×
Ad

ಎನ್‌ಸಿಇಆರ್‌ಟಿ ವರ್ಸಸ್ ನ್ಯಾಯಾಂಗ

Update: 2026-03-05 10:09 IST

ದೇಶದ ಸಾಂಸ್ಕೃತಿಕ ಬೆಳವಣಿಗೆಯನ್ನು ತಡೆಗಟ್ಟುವ ಯಾವುದೇ ವಿಚಾರವನ್ನು ನ್ಯಾಯಾಂಗವು ಸ್ವಇಚ್ಛೆಯಿಂದ ಗಮನಿಸಿ ಎನ್‌ಸಿಇಆರ್‌ಟಿಯ ವಿಷಯದಲ್ಲಿ ಈಗ ಕೈಗೊಂಡಷ್ಟೇ ವೇಗದಲ್ಲಿ ಸೂಕ್ತ ಕ್ರಮವನ್ನು ಕೈಗೊಳ್ಳಬಹುದು. ನ್ಯಾಯಾಂಗವು ಹೀಗೆ ಮಾಡುತ್ತಿದೆಯೇ? ಇಲ್ಲ. ಮಾಡಬಹುದಾದ ಅನೇಕ ಕೆಲಸಗಳನ್ನು ತಾಂತ್ರಿಕ ನೆಪಗಳನ್ನೊಡ್ಡಿ ನಿರ್ವಹಿಸದ ಉದಾಹರಣೆಗಳಿವೆ. ಬೆನ್ನಿಗೆ ಬಿದ್ದರೆ ಮಾತ್ರ ತಲೆಗೆ ಬುದ್ಧಿ ಎಂಬ ಹಾಗಾಗಿದೆ. ಇದು ಬಹುದೊಡ್ಡ ಸಾಂವಿಧಾನಿಕ ವೈಫಲ್ಯ. ತನ್ನ ಮನೆಗೆ ಬೆಂಕಿಹಚ್ಚಲು ಹೊರಟಾಗ ತೆಗೆದುಕೊಳ್ಳುವ ಜಾಗ್ರತೆಯನ್ನು ಇತರ ಸಂದರ್ಭಗಳಲ್ಲೂ ತೆಗೆದುಕೊಂಡರೆ ದೇಶದ ಅನೇಕ ಸಮಸ್ಯೆಗಳು ಪರಿಹಾರವಾಗುವುದರಲ್ಲಿ ಸಂಶಯವಿಲ್ಲ.

ಮೊನ್ನೆಮೊನ್ನೆ ಸರ್ವೋಚ್ಚ ನ್ಯಾಯಾಲಯವು ಪ್ರೌಢಶಾಲೆಗಳ 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದ ಸಮಾಜದಲ್ಲಿ ನ್ಯಾಯಾಂಗದ ಪಾತ್ರ ಎಂಬ ಅಧ್ಯಾಯದಲ್ಲಿ ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಎಂಬ ವಿಭಾಗವನ್ನು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು ((National Council of Educational Research and Training) ಅಥವಾ ಸಂಕ್ಷಿಪ್ತವಾಗಿ ಎನ್‌ಸಿಇಆರ್‌ಟಿ (NCERT) ಎಂಬ ರಾಷ್ಟ್ರೀಯ ಸಂಸ್ಥೆಯು ಸೇರಿಸಿದ್ದರ ವಿರುದ್ಧ ಕೆಂಡಾಮಂಡಲವಾಯಿತು. ಸ್ವತಃ ಪ್ರಕರಣವನ್ನು ದಾಖಲಿಸಿಕೊಂಡು ಆ ಪಾಠವನ್ನು ನಿಷೇಧಿಸಿ ಅದನ್ನು ಸೇರಿಸಿದ್ದರ ಮತ್ತು ಸೇರಿಸಿದವರ ಕುರಿತು ತನಿಖೆಗೆ ಆದೇಶಿಸಿತು. ತಕ್ಷಣವೇ ಎನ್‌ಸಿಇಆರ್‌ಟಿ ಈಗಾಗಲೇ ವಿತರಣೆ ಯಾದ ಪುಸ್ತಕಗಳನ್ನು ಮರಳಿ ಪಡೆಯಲು ಕ್ರಮಕೈಗೊಂಡದ್ದು ಮಾತ್ರವಲ್ಲ, ಆ ಪಾಠವನ್ನು ಒಳಗೊಂಡ ಪಠ್ಯಕ್ರಮವನ್ನೇ ವಾಪಸ್ ಪಡೆಯಿತು. ಇದರ ಬೇರುಗಳು ಪ್ರಧಾನಿಯವರೆಗೂ ಇಳಿದಿರಬಹುದು. ಕಾದು ನೋಡಬೇಕು.

