿ-193 ಲಕ್ಷ ಜನಸಂಖ್ಯೆಗೆ 23 ಎಂಎಲ್‌ಎಗಳು, ಎಸ್‌ಸಿ-109 ಲಕ್ಷ ಜನಸಂಖ್ಯೆಗೆ 36 ಎಂಎಲ್‌ಎಗಳು, ಎಸ್‌ಟಿ 49 ಲಕ್ಷ ಜನಸಂಖ್ಯೆಗೆ 18 ಎಂಎಲ್‌ಎಗಳು ಹಾಗೂ ರಜಪೂತ್ 1 ಎಂಎಲ್‌ಎ, ಜೈನರು 1 ಎಂಎಲ್‌ಎ (ಒಟ್ಟು 4.83 ಕೋಟಿ ಜನಸಂಖ್ಯೆಗೆ 102 ಎಂಎಲ್‌ಎಗಳು)
ದೇಶದಲ್ಲಿನ ಹೈಕೋರ್ಟ್ ನ್ಯಾಯಾಧೀಶರು
2018ರಿಂದ 2024ರವರೆಗೆ ದೇಶದ ವಿವಿಧ ಹೈಕೋರ್ಟ್‌ಗಳಿಗೆ ನೇಮಕಗೊಂಡ ನ್ಯಾಯಾಧೀಶರ ಒಟ್ಟು ಸಂಖ್ಯೆ-661. ಆ ಪೈಕಿ : ಬ್ರಾಹ್ಮಣರು 499, ಒಬಿಸಿ 78, ಎಸ್‌ಸಿ 21, ಎಸ್‌ಟಿ 12.
ಕಳೆದ 2018-2022ರ ಅವಧಿಯಲ್ಲಿ ಆಯ್ಕೆಯಾದ ಐಎಎಸ್, ಐಪಿಎಸ್, ಐಆರ್‌ಎಸ್
ಬ್ರಾಹ್ಮಣರು 3,170, ಒಬಿಸಿ 695, ಎಸ್‌ಸಿ 334, ಎಸ್‌ಟಿ 166.
2024ರ ಅಂತ್ಯದೊಳಗೆ ರಾಷ್ಟ್ರದ ಐಐಎಂ, ಐಐಟಿ ಸಂಸ್ಥೆಗಳಲ್ಲಿ 26,751 ಬೋಧಕರನ್ನು ನೇಮಕ ಮಾಡಲಾಗಿದೆ. ಆ ಪೈಕಿ ಶೇ.10ಕ್ಕಿಂತ ಕಡಿಮೆ ಅಹಿಂದ ಅಭ್ಯರ್ಥಿಗಳಿದ್ದಾರೆ.
(ಮೇಲಿನ ಎಲ್ಲಾ ಮಾಹಿತಿಗಳು ಹಾಲಿ ಕೇಂದ್ರ ಸರಕಾರ ಸಂಸತ್ತಿನಲ್ಲಿ ಕೆಲವು ಸದಸ್ಯರ ಪ್ರಶ್ನೆಗಳಿಗೆ ನೀಡಿದ ಉತ್ತರಗಳ ಆಧಾರ)
ತಿರುಮಲ-ತಿರುಪತಿ ದೇವಸ್ಥಾನ ಒಳಗೊಂಡಂತೆ, ಭಾರತದಲ್ಲಿ 7.5 ಲಕ್ಷ ದೇವಸ್ಥಾನಗಳಿವೆ. ಅವುಗಳಲ್ಲಿ 6.48 ಲಕ್ಷ ದೇವಾಲಯಗಳ ಆಡಳಿತ ಮಂಡಳಿಗಳು ಬ್ರಾಹ್ಮಣರದ್ದು. ಈ ದೇವಸ್ಥಾನಗಳ ಆದಾಯ ವಾರ್ಷಿಕ ರೂ. 64,800 ಕೋಟಿಗಳು. ಈ ಆದಾಯ ಯಾರಿಗೆ ಬರುತ್ತದೆ?
