ಅಪ್ಪ ಮಗನ ಆತ್ಮಾನುಬಂಧದ ಅನಾವರಣ
ಒಬ್ಬ ಯುವ ನಾಯಕನ ಮೊದಲ ಚಿತ್ರ ನೋಡಲು ಏನೆಲ್ಲ ನಿರೀಕ್ಷೆ ಇಟ್ಟುಕೊಂಡು ಹೋಗುತ್ತೇವೆಯೋ ಅದೆಲ್ಲವನ್ನು ಸಾಕ್ಷಾತ್ಕಾರಗೊಳಿಸುವ ಪ್ರಯತ್ನವೇ ಜ್ಯೂನಿಯರ್. ಚಿತ್ರಕ್ಕೆ ಸಂಬಂಧಿಸಿದಂತೆ ಹೆಸರಷ್ಟೇ ಜ್ಯೂನಿಯರ್. ಉಳಿದಂತೆ ಎಲ್ಲವನ್ನು ಸೀನಿಯರ್ ಮಟ್ಟಕ್ಕೇರಿಸುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ.
ಆತನ ಹೆಸರು ಅಭಿನವ್. ತಂದೆಗೊಬ್ಬನೇ ಮಗನಾಗಿ ಹುಟ್ಟಿರುತ್ತಾನೆ. ತನ್ನ 45ನೇ ವರ್ಷಕ್ಕೆ ಹುಟ್ಟಿದ ಏಕೈಕ ಪುತ್ರ ಎನ್ನುವ ಕಾರಣಕ್ಕೆ ತಂದೆ ಮುದ್ದಾಗಿ ಸಾಕಿರುತ್ತಾನೆ. ಬಾಲ್ಯದ ತುಂಟಾಟಗಳಲ್ಲಿ ಸಿಲುಕದಂತೆ ಮುತುವರ್ಜಿಯಿಂದ ಬೆಳೆಸುತ್ತಾನೆ. ಆದರೆ ಹೀಗೆ ಬೆಳೆದ ಅಭಿನವ್ ಕಾಲೇಜು ತಲುಪುತ್ತಿದ್ದ ಹಾಗೆ ಬದಲಾಗುತ್ತಾನೆ. ತಾನು ಕಳೆದುಕೊಂಡ ಬಾಲ್ಯದ ದಿನಗಳ ರೋಚಕತೆಯನ್ನು ಈಗಲಾದರೂ ಪಡೆದುಕೊಳ್ಳಲು ಹಠ ತೊಡುತ್ತಾನೆ. ತನ್ನ ಎಲ್ಲ ಮೊದಲ ಅನುಭವಗಳನ್ನು ವಿಭಿನ್ನಗೊಳಿಸುವ ಪ್ರಯತ್ನ ಶುರುಮಾಡುತ್ತಾನೆ. ಇದು ತಮಾಷೆಯಾಗಿರುತ್ತದೆ. ಆದರೆ ಬದುಕು ಆತನಿಗೆ ಅವೆಲ್ಲವನ್ನು ಮರೆಯುವಂಥ
ಹೊಸದೊಂದು ಅನುಭವ ನೀಡುತ್ತದೆ. ಅದೇನು ಅನ್ನುವುದೇ ಚಿತ್ರದ ಮುಖ್ಯ ಕಥೆ.
ಇದು ತಂದೆ ಮಗನ ಕಥೆ ಮತ್ತು ಜೆನಿಲಿಯಾ ನಟಿಸಿದ್ದಾರೆ ಎನ್ನುವ ಕಾರಣದಿಂದ ‘ಬೊಮ್ಮರಿಲ್ಲು’ ಛಾಯೆ ದಟ್ಟವಾಗಿರಬಹುದೆನ್ನುವ ಸಂದೇಹ ಇತ್ತು. ಆದರೆ ಅವೆಲ್ಲ ಒಂದೆರಡು ದೃಶ್ಯಗಳಿಗಷ್ಟೇ ಸೀಮಿತ. ಇಲ್ಲಿ ಮಧ್ಯಂತರದ ಹೊತ್ತಿಗೆ ತಂದೆ ಮತ್ತು ಮಗನ ಕಥೆಯ ಜೀವಾಳಕ್ಕೆ ಒಂದು ಗಟ್ಟಿಯಾದ ಹಿನ್ನೆಲೆ ಸೃಷ್ಟಿಯಾಗುತ್ತದೆ.
ಅಭಿನವ್ ಪಾತ್ರವಾಗಿ ಕಿರೀಟಿ ಅದ್ಭುತವಾಗಿಯೇ ಪರದೆ ಮೇಲೆ ಆಗಮಿಸಿದ್ದಾರೆ. ಒಬ್ಬ ಮಾಸ್ ಹೀರೋಗೆ ಬೇಕಾದ ಎತ್ತರ ಇಲ್ಲವೇನೋ ನಿಜ. ಆದರೆ ಪಾತ್ರಕ್ಕೆ ಬೇಕಾದ ಲವಲವಿಕೆ, ನಟನೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಆಕರ್ಷಕ ನೃತ್ಯದ ಮೂಲಕ ತನ್ನೆಲ್ಲ ಕುಂದುಗಳನ್ನು ಕೊಂದುಬಿಟ್ಟಿದ್ದಾರೆ. ನಟನೆಯ ಶೈಲಿಯಲ್ಲಿ ಜ್ಯೂನಿಯರ್ ಎನ್.ಟಿ.ಆರ್. ಅನುಕರಣೆ ಕಾಣಿಸುತ್ತದೆ.