ಸರ್ವೋಚ್ಚ ನ್ಯಾಯಾಲಯಕ್ಕೆ ಸಿಟ್ಟು ಬಂದದ್ದು ಸಹಜವೇ. ಒಂದು ಸಾಂವಿಧಾನಿಕ ವ್ಯವಸ್ಥೆಯನ್ನು ನೇತ್ಯಾತ್ಮಕವಾಗಿಯೇ ಹೆಸರಿಸಿ ಮಕ್ಕಳಿಗೆ ಹೇಳಿಕೊಟ್ಟರೆ-ಬೇಡ, ಓದಲು ಅವಕಾಶಕೊಟ್ಟರೆ ಏನಾಗಬೇಡ? ಪ್ರೌಢಶಾಲೆಯ ಅಂದರೆ ಹದಿಹರೆಯದ ಮಕ್ಕಳು ಒದ್ದೆಗೋಡೆಯ ಹಾಗೆ. ಏನನ್ನು ಎಸೆದರೂ ಅದು ಭದ್ರವಾಗಿ ಅಂಟಿಕೊಳ್ಳುತ್ತದೆ. ನ್ಯಾಯಾಂಗ ಎಂಬ ಪಾಠ ಅಥವಾ ನ್ಯಾಯಾಂಗದ ಒಳಿತು-ಕೆಡುಕುಗಳು ಮುಂತಾದ ವಿಚಾರಗಳು ಪಠ್ಯದಲ್ಲಿ ಸೇರುವುದು ಸಹಜ. ಸಮಾಜ ಗೌರವಿಸುವ ವ್ಯಕ್ತಿ ಇಲ್ಲವೇ ಸಂಸ್ಥೆಯನ್ನು ಕೇಡಿನಂತೆ ಕಾಣಲು ಪ್ರೇರೇಪಿಸುವ ಯಾವುದೇ ಚಿಂತನೆಯೂ ಕೇಡೇ ಆಗಿರುತ್ತದೆ. ಇರಲಿ; ಇದರ ಕುರಿತು ಕೆಲವು ನೋಟಗಳನ್ನು ಹರಿಸೋಣ:

ಭಾರತದ ಸಾಧು ಸನ್ಯಾಸಿಯೊಬ್ಬರು ಅಮೆರಿಕಕ್ಕೆ ಪ್ರವಾಸ ಹೋದ ಕತೆಯಂತೆ ಇದು. ವಿಮಾನದಿಂದ ಇಳಿದಾಗ ಪತ್ರಕರ್ತರು ಅವರನ್ನು ಮುತ್ತಿಕೊಂಡರು. ಒಬ್ಬ ಪತ್ರಕರ್ತ ಕೇಳಿದ: ‘‘ಅಮೆರಿಕದ ನೈಟ್ ಕ್ಲಬ್‌ಗಳ ಕುರಿತು ತಮ್ಮ ಅಭಿಪ್ರಾಯವೇನು?’’ ನಮ್ಮ ಈ ಸನ್ಯಾಸಿಗಳು ವಿಚಲಿತರಾಗಿ ‘‘ಇಲ್ಲಿ ನೈಟ್ ಕ್ಲಬ್‌ಗಳಿವೆಯೇ?’’ ಎಂದು ಕೇಳಿದರು. ಮರುದಿನ ಪತ್ರಿಕೆಗಳಲ್ಲಿ ‘‘ಭಾರತದ ಸನ್ಯಾಸಿಗಳು ಅಮೆರಿಕದ ವಿಮಾನ ನಿಲ್ದಾಣದಲ್ಲಿ ಇಳಿದಾಕ್ಷಣ ಇಲ್ಲಿ ನೈಟ್ ಕ್ಲಬ್‌ಗಳಿವೆಯೇ? ಎಂದು ವಿಚಾರಿಸಿದರು’’ ಎಂದು ಪ್ರಕಟವಾಗಿತ್ತಂತೆ. ಪ್ರಶ್ನೆಯೇ ಋಣಾತ್ಮಕವಾಗಿರುವಾಗ ಯಾವ ಉತ್ತರವೂ ಅದನ್ನು ಪುಷ್ಟೀಕರಿಸುವಂತಿರುತ್ತದೆ.

