ಅಕ್ಷತಾ ಎಂಬ ಕವಯಿತ್ರಿಯೂ ರಾಧಕ್ಕ ಎಂಬ ಟೀಚರೂ..!
ಅಣಶಿಯ ಶಾಲೆ ಕೇವಲ ಒಂದು ವಿದ್ಯಾಲಯವಲ್ಲ; ಅದು ಬದುಕಿನ ಪಾಠಶಾಲೆ. ಅಲ್ಲಿ ಮಕ್ಕಳ ಹೆಜ್ಜೆಗೊಂದು ಕಥೆ, ಕಣ್ಣೀರಿಗೊಂದು ಅರ್ಥ,
ನಗುವಿಗೊಂದು ಭವಿಷ್ಯ ಮತ್ತು ಈ ಎಲ್ಲದ ಮಧ್ಯೆ ನಿಂತಿರುವ ರಾಧಕ್ಕ - ಕಾಡಿನ ನಡುವೆ ಹೊತ್ತಿ ಉರಿಯುವ ಒಂದು ಬೆಳಕಿನ ಮೌನದ ದೀಪವೇ ಸರಿ.
ಮೊನ್ನೆ ಜೋಯಿಡಾ ಕಾಡಿನೊಳಗಡೆ ಕನ್ನಡ ಶಾಲೆಗಳಿಗೆ ಸ್ನೇಹಿತರು ಅಕ್ಷರ ಸಾಮಗ್ರಿಗಳನ್ನು ಹಂಚುತ್ತಿದ್ದ ಸಂದರ್ಭ. ಒಂದು ಶಾಲೆ ಮುಗಿದರೆ ಮತ್ತೊಂದು ಶಾಲೆ. ಹಸಿರು ಕಾಡಿನ ಮಧ್ಯೆ ಅಡಗಿಕೊಂಡ ಪುಟ್ಟ ಪುಟ್ಟ ಸರಕಾರಿ ಶಾಲೆಗಳವು. ಅಲ್ಲಿ ಮಕ್ಕಳ ಕಣ್ಣುಗಳಲ್ಲಿ ಕನಸು, ಕೈಯಲ್ಲಿ ಕಾಗದ-ಪೆನ್ನು, ಮನಸ್ಸಿನಲ್ಲಿ ಕಲಿಕೆಯ ಭರವಸೆ ಎದ್ದು ಕಾಣುತ್ತಿತ್ತು. ಆ ಓಡಾಟದ ಮಧ್ಯೆ ನನ್ನ ಹುಡುಕಾಟ ಒಂದೇ. ‘‘ಈ ಕಾಡಿನೊಳಗಡೆ ಎಲ್ಲಾದರೂ ರಾಧಕ್ಕೋರು ಸಿಗುತ್ತಾರಾ?’’ ಎಂದು.
ಕಾರಣ, ಕನ್ನಡ ಮಾಸಿಕ ಒಂದರಲ್ಲಿ ಕೆಲವು ವರ್ಷಗಳ ಹಿಂದೆ ಕಂತು ಕಂತುಗಳಲ್ಲಿ ಪ್ರಕಟವಾದ ಕಾಡೊಳಗಡೆಯ ಶಿಕ್ಷಕಿಯೊಬ್ಬರು ಬರೆದ ಅಪರೂಪದ ಅನುಭವ ಕಥನವನ್ನು ಓದಿದ್ದೆ. ಹಾಗಂತ ಅದು ಕೇವಲ ಶಿಕ್ಷಕಿಯೊಬ್ಬರ ದಿನಚರಿ ಅಲ್ಲ; ಅದು ಕಾಡುಮಕ್ಕಳ ಬದುಕಿನ ಪಾಠ. ಬುಡಕಟ್ಟು ಜನಾಂಗದ ಮಕ್ಕಳ ಕೈ ಹಿಡಿದು ಕಲಿಕೆಯ ಹಾದಿಯಲ್ಲಿ ನಡೆಸುವ ತಪಸ್ಸಿನ ಕಥೆ. ಆ ಅಂಕಣ ಓದಿದ ಮೇಲೆ, ಆ ರಾಧಕ್ಕ ನನ್ನೊಳಗೆ ಹೀರೋ ಆಗಿಬಿಟ್ಟಿದ್ದರು.
