ಪ್ರಾಥಮಿಕ ಶಿಕ್ಷಣದಲ್ಲಿ ಇಂಗ್ಲಿಷ್ ಮಾಧ್ಯಮ: ತಪ್ಪು ನಮ್ಮದು.... ಕ್ಷಮಿಸಿ ಕನ್ನಡದ ಕುಡಿಗಳೆ!
ಸರಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಸರಕಾರವೇ ಮುಚ್ಚಲು ಹೊರಟಿದೆಯೋ ಗೊತ್ತಿಲ್ಲ. ಅದೆಂತಹ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆದು ವಿಸ್ತರಿಸಲು ಹೊರಟಿದೆಯೋ ಅದೂ ಸ್ಪಷ್ಟವಾಗಿಲ್ಲ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷನ್ನು ಸರಿಯಾಗಿ ಕಲಿಸುವ ವ್ಯವಸ್ಥೆ ಮಾಡಬಹುದಾಗಿತ್ತು. ಅದಕ್ಕೆ ಯಾರ ವಿರೋಧವೂ ಇಲ್ಲ. ಕುಟುಂಬ, ಪರಿಸರ, ಕೃಷಿ, ನೀರು, ಪ್ರಾಣಿ, ಪಕ್ಷಿ, ಹೂ, ಹಣ್ಣು, ಚಿಗುರು ಇವುಗಳ ಸಹವಾಸದಿಂದ ಸೃಜನಶೀಲವಾಗಿ ಅರಳುವ ಎಳೆಯರ ಶ್ರೀಮಂತ ಭಾವಕೋಶವು ಅಪರಿಚಿತ ಮಾಧ್ಯಮದ ಕಾರಣದಿಂದ ಮುದುಡಿ ನಾಶವಾಗುವ, ತಮ್ಮ ಜನ ನೆಲ ಮಾತಿಗೆ ಮಕ್ಕಳನ್ನು ಅನ್ಯರನ್ನಾಗಿಸುವ ಈ ಕ್ರಮಕ್ಕೆ ನೀಡಬಹುದಾದ ಪ್ರತಿಕ್ರಿಯೆ ‘‘ಕ್ಷಮಿಸಿ ಕುವೆಂಪು... ಮಾತ್ರವಲ್ಲ ಕ್ಷಮಿಸಿ ಮಕ್ಕಳೆ!’’ ಎಂದು.
ಶಿಕ್ಷಣ ಮಾಧ್ಯಮ ಮತ್ತು ಭಾಷಾ ನೀತಿಯ ಬಗ್ಗೆ ಬಹಳ ಚರ್ಚೆಗಳು, ಸಂವಾದಗಳು ನಡೆಯುತ್ತಿವೆ. ತ್ರಿಭಾಷಾ ಸೂತ್ರವನ್ನು ಅನುಸರಿಸಿದ್ದರಿಂದ ಕನ್ನಡಕ್ಕೆ ನಷ್ಟವೇ ಹೊರತು ಲಾಭವಾಗಲಿಲ್ಲ, ಕನ್ನಡಿಗರಿಗೂ ಲಾಭವಾಗಲಿಲ್ಲ. ಕನ್ನಡ ಎರಡನೆಯ ಅಥವಾ ಮೂರನೆಯ ಭಾಷೆಯಾಗಿ ಸ್ಥಾನ ಪಡೆಯಿತು. ಉದ್ಯೋಗ ಮತ್ತು ಜಾಗತಿಕ ಸಂಪರ್ಕ ಭಾಷೆ ಎಂಬ ನೆಲೆಯಲ್ಲಿ ಇಂಗ್ಲಿಷ್ ಮೊದಲ ಆದ್ಯತೆಯನ್ನು ಪಡೆಯಿತು. ಎರಡನೆಯ ಭಾಷೆಯಾಗಿ ಕನ್ನಡ, ಹಿಂದಿ, ಸಂಸ್ಕೃತ, ಉರ್ದು ಹೀಗೆ ಹಲವು ಭಾಷೆಗಳ ದೊಡ್ಡ ಪಟ್ಟಿಯೇ ಇತ್ತು, ಬಹುಶಃ ಈಗಲೂ ಇದೆ. ಕಲಿಯಲು ಸುಲಭ, ಅಂಕಗಳು ಹೆಚ್ಚು ಹೀಗೆಲ್ಲ ಆಗಿ ಹಿಂದಿ, ಸಂಸ್ಕೃತ ವಿದ್ಯಾರ್ಥಿಗಳಿಗೆ ಪ್ರಿಯವಾದುವು! ಕನ್ನಡ ದೂರವಾದುವು! ರಾಷ್ಟ್ರ ಭಾಷೆ ಎಂಬ ನೆಲೆಯಲ್ಲಿ ಹಿಂದಿ ಕಲಿಕೆಯಲ್ಲಿ ಜಾಗ ಪಡೆಯಿತು. ಹಿಂದಿ ಓದಬಹುದು, ಪರೀಕ್ಷೆ ಬರೆಯಬಹುದು, ಆದರೆ ಅದರ ಅಂಕಗಳು ಪರಿಗಣನೆಗೆ ಇಲ್ಲ ಎಂಬ ಸ್ಥಿತಿಯೂ ಇತ್ತು. ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಹಾಗೆ ಕನ್ನಡವನ್ನು ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕೋರ್ಸ್‌ಗಳಲ್ಲಿ ಬೋಧಿಸಿದ್ದೂ ಆಗಿದೆ. ಐಚ್ಛಿಕ ಆಯ್ಕೆ ಮತ್ತು ಕಲಿಕೆ ಎಂಬುದು ಕನ್ನಡವನ್ನು ವಿದ್ಯಾರ್ಥಿಗಳು ಗಂಭೀರವಾಗಿ ಓದದಂತೆ ನೋಡಿಕೊಂಡದ್ದೂ ಆಯಿತು. ಶಿಕ್ಷಣ ವ್ಯವಸ್ಥೆ ಹೀಗಿದ್ದರೂ ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡವನ್ನು ಚೆನ್ನಾಗಿ ಕಲಿಸಲಾಗುತ್ತಿತ್ತು. ಈ ಕಾರಣದಿಂದಲೇ ಲೇಖಕರು, ಸಾಹಿತಿಗಳು ಸೇರಿದಂತೆ ಎಲ್ಲರೂ ಹೇಳುತ್ತಿದ್ದ ಮಾತು ‘‘ಇವತ್ತು ಕನ್ನಡ ಇರುವುದು ಮತ್ತು ಮುಂದೆ ಬದುಕಿ ಉಳಿಯಲಿರುವುದು ಗ್ರಾಮೀಣ ಪ್ರದೇಶಗಳ ಜನರಿಂದ’’. ಪ್ರಾಥಮಿಕ ಶಿಕ್ಷಣದಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಅಳವಡಿಸಿದರೆ ಕನ್ನಡದ ಬದುಕು ಏನಾಗಬಹುದು? ಒಟ್ಟಿನಲ್ಲಿ ಕರ್ನಾಟಕದಲ್ಲಿ ಒಂದಕ್ಷರ ಕನ್ನಡ ಕಲಿಯದೆ ಶಿಕ್ಷಣ ಪಡೆಯಬಹುದು, ಉದ್ಯೋಗ ಮಾಡಬಹುದು, ಬದುಕಬಹುದು ಎಂಬ ಸ್ಥಿತಿ ನಿರ್ಮಾಣವಾದದ್ದಂತೂ ನಿಜ. ಕರ್ನಾಟಕದ ಶಿಕ್ಷಣ ವ್ಯವಸ್ಥೆಯಲ್ಲಿ ಸಮರ್ಪಕವಾದ ಸ್ಪಷ್ಟವಾದ ಭಾಷಾ ನೀತಿಯೊಂದು ಇಲ್ಲದಿರುವುದು ಕನ್ನಡದ ಕಲಿಕೆಯ ಹಿನ್ನಡೆಗೆ ಬಹುಮುಖ್ಯ ಕಾರಣವಾಗಿದೆ. ಸದ್ಯದ ಪರಿಸ್ಥಿಯಲ್ಲಿ ನಮಗೆ ದ್ವಿಭಾಷಾ ನೀತಿಯೇ ಸರಿ. ಇಂಗ್ಲಿಷ್ ಮತ್ತು ಕನ್ನಡ ಈ ಎರಡು ಭಾಷೆಗಳು ಸಾಕು. ಇತರ ಪ್ರಾದೇಶಿಕ ಭಾಷೆಗಳನ್ನು ಕಲಿಯಲು ಅವಕಾಶ ಕಲ್ಪಿಸಿದರೆ ಸಾಕು ಎಂಬ ಅಭಿಪ್ರಾಯ ಇದೆ. ಇದಕ್ಕೆ ಸಮಾನಾಂತರವಾಗಿ ಸದ್ಯ ಪ್ರಚಲಿತ ಇರುವ ತ್ರಿಭಾಷಾ ಸೂತ್ರವನ್ನು ಮುಂದುವರಿಸುವ ಬಗೆಗೂ ಸಮರ್ಥನೆಗಳು ಬಂದಿವೆ. ಭಾಷಾ ನೀತಿಯ ಚರ್ಚೆ ನಡೆಯುತ್ತಿರುವಷ್ಟರಲ್ಲಿ ಪ್ರಾಥಮಿಕ ಹಂತದ ಶಿಕ್ಷಣದ ಮಾಧ್ಯಮದ ಕುರಿತ ಪ್ರಶ್ನೆ/ವಿವಾದ ಎದುರಾಗಿದೆ. ಭಾಷಾ ನೀತಿ ಇನ್ನೂ ಖಚಿತವಾಗದ ಹಿನ್ನೆಲೆ ಮತ್ತು ಇಂಗ್ಲಿಷ್ ಮಾಧ್ಯಮ ಪ್ರಾಥಮಿಕ ಶಾಲೆಗಳನ್ನು ಸರಕಾರವೇ ಆರಂಭಿಸಿರುವುದು ಕನ್ನಡ ಭಾಷೆಯ ಅಸ್ತಿತ್ವಕ್ಕೆ ಬಹುದೊಡ್ಡ ಹೊಡೆತ ನೀಡಲಿದೆ.