ಇಷ್ಟಕ್ಕೂ ಎನ್‌ಸಿಇಆರ್‌ಟಿ ಎಂಬ ಈ ಸಂಸ್ಥೆಯ ಉದ್ದೇಶದ ಬಗ್ಗೆ ಸಂಶಯ ಸಹಜವಾಗಿಯೇ ಹುಟ್ಟುತ್ತದೆ. ಭಾರತ ವಿಶ್ವಗುರುವಾಗಿದೆಯೆಂದು ನಾವೆಷ್ಟೇ ಎದೆ-ಬೆನ್ನು (ಇನ್ನು ಲಭ್ಯವಾಗುವ ಇತರ ದೈಹಿಕ ಭಾಗಗಳು) ಎಷ್ಟೇ ತಟ್ಟಿಕೊಂಡರೂ ಇಲ್ಲಿ ಎಲ್ಲೆಡೆ ಇರುವಂತೆ ಭ್ರಷ್ಟಾಚಾರ ವ್ಯಾಪಕವಾಗಿದೆ ಮತ್ತು ಭಾರತ ಇದರಿಂದ ಮುಕ್ತವಾಗಲು ಸಾಧ್ಯವಿಲ್ಲದ ವಾತಾವರಣದಲ್ಲಿ ನಾವಿದ್ದೇವೆಂಬ ಸತ್ಯವನ್ನು ಮರೆಮಾಚೆವು. ರಾಜಕಾರಣವಂತೂ ಹಂದಿಗಳೂ ಸಹಿಸಲಾಗದಷ್ಟು ಗಬ್ಬೆದ್ದಿದೆ. ಪ್ರಸ್ತುತ ಸರಕಾರ ತಾನಷ್ಟೇ ಸರಿಯಿದ್ದೇನೆಂಬ ಭ್ರಮೆಯ ಭಾವನೆಯನ್ನು ಜನರಲ್ಲಿ ಹುಟ್ಟಿಸಲು ಪ್ರಯತ್ನಿಸುತ್ತಿದೆ. ಸಂವಿಧಾನವನ್ನು ತಿರುಚುವ ಯತ್ನವು ಅನುದಿನ ನಡೆಯುತ್ತಿದೆ. ಹೆಸರು ಬದಲಾವಣೆಗಳು ಹೆಸರಿಗಷ್ಟೇ ಸೀಮಿತವಾಗಿಲ್ಲ. ಅವು ದೇಶದ ಜಾತ್ಯತೀತ ಲಕ್ಷಣಗಳನ್ನು ಅಳಿಸುವ ಯತ್ನಗಳೇ. ಬಹಳಷ್ಟು ಯೋಜನೆಗಳು ಈಗ ಈ ರೀತಿಯ ವಾಮಾಚಾರದ ಮೂಲಕ ನಡೆಯುತ್ತಿವೆ.

ಒಕ್ಕೂಟ ಸರಕಾರದ ನಡವಳಿಕೆಗಳನ್ನು ಗಮನಿಸಿದರೆ ಅದು ಯಾವ ಬಗೆಯ ಪ್ರತಿರೋಧಗಳನ್ನೂ ಸಹಿಸಲು ಸಿದ್ಧವಿಲ್ಲ. ಎಲ್ಲವನ್ನೂ ತನ್ನ ಊಳಿಗದ ತನಿಖಾ ಸಂಸ್ಥೆಯ ಮೂಲಕ ಸದೆಬಡಿಯುವ ತಂತ್ರಗಳನ್ನು ಹುಡುಕುತ್ತಿದೆ. ಅಗತ್ಯವಿರುವ ಎಲ್ಲ ವಿಚಾರಗಳ ಸದ್ದಡಗಿಸಿ ತಮ್ಮ ಗುಪ್ತ ಸೂಚಿಯನ್ನು ಅಳವಡಿಸುವ ತಂತ್ರ ನ್ಯಾಯಾಂಗದ ಮಟ್ಟಿಗಂತೂ ವಿಫಲವಾಯಿತು. ಆದರೆ ಹುತ್ತವ ಬಡಿದರೂ ಹಾವು ಸಾಯಲಿಲ್ಲ ಎಂಬ ಸಮಸ್ಯೆ ಹಾಗೇ ಉಳಿದಿದೆ. ಇದನ್ನು ಅರ್ಥಮಾಡಿಕೊಳ್ಳಬೇಕಾದರೆ ಈ ಎನ್‌ಸಿಇಆರ್‌ಟಿ ಎಂಬ ಮತ್ತು ಅಂತಹ ಸಂಸ್ಥೆಗಳ ಕೈವಾಡಗಳನ್ನು ಪರಿಶೀಲಿಸಬೇಕು.

ಭಾವನೆಗಳು ಮಾತ್ರವಲ್ಲ, ವಿಚಾರಗಳೂ ವೈಯಕ್ತಿಕವೇ. ಅವನ್ನು ತನ್ನ ಸುತ್ತಲಿನ ಸಮಾಜಕ್ಕೆ, ಹೊರ ಜಗತ್ತಿಗೆ ಅನ್ವಯಿಸುವುದು ಮನುಷ್ಯನ ಜಾಣತನ. ತನಗಾದ ಅನ್ಯಾಯವನ್ನು ಲೋಕಕ್ಕಾದ ಅನ್ಯಾಯವೆಂದು ಮನುಷ್ಯ ತಿಳಿಯುತ್ತಾನೆ. ಹಾಗೆಂದು ಪರರಿಗಾದ, ಅಗುವ ತೊಂದರೆಗಳನ್ನು ತನಗೆ ಅನ್ವಯಿಸಿ ಕಾರ್ಯ ಪ್ರವೃತ್ತರಾಗುವ ಮನುಷ್ಯರು ಬಹಳ ಅಪರೂಪ. ಉಳಿದದ್ದೆಲ್ಲ ತೋರಿಕೆಯ ಅಥವಾ ಗೋಚರವಾಗದ ಮಾರುವೇಷ.

