ಪರಿಶಿಷ್ಟ ಜಾತಿಗಳ ಮನೆ-ಮನೆ ಸಮೀಕ್ಷೆಯಲ್ಲಿ ಸುಳ್ಳು ಜಾತಿಗಳಿಗೆ ಮನ್ನಣೆ ಬೇಡ
ಒಳ ಮೀಸಲಾತಿ ಜಾರಿಗಾಗಿ ದತ್ತಾಂಶಗಳ ಕ್ರೋಡೀಕರಣ ಸಂಬಂಧವಾಗಿ ಮನೆ-ಮನೆ ಸಮೀಕ್ಷೆ ನಡೆಸಲು ರಾಜ್ಯ ಸರಕಾರದ ಆಯೋಗ ನಿರ್ಧರಿಸಿರುವುದು ಸ್ವಾಗ ತಾರ್ಹವಾಗಿದೆ. ಈ ಸಂಬಂಧವಾಗಿ ಸಕಲ ಪೂರ್ವಸಿದ್ಧತೆ ನಡೆಸಿರುವುದು ಸಾರ್ವಜನಿಕವಾಗಿ ಸಾದರಗೊಂಡಿದೆ. ಈ ಹಿನ್ನೆಲೆಯಲ್ಲಿ ಮನೆ ಮನೆ ಸಮೀಕ್ಷೆ ಕಾರ್ಯಮಾಡುವಾಗ ಸುಳ್ಳು ಪರಿಶಿಷ್ಟ ಜಾತಿಗಳು ನುಸುಳದಂತೆ ಕ್ರಮವಹಿಸಬೇಕಾದ ಅನಿವಾರ್ಯತೆಗಳಿವೆ.
1. ವೀರ ಶೈವ ಜಂಗಮರು, ಲಿಂಗಾಯತ ಜಂಗಮರು, ಜಂಗಮರು, ಆರಾಧ್ಯ ಹಾಗೂ ಮಠಪತಿಗಳು ಮೂಲತಃ ಹಿಂದುಳಿದ ವರ್ಗಗಳ ಮೀಸಲಾತಿ ಅಡಿ ಬರುತ್ತಿವೆ. ಇವುಗಳನ್ನು 1956ರ ರಾಷ್ಟ್ರಾಧ್ಯಕ್ಷರ ಆದೇಶದಡಿ ಪರಿಶಿಷ್ಟ ಜಾತಿಯ ಬೇಡ(ಬುಡ್ಗ) ಜಂಗಮ ಹಾಗೂ ಮಾಲ ಜಂಗಮ ಪರ್ಯಾಯ ಜಾತಿ ಎಂದು ಘೋಷಣೆ ಆಗಿಲ್ಲ. ಆದರೂ 1978ರಿಂದ ದಕ್ಷಿಣ ಭಾರತದಲ್ಲಿ ಈ ಸಮುದಾಯದವರು ಸುಳ್ಳು ಜಾತಿ ಪತ್ರಗಳನ್ನು ದುರುಪಯೋಗ ಮಾಡಿಕೊಳ್ಳುತ್ತಾ ಬಂದಿದ್ದಾರೆ.
2. ಪ್ರ ವರ್ಗ -1ರಲ್ಲಿರುವ ಕ್ರ.ಸಂ.-05. ಬೈರಾಗಿ, ಅದರ ಉಪ ಸಮುದಾಯಗಳು ಬಾಳಸಂತೋಷಿ, ಬಹುರೂಪಿಗಳೂ ಸಹ ಅತಿ ಹಿಂದುಳಿದ ವರ್ಗಗಳಿಗೆ ಸೇರಿದವರು. ಇವುಗಳನ್ನು 1956ರ ರಾಷ್ಟ್ರಾಧ್ಯಕ್ಷರ ಆದೇಶದಡಿ ಪರಿಶಿಷ್ಟ ಜಾತಿಯ ಬೇಡ(ಬುಡ್ಗ) ಪರ್ಯಾಯ ಜಾತಿ ಎಂದು ಘೋಷಣೆ ಆಗಿಲ್ಲ. ಆದರೂ 1978ರಿಂದ ದಕ್ಷಿಣ ಭಾರತದಲ್ಲಿ ಈ ಸಮುದಾಯದವರು ಸುಳ್ಳು ಜಾತಿ ಪತ್ರಗಳನ್ನು ದುರುಪಯೋಗ ಮಾಡಿಕೊಳ್ಳುತ್ತಾ ಬಂದಿದ್ದಾರೆ. ಈ ಬಗ್ಗೆ ಮುಳಬಾಗಿಲು ಕ್ಷೇತ್ರದ ಮಾಜಿ ಶಾಸಕ ಕೊತ್ತನೂರು ಮಂಜುನಾಥ್‌ಪ್ರಕರಣದಲ್ಲಿ ಘನ ನ್ಯಾಯಾಲಯಗಳು ಪ್ರಮಾಣೀಕೃತ ತೀಪು ನೀಡಿವೆ.