ಘೋಷಣೆಯಾಗಿರುವ ವಿಶ್ವದಲ್ಲಿರುವ ಶ್ರೀಮಂತರ ಪಟ್ಟಿಯಲ್ಲಿ 15 ಮಂದಿ ಭಾರತೀಯರು. ಅಜೀಂ ಪ್ರೇಮ್ ಜಿ ಹೊರತುಪಡಿಸಿದರೆ, ಮತ್ಯಾರು ಅಹಿಂದ ವರ್ಗದವರಿಲ್ಲ. ಎಲ್ಲರೂ ಮೇಲ್ವರ್ಗದವರೇ.
ಇತ್ತೀಚೆಗೆ ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವರದಿ ಒಂದರಲ್ಲಿ ಭಾರತದಲ್ಲಿ 23.4 ಕೋಟಿ ಅತಿ ಕಡುಬಡವರಿದ್ದಾರೆ. ಅವರೆಲ್ಲರೂ ಅಹಿಂದ ವರ್ಗದವರೇ. ಈ ಪೈಕಿ ಕೂಡ ಮುಸ್ಲಿಮ್ ಸಮುದಾಯವೇ ಹೆಚ್ಚು.
ರಾಜ್ಯ ಮತ್ತು ದೇಶದೆಲ್ಲೆಡೆ ಭೂಮಿಯ ಮಾಲಕತ್ವವನ್ನು ಹೊಂದಿರುವವರು ಶೇ. 80 ಮೇಲ್ವರ್ಗದವರು ಮತ್ತು ಪ್ರಬಲ ಜಾತಿಗಳು. ಕೇವಲ ಶೇ.20 ದುರ್ಬಲ ಜಾತಿಗಳದ್ದು ಎಂಬ ಅಂದಾಜಿದೆ.
ಮೋದಿ ಸರಕಾರ ಕೇಂದ್ರದಲ್ಲಿ ಬಂದ ನಂತರ ಈವರೆಗೆ ಸುಮಾರು 29 ಲಾಭದಾಯಕ ಸರಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡಿದ್ದಾರೆ. ಇಲ್ಲಿ ಉದ್ಯೋಗ ನೇಮಕಾತಿಗಳಲ್ಲಿ ಈಗ ಮೀಸಲಾತಿ ಇಲ್ಲ. ಮತ್ತೊಂದು, ರಾಷ್ಟ್ರದ ಎಲ್ಲಾ ಲಾಭದಾಯಕ ಸರಕಾರಿ ಸಂಸ್ಥೆಗಳ ನೇಮಕಾತಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗುತ್ತಿದೆ. ಇದರಿಂದ ಅಲ್ಪಸಂಖ್ಯಾತರು, ದುರ್ಬಲ ಜಾತಿಗಳಿಗೆ ನೇಮಕಾತಿಗಳಲ್ಲಿ ಮೀಸಲಾತಿ ಇಲ್ಲದಾಗಿದೆ.
ಶತಮಾನಗಳ ಹಿಂದೆ ವರ್ಣಾಶ್ರಮ ನೀತಿ ಹೆಸರಿನಲ್ಲಿ ಸಮಾಜವನ್ನು ವಿಂಗಡನೆ ಮಾಡಿದ್ದರು. ಅಸ್ಪಶ್ಯರನ್ನು ಸಮಾಜದಿಂದ ಹೊರಗಿಟ್ಟಿದ್ದರು. ಜೊತೆಗೆ ಅನಿಷ್ಟ ಪದ್ಧತಿಗಳನ್ನು, ಕಂದಾಚಾರ, ಮೌಢ್ಯಗಳನ್ನು ಈ ದುರ್ಬಲ ಜಾತಿಗಳ ಮೇಲೆ ಹೇರಿ, ಶತಮಾನಗಳ ಅವಧಿ ಶೋಷಣೆ ಮಾಡಿದ್ದರು.
ಇಂತಹ ನೂರಾರು ವಾಸ್ತವ, ಸತ್ಯ ಮಾಹಿತಿಗಳನ್ನು ನೀಡಬಹುದಾಗಿದೆ.