ಚಿತ್ರಕ್ಕೆ ಇಬ್ಬರು ನಾಯಕಿಯರು. ಅದರಲ್ಲಿ ಸೀನಿಯರ್ ಜೆನಿಲಿಯಾ ಚೆನ್ನಾಗಿ ಅಂಕ ಗಳಿಸಿದ್ದಾರೆ. ಸದಾ ಚೆಲ್ಲು ಚೆಲ್ಲು ಪಾತ್ರಗಳಿಗೆ ರಾಯಭಾರಿಯಾಗಿದ್ದ ಜೆನಿಲಿಯಾ ಈ ಬಾರಿ ಗಾಂಭೀರ್ಯವತಿ. ಈ ವ್ಯಕ್ತಿತ್ವದ ಹಿನ್ನೆಲೆಯೇ ಚಿತ್ರದ ಶಕ್ತಿ. ಮತ್ತೋರ್ವ ನಾಯಕಿ ಶ್ರೀಲೀಲಾ ಪಾತ್ರ ನೃತ್ಯಕ್ಕುಂಟು ಲೆಕ್ಕಕ್ಕಿಲ್ಲ.
ನಾಯಕನ ತಂದೆ ಕೋದಂಡಪಾಣಿಯಾಗಿ ರವಿಚಂದ್ರನ್ ರಾರಾಜಿಸಿದ್ದಾರೆ. ಇಲ್ಲಿ ಗ್ಲಾಮರಸ್ ರವಿಮಾಮನ ಅಭಿಮಾನಿಗಳಿಗೆ ನಿರಾಶೆಯಾಗಬಹುದು. ಆದರೆ ರವಿಚಂದ್ರನ್ ನಟನೆ ಬಯಸುವವರಿಗೆ ಕಣ್ತುಂಬಿಕೊಳ್ಳಲು ಸಾಕಷ್ಟು ದೃಶ್ಯಗಳಿವೆ. ತಂದೆಯ ಪ್ರೀತಿ, ಅಭಿಮಾನ, ಅಕ್ಕರೆ, ನೋವುಗಳಿಗೆ ಕ್ರೇಜಿಸ್ಟಾರ್ ಮುಖವಾಗಿದ್ದಾರೆ.
ರವಿಚಂದ್ರನ್ ಪತ್ನಿಯಾಗಿ ಸುಧಾರಾಣಿ ನಟಿಸಿದ್ದಾರೆ.
ರಾವ್ ರಮೇಶ್ ಸೇರಿದಂತೆ ಒಂದಷ್ಟು ತೆಲುಗು ಕಲಾವಿದರು ಪೋಷಕ ಪಾತ್ರಗಳ ಪೋಷಾಕಿನಲ್ಲಿದ್ದಾರೆ. ವಿಜಯನಗರದ ಪಂಚಾಯತ್ ಅಧ್ಯಕ್ಷ ವಿಠಲಾಚಾರಿಯಾಗಿ ಅಚ್ಯುತ್ ಕುಮಾರ್ ನಟಿಸಿದ್ದಾರೆ. ದೇವಿಶ್ರೀ ಪ್ರಸಾದ್ ಸಂಗೀತದಲ್ಲಿ ಡಾನ್ಸ್
ನಂಬರ್‌ಗಳೇ ಅಧಿಕ ಗಮನ ಸೆಳೆಯುತ್ತವೆ.
ಜ್ಯೂನಿಯರ್ ಎನ್ನುವ ಹೆಸರನ್ನು ಬಹಳ ಬುದ್ಧಿವಂತಿಕೆಯಿಂದಲೇ ಇಟ್ಟ ಹಾಗಿದೆ. ಕಥೆಯಲ್ಲಿ ತಂದೆಯ ಆದರ್ಶವನ್ನು ಮುಂದುವರಿಸುವ ಪುತ್ರ ಜ್ಯೂನಿಯರ್. ನಾಟ್ಯದಲ್ಲಿ ಕನ್ನಡದ ಪಾಲಿಗೆ ಕೆಲವು ದೃಶ್ಯಗಳನ್ನು ಬಳಸಿರುವ ಕಾರಣಕ್ಕೆ ಅಪ್ಪುವಿಗೆ ಜ್ಯೂನಿಯರ್. ನಾಟ್ಯ ಮತ್ತು ನಟನೆಯ ಹೋಲಿಕೆಯಲ್ಲಿ ತೆಲುಗು ಅವತರಣಿಕೆಯಲ್ಲಿ ಜ್ಯೂನಿಯರ್ ಎನ್.ಟಿ.ಆರ್.ಗೆ ಜ್ಯೂನಿಯರ್. ಕೊನೆಯದಾಗಿ ಹಳ್ಳಿಯನ್ನು ಕೈಗಾರಿಕಾ ಪ್ರದೇಶವಾಗಿಸುವ ಚಿತ್ರದ ಸಂದೇಶದ ಮೂಲಕ ಜನಾರ್ದನ ರೆಡ್ಡಿಗೂ ಜ್ಯೂನಿಯರ್ ಎಂದು ಅಚ್ಚುಕಟ್ಟಾಗಿಯೇ ಸಾರಲಾಗಿದೆ.
ಚಿತ್ರ: ಜ್ಯೂನಿಯರ್
ನಿರ್ದೇಶಕ: ರಾಧಾಕೃಷ್ಣ ರೆಡ್ಡಿ
ನಿರ್ಮಾಪಕ: ಸಾಯಿ ಕೊರಪಟಿ
ತಾರಾಗಣ: ಕಿರೀಟಿ, ಜೆನಿಲಿಯಾ,
ವಿ. ರವಿಚಂದ್ರನ್