3. ಪ್ರವರ್ಗ -2(ಎ)ರಲ್ಲಿರುವ ಕ್ರ.ಸಂ.-93. ಕೋಟೆಗಾರ ಮತ್ತು ಅದರ ಉಪ ಸಮುದಾಯಗಳು ಅತಿ ಹಿಂದುಳಿದ ವರ್ಗಗಳಿಗೆ ಸೇರಿದವುಗಳು. ಇವುಗಳನ್ನು 1956ರ ರಾಷ್ಟ್ರಾಧ್ಯಕ್ಷರ ಆದೇಶದಡಿ ಪರಿಶಿಷ್ಟ ಜಾತಿಯ ಕೋಟೆಗಾರ (ಮೇತ್ರಿ) ಪರ್ಯಾಯ ಜಾತಿ ಎಂದು ಘೋಷಣೆ ಆಗಿಲ್ಲ. ಆದರೂ 1978ರಿಂದ ಕರ್ನಾಟಕದಲ್ಲಿ ಈ ಸಮುದಾಯದವರು ಸುಳ್ಳು ಜಾತಿ ಪತ್ರಗಳನ್ನು ದುರುಪಯೋಗ ಮಾಡಿಕೊಳ್ಳುತ್ತಾ ಬಂದಿದ್ದಾರೆ.
4. ಹಾಗೆಯೇ ಪ್ರವರ್ಗ-1ರಲ್ಲಿರುವ ಕ್ರ.ಸಂ.-12 ದಾಸರಿ ಮತ್ತು ಅದರ ಉಪ ಸಮು ದಾಯಗಳು ಸಹ ಅತಿ ಹಿಂದುಳಿದ ವರ್ಗಗಳಿಗೆ ಸೇರಿದವುಗಳು. ಇವುಗಳನ್ನು 1956ರ ರಾಷ್ಟ್ರಾಧ್ಯಕ್ಷರ ಆದೇಶದಡಿ ಪರಿಶಿಷ್ಟ ಜಾತಿಯ ಚಲವಾದಿ ಜಾತಿಯ ಚನ್ನದಾಸರ್/ಹೊಲೆಯ ದಾಸರ್ ಉಪಜಾತಿ ದಾಸರಿಗಳ ಪರ್ಯಾಯ ಜಾತಿ ಎಂದು ಘೋಷಣೆ ಆಗಿಲ್ಲ. ಆದರೂ 1978ರಿಂದ ಈ ಸಮುದಾಯದವರು ಸುಳ್ಳು ಜಾತಿ ಪತ್ರಗಳನ್ನು ದುರುಪಯೋಗ ಮಾಡಿಕೊಳ್ಳುತ್ತಾ ಬಂದಿದ್ದಾರೆ. ಹಾಗೆಯೇ ಶಿಳ್ಳೇಕ್ಯಾತ ಮತ್ತು ಕಿಳ್ಳೇ ಕ್ಯಾತರ ನಡುವೆಯೂ ಅಜಗಜಾಂತರಗಳಿವೆ.