ಸಿದ್ಧಿ, ಹಾಲಕ್ಕಿ, ಕುಡುಬಿ-ಈ ಜನಾಂಗಗಳ ಸಾಂದ್ರತೆಯೊಳಗೆ ಇರುವ ಜೋಯಿಡಾ ಕಾಡು, ಅಲ್ಲಿ ವಿದ್ಯಾಭ್ಯಾಸ ಎಂದರೆ ಪಠ್ಯಪುಸ್ತಕದ ಪಾಠವಲ್ಲ; ಅದು ಬದುಕಿನೊಂದಿಗೆ ಹೋರಾಡುವ ಕಲೆ. ಸರಿಯಾದ ವಿದ್ಯುತ್ ಇಲ್ಲ, ನಿರಂತರ ಸುರಿಯುವ ಮಳೆ, ಕೆಲವೊಮ್ಮೆ ಮೊಬೈಲ್ ರೇಂಜ್ ಕೂಡ ಇಲ್ಲದ ಪ್ರದೇಶ. ಒಂದೇ ಒಂದು ಪೆಟ್ರೋಲ್ ಬಂಕ್ ಇರುವ ಇಡೀ ತಾಲೂಕು. ರಸ್ತೆಗಳೇ ವಿರಳ. ಕಾಡುಪ್ರಾಣಿಗಳ ಹಾವಳಿ, ನಿರಾಸಕ್ತಿಯ ಪೋಷಕರು. ಇಂತಹ ಪರಿಸ್ಥಿತಿಯಲ್ಲಿ ಪ್ರತಿದಿನ ಮಕ್ಕಳನ್ನು ತರಗತಿಯಲ್ಲಿ ಕೂರಿಸಿ ಪಾಠ ಹೇಳುವುದು ಕಡಿಮೆ ಪರಿಶ್ರಮವಲ್ಲ; ಅದು ತಪಸ್ಸೇ.
ಅಂಥ ಜಾಗದಲ್ಲಿ ಹುಟ್ಟೂರು ಬಿಟ್ಟು, ಮೂಲಭೂತ ಸೌಲಭ್ಯಗಳಿಲ್ಲದ ಶಾಲೆಗಳಲ್ಲಿ ಸೇವೆ ಮಾಡುತ್ತಿರುವ ಶಿಕ್ಷಕರು ನಿಜಕ್ಕೂ ಮೌನ ಯೋಧರು. ಶಿವಮೊಗ್ಗ, ಕುಮಟಾ, ಕಾರವಾರ, ಹಳಿಯಾಳದಂತಹ ನಗರಗಳಿಂದ ಬಂದು, ಕಾಡಿನೊಳಗಡೆ ಮಕ್ಕಳ ಭವಿಷ್ಯ ಕಟ್ಟಲು ತಮ್ಮ ಬದುಕಿನ ಸುಖವನ್ನು ಪಣಕ್ಕಿಟ್ಟಿರುವ ಈ ಶಿಕ್ಷಕರ ಆದರ್ಶಗಳ ಬಗ್ಗೆ ಒಂದು ಪುಸ್ತಕವೇ ಬರಬೇಕು.
ಅಂಥ ಕಾಡೊಳಗಡೆ ರಾಧಕ್ಕರ ಹುಡುಕಾಟಕ್ಕೆ ವಿಶೇಷ ಕಾರಣವಿತ್ತು. ಅವರು ಬರೆದ ಅಂಕಣದಲ್ಲಿ, ಊರೊಟ್ಟಿಗೆ ಸೇರಿ ಶಾಲೆ ಕಟ್ಟಿದ ಕಥೆಯನ್ನು ವಿವರಿಸಿದ್ದರು. ಅದರಲ್ಲಿ ಓದುಗ ಅಭಿಮಾನಿಗಳು ಕೊಟ್ಟ ಪುಸ್ತಕಗಳು ಗ್ರಂಥಾಲಯ ತುಂಬಿದ ಕಥೆ ಇತ್ತು. ದಾನಿಗಳು ಕೊಟ್ಟ ಸಹಾಯದ ಸಾಕ್ಷಿಗಳು ಶಾಲೆ ತುಂಬಿತ್ತು. ಊರಿನ ಜೊತೆ ಬೆಸೆದುಕೊಂಡ ಸಂಬಂಧ, ಮಕ್ಕಳನ್ನು ಊರಿನ ನಾಳೆಯ ಮಕ್ಕಳಾಗಿ ರೂಪಿಸಬೇಕೆನ್ನುವ ದೂರದೃಷ್ಟಿ, ಶಿಕ್ಷಣವನ್ನು ಬದುಕಿನ ಭಾಗವಾಗಿಸುವ ಅವರ ಕನಸು-ಇವೆಲ್ಲ ನನ್ನ ಮನಸ್ಸನ್ನು ತೀವ್ರವಾಗಿ ಕಾಡಿತ್ತು.
