×
Ad

ವೇಷ ಕಳಚಿ ದೇಶ ಧರಿಸಿ...

Update: 2025-05-11 10:28 IST

ಒಂದೇ ಬೆಂಚಲ್ಲಿ ಕೂರುವ ರಾಮಕೃಷ್ಣ, ಇಸ್ಮಾಯಿಲ್, ಐವನ್, ಜೀವಂದರ್ ಇವರೆಲ್ಲ ಅಕ್ಷರದ ಕಾರಣಗಳಿಗೆ ಒಂದೇ ಆಗಿ ಅಲ್ಲಿ ಸೇರಿದ್ದ ಭಿನ್ನ-ಭಿನ್ನ ಧರ್ಮ ಸಂಸ್ಕೃತಿಯ ಆಚಾರ ವಿಚಾರದ ಚಿಹ್ನೆಗಳಾಗಿದ್ದರು. ಈ ವಿಘಟನೆ ಶಾಲೆ ಎಂಬ ಭೌತಿಕ ಆವರಣದಲ್ಲಷ್ಟೇ ಅಲ್ಲ, ಮಕ್ಕಳನ್ನು ಹಳ್ಳಿ ಹಳ್ಳಿಗಳ ಮನೆ ಮನೆಗಳಿಂದ ಹೊತ್ತು ತರುವ ಬಸ್ಸು ಗಾಡಿಗಳಲ್ಲೂ ಅವರನ್ನು ಧರ್ಮಾಧಾರಿತವಾಗಿ ನಿರ್ಬಂಧಗೊಳಿಸುವ, ಏಕಾಂತಗೊಳಿಸುವ ಕ್ರಮವನ್ನು ಕಾಣುತ್ತಿದ್ದೇವೆ. ಇವರೆಲ್ಲ ಓದುವ ಶಾಲೆಗಳಲ್ಲಿ ಭಾರತದ ಸಂವಿಧಾನದ ಆಶಯ, ನಿಲುವುಗಳು ಕೇವಲ ಗೋಡೆಗೆ ಅಂಟಿಕೊಳ್ಳುವ ಚೀಟಿಗಳಾಗುತ್ತಿವೆ.

ವೈರಿ ದೇಶದೊಂದಿಗೆ ಮಾಡುವ ಪ್ರತೀ ಯುದ್ಧ ಆ ದೇಶದೊಳಗಡೆಯ ದ್ವೇಷವನ್ನು ನಾಶಪಡಿಸುತ್ತದೆ ಎಂಬ ಮಾತಿದೆ. ಶತ್ರುಗಳು ದಾಳಿ ಮಾಡುವ ಹೊತ್ತಿಗೆ ಒಳಗಡೆಯವರೆಲ್ಲ ಮಿತ್ರರಾಗದೆ ಹೋದರೆ ಅದಕ್ಕಿಂತ ಅಪಾಯ ಇನ್ನೊಂದಿಲ್ಲ. ಕಳೆದ ಬಾರಿ ಕಾರ್ಗಿಲ್ ಯುದ್ಧ ಆದಾಗ ಕುಂದಾಪುರ ಗಂಗೊಳ್ಳಿಯ ಹಣ್ಣು ಹಣ್ಣು ಮುದುಕಿಯೊಬ್ಬರು ಮನೆಯಲ್ಲೇ ತಟ್ಟಿದ ಒಂದಷ್ಟು ಅಕ್ಕಿ ರೊಟ್ಟಿಯನ್ನು ಬಟ್ಟೆಯಲ್ಲಿ ಕಟ್ಟಿ ಕುಂದಾಪುರದ ಬಸ್ ಸ್ಟ್ಯಾಂಡಿಗೆ ಬಂದು ಬೈಂದೂರಿನ ಕಡೆಗೆ ಮುಖ ಮಾಡಿದ ಬಸ್ಸಿನ ಚಾಲಕನ ಕೈಗೆ ಕೊಟ್ಟು ಇದನ್ನು ಭಾರತದ ಪರವಾಗಿ ಹೋರಾಡುವ ಸೈನಿಕರ ಕೈಗೆ ಕೊಡು ಮಗ ಎಂದದ್ದು ನನಗೆ ಇವತ್ತಿಗೂ ನೆನಪಿದೆ.