ಈ ದೇಶದಲ್ಲಿ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು (National Council of Educational Research and Training) ಅಥವಾ ಸಂಕ್ಷಿಪ್ತವಾಗಿ ಎನ್‌ಸಿಇಆರ್‌ಟಿ (NCERT) ಎಂದು ಕರೆಯಲ್ಪಡುವ ಒಕ್ಕೂಟ ಸರಕಾರವು 1961ರಲ್ಲಿ ಸ್ಥಾಪಿಸಿದ ಮತ್ತು ಅದರ ಆಡಳಿತಕ್ಕೆ ಒಳಪಡುವ ‘ಸ್ವಾಯತ್ತ’ ಸಂಸ್ಥೆಯೊಂದಿದೆ. ಇದು ತನ್ನ ಹೆಸರೇ ಸೂಚಿಸುವಂತೆ ಶಿಕ್ಷಣಕ್ಕೆ ಸಂಬಂಧ ಪಟ್ಟ ಪಠ್ಯಗಳನ್ನು ತಯಾರಿಸುವುದು ಅಥವಾ ಸೂಚಿಸುವುದು, ಹಾಗೂ ಶಿಕ್ಷಣಕ್ಕೆ ಬೇಕಾದ ಅಧ್ಯಯನ, ತರಬೇತಿ ಮುಂತಾದವುಗಳನ್ನು ಜೋಡಿಸುವ ಅಥವಾ ಜೋಡಿಸಬೇಕಾದ ಸಂಸ್ಥೆ. ಒಟ್ಟಾರೆ ಹೇಳುವುದಾದರೆ ಇದು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸುವ ಮತ್ತು ಆ ಮೂಲಕ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಮಹತ್ವದ ಹೊಣೆಯನ್ನು ಹೊತ್ತ ಮತ್ತು ಹೊರಬೇಕಾದ ಸಂಸ್ಥೆ.

ಯಾವುದೇ ಆಡಳಿತವು ತನ್ನದೇ ಆದ ರಾಜಕೀಯ ಉದ್ದೇಶಗಳನ್ನು ಹೊಂದಿರುತ್ತದೆ. ತತ್ವ-ಸಿದ್ಧಾಂತಗಳ ಹೆಸರಿನಲ್ಲಿ ಹುಟ್ಟಿಕೊಂಡು ಬಳಿಕ ತನ್ನ ಅಧಿಕಾರ ರಾಜಕೀಯಕ್ಕೆ ನೆರವಾಗುವ ವಿಚಾರಗಳನ್ನು ಪ್ರಚುರಪಡಿಸುವ, ಪ್ರಚಾರ-ಪ್ರಸಾರ ಮಾಡುವ ಹಾದಿಯಲ್ಲೇ ಈ ನೀತಿಯು ವಿಕಾಸಗೊಳ್ಳುತ್ತದೆ. ಇದನ್ನು ಮೀರಿ ಸಾಂವಿಧಾನಿಕ ಬದ್ಧತೆಯಿಂದ ಮೊದಲ ಕೆಲವು ದಶಕಗಳಲ್ಲಿ ಸ್ವತಂತ್ರ ಭಾರತದ ಸ್ವಾಯತ್ತ ಸಂಸ್ಥೆಗಳು ಕಾರ್ಯನಿರ್ವಹಿಸಿದವಾದರೂ ಆನಂತರ ಅವು ಶಿವನೆದುರು ನಿಂತ (ಕುಳಿತ?) ನಂದಿಯ ಹಾಗೆ ಪ್ರಭುಸಂಹಿತೆಗೆ ಒಳಗಾದವು. ಬುದ್ಧಿವಂತರು, ಗಣ್ಯರು, ಜ್ಞಾನಿಗಳು ಎನಿಸಿಕೊಂಡವರು ಕೂಡಿ ಚರ್ಚಿಸಿ ಕೈಗೊಂಡ ನಿಲುವು ದೇಶಕ್ಕೆ ಹಿತ ತಂದವೆಂದೇನೂ ಇಲ್ಲ. ಪುಸ್ತಕದ ಬದನೆಕಾಯಿ ಮಡಿಕೆಯಲ್ಲಿ ಬೇಯದು ಎಂಬಂತೆ ಅವರೂ ಸಾಕಷ್ಟು ಹುಂಬತನದ ನಿರ್ಧಾರವನ್ನು ಮಾಡಿದ ಉದಾಹರಣೆಗಳಿವೆ. ಇದಕ್ಕೆ ಮುಖ್ಯವಾದ ಕಾರಣವೆಂದರೆ ಅಜ್ಜನೆಟ್ಟಾಲಕ್ಕೆ ನೇತುಕೊಳ್ಳಬಾರದೆಂಬ ಮತ್ತು ಪರಂಪರೆಯನ್ನು ಉದ್ಧರಿಸುವ ಮಾರ್ಗವೆಂದರೆ ಪ್ರಯೋಗಕ್ಕೆ ಒಳಪಡುವುದು ಮತ್ತು ಒಳಪಡಿಸುವುದು ಎಂಬ ನಂಬಿಕೆ. ಆದರೆ ಎಲ್ಲ ಸಂಪ್ರದಾಯ/ಪರಂಪರೆಯೂ ಬದಲಾವಣೆಗೆ ಒಳಪಡಬೇಕಾದ್ದಿಲ್ಲ ಎಂಬ ನೀತಿಯನ್ನು ಅನುಸರಿಸುವುದಕ್ಕೆ ನಮ್ಮ ಸ್ವಘೋಷಿತ (ಸೋ ಕಾಲ್ಡ್) ಪಂಡಿತರು ಒಪ್ಪುವುದಿಲ್ಲ. ತಾವು ಅಲ್ಲಿರುವುದಕ್ಕೆ ಮತ್ತು ತಮ್ಮ ಅಸ್ತಿತ್ವವನ್ನು ಪ್ರದರ್ಶಿಸುವುದಕ್ಕಾದರೂ ಕೆಲವೊಂದು ಬದಲಾವಣೆಯನ್ನು ತರಬೇಕೆಂಬುದು ಈ ನಂದೀಶ್ವರರ ನಂಬಿಕೆ.