ಅಂತೂ ಮೊನ್ನೆ ದಿನ, ನಮ್ಮ ಬಸ್ಸು ಅಣಶಿ ಶಾಲೆಯ ಅಂಗಳದಲ್ಲಿ ನಿಂತಾಗ, ರಾಧಕ್ಕ ಸಿಕ್ಕೇ ಬಿಟ್ಟರು. ಅವರ ನಡಿಗೆ, ವೇಗ, ದೃಢತೆ, ಹೊಣೆಗಾರಿಕೆಯ ಹೆಜ್ಜೆಗಳು. ಹೇಳದೇ ಹೇಳುವಂತೆ, ಈ ಶಾಲೆಯ ಮುಖ್ಯೋಪಾಧ್ಯಾಯಿನಿ ಅವರೇ ಅನ್ನುವ ಭಾವವಿತ್ತು. ನಮ್ಮವರು ತಂದ ಲೇಖನ ಸಾಮಗ್ರಿ, ಕುಣಬಿ ಮಕ್ಕಳ ತಾಯಂದಿರಿಗೆ ಸೀರೆ, ಮಕ್ಕಳಿಗೆ ತಿಂಡಿಗಳನ್ನು ಹಂಚುವ ಮುಂಚೆ, ರಾಧಕ್ಕ ನಮ್ಮನ್ನೆಲ್ಲ ಉದ್ದೇಶಿಸಿ ಮಾತನಾಡಲು ನಿಂತರು. ಅದಕ್ಕೂ ಮುಂಚೆ, ಕುಣಬಿ ಹುಡುಗನೊಬ್ಬ ದಾಸರ ಪದವನ್ನು ಹಾಡಿದ. ಕಾಡಿನ ಮೌನದೊಳಗೆ ಕೀರ್ತನೆಯ ಸ್ವರ ಹರಿದಾಗ, ಖಂಡಿತವಾಗಿಯೂ ಆ ಶಾಲೆ ಯಾವುದೋ ವಿಶಿಷ್ಟ ಸ್ಥಳವೆನಿಸಿತು. ರಾಧಕ್ಕನ ಮುನ್ನುಡಿ, ಆ ಶಾಲೆಯನ್ನು ನನ್ನ ಕಣ್ಣಲ್ಲಿ ಮತ್ತಷ್ಟು ಎತ್ತರಕ್ಕೆ ಏರಿಸಿತು.
ಕಾಡೊಳಗಡೆಯ ಅಂಗಳದಲ್ಲಿ ಹಳೆಯ ಕಟ್ಟಡ ಕಳಚಿಕೊಂಡು, ಹೊಸ ಶಾಲಾ ಕಟ್ಟಡ ಎದ್ದಿತ್ತು. ಅದರೊಳಗೆ ಕಾಲಿಟ್ಟಾಗ, ನಾನು ಬೆರಗಾದೆ. ಇಡೀ ಆವರಣ ಒಂದು ಕಲಾ ಶಾಲೆಯಾಗಿ ಪರಿವರ್ತಿತವಾಗಿತ್ತು. ಗೋಡೆಯ ಮೇಲೆ ಅಂಗೈಯಗಳ ಖಾಲಿ ಜಾಗವೇ ಇಲ್ಲ. ಮಕ್ಕಳ ಚಿತ್ರಗಳು, ಕೈಚಾಣದ ಕಲಾಕೃತಿಗಳು, ವಿಜ್ಞಾನ ಮಾದರಿಗಳು, ಕೃಷಿ ಉಪಕರಣಗಳ ಪುಟ್ಟ ಪುಟ್ಟ ಅಣಕು ರೂಪಗಳು. ಮಣ್ಣು ಮರ ತೆಂಗಿನ ನಾರು ಚಿಪ್ಪಿಯಿಂದ ಮಾಡಿದ ಕತ್ತಿ, ಕುಡುಗೋಲು, ನೇಗಿಲು, ಮುಟ್ಟಾಳೆ ಇನ್ನೂ ಏನೇನೋ. ಇಲ್ಲಿ ಓದುವವರು ಓದಿಸುವವರೆಲ್ಲ ಮಣ್ಣಿನ ಮಕ್ಕಳು ಅನ್ನೋದಕ್ಕೆ ನೂರಾರು ಸಾಕ್ಷಿಗಳು ಅಲ್ಲಿ ನಿಂತಿದ್ದವು.
ರಾಧಕ್ಕನವರು ನನ್ನ ಕೈಗೆ ಪೆನ್ನು ಕೊಟ್ಟು, ‘‘ಇಲ್ಲೊಂದು ಸೈನ್ ಮಾಡಿ’’ ಎಂದರು. ಗೋಡೆಯ ಮೇಲೆ ನಾನು ಕಪ್ಪುಮಸಿಯಲ್ಲಿ ‘ದೇರ್ಲ’ ಎಂದು ಕನ್ನಡದಲ್ಲಿ ಸಹಿ ಹಾಕುತ್ತಿದ್ದಾಗ, ಅದರ ಆಚೆ-ಈಚೆ ಇದ್ದ ಕನ್ನಡದ ಸಹಿಗಳು ಕಣ್ಣಿಗೆ ಬಿದ್ದವು-ಐಎಎಸ್ ಅಧಿಕಾರಿಗಳು, ಸಾಹಿತಿಗಳು, ವಿಜ್ಞಾನಿಗಳು, ಸೈನಿಕರು, ಶಿಕ್ಷಕರು, ಚಿಂತಕರು... ನಾಗರಿಕ ಜಗತ್ತಿನ ದೂರದ ಅಣಶಿ ಶಾಲೆಗೆ ಬಂದು ಹೋದವರೇ.