ಯುದ್ಧದ ಸಂದರ್ಭದಲ್ಲಿ ದೇಶವಾಸಿಗಳ ಕೈಗಳೆಲ್ಲ ಪರಸ್ಪರ ಒಂದಕ್ಕೊಂದು ಜೋಡಣೆಗೊಳ್ಳದಿದ್ದರೆ ಅವರ ಹೃದಯಗಳೂ ಸರಿ ಇಲ್ಲ ಎಂದೇ ಅರ್ಥ ಅಥವಾ ಅವರ ಆರೋಗ್ಯದಲ್ಲೇ ದೋಷವಿದೆ ಎಂದರ್ಥ. ನಮ್ಮಲ್ಲಿ ಅಂತಹ ಮಾದರಿಗಳು ಕಾಣಿಸುವುದೇ ಇಲ್ಲ. ಪಕ್ಷ, ಮತ, ಧರ್ಮ, ಜಾತಿ, ಭಾಷೆ, ಸಮುದಾಯ ಮರೆತು ಒಂದಾಗಿ ಸಾಲಾಗಿ ನಿಂತು ಸೈನಿಕರಿಗೆ ಶುಭಾಶಯ, ಅಭಿನಂದನೆ ಸಲ್ಲಿಸುವ ಒಂದೇ ಒಂದು ಫೋಟೊ ನನ್ನೂರ ಪತ್ರಿಕೆಗಳಲ್ಲಿ ಈವರೆಗೆ ಪ್ರಕಟವಾಗಿಲ್ಲ. ಎಲ್ಲಾ ಜಾತಿ ಧರ್ಮದವರು ರಾಜರಸ್ತೆಯ ಮೇಲೆ ಸಾಲಾಗಿ ಹೆಜ್ಜೆ ಇಡುತ್ತ ‘‘ಬೋಲೋ ಭಾರತ್ ಮಾತಾ ಕಿ ಜೈ’’ ಎಂದು ಸಾಗುವ ಒಂದೇ ಒಂದು ಚಿತ್ರ ಸಿಗುವುದಿಲ್ಲ. ಒಟ್ಟಾಗಿ ರಸ್ತೆಗಿಳಿಯುವ ಮನಸ್ಸು, ಸಾಧ್ಯತೆ ಇದ್ದರೂ ದೇಶವಾಸಿ ಪ್ರಜಾ ಮನಸ್ಸುಗಳನ್ನು ಅಲ್ಲೇ ಸಿಗಿದು ವಿಭಜಿಸುವುದಕ್ಕೆ ಕಾದು ಕೂತ ರಾಜಕೀಯದ ವಿಷ ಜಂತುಗಳು ಪಕ್ಕದಲ್ಲಿ ಇರುತ್ತಾರೆ. ಗೊತ್ತಾಗದ ರೀತಿಯಲ್ಲಿ ಕಣ್ಣುಮಿಟುಸುತ್ತಾರೆ. ವಿಂಗಡಿಸಿ ವಿಂಗಡಿಸಿ ಬೇರೆ ಬೇರೆ ಬಣ್ಣದ ಲಾಂಛನದ ಧ್ವಜ ಕೊಟ್ಟು ಮುಖ ತಿರುಗಿಸುತ್ತಾರೆ.