ಇದು ರಾಷ್ಟ್ರಮಟ್ಟಕ್ಕೆ ಸೀಮಿತವಾಗಿಲ್ಲ. ರಾಜ್ಯಮಟ್ಟದಲ್ಲೂ ಈ ಪ್ರಹಸನ ಯಥೇಚ್ಛವಾಗಿ ನಡೆಯುತ್ತಿದೆ. ಅದನ್ನು ಬರೆಯಹೊರಟರೆ ಈ ಅಂಕಣ ಸಾಲದು. ಇಂತಹ ವಹಿವಾಟುಗಳು ಈ ದೇಶದ ಲಾಕ್ಷಣಿಕ ಸೋಂಕು.

ರಾಜಕಾರಣವನ್ನು ಹೊರತುಪಡಿಸಿದರೆ ನಮ್ಮ ಸಾರ್ವಜನಿಕ ಹಣ ಅತೀ ಹೆಚ್ಚು ಲೂಟಿಯಾಗುತ್ತಿರುವುದು ಈ ಬುದ್ಧಿವಂತರ, ವಿದ್ವಾಂಸರ ಪ್ರಪಂಚದಲ್ಲಿ. ಈ ಯೋಚನೆ-ಯೋಜನೆಗೆ ಪ್ರಯೋಗ ಪ್ರಾಣಿ (ಗಿನಿಪಿಗ್)ಗಳು ಬೇರೆ ಯಾರೂ ಅಲ್ಲ, ನಮ್ಮ ಪ್ರಜೆಗಳು. ಅದರಲ್ಲೂ ಈ ಪ್ರಯೋಗದ ದುರಂತಮಯ ಬಲಿಪಶುಗಳು ಎಳೆಹರೆಯದ, ಜಗತ್ತನ್ನು ವಿಸ್ಮಯಕಣ್ಣುಗಳಿಂದ ನೋಡುವ, ಗ್ರಹಿಸುವ, ಎಳೆಯರು. ಪದವಿಯ ವರೆಗಿನ ಶಿಕ್ಷಣವನ್ನು 10+2, 11+1, ಹೀಗೆಲ್ಲ ಕಾಲಮಿತಿಯ ಲೆಕ್ಕಾಚಾರವನ್ನು ಹೇರಿ ಈಗ 5+3+3+4 ಎಂಬ ಹೊಸ ಪಾತಳಿಯನ್ನು ನಿರ್ಧರಿಸಲಾಗಿದೆ. ಇವನ್ನೆಲ್ಲ ಗಮನಿಸಿದರೆ ಹಿಂದೊಮ್ಮೆ ಡಾ. ಶಿವರಾಮ ಕಾರಂತರು ಟೀಕಿಸಿದಂತೆ 15-3 ಯಾಕೆ ಕೂಡದು ಎಂದು ಪ್ರಶ್ನಿಸಬೇಕಾಗುತ್ತದೆ!