ನಾವು ಹಿಂದಿನ ದಿನ ನೋಡಿದ ಮೂರು-ನಾಲ್ಕು ಶಾಲೆಗಳ ಒಟ್ಟು ಮಕ್ಕಳ ಸಂಖ್ಯೆಗಳಿಗಿಂತ, ಇಲ್ಲಿ ಒಂದೇ ಶಾಲೆಯಲ್ಲಿ 80ಕ್ಕಿಂತಲೂ ಹೆಚ್ಚು ಮಕ್ಕಳಿದ್ದರು. ಎಲ್ಲರೂ ಕುಣುಬಿ ಮಕ್ಕಳೇ. ಅವರ ಆಸಕ್ತಿ, ಅಭಿರುಚಿ, ಕಲೆಯ ಪ್ರೀತಿ ಅಳೆಯಲು ಹೆಚ್ಚು ಸಮಯ ಬೇಕಾಗಿರಲಿಲ್ಲ. ಒಬ್ಬ ಶಿಕ್ಷಕ-ಶಿಕ್ಷಕಿ ಮನಸ್ಸು ಮಾಡಿದರೆ ಏನೂ ಮಾಡಬಹುದು ಅನ್ನೋದಕ್ಕೆ, ಈ ಅಣಶಿ ಶಾಲೆಯೇ ಸಾಕ್ಷಿ.
ಅಂದಹಾಗೆ, ಈ ರಾಧಕ್ಕ ಯಾರು?
ಅವರ ನಿಜವಾದ ಹೆಸರೇನು? ನಿಮಗೂ ಕುತೂಹಲ ಇರಬೇಕಲ್ಲ? ಕನ್ನಡದ ಶ್ರೇಷ್ಠ ಲೇಖಕಿ, ಕವಯಿತ್ರಿ, ಕತೆಗಾರ್ತಿ ಅಕ್ಷತಾ ಕೃಷ್ಣಮೂರ್ತಿ. ಬುಡಕಟ್ಟು ಜನಾಂಗದ ಮಕ್ಕಳ ಪ್ರೀತಿಯ ಈ ಅಕ್ಕ ಕಾಡಿನ ಶಾಲೆಯ ಕಥೆಯನ್ನು ದೂರದ ಪತ್ರಿಕೆಗೆ ಕಂತು ಕಂತಾಗಿ ಬರೆಯುವಾಗ, ಎಲ್ಲೂ ತಮ್ಮ ಹೆಸರನ್ನು ಪ್ರಕಟಿಸಿರಲಿಲ್ಲ. ಶಾಲೆಯ ಯಶಸ್ಸು ಊರಿಗೆ ಗೊತ್ತಿರಲಿ, ನಾನು ಮಾತ್ರ ನಾಡಿಗೆ ಗೊತ್ತಾಗಬಾರದು ಅನ್ನುವ ಒಂದು ಮೌನ ಸಂಕಲ್ಪ ಆಕೆಯದಾಗಿತ್ತು.
ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಅಣಶಿ ಜೋಯಿಡಾ - ಇಲ್ಲಿಯ ಕಂತು ಕಂತಿನ ಕಥೆ ಪುಸ್ತಕವಾಗುವ ಹೊತ್ತಿಗೆ ಮುನ್ನುಡಿ ಬರೆಯಲು ಕೂತ ನಾಡಿನ ಹಿರಿಯ ಲೇಖಕ, ಸಂಸ್ಕೃತಿ ಚಿಂತಕ ಬರಗೂರು ರಾಮಚಂದ್ರಪ್ಪ ಬೆರಗು ಮತ್ತು ಹಠಕ್ಕೆ ಬೀಳುತ್ತಾರೆ. ‘ಅದು ಬೇರೆ ಯಾರೂ ಅಲ್ಲ, ನಾನು ಅಕ್ಷತಾ ಕೃಷ್ಣಮೂರ್ತಿ’ ಎಂದು ಈ ಟೀಚರಮ್ಮ ಸತ್ಯ ಹೇಳಬೇಕಾಯಿತು!