ನನಗಿನ್ನೂ ನೆನಪಿದೆ, ನಾನು ಪ್ರೈಮರಿ ಶಾಲೆ ಓದುವ ಕಾಲದಲ್ಲಿ ಪುಸ್ತಕಪೂಜೆಗೆ ಪಂಚಕಜ್ಜಾಯ ಮಾಡಲು ಸಹಪಾಠಿ ಮುಹಮ್ಮದ್ ಎರಡು ತೆಂಗಿನಕಾಯಿಯನ್ನು ತಂದಿದ್ದ. ವಿಜಯ, ಕಮಲ, ಗುಲಾಬಿಯ ಜತೆಗೆ ಬರುತ್ತಿದ್ದ ಫಾತಿಮಾ ತನ್ನ ಮನೆಯ ಅಂಚಿನ ದಾಸವಾಳದ ಗಿಡಗಳಿಂದ ಹೂವು ಕಿತ್ತು ತಂದದ್ದು ನೆನಪಿದೆ. ಮೋಂತು ಪುರ್ಬುಗಳ ಮಗ ನಮ್ಮೊಂದಿಗೆ ಸೇರಿ ಮಾವಿನ ಎಲೆಯ ತೋರಣ ಕಟ್ಟುತ್ತಿದ್ದ. ಬರೀ ಶಾಲೆಯೊಂದರಲ್ಲಿ ಅಲ್ಲ, ಊರಿನ ಪ್ರತೀ ಹಬ್ಬದಲ್ಲೂ ಇಂತಹ ಸಮುದಾಯ ಕೂಡುಪ್ರಜ್ಞೆಯ ಸಂಕೇತಗಳು ಅಲ್ಲಲ್ಲಿ ಅರಳುತ್ತಿದ್ದವು. ಕರಾವಳಿಯ ನಾರಾಯಣ ಭಟ್ಟರ ಮನೆಯಲ್ಲಿ ಸತ್ಯನಾರಾಯಣ ಪೂಜೆ ಆಗುತ್ತಿದ್ದಾಗ ಬಂದವರಿಗೆಲ್ಲ ಶರಬತ್ತು ಕೊಡುವ ಕೆಲಸವನ್ನು ಇಸ್ಮಾಯಿಲ್ ಬ್ಯಾರಿ ನೆರವೇರಿಸುತ್ತಿದ್ದರು. ಹಾಗೆಯೇ ತಾಂಬೂಲ ಹಂಚುವ ಕೆಲಸವನ್ನು ಮೋಂತು ಪುರ್ಬುಗಳೇ ಜವಾಬ್ದಾರಿಯಿಂದ ನಿಭಾಯಿಸುತ್ತಿದ್ದರು. ಆದರೆ ಇದೇ ಭಟ್ಟರ ಇದೇ ಬ್ಯಾರಿಯ ಇದೇ ಪುರ್ಬುಗಳ ಮಕ್ಕಳ, ಮೊಮ್ಮಕ್ಕಳ ಕಾಲಕ್ಕೆ ಬರುವಾಗ ಕರಾವಳಿ ತನ್ನ ಮನಸ್ಥಿತಿಯನ್ನು ಬದಲಾಯಿಸಿಕೊಂಡಿದೆ. ಇಲ್ಲಿಯ ಭ್ರಷ್ಟ ವೋಟ್ ಬ್ಯಾಂಕ್ ರಾಜಕಾರಣ ಸ್ಥಳೀಯ ಕೂಡು ಮನಸ್ಸುಗಳನ್ನು ಪ್ರತಿದಿನ ವಿಷದ ನೀರಿನಲ್ಲಿ ಅದ್ದಿ ಅದ್ದಿ ತೆಗೆಯುತಿದೆ. ಮನಸ್ಸು ಮನಸ್ಸುಗಳ ನಡುವೆ ಗೋಡೆ ಕಟ್ಟುತ್ತಲೇ ಇದೆ.

ಪುಸ್ತಕ ಪೂಜೆಯನ್ನು ಬಿಟ್ಟು ಹಾಕಿ, ನಾವು ನೀವು ಓದಿದ ಶಾಲೆಯ ಸ್ಕೂಲ್ ಡೇ ದಿವಸದ ಕಥೆ ಕೇಳಿ. ತಿಂಗಳಿರುವಾಗಲೇ ನಾಟಕಕ್ಕೆ ಪ್ರಾಕ್ಟಿಸ್ ಶುರುವಾಗುತ್ತಿತ್ತು. ಕತ್ತಲಾಗುವಾಗ ಆ ಶಾಲೆಯ ಹಳೆವಿದ್ಯಾರ್ಥಿ ಒಬ್ಬ ಆಟೊ ಡ್ರೈವರ್, ಮತ್ತೊಬ್ಬ ಲಾರಿ ಚಾಲಕ, ಮತ್ತೊಬ್ಬ ಹೋಟೆಲ್ ಮಾಲಕ, ಗ್ರಾಮ ಪಂಚಾಯತ್‌ನ ಸದಸ್ಯ, ನಮ್ಮ ಸ್ಕೂಲಿನ ಅಟೆಂಡರ್ ರಾಮಣ್ಣ, ಪಿಟಿ ಮೇಷ್ಟ್ರು ಅಬ್ದುಲ್ಲ... ಎಲ್ಲರೂ ನಾಟಕ ಪ್ರಾಕ್ಟಿಸಿಗೆ ತೊಡಗಿ ಸ್ಕೂಲ್ ಡೇ ದಿವಸ ಅವರೆಲ್ಲ ರಾಮನೋ, ರಾವಣನೋ, ವಿಭೀಷಣನೋ, ಕುಂಭಕರ್ಣನೋ ಆಗಿ ರಂಗದ ಮೇಲೆ ಮಿಂಚುತ್ತಿದ್ದದ್ದು, ಮರುದಿವಸ ವೇಷ ಕಳಚಿ ಅದೇ ಹಳೆಯ ಆಟೊ, ಲಾರಿ ಓಡಿಸುತ್ತಿದ್ದದ್ದು ಇವೆಲ್ಲ ಊರನ್ನು ಜೋಡಿಸುತ್ತಿದ್ದ ಕಥೆಗಳೇ. ಗಂಟೆಗೆ 10 ಪೈಸೆ ಬಾಡಿಗೆ ಪಡೆದು ದಿನವಿಡೀ ನನಗೆ ಸೈಕಲ್ ಕಲಿಸಿದ್ದ ಅದ್ರಮ, ಗುಡ್ಡೆ ಬೆಟ್ಟ ಇಳಿದು ಪ್ರತೀ ಗುರುವಾರ ನಮ್ಮನೆಯ ಜಗಲಿಯಲ್ಲಿ ಲ್ಯಾಂಡ್ ಆಗುತ್ತಿದ್ದ ಮಮ್ಮದೇ ಬ್ಯಾರಿಯ ಬುಟ್ಟಿ ಅಂಗಡಿ, ನಮ್ಮ ಅಜ್ಜಿಗೆಂದೇ ಅವರು ತರುತ್ತಿದ್ದ ಕುಣಿಯ ಹೊಗೆಸೊಪ್ಪು, ಪ್ರತಿದಿನ ಮಧ್ಯಾಹ್ನ 12 ಗಂಟೆಗೆ ಪೋ ಪೊಂ ಎಂದು ಹಾರ್ನ್ ಹೊಡೆಯುತ್ತಿದ್ದ ಮೀನು ಮಾರುವ ಅಬ್ಬೊಕ್ಕರ್... ಇವೆಲ್ಲ ಮರೆಯಲಾರದ ಸಂಗತಿಗಳು. ಆದರೆ ಈಗ ಎಲ್ಲ ಊರುಗಳಂತೆ ನಮ್ಮೂರು ಕೂಡ ಮನಸ್ಸು ಮನಸ್ಸು ಕೆಡಿಸಿಕೊಂಡು ಭಯ ಹುಟ್ಟಿಸುತ್ತದೆ.

ವ್ಯಾಪಾರೀಕರಣದ ಜೊತೆ ಜೊತೆಗೆ ತಳುಕು ಹಾಕಿಕೊಂಡ, ಭವಿಷ್ಯದಲ್ಲಿ ಸಮುದಾಯ ವಿಘಟನೆಗೆ ನಾಂದಿಯೂ ಹಾಡಬಲ್ಲ ಮತ್ತೊಂದು ಪುಟ್ಟ ಅಪಾಯ ತಮ್ಮ ತಮ್ಮ ಜಾತಿ, ಧರ್ಮ, ಮತದ ಮಕ್ಕಳನ್ನಷ್ಟೇ ಆಕರ್ಷಿಸುವುದಕ್ಕೆ ಹುಟ್ಟಿಕೊಂಡ ಇಲ್ಲಿಯ ಶಿಕ್ಷಣ ಸಂಸ್ಥೆಗಳು. ನಮ್ಮ ದೇಶದಲ್ಲಿ ನಿಜವಾದ ಭಾರತವನ್ನು ನೋಡಲು ಸಾಧ್ಯವಾಗುವುದು ದೇವಾಲಯ, ಮಂದಿರ, ಮಸೀದಿ, ಚರ್ಚ್‌ಗಳಲ್ಲಿ ಅಲ್ಲವೇ ಅಲ್ಲ. ಶಿಕ್ಷಣ ಸಂಸ್ಥೆಗಳಲ್ಲಿ. ಯಾವುದೇ ಮತ, ಧರ್ಮ, ಜಾತಿ, ಸಮುದಾಯ, ವರ್ಗ, ಲಿಂಗ ಇತ್ಯಾದಿ ವ್ಯತ್ಯಾಸವಿಲ್ಲದೆ ಸಮಾನವಾಗಿ ಆಕರ್ಷಿಸಿ ಎಲ್ಲರನ್ನೂ ಒಟ್ಟಾಗಿ ಸೇರಿಸುತ್ತಿದ್ದ, ನಿಜವಾದ ಭಾರತವನ್ನು ನೋಡಲು ಸಾಧ್ಯವಾಗುತ್ತಿದ್ದ ಶತಮಾನದಂಚಿನ ಕರಾವಳಿಯ ಶಿಕ್ಷಣ ಸಂಸ್ಥೆಯ ಆದರ್ಶ ಪರಿಣಾಮ ಫಲಿತಾಂಶಗಳು ನಿಧಾನವಾಗಿ ಮರೆಯಾಗುತ್ತಿವೆ.