2020ರಲ್ಲಿ ರಾಷ್ಟ್ರೀಯ ನೀತಿ ಪ್ರಕಟವಾಯಿತು. ಇದರಲ್ಲಿ ನೀತಿ ಎಷ್ಟು, ಅನೀತಿ ಎಷ್ಟು ಎಂಬುದು ಸಾರ್ವಜನಿಕ ಚರ್ಚೆಯ ವಸ್ತು. ಸಂಘ ಪರಿವಾರವು ತನ್ನೆಲ್ಲ ಕಾರ್ಯಸೂಚಿಗಳನ್ನು ಮೋದಿ ಸರಕಾರದ ಮೂಲಕ ನಿರ್ವಹಿಸುತ್ತಿದೆ. ಈಗಂತೂ ಮತೀಯತೆಯ ಕಾರ್ಯಸೂಚಿಯನ್ನು ಎಲ್ಲಿ ಸಾಧ್ಯವೋ ಅಲ್ಲಿ ಸೇರಿಸಲಾಗುತ್ತಿದೆ. ‘‘Nagpur Communal Ecosystem for Rewriting of Textbooks--which is the real NCERT'’ ಎಂಬ ಟೀಕೆ ಬಂದಿದೆ. ಮನುಸ್ಮತಿಯನ್ನು ಪಠ್ಯವಾಗಿ ಸೇರಿಸಿದ ಉದಾಹರಣೆಗಳಿವೆ. ವಿಶ್ವವಿದ್ಯಾನಿಲಯಗಳ ಮುಖಂಡರಾಗಿ ನೇರ ಮತೀಯ ರಾಜಕೀಯದ ನಿಷ್ಠರನ್ನು ತುಂಬಿಸಲಾಗುತ್ತಿದೆ. ಇದಕ್ಕೆ ನೀಡುವ ಸಮರ್ಥನೆಯೆಂದರೆ ಒಂದೊಮ್ಮೆ- ಪ್ರಾಯಃ ನೆಹರೂ ಕಾಲದಲ್ಲಿ- ಎಲ್ಲ ಪಠ್ಯಗಳಲ್ಲಿ ಸಮಾಜವಾದಿ ಸಿದ್ಧಾಂತಗಳನ್ನು ಹೇರಲಾಗಿದೆ ಮತ್ತು ಎಡಪಂಥೀಯರೇ ಅಲ್ಲಿ ಅಂದರೆ ವಿಶ್ವವಿದ್ಯಾನಿಲಯಗಳಲ್ಲಿ, ಯುಜಿಸಿ ಮುಂತಾದ ಶಿಕ್ಷಣ ಸಂಬಂಧಿ ಸಂಸ್ಥೆಗಳಲ್ಲಿ ತುಂಬಿಹೋಗಿದ್ದರು ಎಂಬ ಆರೋಪ. ಸ್ವಲ್ಪ ಮಟ್ಟಿಗೆ ಇದೂ ಸತ್ಯವೇ. ಆದರೆ ಕಾಯಿಲೆಯನ್ನು ಗುಣಮಾಡುವ ಬದಲು ಇನ್ನೊಂದು ಅದಕ್ಕಿಂತ ಗಂಭೀರ ಕಾಯಿಲೆಗೆ ಅವಕಾಶಮಾಡಿಕೊಟ್ಟರೆ ಸಮಾಜವೆಂಬ ರೋಗಿಯ ಪಾಡು ಏನಾಗಬೇಡ? ಈಗ ಆಗಿರುವುದು ಅದೇ.

ನ್ಯಾಯಾಂಗವು ಪೂರ್ಣ ಸರಿಯಿರಲಿಕ್ಕಿಲ್ಲ. ಅದು ಸಾಧ್ಯವೂ ಅಲ್ಲ.ಏನಿದ್ದರೂ ಅದು ನಾವು ಬದುಕಿ ಬಾಳುವ ಸಮಾಜದ, ಈ ನೆಲದ ಸಂಸ್ಕೃತಿಯ ಭಾಗವಾಗಿರುವುದರಿಂದ ಇಲ್ಲಿನ ಸಿಹಿಕಹಿಗಳು ಅಲ್ಲೂ ಇರುತ್ತವೆ. ಉದಾಹರಣೆಗೆ ಎನ್‌ಸಿಇಆರ್‌ಟಿಯ ಅಕ್ರಮಗಳಲ್ಲಿ ಇದೇ ಮೊದಲಲ್ಲ. ಮನುಸ್ಮತಿಯ ಸೇರ್ಪಡೆ, ಮೊಗಲ್ ಇತಿಹಾಸದ ಬೇರ್ಪಡೆ ಮುಂತಾದವು ಇಡೀ ದೇಶವನ್ನು ತಲ್ಲಣಗೊಳಿಸಿದಾಗಲೂ ಸರ್ವೋಚ್ಚ ನ್ಯಾಯಾಲಯ ಕಣ್ಣುಮುಚ್ಚಿ ಕುಳಿತಿತ್ತು. ಎನ್‌ಸಿಇಆರ್‌ಟಿ ನ್ಯಾಯಾಂಗದ ಬಗ್ಗೆ ಪ್ರಸ್ತಾಪಿಸದಿದ್ದರೆ, ಅದರ ಗೋಜಿಗೆ ನ್ಯಾಯಾಂಗವು ಹೋಗುತ್ತಿರಲಿಲ್ಲ. ಇಷ್ಟು ವೇಗವಾಗಿ ಕ್ರಮಕೈಗೊಂಡ ಇತಿಹಾಸ ಸ್ವತಂತ್ರ ಭಾರತದಲ್ಲಿ ಇಲ್ಲ. ಸರಕಾರ ಮಾಡಿದ ಇತರ ಅನೇಕ ಅಕ್ರಮಗಳನ್ನು ಗಮನಿಸುವ ಇರಾದೆಯು ಸರ್ವೋಚ್ಚ ನ್ಯಾಯಾಲಯಕ್ಕಿದ್ದರೆ ಈಗಲೂ ತಡವಾಗಿಲ್ಲ. ದೇಶದ ಸಾಂಸ್ಕೃತಿಕ ಬೆಳವಣಿಗೆಯನ್ನು ತಡೆಗಟ್ಟುವ ಯಾವುದೇ ವಿಚಾರವನ್ನು ನ್ಯಾಯಾಂಗವು ಸ್ವಇಚ್ಛೆಯಿಂದ ಗಮನಿಸಿ ಇಷ್ಟೇ ವೇಗದಲ್ಲಿ ಸೂಕ್ತ ಕ್ರಮವನ್ನು ಕೈಗೊಳ್ಳಬಹುದು. ನ್ಯಾಯಾಂಗವು ಹೀಗೆ ಮಾಡುತ್ತಿದೆಯೇ? ಇಲ್ಲ. ಮಾಡಬಹುದಾದ ಅನೇಕ ಕೆಲಸಗಳನ್ನು ತಾಂತ್ರಿಕ ನೆಪಗಳನ್ನೊಡ್ಡಿ ನಿರ್ವಹಿಸದ ಉದಾಹರಣೆಗಳಿವೆ. ಬೆನ್ನಿಗೆ ಬಿದ್ದರೆ ಮಾತ್ರ ತಲೆಗೆ ಬುದ್ಧಿ ಎಂಬ ಹಾಗಾಗಿದೆ. ಇದು ಬಹುದೊಡ್ಡ ಸಾಂವಿಧಾನಿಕ ವೈಫಲ್ಯ. ತನ್ನ ಮನೆಗೆ ಬೆಂಕಿಹಚ್ಚಲು ಹೊರಟಾಗ ತೆಗೆದುಕೊಳ್ಳುವ ಜಾಗ್ರತೆಯನ್ನು ಇತರ ಸಂದರ್ಭಗಳಲ್ಲೂ ತೆಗೆದುಕೊಂಡರೆ ದೇಶದ ಅನೇಕ ಸಮಸ್ಯೆಗಳು ಪರಿಹಾರವಾಗುವುದರಲ್ಲಿ ಸಂಶಯವಿಲ್ಲ.