ದೇಶ ಸ್ವತಂತ್ರ ಪಡೆದು 75 ವರ್ಷಗಳು ಕಳೆದಿವೆ. ರಾಷ್ಟ್ರ ವ್ಯಾಪಿ, ರಾಜ್ಯ ವ್ಯಾಪಿ ಸಮಾಜದಲ್ಲಿ ಅಸಮಾನತೆ ಮುಂದುವರಿದಿದೆ. ಭವಿಷ್ಯದ ದಿನಗಳಿಗಾದರೂ ಸಮ ಸಮಾಜ ಮತ್ತು ಸಮಾನತೆಯ ಭಾರತ ರಾಷ್ಟ್ರ ನಿರ್ಮಾಣ ಮಾಡಬೇಕಾಗಿದೆ. ಇದಕ್ಕಾಗಿ ಮತ್ತು ದುರ್ಬಲ ವರ್ಗದವರಿಗಾಗಿ ಸಂವಿಧಾನದ ಹಕ್ಕುಗಳನ್ನು ಆಶಯಗಳನ್ನು ಅನುಷ್ಠಾನಗೊಳಿಸಬೇಕಾಗಿದೆ. ಈ ಹಾದಿಯೇ ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಮೀಸಲಾತಿ. ಈ ಮೀಸಲಾತಿಗೆ ಆಧಾರವೇ ಅಧ್ಯಯನದ ಆಯೋಗಗಳ ವರದಿಗಳು. ಪ್ರಸಕ್ತ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಈ ಜಾತಿಗಣತಿ ವರದಿ ಸರಕಾರದ ಮುಂದೆ ಇದೆ. ಯಾವುದೇ ಜಾತಿಯ ಜನಸಂಖ್ಯೆ ಈ ವರದಿಯಲ್ಲಿ ಕಡಿಮೆ ನಮೂದಾಗಿದ್ದರೆ, ಆ ಜಾತಿಯ ನಾಯಕರಿಗೆ ಈಗ ಮಧುಸೂದನ್ ನಾಯಕ್ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಹಾಲಿ ಹಿಂದುಳಿದ ವರ್ಗಗಳ ಆಯೋಗದ ಮುಂದೆ ಮಾಹಿತಿ ನೀಡಲು ಅವಕಾಶವಿದೆ.
ಒಟ್ಟಾರೆ, ಮೇಲಿನ ಅಂಶಗಳು ಮತ್ತು ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಸಂವಿಧಾನದ ಈ ಆಶಯಗಳಂತೆ ಹಿಂದುಳಿದ ವರ್ಗಗಳ ಆಯೋಗ ನೀಡಿರುವ ವರದಿಯನ್ನು ಕರ್ನಾಟಕ ಸರಕಾರ ಅಂಗೀಕರಿಸಿ, ಅನುಷ್ಠಾನ ಮಾಡಲು ಮತ್ತು ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಲು ಸರಕಾರದ ಜೊತೆ ಎಲ್ಲಾ ಮೇಲ್ವರ್ಗದವರು, ಪ್ರಬಲ ಜಾತಿಗಳು ಮತ್ತು ವಿರೋಧ ಮಾಡುತ್ತಿರುವವರು, ಕೈಜೋಡಿಸಬೇಕೆಂದು ಒಬ್ಬ ಅಸ್ಪಶ್ಯ ಜಾತಿಯ ನಾಗರಿಕನಾಗಿ, ಬಹು ಸಂಖ್ಯಾತ, ಹಿಂದುಳಿದ, ಅಲ್ಪಸಂಖ್ಯಾತ, ದಲಿತರ ಪರವಾಗಿ ವಿನಂತಿಸುತ್ತೇನೆ. ದಯಮಾಡಿ ಬೆಂಬಲಿಸಿ. ಈವರೆಗಿನ ಬಡವರು ಮುಂದಿನ ದಿನಗಳಲ್ಲಾದರೂ ಉತ್ತಮ ಬದುಕು ನಡೆಸಲು ಅವಕಾಶ ನೀಡಿ.