5. ಪ್ರವರ್ಗ-1ರಲ್ಲಿರುವ ಕ್ರ.ಸಂ.-05 (ಎಚ್) ಗೋಸಾಯಿ ಮತ್ತು (ಐ) ಗುಸಾಯಿ ಉಪ ಸಮುದಾಯಗಳು ಸಹ ಅತಿ ಹಿಂದುಳಿದ ವರ್ಗಗಳಿಗೆ ಸೇರಿದವುಗಳು. ಇವುಗಳನ್ನು 1956ರ ರಾಷ್ಟ್ರಾಧ್ಯಕ್ಷರ ಆದೇಶದಡಿ ಪರಿಶಿಷ್ಟ ಜಾತಿಯ ಗೋಸಂಗಿ (ಮಾಲ ಉಪ ಜಾತಿ ಮತ್ತು ದನದ ಮಾಂಸ ಮಾರುವವರು) ಪರ್ಯಾಯ ಜಾತಿ ಎಂದು ಘೋಷಣೆ ಆಗಿಲ್ಲ. ಆದರೂ 1978ರಿಂದ ದಕ್ಷಿಣ ಭಾರತದಲ್ಲಿ ಈ ಸಮುದಾಯದವರು ಸುಳ್ಳು ಜಾತಿ ಪತ್ರಗಳನ್ನು ದುರುಪಯೋಗ ಮಾಡಿಕೊಳ್ಳುತ್ತಾ ಬಂದಿದ್ದಾರೆ. ಆದುದರಿಂದ ಮನೆ ಮನೆ ಸಮೀಕ್ಷೆ ಸಂದರ್ಭದಲ್ಲಿ ಗೋಸಾಯಿ ಅದರ ಉಪ ಸಮುದಾಯದ ಯಾವುದೇ ಕುಟುಂಬದ ಮಾಹಿತಿಗಳನ್ನು ಸಂಗ್ರಹಿಸದಂತೆ ಸಮೀಕ್ಷಾದಾರರಿಗೆ ಸೂಚಿಸಬೇಕು.
6. ಮೇಲಿನಂತೆ ಪ್ರವರ್ಗ-1ರಲ್ಲಿರುವ ಕ್ರ.ಸಂ.-06 (ಎಇ) ಮೊಗೇರ್ ಉಪ ಸಮುದಾಯ ಗಳು ಬೆಸ್ತರ ಅತಿ ಹಿಂದುಳಿದ ವರ್ಗಗಳಿಗೆ ಸೇರಿದವುಗಳು. ಇವುಗಳನ್ನು 1956ರ ರಾಷ್ಟ್ರಾಧ್ಯಕ್ಷರ ಆದೇಶದಡಿ ಪರಿಶಿಷ್ಟ ಜಾತಿಯ ಮುಗೇರ ಅಥವಾ ಮುಗ್ಗೇರ ಪರ್ಯಾಯ ಜಾತಿ ಎಂದು ಘೋಷಣೆ ಆಗಿಲ್ಲ. ಆದರೂ 1978ರಿಂದ ಕರ್ನಾಟಕದಲ್ಲಿ ಈ ಸಮುದಾಯದವರು ಸುಳ್ಳು ಜಾತಿ ಪತ್ರಗಳನ್ನು ದುರುಪಯೋಗ ಮಾಡಿಕೊಳ್ಳುತ್ತಾ ಬಂದಿದ್ದಾರೆ.
7. ವೀರಶೈವರು ಮತ್ತು ಲಿಂಗವಂತರು ಅಥವಾ ವಾಣಿ ಲಿಂಗಾಯತರು ಮೂಲತಃ ಹಿಂದುಳಿದ ವರ್ಗಗಳ ಮೀಸಲಾತಿಗೆ ಭಾಜನರಾಗಿದ್ದಾರೆ. ಇವರನ್ನು 1956ರ ರಾಷ್ಟ್ರಾಧ್ಯಕ್ಷರ ಆದೇಶದಡಿ ಮಹಾರಾಷ್ಟ್ರ, ಗುಜರಾತ್ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿಯ ಲಿಂಗದೇರ್(ಲಿಂಗ ಡೋರ್ ಅಂದರೆ ಡೋಹಾರ ಉಪ ಸಮುದಾಯ) ಲಿಂಗಧಾರಿಗಳೆಂದು ಪರ್ಯಾಯ ಜಾತಿ ಎಂದು ಘೋಷಣೆ ಆಗಿಲ್ಲ. ಆದರೂ 1978ರಿಂದ ದಕ್ಷಿಣ ಭಾರತದಲ್ಲಿ ಈ ಸಮು ದಾಯದವರು ಸುಳ್ಳು ಜಾತಿ ಪತ್ರಗಳನ್ನು ಲಿಂಗಧಾರಿ ಎಂದು ದುರುಪಯೋಗ ಮಾಡಿಕೊಳ್ಳುತ್ತಾ ಬಂದಿದ್ದಾರೆ.
ಈ ರೀತಿಯಲ್ಲಿ ಹಲವಾರು ಹಿಂದುಳಿದ ಜಾತಿಗಳು ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಉಪ ಸಮುದಾಯಗಳ ಸಮನಾಂತರ ಪದಗಳಡಿ ಮೀಸಲಾತಿ ದುರುಪಯೋಗ ಮಾಡಿಕೊಳ್ಳುತ್ತಾ ಬಂದಿವೆ. ಈ ನಿಟ್ಟಿನಲ್ಲಿ ಮನೆ ಮನೆ ಸಮೀಕ್ಷೆ ಸಂದರ್ಭದಲ್ಲಿ ಪರಿಶಿಷ್ಟ ಜಾತಿಗಳಲ್ಲದ ಯಾವುದೇ ಹಿಂದುಳಿದ ವರ್ಗಗಳ ಸಮುದಾಯಗಳ ಕುಟುಂಬ ಮಾಹಿತಿಗಳನ್ನು ಸಂಗ್ರಹಿಸದಂತೆ ಸಮೀಕ್ಷಾದಾರರಿಗೆ ಸರಕಾರ ಕಟ್ಟುನಿಟ್ಟಿನ ಎಚ್ಚರಿಕೆಯ ಆದೇಶ ನೀಡಬೇಕಿದೆ
ಒಳ ಮೀಸಲಾತಿ ನಿರ್ಧರಿಸುವ ದತ್ತಾಂಶಗಳಿಗೆ ಸಮೀಕ್ಷೆ ಆಯೋಜನೆಯಾಗಿರುವ ಸಂದರ್ಭದಲ್ಲಿ ಪರಿಶಿಷ್ಟ ಜಾತಿಯ ಉಪಜಾತಿಗಳ ಸಮನಾಂತರ (Synonymous) ಅಥವಾ ಅನ್ವರ್ಥ ನಾಮಾವಳಿಗಳಡಿ(Identical names) ಅನ್ಯ ಹಿಂದುಳಿದ ಜಾತಿಗಳು ಅಕ್ರಮವಾಗಿ ಒಳ ನುಸುಳುವುದನ್ನು ನಿಯಂತ್ರಿಸಲು ಸರಕಾರ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ರಾಜ್ಯಾಂಗದ ನಿಲುವುಗಳನ್ನು ಮಾನ್ಯ ಮಾಡಬೇಕಿದೆ. ಇಲ್ಲದೆ ಹೋದರೆ ವ್ಯತಿರಿಕ್ತ ಮಾಹಿತಿಗಳ ಸೃಜನೆಗೆ ಅನುವು ಮಾಡಿದಾಗ ಒಳ ಮೀಸಲಾತಿ ದತ್ತಾಂಶಗಳ ವರ್ಗೀಕರಣ ಮಾಡುವಾಗ ತಾಂತ್ರಿಕ ತೊಂದರೆಗಳು ಎದುರಾಗುತ್ತವೆ.
ಆದುದರಿಂದ ಯಾವುದೇ ಸಮುದಾಯಗಳು ಕಾನೂನುಬದ್ಧವಾಗಿ 1956ರ ರಾಷ್ಟ್ರಾಧ್ಯಕ್ಷರ ಆದೇಶದಡಿ ಪರಿಶಿಷ್ಟ ಜಾತಿಯ ಸ್ಥಾನಮಾನ ಪಡೆಯದವರ ಕುಟುಂಬಗಳ ಸಮೀಕ್ಷೆ ಮಾಡಬಾರದೆಂದು ಈ ಮೂಲಕ ಸಾರ್ವಜನಿಕವಾಗಿ ಸರಕಾರವನ್ನು ಆಗ್ರಹಿಸುವೆ.