ನ್ಯಾಯಾಂಗವು ತನ್ನ ಸಾಂವಿಧಾನಿಕ ಹೊಣೆಯನ್ನು ನಿರ್ವಹಿಸಲು ವಿಫಲವಾದಲ್ಲಿ ಅದಕ್ಕೆ ಸರಿಯಾದ ಕ್ರಮಗಳನ್ನು ಸರಕಾರ ಕೈಗೊಳ್ಳಬಹುದು. ಆದರೆ ಸರಕಾರವು ಸಂವಿಧಾನದ ಚೌಕಟ್ಟಿನಲ್ಲೇ ಈ ಕ್ರಮಗಳನ್ನು ಕೈಗೊಳ್ಳಬೇಕೇ ಹೊರತು ತನ್ನ ರಾಜಕಾರಣದ ಆಕಾಂಕ್ಷೆಗಳನ್ನು ಈಡೇರಿಸುವ, ತನ್ನ ಅನುಕೂಲಕ್ಕಾಗಿ ಇತರರ ತೋಳು ತಿರುಚುವ ಇಲ್ಲವೇ ಅಕ್ರಮಗಳ ಮೂಲಕವಲ್ಲ. ನ್ಯಾಯಮೂರ್ತಿಗಳ ಪದಚ್ಯುತಿಯ ಕ್ರಮಕ್ಕೆ ಎಷ್ಟು ಸಂಸದರು ನಿರ್ಭೀತಿಯಿಂದ ನಿಷ್ಪಕ್ಷತೆಯಿಂದ ಭಾಗವಹಿಸುತ್ತಾರೆ? ಅಲ್ಲಿ ನಡೆಯುವುದು ಅಕ್ರಮ ರಾಜಕೀಯವೇ ಹೊರತು ದೇಶಹಿತದ, ನ್ಯಾಯಹಿತದ, ಸಂವಿಧಾನಹಿತದ ಕ್ರಮವಲ್ಲ. ಕ್ರಿಮಿನಲ್ ಪ್ರಕರಣಗಳ ಆರೋಪಿಗಳೇ ಹೆಚ್ಚಿರುವ ಸಂಸತ್ ಅಥವಾ ಶಾಸನಸಭೆಗಳಲ್ಲಿ ಎಂತಹ ನ್ಯಾಯ ನಡೆಯಬಹುದು?

ನ್ಯಾಯಾಂಗದ ಕುರಿತ ಟೀಕೆಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಸರಕಾರವು ತಿರುಚುತ್ತಿದೆ. ಇದು ಹಿಂದಿನ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಇದ್ದಾಗಲೇ ನಡೆಯುತ್ತಿತ್ತು. ಚುನಾವಣಾ ಆಯೋಗದ ಆಯ್ಕೆಯಲ್ಲಿ ದೇಶದ ಮುಖ್ಯ ನ್ಯಾಯಮೂರ್ತಿಗಳ ಭಾಗವಹಿಸುವಿಕೆಯನ್ನು ಶಾಸನದ ಮೂಲಕ ಮೊದಲ ಬಾರಿಗೆ ನಿರಾಕರಿಸಲಾಯಿತು. ಈಗಿನ ಸ್ಥಿತಿಯಲ್ಲಿ ಸರಕಾರವು ತನಗೆ ಬೇಕಾದವರನ್ನೇ ಅಲ್ಲಿ ಪ್ರತಿಷ್ಠಾಪಿಸಲು ಸಾಧ್ಯವಾಗಿದೆ. ಇದರ ಪರಿಣಾಮವನ್ನು ದೇಶವು ಈಗಾಗಲೇ ಕಾಣುತ್ತಿದೆ. ತಮಗಾಗದ ನ್ಯಾಯಮೂರ್ತಿಗಳಿಗೆ ಪದೋನ್ನತಿಯನ್ನು ನಿರಾಕರಿಸುವ ಅಥವಾ ಅವರ ಆಯ್ಕೆಯನ್ನು ಅವರ ನಿವೃತ್ತಿಯವರೆಗೂ ವಿಳಂಬಿಸುವ ನೀತಿಯನ್ನು ಸರಕಾರ ವಹಿಸಿದೆ.