ಕ್ರೈಸ್ತರನ್ನು ಆಕರ್ಷಿಸುವುದಕ್ಕಾಗಿ ಕ್ರೈಸ್ತ ವಿದ್ಯಾ ಸಂಸ್ಥೆಗಳು, ಹಿಂದೂಗಳನ್ನಷ್ಟೇ ತಕ್ಕೈಸಿಕೊಳ್ಳುವ ಹಿಂದೂ ಶಿಕ್ಷಣ ಸಂಸ್ಥೆಗಳು, ಮುಸಲ್ಮಾನರನ್ನಷ್ಟೇ ಸ್ವಾಗತಿಸುವ ಮುಸ್ಲಿಮ್ ಶಿಕ್ಷಣ ಸಂಸ್ಥೆಗಳು. ಮುಂದೆ ಜೈನರಿಗೆ ಜೈನರದ್ದು, ಬಂಟರಿಗೆ ಬಂಟರದ್ದು, ಬಿಲ್ಲವರಿಗೆ ಬಿಲ್ಲವರದ್ದು... ಪರಿಸ್ಥಿತಿ ಹೀಗೆ ಮುಂದುವರಿದರೆ ಎಲ್ಲರೂ ಒಂದಾಗಿ ಕೂತು ಭಾರತವನ್ನು ಭಾವಿಸುವ ಮನಸ್ಥಿತಿಯಾದರೂ ಎಲ್ಲಿಂದ ಬರಬೇಕು? ಮಕ್ಕಳನ್ನು ಈ ರೀತಿ ವಿಭಜಿಸುವುದರಿಂದ ಭವಿಷ್ಯದಲ್ಲಿ ಅವರು ಕಲಿಯುವ ಸಾಹಿತ್ಯ, ವಿಜ್ಞಾನ, ಸಮಾಜ, ಇತಿಹಾಸ, ಲೆಕ್ಕ ಇವೆಲ್ಲ ಕೂಡುಭಾರತದ ಜ್ಞಾನ ಶಾಖೆಗಳಾಗಿ ಉಳಿಯಬಲ್ಲವೇ ಅನ್ನುವುದು ಗಂಭೀರವಾದಂತಹ ಪ್ರಶ್ನೆ.

ಸರಕಾರಿ ಶಾಲೆಗಳೂ ಸೇರಿ ಎಲ್ಲರನ್ನೂ ಒಟ್ಟು ಸೇರಿಸುವ, ಸಮುದಾಯ ಕ್ಷೇಮದ ಲೋಕಶಾಲೆಗಳು ನಿಧಾನವಾಗಿ ಶಿಥಿಲವಾಗುತ್ತಿವೆ. ಭಾಷಾ ಮಾಧ್ಯಮದ ಕಾರಣಕ್ಕೂ ಬಲಹೀನಗೊಳ್ಳುತ್ತಿವೆ. ಒಂದೇ ಬೆಂಚಲ್ಲಿ ಕೂರುವ ರಾಮಕೃಷ್ಣ, ಇಸ್ಮಾಯಿಲ್, ಐವನ್, ಜೀವಂದರ್ ಇವರೆಲ್ಲ ಅಕ್ಷರದ ಕಾರಣಗಳಿಗೆ ಒಂದೇ ಆಗಿ ಅಲ್ಲಿ ಸೇರಿದ್ದ ಭಿನ್ನ-ಭಿನ್ನ ಧರ್ಮ ಸಂಸ್ಕೃತಿಯ ಆಚಾರ ವಿಚಾರದ ಚಿಹ್ನೆಗಳಾಗಿದ್ದರು. ಈ ವಿಘಟನೆ ಶಾಲೆ ಎಂಬ ಭೌತಿಕ ಆವರಣದಲ್ಲಷ್ಟೇ ಅಲ್ಲ, ಮಕ್ಕಳನ್ನು ಹಳ್ಳಿ ಹಳ್ಳಿಗಳ ಮನೆ ಮನೆಗಳಿಂದ ಹೊತ್ತು ತರುವ ಬಸ್ಸು ಗಾಡಿಗಳಲ್ಲೂ ಅವರನ್ನು ಧರ್ಮಾಧಾರಿತವಾಗಿ ನಿರ್ಬಂಧಗೊಳಿಸುವ, ಏಕಾಂತಗೊಳಿಸುವ ಕ್ರಮವನ್ನು ಕಾಣುತ್ತಿದ್ದೇವೆ. ಇವರೆಲ್ಲ ಓದುವ ಶಾಲೆಗಳಲ್ಲಿ ಭಾರತದ ಸಂವಿಧಾನದ ಆಶಯ, ನಿಲುವುಗಳು ಕೇವಲ ಗೋಡೆಗೆ ಅಂಟಿಕೊಳ್ಳುವ ಚೀಟಿಗಳಾಗುತ್ತಿವೆ.