ಕಾಡಿನ ನಡುಹಾದಿಯಲ್ಲಿ ನಿಂತ ಆ ಶಾಲೆಯ ದಿನಚರಿಯೇ ಒಂದು ಜೀವಂತ ಕಥೆ. ಬೆಳಗಿನ ಮೌನ, ಮಧ್ಯಾಹ್ನದ ಗದ್ದಲ, ಸಂಜೆಗತ್ತಲಿನ ಆತಂಕ, ತರಗತಿಯ ಒಳಗಡೆಯೇ ನುಗ್ಗುವ ಮಂಗ ಹಾವು ನಾಯಿ ಚೇಳು ಇಲಿ ಹೆಗ್ಗಣ.... ಎಲ್ಲವೂ ಒಟ್ಟಾಗಿ ಸೇರಿ ಅಣಶಿಯ ಈ ಶಾಲೆಯನ್ನು ಕೇವಲ ಕಟ್ಟಡವಲ್ಲ, ಒಂದು ಉಸಿರಾಡುವ ಜೀವಿಯಂತೆ ಮಾಡಿವೆ. ಅಲ್ಲಿ ಪ್ರತಿ ದಿನವೂ ಪುಸ್ತಕದೊಂದಿಗೆ ಬದುಕೂ ಪಾಠ ಹೇಳುತ್ತದೆ. ಪಠ್ಯಪುಸ್ತಕಗಳಿಗಿಂತ ಗಾಢವಾದ, ಪರೀಕ್ಷೆಗಳಿಗಿಂತ ಕಠಿಣವಾದ ಪಾಠಗಳು ಅಲ್ಲಿ ಪ್ರತಿಕ್ಷಣ ನಡೆಯುತ್ತಲೇ ಇರುತ್ತವೆ.
ಕೋವಿಡ್ ಸಂದರ್ಭದಲ್ಲಿ ಆ ಶಾಲೆ ಹೇಗಿತ್ತು ಅನ್ನುವುದನ್ನು ರಾಧಕ್ಕನ ಮಾತಿನಲ್ಲೇ ಕೇಳಿ, ‘‘....ಶಾಲೆಯ ಹೊಸ ಕಟ್ಟಡ ಸೊರಗುತ್ತಿದೆ. ಮಕ್ಕಳನ್ನು ನೋಡದೇ ಒಂದು ರೀತಿಯ ಮಾನಸಿಕ ಕ್ಷೋಭೆಗಳಾಗಿದೆ. ಹೀಗಾಗಿಯೇ ಧೂಳು ಹಿಡಿಸಿಕೊಂಡು ಮೀಯದೆ ಕುಂತು ಬಿಟ್ಟಿದೆ. ಮಕ್ಕಳ ಹೆಜ್ಜೆ ಗುರುತಿನ ಸಪ್ಪಳವಿಲ್ಲ, ಪ್ರಾರ್ಥನೆಯ ಸಾಲು ಇಲ್ಲ, ಕಸಕಡ್ಡಿ ಆರಿಸುವ ಕೈಗಳಿಲ್ಲ, ಬಾಗಿಲು ಕಿಟಕಿಗಳು ತೆರೆಯುತ್ತಾ ಹಾಕುವಾಗ ಆಗುವ ಕಿರ್ ಎಂಬ ಹಿತವಾದ ಸದ್ದಿಲ್ಲ. ಗೋಡೆಯ ಮೇಲಿದ್ದ ಮಿಂಚುಫಲಕಗಳಿಗೆ ಮಕ್ಕಳ ಸ್ಪರ್ಶ ಸುಖ ಸಿಗುತ್ತಿಲ್ಲ, ಕಾರ್ಡುಗಳ ರಾಶಿ ಸರಿಪಡಿಸುವವರಿಲ್ಲ, ಹವಾಮಾನ ನಕ್ಷೆ ಹೇಳ ಹೆಸರಿಲ್ಲದೆ ಸ್ತಬ್ಧವಾಗಿದೆ. ಬಿಸಿಯೂಟದ ಕೋಣೆಯಲ್ಲಿ ಒಗ್ಗರಣೆಯ ಪರಿಮಳವಿಲ್ಲ, ರಸಂ, ಪಲಾವ್, ಸಾಗು ಮುಂತಾದ ಪದಾರ್ಥಗಳೆಲ್ಲ ಮಕ್ಕಳ ಹೊಟ್ಟೆ ಸೇರುವ ಸರದಿಯಲ್ಲಿ ಇಲ್ಲ, ಕರಿಹಲಗೆಯ ದಿನಾಂಕ ಬದಲಾಗಿಲ್ಲ, ಇಡೀ ದಿನ ಮಾತನಾಡುವ ಮಕ್ಕಳ ಹೆಸರನ್ನು ಪಟ್ಟಿ ಮಾಡುವವರಿಲ್ಲ, ಮೂಲೆಯಲ್ಲಿ ಬಿದ್ದ ಡಸ್ಪರು ತನ್ನ ಹೊಟ್ಟೆ ತೆರೆದು ತೋರಿಸುವ ಸ್ಥಿತಿಗೆ ಬಂದರೂ ಅದಕ್ಕೆ ಸೂಕ್ತ ಆಪರೇಷನ್ ಮಾಡುವ ಮಕ್ಕಳ ವೈದ್ಯರಿಲ್ಲ, ಮಳೆಗಾಲಕ್ಕೆಂದು ವರ್ಗಕೋಣೆಯ ಮೂಲೆಯಲ್ಲಿ ಆಗಲೇ ಬಂದುಳಿಯುತ್ತಿದ್ದ ಎರಡು ಮೂರು ಹಿಡಿಗಳು (ಕಸಬರಿಗೆ) ಇನ್ನೂ ಹಾಜರಾಗಿಲ್ಲ. ರಗಸದಅ ಬರೆದುಕೊಂಡ ಅಕ್ಷರ ಫಲಕಗಳು ತಮ್ಮ ಹೆಸರಿನ ಅಸ್ತಿತ್ವ ಮರೆತೇ ಹೋದಂತಾಗಿವೆ, ಸಮಯ ಪರಿಪಾಲಕ ಶಾಲೆಯ ಗಂಟೆ ಹಸಿವಾಗಿ ತನ್ನ ಶಬ್ದವನ್ನು ತಾನೇ ನುಂಗಿಬಿಟ್ಟಿದೆ ಎಂಬಂತಿದೆ. ಏಳನೆಯ ವರ್ಗದ ಮಕ್ಕಳು ದೇಣಿಗೆ ಕೊಟ್ಟ ಲೈಟಿನ ಸರ ಹೊತ್ತಿಕೊಳ್ಳದೆ ವಿದಾಯದ ಗೀತೆ ಹಾಡುತ್ತಿರುವಾಗ, ಶಾಲೆಯ ಫಿಲ್ಟರು ನೀರಿಲ್ಲದ ಬಾವಿಯಂತಾಗಿರುವಾಗ ಇಡೀ ಶಾಲೆ ಇದ್ದಲ್ಲಿಯೇ ಕುಬ್ಜವಾಗುತ್ತಿರುವುದು ಊರವರ ಗಮನಕ್ಕೂ ಬಂದಿದೆ. ಶಾಲೆಯ ಸುತ್ತಮುತ್ತಲಿನ ಗಿಡಮರಗಳು ಕೂಡ ಮಕ್ಕಳ ಕೈ ತಾಗದೇ ಮೈದುಂಬಿಕೊಂಡಿಲ್ಲ...’’
ಹದ್ದೊಂದು ಕುಕ್ಕಿ ಒಯ್ಯುವಾಗ ಆಕಾಶದಿಂದಲೇ ಬಿದ್ದ ಪುಟ್ಟ ಹಕ್ಕಿಮರಿಯ ಆರೈಕೆಯ ಚಿತ್ರ ಕಾಡೊಳಗಡೆಯ ನಿಜ ಮೌಲ್ಯವಾಗಿ ಕಾಣಿಸಿಕೊಳ್ಳುತ್ತದೆ. ಕ್ಷಣದಲ್ಲೇ ಮಕ್ಕಳ ಕಣ್ಣುಗಳಲ್ಲಿ ಮೂಡಿದ ಆತಂಕ, ಕೈಗಳಲ್ಲಿ ಮೂಡಿದ ಚುರುಕು, ಹೃದಯದಲ್ಲಿ ಉಕ್ಕಿದ ಕರುಣೆ - ಇವೆಲ್ಲವೂ ಒಟ್ಟಾಗಿ ರಾಧಕ್ಕನ ಶಾಲೆಯ ಅಸಲಿ ಪಠ್ಯಕ್ರಮ. ಯಾರೂ ಹೇಳಿಕೊಡದ ಮಾನವೀಯತೆಯ ಪಾಠ. ಹಕ್ಕಿಗೆ ನೀರು ಕುಡಿಸಲು ಪ್ರಯತ್ನಿಸಿದ ಪ್ರವೀಣನ ಕೈಕಂಪು, ಗಾಯಕ್ಕೆ ಔಷಧಿ ಹಚ್ಚಿದ ಅಖಿಲನ ಎಚ್ಚರಿಕೆ, ಉಬ್ಬಸ ಹೊಡೆದು ಅಳುತ್ತ ಬಂದ ಆಯೇರಾಳ ಕಣ್ಣೀರು - ಈ ಎಲ್ಲವೂ ಮಕ್ಕಳೊಳಗಿನ ಜೀವಸ್ಪಂದನವನ್ನು ಬಿಚ್ಚಿಟ್ಟವು. ಪಾಠದ ವೇಳಾಪಟ್ಟಿಯಲ್ಲಿ ಇಲ್ಲದಿದ್ದರೂ, ಈ ಕ್ಷಣವೇ ಅವರ ಬದುಕಿನ ಅತಿ ದೊಡ್ಡ ಪಾಠವಾಗಿತ್ತು.