ಮುಖ್ಯಮಂತ್ರಿಗಳು ಕನ್ನಡಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗಲೆಲ್ಲ ‘‘ಸರಕಾರ ಕನ್ನಡದ ಪರವಾಗಿದೆ. ಕರ್ನಾಟಕದಲ್ಲಿ ಕನ್ನಡವೇ ಮುಖ್ಯ ಭಾಷೆ, ಪ್ರಥಮ ಆದ್ಯತೆಯ ಭಾಷೆ, ಕನ್ನಡದ ವಿರೋಧಿಗಳನ್ನು ಸರಕಾರ ಸುಮ್ಮನೆ ಬಿಡುವುದಿಲ್ಲ. ಕನ್ನಡದ ಪರ ಯಾವತ್ತೂ ಸರಕಾರ ನಿಲ್ಲುತ್ತದೆ’’ ಎಂಬರ್ಥದ ಮಾತುಗಳನ್ನು ಹೇಳುತ್ತಲೇ ಬಂದಿದ್ದಾರೆ. ಭಾಷಾ ನೀತಿಯ ವಿಷಯವನ್ನು ಪ್ರಸ್ತಾವಿಸುತ್ತಾ ತಾನು ದ್ವಿಭಾಷಾ ನೀತಿಯ ಪರವಾಗಿ ಇದ್ದೇನೆ ಮತ್ತು ಅದು ತನ್ನ ವೈಯಕ್ತಿಕ ನಿಲುವು ಕೂಡಾ ಆಗಿದೆ ಎಂಬುದನ್ನು ಕೂಡ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ. ಕೆಲವೊಮ್ಮೆ ನಿರ್ದಿಷ್ಟ ಸರಕಾರವೊಂದರ ಮತ್ತು ಅದರ ಮುಖ್ಯಮಂತ್ರಿಗಳ, ಇಲಾಖೆಯ ಮಂತ್ರಿಗಳ ನಿಲುವನ್ನು ಜಾರಿಗೆ ತರಲು ಕಾನೂನಿನ ತೊಡಕುಗಳು ಇರುತ್ತವೆ. ಸುಪ್ರೀಂ ಕೋರ್ಟ್ ತೀರ್ಪುಗಳು ಅಡ್ಡಿಯಾಗಿ ನಿಲ್ಲುತ್ತವೆ. ಸಂವಿಧಾನಕ್ಕೆ ತಿದ್ದುಪಡಿಯನ್ನು ತಂದು ಮುಂದುವರಿಯಬೇಕಾದ ಅನಿವಾರ್ಯತೆಯನ್ನು ಅವು ಉಂಟುಮಾಡುತ್ತವೆ. ಮಾತೃಭಾಷೆಯಲ್ಲಿ ಶಿಕ್ಷಣ ಕೊಡಲು ಇರುವ ಕಾನೂನಿನ ತೊಡಕುಗಳು, ಮಾತೃಭಾಷೆಯನ್ನು ನಿರ್ಧರಿಸಲು ಇರುವ ಸೂಕ್ಷ್ಮ ಸಂಗತಿಗಳು, ಯಾವ ಭಾಷೆಯಲ್ಲಿ ಮಗು ಶಿಕ್ಷಣ ಪಡೆಯಬೇಕು/ ಮಗುವಿಗೆ ಶಿಕ್ಷಣ ಕೊಡಿಸಬೇಕು ಎಂಬುದನ್ನು ತೀರ್ಮಾನಿಸುವ ಹಕ್ಕು ಹೆತ್ತವರಿಗೆ ಸಂಬಂಧಿಸಿದ್ದು ಎಂಬ ನಿಲುವು ಇವು ಮಾತೃಭಾಷೆಯಲ್ಲಿ ಶಿಕ್ಷಣ ನೀಡುವ ನಿರ್ಧಾರವನ್ನು ಹಿಂಪಡೆಯುವಂತೆ ಮಾಡಿವೆ ಅಥವಾ ಸಂಕೀರ್ಣ ಸಮಸ್ಯೆಯನ್ನಾಗಿ ಮಾಡಿವೆ ಎಂಬುದು ನಮಗೆ ಗೊತ್ತಿದೆ. ಆದರೆ ಸುಮಾರು ಐದು ಸಾವಿರಕ್ಕಿಂತ ಹೆಚ್ಚು ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಸರಕಾರವೇ ತೆರೆಯಲು ಹೊರಟಿರುವ ನಿರ್ಧಾರವು ಸರಕಾರದ ಕನ್ನಡ ಪ್ರೀತಿಗೆ, ಕನ್ನಡ ಭಾಷಾಬದ್ಧತೆಗೆ ವಿರುದ್ಧವಾಗಿದೆಯಲ್ಲವೇ? ಪ್ರಾಥಮಿಕ ಹಂತದ ಶಿಕ್ಷಣದಲ್ಲಿ ಕನ್ನಡಕ್ಕೆ ಇರಬೇಕಾದ ಆದ್ಯತೆಯನ್ನು ಕಡೆಗಣಿಸಿದಂತಾಗಲಿಲ್ಲವೇ? ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯುವುದು ಸರಕಾರಕ್ಕೆ ಅನಿವಾರ್ಯವೇ? ಇಲಾಖೆಯ ಈ ಆದೇಶವನ್ನು ಸಮರ್ಥಿಸಿಕೊಳ್ಳುವುದು ಹೇಗೆ? ಕನ್ನಡದ ಒಟ್ಟು ಬೆಳವಣಿಗೆಗೆ ಈ ನಿರ್ಧಾರ ಹೇಗೆ ಸಹಕಾರಿಯಾಗಬಲ್ಲುದು? ಪ್ರಾಥಮಿಕ ಶಿಕ್ಷಣ ಇಲಾಖೆಯ ಈ ಆದೇಶ ತಂದೊಡ್ಡಿರುವ ಸಂಕಟದ ನೋವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಡಾ. ಪುರುಷೋತ್ತಮ ಬಿಳಿಮಲೆಯವರು ಪ್ರಕಟಿಸಿದ್ದು ಹೀಗೆ: ‘‘ಕ್ಷಮಿಸಿ ಕುವೆಂಪು! ಪ್ರಾಥಮಿಕ ಶಿಕ್ಷಣದಲ್ಲಿ ಇಂಗ್ಲಿಷ್ ಮಾಧ್ಯಮ ಮುಂದುವರಿಯಲಿದೆ. ನಮ್ಮ ಮಕ್ಕಳು ಎಲ್ಲ ಬಗೆಯ ಶೋಷಣೆಗಳಿಂದ ಮುಕ್ತರಾಗಲಿ’’. ಇಷ್ಟೊಂದು ಸಂಖ್ಯೆಯ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯಲು ‘ಅನುಮತಿ’ ನೀಡಲಾಗಿದೆ ಎಂದು ಇಲಾಖೆ ಹೇಳಿದೆ. ಅನುಮತಿ ನೀಡುವ ಪ್ರಶ್ನೆ ಬರುವುದು ‘ಅನುಮತಿ ನೀಡಿ ಎಂಬ ಕೋರಿಕೆ ಅರ್ಜಿಗಳು’ ಬಂದಾಗ ಮಾತ್ರ. ಶಿಕ್ಷಣ ಇಲಾಖೆಯೇ ನಿರ್ದಿಷ್ಟ ಶಾಲೆಗಳನ್ನು ಗುರುತಿಸಿ ಕನ್ನಡ ಮಾಧ್ಯಮದ ತರಗತಿಗಳನ್ನು ಆರಂಭಿಸಿ ಎಂದು ಸೂಚಿಸಿದೆ ಎಂಬುದು ನನ್ನ ತಿಳುವಳಿಕೆ. ಸರಕಾರಿ ಶಾಲೆಗಳಾದ ಕಾರಣ ಅರ್ಜಿ ಆಹ್ವಾನಿಸುವ, ಅನುಮತಿ ನೀಡುವ ಪ್ರಶ್ನೆಯೂ ಉದ್ಭವಿಸುವುದಿಲ್ಲ. ಒಟ್ಟಾರೆ ನಡೆಯುತ್ತಿರುವ ಈ ಪ್ರಕ್ರಿಯೆ ನೋಡಿದರೆ ಸದ್ಯ ಬದುಕಿ ಉಳಿದಿರುವ ಮತ್ತು ಬಹುಮಟ್ಟಿಗೆ ಚೆನ್ನಾಗಿ ಕೆಲಸಮಾಡುತ್ತಿರುವ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಗಳ ಬಾಗಿಲುಗಳು ಮುಚ್ಚುವ ದಿನ ದೂರ ಇಲ್ಲ ಎಂದು ನನಗನ್ನಿಸುತ್ತದೆ.
ಮಾಧ್ಯಮ ಆದೇಶವನ್ನು ಹಿಂಪಡೆಯದಿರಲು ರಾಜ್ಯ ಸರಕಾರ ನಿರ್ಧರಿಸಿದೆ. ಕನ್ನಡ ಮತ್ತು ಕನ್ನಡಿಗರ ಪ್ರಾತಿನಿಧಿಕ ಇಲಾಖೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ. ಇದರ ಅಧ್ಯಕ್ಷರಾದ ಡಾ. ಬಿಳಿಮಲೆಯವರು ಮುಖ್ಯಮಂತ್ರಿಗಳಿಗೆ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಗೆ ಮತ್ತು ಸಂಬಂಧಪಟ್ಟ ಸರಕಾರದ ಇಲಾಖೆಗಳಿಗೆ ಮನವಿ ಪತ್ರ ಬರೆದು, ಈ ಆದೇಶವನ್ನು ತಡೆಹಿಡಿಯುವಂತೆ, ಮರುಪರಿಶೀಲಿಸುವಂತೆ ಕೋರಿದ್ದರು. ಆದರೆ ಶಿಕ್ಷಣ ಇಲಾಖೆಯ ಮಂತ್ರಿ ಮತ್ತು ಅಧಿಕಾರಿಗಳು ಆದೇಶವನ್ನು ಬದ್ಧತೆಯಿಂದ ಘೋಷಿಸಿದ್ದಾಗಿದೆ. ಬಹುಶಃ ಈ ತೀರ್ಮಾನವನ್ನು ಸಂಚಿವ ಸಂಪುಟ ಸಭೆಯೇ ತೆಗೆದುಕೊಂಡಿರಬಹುದು. ಈ ನಿರ್ಣಯವನ್ನು ತೆಗೆದುಕೊಳ್ಳುವ ಮೊದಲು ನಡೆದಿರಬಹುದಾದ ಚರ್ಚೆಗಳೇನು? ಚರ್ಚೆಗಳ ಸ್ವರೂಪ ಏನು? ಗೊತ್ತಿಲ್ಲ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುವ ಸುವರ್ಣಾವಕಾಶವನ್ನು ಸರಕಾರ ಕಲ್ಪಿಸಿಕೊಟ್ಟಂತಾಗಿದೆ ಎಂದು ಆಡಳಿತ ವ್ಯವಸ್ಥೆ ಹೇಳುತ್ತಿದೆಯೇ?