ವಸಾಹತುಶಾಹಿ, ಸ್ವಾತಂತ್ರ್ಯ ಪೂರ್ವದ ಕರ್ನಾಟಕದ ಶಾಲೆಗಳು ಎಲ್ಲಾ ಜಾತಿ-ಧರ್ಮದವರನ್ನು ಒಗ್ಗೂಡಿಸುವಲ್ಲಿ ಒಂದು ಪರಿವರ್ತಕ ಶಕ್ತಿಯಾಗಿ ಕಾರ್ಯನಿರ್ವಹಿಸಿದವು. ಆಂಗ್ಲ ಶಿಕ್ಷಣ, ಮಹಿಳಾ ಶಿಕ್ಷಣ ಮತ್ತು ಜಾತಿ ವಿರೋಧಿ ಚಳವಳಿಗಳ ಮೂಲಕ ಈ ಶಾಲೆಗಳು ಸಾಮಾಜಿಕ ಏಕೀಕರಣಕ್ಕೆ ಕೊಡುಗೆ ನೀಡಿದ್ದವು. ಭಾಗಶಃ ಮತಾಂತರದ ಆರೋಪಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸೀಮಿತ ವ್ಯಾಪ್ತಿಯಂತಹ ಸವಾಲುಗಳು ಇದರ ಪೂರ್ಣ ಪರಿಣಾಮವನ್ನು ಸೀಮಿತಗೊಳಿಸಿದವು ಎಂಬುವುದು ಕೂಡ ಉಲ್ಲೇಖನೀಯ.

ಸ್ವಾತಂತ್ರ್ಯ ಪೂರ್ವದ ಕರ್ನಾಟಕದಲ್ಲಿ ಕ್ರೈಸ್ತ ಸಮುದಾಯದ ಶಾಲೆಗಳು ಎಲ್ಲಾ ಜಾತಿ ಮತ್ತು ಧರ್ಮದವರನ್ನು ಒಗ್ಗೂಡಿಸುವಲ್ಲಿ ಗಣನೀಯ ಪಾತ್ರ ವಹಿಸಿದವು. ಇಂಥ ಶಾಲೆಗಳು ಶಿಕ್ಷಣವನ್ನು ಸಾಮಾಜಿಕ ಸಂವಾದಕವಾಗಿ ಬಳಸಿ, ಜಾತಿ ಮತ್ತು ಧರ್ಮದ ಗಡಿಗಳನ್ನು ಮೀರಿ ವಿದ್ಯಾರ್ಥಿಗಳನ್ನು ಒಂದುಗೂಡಿಸಿದವು. ಈ ಶಾಲೆಗಳು ಆಂಗ್ಲ ಶಿಕ್ಷಣ, ವಿಜ್ಞಾನ ಮತ್ತು ಸಾಹಿತ್ಯವನ್ನು ಕಲಿಸಿದವು. ಸಮಾಜದ ಕೆಳವರ್ಗಗಳಾದ ದಲಿತರು, ಬಡವರು, ರೈತರ ಮಕ್ಕಳು, ಮೊಗವೀರರು, ಅಲ್ಪಸಂಖ್ಯಾತರು ಮತ್ತು ಇತರ ಹಿಂದುಳಿದ ಜಾತಿಗಳಿಗೆ ಶಿಕ್ಷಣವನ್ನು ಒದಗಿಸಿದವು. ಉದಾಹರಣೆಗೆ, ಬಾಸೆಲ್ ಮಿಷನ್‌ನ ಶಾಲೆಗಳು ಮತ್ತು 1834ರಲ್ಲಿ ಆರಂಭವಾದ ಮಂಗಳೂರಿನ ಟೈಲ್ ಫ್ಯಾಕ್ಟರಿ ಶಾಲೆಗಳು ಬಂಟರು, ಬಿಲ್ಲವರು ಮತ್ತು ದಲಿತರಿಗೆ ಶಿಕ್ಷಣವನ್ನು ಸಮಾನವಾಗಿ ನೀಡಿದವು, ಇದೆಲ್ಲ ಅದೇ ಕಾಲದ ಇಲ್ಲಿಯ ಸಾಂಪ್ರದಾಯಿಕ ಗುರುಕುಲ ವ್ಯವಸ್ಥೆಯಲ್ಲಿ ಅಸಾಧ್ಯವಾಗಿತ್ತು. ಈ ಶಾಲೆಗಳು ಕ್ರೈಸ್ತರ ಜೊತೆಗೆ ಹಿಂದೂಗಳು, ಮುಸ್ಲಿಮರು ಮತ್ತು ಜೈನರಿಗೂ ಶಿಕ್ಷಣ ನೀಡಿದವು. ಬೆಂಗಳೂರಿನ ಸೈಂಟ್ ಜೋಸೆಫ್‌ನ ಶಾಲೆ (1858) ಮತ್ತು ಮೈಸೂರಿನ ವೆಸ್ಲಿಯನ್ ಮಿಷನ್ ಶಾಲೆಗಳು ವಿವಿಧ ಧರ್ಮದ ವಿದ್ಯಾರ್ಥಿಗಳನ್ನು ಒಗ್ಗೂಡಿಸಿದವು. ಶಿಕ್ಷಣದ ಗುಣಮಟ್ಟ ಮತ್ತು ಆಂಗ್ಲ ಭಾಷೆಯ ಕಲಿಕೆಯ ಆಕರ್ಷಣೆ ಇದಕ್ಕೆ ಕಾರಣವಾಗಿತ್ತು. ಇಲ್ಲೆಲ್ಲಾ ಮೊತ್ತ ಮೊದಲ ಬಾರಿಗೆ ವಿದ್ಯಾರ್ಥಿಗಳಿಗೆ ಸಮಾನ ಆಸನ, ಶಿಕ್ಷಣ ಮತ್ತು ಅವಕಾಶಗಳನ್ನು ಒದಗಿಸಲಾಯಿತು, ಇದು ಸಾಂಪ್ರದಾಯಿಕ ಸಮಾಜದಲ್ಲಿ ಕಾಣದ ವಿಷಯವಾಗಿತ್ತು.