ರಾಧಕ್ಕ ಆ ಮಕ್ಕಳ ನಡುವೆ ನಿಂತು ನೋಡುತ್ತಿದ್ದಾಗ, ಆಕೆಗೆ ಅರ್ಥವಾಯಿತು - ತಾನು ಖಂಡಿತ ಬರೀ ಶಿಕ್ಷಕಿಯಲ್ಲ, ಈ ಕಾಡಿನೊಳಗಿನ ಬದುಕಿನ ಸಾಕ್ಷಿ. ಮಕ್ಕಳ ಕಣ್ಣುಗಳಲ್ಲಿ ಮಿಂಚುವ ಕರುಣೆ, ಪರಸ್ಪರ ಕೈಹಿಡಿದು ನಿಲ್ಲುವ ಧೈರ್ಯ, ಅಪಾಯದ ಮುಂದೆ ಹೆದರದೆ ಬುದ್ಧಿಯಿಂದ ಎದುರಿಸುವ ಚಾಣಾಕ್ಷತೆ - ಇವೆಲ್ಲವೂ ಸೇರಿ ಅಣಶಿಯ ಶಾಲೆಯನ್ನು ವಿಶಿಷ್ಟವನ್ನಾಗಿಸುತ್ತವೆ. ಇಲ್ಲಿ ವಿದ್ಯೆ ಅಂದರೆ ಕೇವಲ ಅಕ್ಷರಜ್ಞಾನವಲ್ಲ; ಬದುಕನ್ನು ಅರ್ಥಮಾಡಿಕೊಳ್ಳುವ ಜ್ಞಾನವೂ ಹೌದು.
ಅದೇ ಹಕ್ಕಿ ಸ್ವಲ್ಪ ಚೇತರಿಸಿಕೊಂಡು ಕಣ್ಣು ಬಿಟ್ಟಾಗ ಮಕ್ಕಳ ಮುಖದಲ್ಲಿ ಮೂಡಿದ ನಗು, ಇಡೀ ಜೋಯಿಡಾ ಕಾಡಿನ ಮೇಲೆಯೇ ಹಬ್ಬಿದ ಮಿಂಚಿನಂತೆ ಕಾಣಿಸುತ್ತದೆ. ಆ ಕ್ಷಣದಲ್ಲಿ ಮತ್ತೊಮ್ಮೆ ಶಾಲೆಯ ಗಂಟೆ ಮತ್ತೆ ಧ್ವನಿಸಿದಂತೆ ಆಯಿತು. ಆದರೆ ಅದು ಕಬ್ಬಿಣದ ಗಂಟೆಯ ಸದ್ದು ಅಲ್ಲ; ಮಕ್ಕಳ ಹೃದಯದೊಳಗಿನ ಸಂವೇದನೆಯ ಧ್ವನಿ. ಆ ಧ್ವನಿ ಕಾಡಿನೊಳಗೆ ಹರಡಿದಂತೆ, ಮರಗಳ ನಡುವೆ, ಹಕ್ಕಿಗಳ ಗಾನದಲ್ಲಿ, ಗಾಳಿಯ ಉಸಿರಿನಲ್ಲಿ ಬೆರೆತು ಹೋಯಿತು.
ರಾಧಕ್ಕನ ಜೊತೆಗೆ ನನಗೂ ಆಗ ಅರ್ಥವಾಯಿತು - ಈ ಶಾಲೆಯ ಪ್ರತಿದಿನವೂ ಒಂದು ಕಥೆ. ಪ್ರತಿಕ್ಷಣವೂ ಒಂದು ಪಾಠ. ಅಣಶಿಯ ಈ ಶಾಲೆ ಕರ್ನಾಟಕದ ಸಾವಿರಾರು ಶಾಲೆಗಳ ನಡುವೆ ನಿಂತು, ಮೌನವಾಗಿ ಆದರೆ ದೃಢವಾಗಿ ಹೇಳುತ್ತಿದೆ: ‘‘ನಾವು ಕಾಡಿನೊಳಗೆ ಇದ್ದೇವೆ, ಆದರೆ ಅಜ್ಞಾನದಲ್ಲಲ್ಲ. ನಾವು ಅಪಾಯದ ಮಧ್ಯೆ ಬದುಕುತ್ತೇವೆ, ಆದರೆ ಭಯದಲ್ಲಿ ಅಲ್ಲ. ನಾವು ಬಡವರು, ಆದರೆ ಮನಸ್ಸಿನಲ್ಲಿ ಸಿರಿವಂತರು’’ಎಂದು.
ಹೀಗಾಗಿಯೇ ಅಣಶಿಯ ಶಾಲೆ ಕೇವಲ ಒಂದು ವಿದ್ಯಾಲಯವಲ್ಲ; ಅದು ಬದುಕಿನ ಪಾಠಶಾಲೆ. ಅಲ್ಲಿ ಮಕ್ಕಳ ಹೆಜ್ಜೆಗೊಂದು ಕಥೆ, ಕಣ್ಣೀರಿಗೊಂದು ಅರ್ಥ, ನಗುವಿಗೊಂದು ಭವಿಷ್ಯ ಮತ್ತು ಈ ಎಲ್ಲದರ ಮಧ್ಯೆ ನಿಂತಿರುವ ರಾಧಕ್ಕ - ಕಾಡಿನ ನಡುವೆ ಹೊತ್ತಿ ಉರಿಯುವ ಒಂದು ಬೆಳಕಿನ ಮೌನದ ದೀಪವೇ ಸರಿ.