ಈ ವಿಷಯಕ್ಕೆ ಹೊಂದಿಕೊಂಡಿರುವ ಕೆಲವು ಅಂಶಗಳನ್ನು ಪ್ರಸ್ತಾವಿಸುತ್ತೇನೆ. ಸರಕಾರಿ ಶಾಲೆಗಳ ದುಸ್ಥಿತಿಗಳ ಬಗ್ಗೆ ವರದಿಗಳು, ಅಧ್ಯಯನ ಸಮೀಕ್ಷೆಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಲೇ ಇವೆ. ಶಿಕ್ಷಕರ ಕೊರತೆ, ಕಟ್ಟಡಗಳ ದುಸ್ಥಿತಿ, ಇತರ ಮೂಲಭೂತ ಸೌಲಭ್ಯಗಳ ಕೊರತೆ, ಪ್ರತ್ಯೇಕ ಕೆಲವು ಅನುದಾನಗಳ ಕೊರತೆ ಇವುಗಳನ್ನು ಸರಕಾರಿ ಶಾಲೆಗಳ ಶಿಕ್ಷಕರು, ಮಕ್ಕಳು ಅನುಭವಿಸುತ್ತಲೇ ಇದ್ದಾರೆ. ಕನ್ನಡ ಮಾಧ್ಯಮ ಶಾಲೆಗಳ ಈ ಕೊರತೆಗಳ ಬಗ್ಗೆ ಸರಕಾರ/ ಇಲಾಖೆ ತಾತ್ಕಾಲಿಕ ಪರಿಹಾರ ಕ್ರಮಗಳನ್ನು ಕೈಗೊಂಡದ್ದೇ ಹೊರತು ಸರಕಾರಕ್ಕೆ ಈವರೆಗೆ ಶಾಶ್ವತ ಪರಿಹಾರವನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ. ಕಂತುಗಳಲ್ಲಿ ಇಪ್ಪತ್ತು ಸಾವಿರ, ಮತ್ತೆ ಹತ್ತು ಸಾವಿರ, ಅಗತ್ಯಬಿದ್ದರೆ ಮತ್ತೆ ಕೆಲವು ಸಾವಿರ ಅತಿಥಿ ಶಿಕ್ಷಕರ ನೇಮಕಾತಿಯನ್ನು ಒತ್ತಡ ನಿವಾರಿಸಲೆಂಬಂತೆ ಮಾಡಿಕೊಳ್ಳಲಾಗುತ್ತಿದೆ. ಕನ್ನಡ ಮಾಧ್ಯಮ ಶಾಲೆಗಳನ್ನು ಸಶಕ್ತಗೊಳಿಸಿ ಎಂದು ಸರಕಾರವನ್ನು ಸಮಾಜದ ಎಲ್ಲಾ ಆಯಕಟ್ಟಿನ ಜನರು ಒತ್ತಾಯಿಸುತ್ತಲೇ ಬಂದಿದ್ದಾರೆ. ಸರ್ವಸಜ್ಜಿತ ಅಲ್ಲ, ತಕ್ಕ ಮಟ್ಟಿನ ಸೌಲಭ್ಯಗಳಿದ್ದರೂ ಹೆತ್ತವರು ಅವರ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ಕಳುಹಿಸಲು ಸಿದ್ಧರಿದ್ದಾರೆ. ಇನ್ನೂರೈವತ್ತೋ ಮುನ್ನೂರೋ ಸೀಟುಗಳಿರುವ ಮೂಡುಬಿದಿರೆಯ ಡಾ.ಎಂ. ಮೋಹನ್ ಆಳ್ವರು ನಡೆಸುವ ಖಾಸಗಿ ಕನ್ನಡ ಮಾಧ್ಯಮ ಶಾಲೆಗೆ ಇಪ್ಪತ್ತು ಸಾವಿರದಷ್ಟು ಅರ್ಜಿಗಳು ಕರ್ನಾಟಕದ ಮೂಲೆಮೂಲೆಗಳಿಂದ ವರ್ಷಕ್ಕೆ ಬರುತ್ತವೆ ಎಂದರೆ ಕನ್ನಡ ಶಾಲೆಗಳನ್ನು ಕನ್ನಡಿಗರು ಬಯಸುತ್ತಾರೆ ಎಂದೇ ಅರ್ಥ. ಸರಕಾರದ ನೀತಿ ನಿಯಮಗಳನ್ನು ನೋಡಿದರೆ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯುವುದು, ಮುನ್ನಡೆಸುವುದು ಸುಲಭವಂತೆ. ಶುಲ್ಕ ಸಂಗ್ರಹದ ವಿಷಯದಲ್ಲಿ ಕಟ್ಟುನಿಟ್ಟಿನ ನಿಯಮಗಳಿದ್ದರೂ ಬೇರೆ ಬೇರೆ ಲೆಕ್ಕ ಶೀರ್ಷಿಕೆಗಳಲ್ಲಿ ಶುಲ್ಕ ಸಂಗ್ರಹ ಮಾಡುವುದಲ್ಲದೆ ದೇಣಿಗೆ, ಅಭಿವೃದ್ಧಿ ನಿಧಿ ಎಂದೆಲ್ಲ ಹೇಳಿ ಹಣ ಸಂಗ್ರಹ ಮಾಡಲು ದಾರಿಗಳುಂಟು. ಆದರೆ ಕನ್ನಡ ಮಾಧ್ಯಮ ಶಾಲೆಗಳನ್ನು ಖಾಸಗಿಯವರು ಸ್ಥಾಪಿಸಿ ನಡೆಸುವುದಾದರೆ ಸರಕಾರ ವಿಧಿಸಿದ ಶುಲ್ಕಕ್ಕಿಂತ ಯಾವುದೇ ಲೆಕ್ಕಶೀರ್ಷಿಕೆಯಡಿ ಒಂದು ರೂಪಾಯಿ ಸಂಗ್ರಹಿಸುವಂತಿಲ್ಲವಂತೆ. ಪಾಠಪಟ್ಟಿಯ ಒಂದು ಗೆರೆ ತೆಗೆಯುವಂತಿಲ್ಲ, ಸೇರಿಸುವಂತಿಲ್ಲ. ಶುಲ್ಕ ಸಂಗ್ರಹಿಸಿದರೆ ಅದು ಶಿಕ್ಷಾರ್ಹ ಅಪರಾಧ. ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ನಡೆಸುವವರಲ್ಲಿ ನಾನು ಕೇಳಿದ್ದುಂಟು, ನೀವು ಯಾಕೆ ಸ್ವಲ್ಪ ಹೆಚ್ಚು ಫೀಸು (ಇಂಗ್ಲಿಷ್‌ನ ಯೋಗ್ಯತೆಗಿರುವಷ್ಟು ಅಲ್ಲ!) ಸಂಗ್ರಹ ಮಾಡಿ ಒಳ್ಳೆಯ ಮಾದರಿ ಕನ್ನಡ ಶಾಲೆಗಳನ್ನು ಕಟ್ಟಬಾರದು ಎಂದು. ‘‘ಖಾಸಗಿಯವರು ಸಿದ್ಧರಿದ್ದಾರೆ. ಆದರೆ ಈಗಿರುವ ಕಾನೂನು ಮತ್ತು ವ್ಯವಸ್ಥೆಯಲ್ಲಿ ಅದು ಸಾಧ್ಯವೇ ಇಲ್ಲ’’ ಎಂದರವರು. ಖಾಸಗಿಯವರು ಮಾದರಿ ಕನ್ನಡ ಶಾಲೆಗಳನ್ನು ಸ್ಥಾಪಿಸಲು ಯಾಕೆ ಅವಕಾಶ ಕಲ್ಪಿಸಬಾರದು. ಇಂತಹ ವಿಷಯಗಳ ಸಮಗ್ರ ಚರ್ಚೆ ನಡೆಸಿ ತೀರ್ಮಾನ ಕೈಗೊಂಡು ಶಿಕ್ಷಣ ಇಲಾಖೆಗೆ ಸೂಕ್ತ ಸಲಹೆ, ಸೂಚನೆಗಳನ್ನು ಕೊಡಲು ಶಿಕ್ಷಣ ಪ್ರಾಧಿಕಾರವನ್ನು ಸ್ಥಾಪಿಸಿ ಎಂದು ಕನ್ನಡ ಪ್ರಾಧಿಕಾರದ ಅಧ್ಯಕ್ಷರು ಸರಕಾರಕ್ಕೆ ಸಲಹೆ ನೀಡಿದ್ದರು. ಒಳ್ಳೆಯ ಕನ್ನಡ ಶಾಲೆ ನಮಗಿಂದು ಬೇಕಾಗಿದೆ ಎಂಬುದು ಮುಖ್ಯ. ಇಂದಿನ ಸಂದರ್ಭದಲ್ಲಿ ಒಳ್ಳೆಯ ಕನ್ನಡ ಶಾಲೆ ಎಂಬುದನ್ನು ನಾನಿಲ್ಲಿ ವಿವರಿಸುವ ಅಗತ್ಯವಿಲ್ಲ. ಹೆತ್ತವರಲ್ಲಿ ಇಂಗ್ಲಿಷ್ ವ್ಯಾಮೋಹ ಕನ್ನಡವನ್ನು ನಿರಾಕರಿಸುವಷ್ಟು ಖಂಡಿತಾ ಇಲ್ಲ. ಬಹುಶಃ ಈ ವ್ಯಾಮೋಹವು ಕಲ್ಪಿತ ಮತ್ತು ಆರೋಪಿತ! ಒಳ್ಳೆಯ ಕನ್ನಡ ಮಾಧ್ಯಮ ಶಾಲೆ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆ ಇವುಗಳ ನಡುವೆ ನಮ್ಮ ಜನರ ಆಯ್ಕೆ ಕನ್ನಡ ಮಾಧ್ಯಮ ಶಾಲೆಗಳೇ ಆಗಿರುತ್ತವೆ. ಇಂತಹ ಜನರು ಬಯಸುವ ಒಳ್ಳೆಯ ಮಾದರಿ ಕನ್ನಡ ಶಾಲೆಗಳನ್ನು ಕಟ್ಟುವ ಬಗ್ಗೆ ಸರಕಾರದ ಮಟ್ಟದಲ್ಲಿ ನಡೆದಿರುವ ಚರ್ಚೆಗಳೇನು?