ಆಂಗ್ಲ ಶಿಕ್ಷಣವು ವಿವಿಧ ಧರ್ಮ, ಮತ, ಜಾತಿಗಳಿಂದ ಬಂದವರಿಗೆ ಆಡಳಿತ ಸೇವೆ, ವಾಣಿಜ್ಯ ಮತ್ತು ಇತರ ಕ್ಷೇತ್ರಗಳಲ್ಲಿ ಅವಕಾಶಗಳನ್ನು ತೆರೆಯಿತು. ಇದು ಸಾಮಾಜಿಕ ಚಲನಶೀಲತೆಯನ್ನು ಉತ್ತೇಜಿಸಿತು ಮತ್ತು ಜಾತಿ-ಧರ್ಮದ ಗಡಿಗಳನ್ನು ಮೀರಿ ಒಗ್ಗಟ್ಟನ್ನು ಬೆಳೆಸಿತು. ಇವು ಕನ್ನಡ, ಆಂಗ್ಲ ಮತ್ತು ಇತರ ಭಾಷೆಗಳ ಜೊತೆಗೆ ಸ್ಥಳೀಯ ಸಂಸ್ಕೃತಿಯನ್ನು ಗೌರವಿಸುವ ಪಠ್ಯಕ್ರಮವನ್ನು ರೂಪಿಸಿದವು. ಇದೇ ಹೊತ್ತಿಗೆ ಕೆಲವು ಕ್ರೈಸ್ತ ಶಾಲೆಗಳು ಮತಾಂತರಕ್ಕೆ ಒತ್ತು ನೀಡಿದವು ಎಂಬ ಆರೋಪಕ್ಕೆ ಒಳಗಾಗಿ ಹಿಂದೂ ಮತ್ತು ಮುಸ್ಲಿಮ್ ಸಮುದಾಯಗಳಲ್ಲಿ ಅಪನಂಬಿಕೆಯನ್ನು ಹುಟ್ಟುಹಾಕಿದ್ದೂ ಹೌದು. ಆದರೆ, ಬಹುತೇಕ ಶಾಲೆಗಳು ಶಿಕ್ಷಣದ ಮೂಲಕ ಸಾಮಾಜಿಕ ಸುಧಾರಣೆಗೆ ಒತ್ತು ನೀಡಿದವು. ಬಹುತೇಕ ಇಂತಹ ಶಾಲೆಗಳು ಹೆಚ್ಚಾಗಿ ಕರಾವಳಿ ಮತ್ತು ನಗರ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿದ್ದವು. ಗ್ರಾಮೀಣ ಕರ್ನಾಟಕದಲ್ಲಿ ಶಿಕ್ಷಣದ ಪ್ರಸರಣ ಸೀಮಿತವಾಗಿತ್ತು, ಆದ್ದರಿಂದ ಎಲ್ಲಾ ಜಾತಿಗಳ ಸಂಪೂರ್ಣ ಏಕೀಕರಣ ಸಾಧ್ಯವಾಗಲಿಲ್ಲ.