ಇಂತಹ ಪರಿಸ್ಥಿತಿಯಲ್ಲಿ ಎನ್‌ಸಿಇಆರ್‌ಟಿ ಒಂದು ವೇಳೆ ನ್ಯಾಯಾಂಗದ ಕುರಿತ ಅಸಮಾಧಾನವಿದ್ದರೆ ಮತ್ತು ಅದನ್ನು ಶಿಕ್ಷಣದ ಭಾಗವಾಗಿಸಬೇಕಾದರೆ ನಿಷ್ಪಕ್ಷವಾಗಿ ಪ್ರದರ್ಶಿಸಬೇಕು. ಪ್ರಾಯಃ ಭಾರತದಲ್ಲಿ ಭ್ರಷ್ಟಾಚಾರ ಎಂಬ ದೊಡ್ಡ ಕ್ಯಾನ್ವಾಸನ್ನು ರಚಿಸಿಕೊಂಡು ಅದರಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹೀಗೆ ಸಂವಿಧಾನದ ಮೂರು ಮೂಲೆಗಳಲ್ಲಿ ಭ್ರಷ್ಟಾಚಾರ ಎಂಬ ಪಠ್ಯಕ್ರಮವನ್ನು ಸೇರಿಸಬಹುದು. ಇಂದಿನ ಪರಿಸ್ಥಿತಿಯಲ್ಲಿ ಇವಿಷ್ಟೇ ಸಾಲದು: ಮಾಧ್ಯಮದಲ್ಲಿ, ಉದ್ದಿಮೆಯಲ್ಲಿ, ಕಲೆ-ಸಾಹಿತ್ಯದಲ್ಲಿ, ಮತ-ಧರ್ಮಗಳಲ್ಲಿ, ಕೊನೆಗೆ ಕ್ರೀಡೆಯಲ್ಲೂ- ಹೀಗೆ ಇತರ ಅನೇಕ ಕ್ಷೇತ್ರಗಳನ್ನೂ ಬೆಟ್ಟು ಮಾಡಿ ತೋರಿಸಬಹುದು; ಆಗ ನ್ಯಾಯಾಂಗದ ಕುರಿತೂ ಕ್ಷ-ಕಿರಣವನ್ನು ಬೀರಬಹುದು. ದೇಶದ ಎಲ್ಲ ಕ್ಷೇತ್ರಗಳಲ್ಲೂ ಭ್ರಷ್ಟಾಚಾರವು ತಾಂಡವವಾಡಬೇಕಾದರೆ ನ್ಯಾಯಾಂಗವನ್ನು ಮಾತ್ರ ಆರೋಪಿಸುವುದು ಒಟ್ಟಾರೆ ನ್ಯಾಯಾಂಗ ವ್ಯವಸ್ಥೆಯನ್ನೇ ಬುಡಮೇಲುಮಾಡುವ ಅಥವಾ ರಾಜಕಾರಣಕ್ಕೆ, ಅಧಿಕಾರಶಾಹಿಗೆ ಅನುಕೂಲವಾಗುವಂತಹ ತ್ರಿಶಂಕು ನರಕವನ್ನು ಸೃಷ್ಟಿಸುವ ಸರ್ಕಸ್ಸಾಗಬಹುದು. ಇದು ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಒಟ್ಟು ಸಮಾಜಕ್ಕೇ ಅಂಟುವ ಕ್ಯಾನ್ಸರ್ ಆಗುವ ಆತಂಕವನ್ನು ತರಬಹುದು.

ಶಾಸಕಾಂಗ ಮತ್ತು ಕಾರ್ಯಾಂಗ ಈ ಕೆಲಸವನ್ನು ಮಾಡುತ್ತದೆಂಬ ಸೂಚನೆಗಳಿಲ್ಲ. ಇದನ್ನು ತಡೆಗಟ್ಟುವ ಕರ್ತವ್ಯ ಎನ್‌ಸಿಇಆರ್‌ಟಿ ಮತ್ತು ಅಂತಹ ಸಂಸ್ಥೆಗಳಿಗಿದೆೆ; ನ್ಯಾಯಾಂಗಕ್ಕೂ ಇದೆ; ಇವೆರಡೂ ವಿಫಲವಾದರೆ ಈ ಹಕ್ಕು, ಕರ್ತವ್ಯ ಜನರಿಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಾಲಸುಬ್ರಹ್ಮಣ್ಯ ಕಂಜರ್ಪಣೆ

contributor

Similar News

ಹೊಸ ವರುಷ