ನಮ್ಮಲ್ಲಿ ನೂರು ವರ್ಷ ದಾಟಿರುವ, ತುಂಬಿರುವ/ ತುಂಬುತ್ತಿರುವ ಅನೇಕ ಪ್ರಾಥಮಿಕ/ಹಿರಿಯ ಪ್ರಾಥಮಿಕ ಶಾಲೆಗಳಿವೆ. ತಾಲೂಕಿಗೆ ಒಂದೋ ಎರಡೋ ಅಂತಹ ಮಾದರಿ ಶಾಲೆಗಳಿದ್ದವು. ಶೈಕ್ಷಣಿಕವಾಗಿ ಅತ್ಯುತ್ತಮ ಪರಂಪರೆಯನ್ನು ಹೊಂದಿರುವ ಶಾಲೆಗಳು. ಅವುಗಳನ್ನು ಸರಕಾರ ಉಳಿಸಬೇಕೆಂಬ ಒತ್ತಾಯದ ಬೇಡಿಕೆಗಳು ಬಂದಿದ್ದವು. ದೀರ್ಘ ಇತಿಹಾಸವಿರುವ ಇಂತಹ ಶಾಲೆಗಳ ಕಟ್ಟಡಗಳು ಶಿಥಿಲವಾಗಿವೆ, ಅವುಗಳ ಜೀರ್ಣೋದ್ಧಾರದ ಕೆಲಸ ನಡೆಯಬೇಕಾಗಿದೆ. ಅನುದಾನ ಇಲ್ಲದ ಕಾರಣ ಶಿಕ್ಷಕರ ಕೊರತೆ ಬಹಳಷ್ಟಿದೆ. ಆಡಳಿತ ಮಂಡಳಿ ಅತಿಥಿ ಶಿಕ್ಷಕರನ್ನು ನೇಮಿಸಿ ಅವರಿಗೆ ಸಂಬಳ ಕೊಡಲು ಹೆಣಗುತ್ತಿದೆ. ಹೀಗೆ ಶತಮಾನ ಕಂಡಿರುವ, ಸಮಾಜಕ್ಕೆ ಅಪೂರ್ವ ಕೊಡುಗೆ ನೀಡಿರುವ ಶಾಲೆಗಳನ್ನು ಉಳಿಸಿ ಪೋಷಿಸಿ ಬೆಳೆಸುವ ಬಗ್ಗೆ ಚರ್ಚೆಗಳು ನಡೆದಿಲ್ಲವೇ?
ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಆರಂಭಿಸಿರುವ ಪ್ರಕ್ರಿಯೆಯನ್ನು ಗಮನಿಸಬಹುದು. ಅವು ಪ್ರತ್ಯೇಕ ಕಟ್ಟಡ, ಶಿಕ್ಷಕರು ಇರುವ ಶಾಲೆಗಳಲ್ಲ. ಈಗ ಇರುವ ಕನ್ನಡ ಮಾಧ್ಯಮ ಶಾಲೆಗಳಲ್ಲಿಯೇ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆದಿರುವುದು. ಕನ್ನಡ ಮಾಧ್ಯಮ ಶಾಲೆಗಳಿಗೆ ಮಕ್ಕಳ ಪ್ರವೇಶಾತಿ ಕಡಿಮೆ ಇದ್ದು, ಮಕ್ಕಳ ಪ್ರವೇಶಾತಿಯನ್ನು ಹೆಚ್ಚಿಸುವ ಸಲುವಾಗಿ ಇಂಗ್ಲಿಷ್ ತರಗತಿಗಳನ್ನು ತೆರೆಯಲಾಗಿದೆಯೇ? ಕನ್ನಡ ಮಾಧ್ಯಮ ಶಾಲೆಗಳಿಗೆ ಮಕ್ಕಳ ಪ್ರವೇಶಾತಿ ಕಡಿಮೆಯಾಗಲು ಇರುವ ಕಾರಣಗಳನ್ನು ನಿವಾರಿಸಲು ಕೈಗೊಂಡ ಕ್ರಮಗಳೇನು? ಸ್ಪಷ್ಟ ಉತ್ತರವಿಲ್ಲ. ಹೆತ್ತವರ ಇಂಗ್ಲಿಷ್ ವ್ಯಾಮೋಹ ಮತ್ತು ಇಂಗ್ಲಿಷ್ ಕಲಿತ ಮಕ್ಕಳ ಉಜ್ವಲ ಭವಿಷ್ಯ (ಇದೂ ಬಹುಮಟ್ಟಿಗೆ ಕಲ್ಪಿತವೆ)ವನ್ನು ಮುಂದೊಡ್ಡಿ ಈ ನಿರ್ಧಾರವನ್ನು ವಿವರಿಸಲಾಗುತ್ತದೆ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಆರಂಭ ಮಾಡಿರುವುದರಿಂದ ಶಾಲೆಗೆ ಬರುವ ಮಕ್ಕಳನ್ನು ಎರಡು ವರ್ಗ ಮಾಡಿದಂತಾಗುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಗೆ ಈಗ ಸಿಗುವ ಮಕ್ಕಳೂ ಸಿಗುವುದಿಲ್ಲ. ಹಾಗಾದರೆ ಕನ್ನಡ ಮಾಧ್ಯಮ ಶಾಲೆಗಳ ಗತಿಯೇನಾಗಬಹುದು?