ಶಾಲೆ ಕಲಿಯದ ನಮ್ಮ ಹಿರಿಯರಿಗಿಂತ ಹೆಚ್ಚು ಕಲಿತ ವಿದ್ಯಾವಂತ ಮತ್ತು ನಗರ ಕೇಂದ್ರಿತ ಉದ್ಯೋಗವಂತ ಜನರೇ ಹೆಚ್ಚು ಹೆಚ್ಚು ಮತೀಯವಾದಿಗಳಾಗುವ ಸಾಧ್ಯತೆಯ ಬಗ್ಗೆ ಹೇಳಲೇಬೇಕು. ನಮ್ಮಲ್ಲಿ ವಿದ್ಯಾವಂತರ ಗುಣಮಟ್ಟವು ಮಾಹಿತಿಯ ಮೂಲಗಳು, ಸಾಮಾಜಿಕ ಪರಿಸರ ಮತ್ತು ವೈಯಕ್ತಿಕ ಒಳಗೊಳ್ಳುವಿಕೆಯ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ. ಕರಾವಳಿಯಂತಹ ಪ್ರದೇಶಗಳಲ್ಲಿ, ಶಿಕ್ಷಣ ಮತ್ತು ಉದ್ಯೋಗವು ಜನರನ್ನು ತಾರ್ಕಿಕವಾಗಿ ಚಿಂತಿಸಲು ಪ್ರೇರೇಪಿಸಬೇಕಾದರೂ, ಕೆಲವೊಮ್ಮೆ ಸಾಮಾಜಿಕ-ಸಾಂಸ್ಕೃತಿಕ ಒತ್ತಡಗಳು, ಗುಂಪು ಗುರುತಿನ ರಾಜಕೀಯ ಅಥವಾ ಧಾರ್ಮಿಕ-ರಾಜಕೀಯ ಧ್ರುವೀಕರಣವು ವಿದ್ಯಾವಂತರನ್ನೂ ಮತೀಯ ದೃಷ್ಟಿಕೋನಕ್ಕೆ ಒಡ್ಡುತ್ತಿದೆ. ಇದಕ್ಕೆ ಮತ್ತೊಂದು ಕಾರಣ, ವಿದ್ಯಾವಂತರು ಕೆಲವೊಮ್ಮೆ ತಮ್ಮ ಜ್ಞಾನವನ್ನು ತಮ್ಮ ನಂಬಿಕೆಗಳನ್ನು ಸಮರ್ಥಿಸಿಕೊಳ್ಳಲು ಬಳಸುವುದು.

ಮತ್ತು ಇಲ್ಲಿ ವಿದ್ಯಾವಂತ ಉದ್ಯೋಗವಂತ ಜನರು ಮತೀಯವಾದಿಗಳಾಗುವ ಸಾಧ್ಯತೆಯು ಸಂದರ್ಭಾನುಸಾರವಾಗಿರುತ್ತದೆ ಎಂಬುದು ಕೂಡ ಅಷ್ಟೇ ಮುಖ್ಯ. ಉದಾಹರಣೆಗೆ, ಸಾಮಾಜಿಕ ಜಾಲತಾಣಗಳು, ಧಾರ್ಮಿಕ-ರಾಜಕೀಯ ಸಂಘಟನೆಗಳು ಅಥವಾ ಸ್ಥಳೀಯ ಸಮುದಾಯದ ಒತ್ತಡಗಳು ವಿದ್ಯಾವಂತರ ಮೇಲೆ ಪ್ರಭಾವ ಬೀರಬಹುದು. ಆದರೆ, ಇದೇ ವಿದ್ಯಾವಂತರು, ಸರಿಯಾದ ವಿಮರ್ಶಾತ್ಮಕ ಚಿಂತನೆ ಮತ್ತು ಮಾಹಿತಿಯ ಮೂಲಗಳಿಗೆ ಪ್ರವೇಶವಿದ್ದರೆ, ಮತೀಯತೆಯಿಂದ ದೂರವಿರುವ ಸಾಧ್ಯತೆಯೂ ಇದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನರೇಂದ್ರ ರೈ ದೇರ್ಲ

contributor

Similar News