ರಾಧಕ್ಕ ಯಾನೆ ಅಕ್ಷತಾ ಕೃಷ್ಣಮೂರ್ತಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಬೇಲೆಕೇರಿ ಗ್ರಾಮದವರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಕಾವ್ಯದ ಓದು, ಬರಹ, ಕಥೆ, ಗಝಲ್, ವಿಮರ್ಶೆ ಇವರ ಆಸಕ್ತಿಗಳು. ಸಾಮಾಜಿಕ ಸೇವೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಹನ್ನೆರಡು ವರ್ಷಗಳಿಂದ ಗಾಂವಕರ ಮೆಮೋರಿಯಲ್ ಫೌಂಡೇಷನ್ ಪರಿಕಲ್ಪನೆ ಹಾಗೂ ಸಂಘಟನೆಗಳಲ್ಲಿ ಕ್ರಿಯಾಶೀಲರಾಗಿದ್ದಾರೆ.
‘ಹನ್ನೆರಡು ದಡೆ ಬೆಲ್ಲ’, ‘ಕೋಳ್ತಂಬ’, ‘ನಾನು ದೀಪ ಹಚ್ಚಬೇಕೆಂದಿದ್ದೆ’ ಕವನ ಸಂಕಲನಗಳು. ‘ಹಾಲಕ್ಕಿ ಒಕ್ಕಲಿಗರು... ಜನಾಂಗ ಅಧ್ಯಯನ ಕೃತಿ’, ‘ಸುಕ್ರಿ ಬೊಮ್ಮಗೌಡ’ ಜೀವನ ಚರಿತ್ರೆ, ‘ಮಧುರ ಚೆನ್ನ’ ವ್ಯಕ್ತಿ ಪರಿಚಯದ ಕೃತಿ, ‘ಕೇದಿಗೆಯ ಕಂಪು’ ವಿಮರ್ಶಾ ಕೃತಿ, ‘ಅಬ್ಬೋಲಿ’ ಕಥಾ ಸಂಕಲನ, ‘ಹಾಲಕ್ಕಿ ಕೋಗಿಲೆ’ ಸಂಪಾದಿತ ಕೃತಿ, ‘ಇಸ್ಕೂಲು’ ಪ್ರಕಟಿತ ಕೃತಿಗಳು.
ಮಯೂರವರ್ಮ ಪ್ರಶಸ್ತಿ, ಹಲಸಂಗಿ ಗೆಳೆಯರ ಪ್ರತಿಷ್ಠಾನದ ಯುವ ಪ್ರಶಸ್ತಿ, ಕರ್ನಾಟಕ ಜಾನಪದ ಪರಿಷತ್ತಿನ ಲೋಕಸರಸ್ವತಿ ಗ್ರಂಥ ಪ್ರಶಸ್ತಿ, ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪ್ರಶಸ್ತಿ, ಸಂಕ್ರಮಣ ಕಾವ್ಯ ಬಹುಮಾನ, ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ದತ್ತಿ ಕಾವ್ಯ ಪ್ರಶಸ್ತಿ, ಡಾ. ಅನುಪಮಾ ನಿರಂಜನ ಕಥಾ ಸ್ಪರ್ಧೆಯ ಬಹುಮಾನ, ಫೀನಿಕ್ಸ್ ಕಥಾರತ್ನ ಪ್ರಶಸ್ತಿ, ಉತ್ತರ ಕನ್ನಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ಸಂಗಾತಿ ರಂಗಭೂಮಿ ಅಂಕೋಲಾ ಉತ್ಸವ-2007 ಪ್ರಶಸ್ತಿ ಮುಂತಾಗಿ ಪುರಸ್ಕಾರ ಗೌರವಗಳಿಗೆ ಪಾತ್ರರಾಗಿದ್ದಾರೆ.
ಇವರೂ ಸೇರಿ ಈ ದೇಶದ ಇಂತಹ ಕಾಡೊಳಗಡೆಯ ಕತ್ತಲೆಯಲ್ಲಿ ಮಕ್ಕಳ ದಾರಿ ಬೆಳಗುವ ವಿನಾಯಕ ಪಟಗಾರ, ಶಾಂತ ಕುಮಾರ್, ಮೋಹನ್ ಸರ್ ಹೀಗೆ ಕಾಡೊಳಗಡೆ ಇರುವ
ಸಾವಿರಾರು ಶಿಕ್ಷಕರಿಗೆ ಈ ದಾರಿಯಲ್ಲಿ ಹೃದಯ ತುಂಬಿ ಅಭಿನಂದನೆ ಸಲ್ಲಿಸುವೆ.