ಸರಕಾರ/ ಶಿಕ್ಷಣ ಇಲಾಖೆ ಈಗಾಗಲೇ ಸ್ಪಷ್ಟಪಡಿಸಿರುವ ಅಂಶವೆಂದರೆ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಹೆಚ್ಚಿನ ಪ್ರತ್ಯೇಕ ಅನುದಾನ ಇಲ್ಲ! ಸ್ಥಳೀಯ ಸಂಪನ್ಮೂಲಗಳನ್ನು ಕ್ರೋಡೀಕರಿಸಿಕೊಂಡು ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ನಡೆಸಬೇಕು ಎಂದು. ಇಲಾಖೆ ಏನು ಭಾವಿಸಿದೆ ಎಂದರೆ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ತೆರೆಯಲು ಮತ್ತು ಮುನ್ನಡೆಸಲು ಬೇಕಾಗುವ ಆರ್ಥಿಕ ನೆರವಿನ ಮಹಾಪೂರವೇ ಹೆತ್ತವರಿಂದ ಹರಿದು ಬರುತ್ತದೆ ಎಂಬುದಾಗಿ. ಬರಬಹುದೇನೋ! ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ನಡೆಸುವ ಖಾಸಗಿ ವಲಯದಿಂದ ಸರಕಾರಿ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಸಹಕಾರ ಬೆಂಬಲ ಸಿಗಲು ಸಾಧ್ಯವಿದೆಯೇ?. ಕನ್ನಡ ಆಗಲಿ, ಇಂಗ್ಲಿಷ್ ಆಗಲಿ ಸರಕಾರಿ ಶಾಲೆಗಳು ಬಡವಾದಷ್ಟು, ಸೊರಗಿದಷ್ಟು, ದುರ್ಬಲವಾದಷ್ಟು ಖಾಸಗಿಯವರಿಗೆ ಅನುಕೂಲವೇ ಆಗಲಿದೆ. ಇದರ ಲಾಭ ಅವರು ಪಡೆಯಲಿದ್ದಾರೆ ಅಥವಾ ಇಂತಹ ಒಂದು ವ್ಯವಸ್ಥೆಯಲ್ಲಿ ಖಾಸಗಿಯವರು ಗುಣಮಟ್ಟದ ಶಿಕ್ಷಣ ಕೊಡಲು ಸಮರ್ಥರಾಗುತ್ತಾರೆ.
ಸರಕಾರ/ಶಿಕ್ಷಣ ಇಲಾಖೆಯ ಮುಂದೆ ಒಂದು ಒಳ್ಳೆಯ ಅವಕಾಶ ಇತ್ತು. ನಿರ್ದಿಷ್ಟ ವಲಯವೊಂದರಲ್ಲಿ ಕಾರ್ಯವೆಸಗುತ್ತಿರುವ ಉದ್ಯಮಿಗಳು, ಉನ್ನತ ಶಿಕ್ಷಣ ಸಂಸ್ಥೆಗಳು, ಅಲ್ಲಿರುವ ದಾನಿಗಳು ಇವರ ಸಹಾಯವನ್ನು ಪಡೆದು ಕನ್ನಡ ಶಾಲೆಗಳ ಗುಣಮಟ್ಟವನ್ನು ಎತ್ತರಿಸುವ ಕೆಲಸವನ್ನು ಮಾಡಬಹುದಿತ್ತು. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಒಂದಷ್ಟು ಪ್ರಾಥಮಿಕ ಶಾಲೆಗಳನ್ನು ದತ್ತು ತೆಗೆದುಕೊಳ್ಳುವ ಅವಕಾಶವನ್ನು ಕಲ್ಪಿಸಬಹುದಾಗಿತ್ತು. ಈ ಬಗ್ಗೆ ಅಗತ್ಯವಿದ್ದರೆ ಸೂಕ್ತ ಕಾನೂನು/ನಿಯಮಗಳನ್ನು ರೂಪಿಸಬಹುದಿತ್ತು. ಕನ್ನಡದ ನೆಲ, ನೀರು, ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಸಂಸ್ಥೆಗಳು ನಾಡಿನ ಪ್ರಾಥಮಿಕ/ಪ್ರೌಢ ಶಿಕ್ಷಣದ ಅಭಿವೃದ್ಧಿಗೆ, ಸರಕಾರಿ ಕನ್ನಡ ಶಾಲೆಗಳ ಉಳಿವಿಗೆ ಕೈಜೋಡಿಸುವಂತೆ ಮಾಡಬಹುದಾಗಿತ್ತು. ಈ ನಿಟ್ಟಿನ ಪ್ರಯತ್ನಗಳು ನಡೆದಂತಿಲ್ಲ.
ಸರಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಸರಕಾರವೇ ಮುಚ್ಚಲು ಹೊರಟಿದೆಯೋ ಗೊತ್ತಿಲ್ಲ. ಅದೆಂತಹ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆದು ವಿಸ್ತರಿಸಲು ಹೊರಟಿದೆಯೋ ಅದೂ ಸ್ಪಷ್ಟವಾಗಿಲ್ಲ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷನ್ನು ಸರಿಯಾಗಿ ಕಲಿಸುವ ವ್ಯವಸ್ಥೆ ಮಾಡಬಹುದಾಗಿತ್ತು. ಅದಕ್ಕೆ ಯಾರ ವಿರೋಧವೂ ಇಲ್ಲ. ಕುಟುಂಬ, ಪರಿಸರ, ಕೃಷಿ, ನೀರು, ಪ್ರಾಣಿ, ಪಕ್ಷಿ, ಹೂ, ಹಣ್ಣು, ಚಿಗುರು ಇವುಗಳ ಸಹವಾಸದಿಂದ ಸೃಜನಶೀಲವಾಗಿ ಅರಳುವ ಎಳೆಯರ ಶ್ರೀಮಂತ ಭಾವಕೋಶವು ಅಪರಿಚಿತ ಮಾಧ್ಯಮದ ಕಾರಣದಿಂದ ಮುದುಡಿ ನಾಶವಾಗುವ, ತಮ್ಮ ಜನ ನೆಲ ಮಾತಿಗೆ ಮಕ್ಕಳನ್ನು ಅನ್ಯರನ್ನಾಗಿಸುವ ಈ ಕ್ರಮಕ್ಕೆ ನೀಡಬಹುದಾದ ಪ್ರತಿಕ್ರಿಯೆ ‘‘ಕ್ಷಮಿಸಿ ಕುವೆಂಪು... ಮಾತ್ರವಲ್ಲ ಕ್ಷಮಿಸಿ ಮಕ್ಕಳೆ!’’ ಎಂದು.