ಆರ್ಟಿಕಲ್-370 ರದ್ದಿನ ಬಗ್ಗೆ ಸುಪ್ರೀಂ ತೀರ್ಪು: ಅಪ್ರಜಾತಾಂತ್ರಿಕ ಯೋಜನೆಗಳಿಗೆ ನ್ಯಾಯಿಕ ಸಮರ್ಥನೆ

ಕಳೆದ 70 ವರ್ಷಗಳಲ್ಲಿ ಈ ಹಿಂದಿನ ಕಾಂಗ್ರೆಸ್ ಸರಕಾರ ವಂಚನೆ ಮತ್ತು ಕುತಂತ್ರಗಳಿಂದ ಆರ್ಟಿಕಲ್ 370ನ್ನು ಒಳಗೊಳಗಿಂದಲೇ ಟೊಳ್ಳು ಮಾಡುತ್ತಾ ಬಂದದ್ದು ಮತ್ತು ಮೋದಿ ಸರಕಾರ ಅದನ್ನು ಮುಂದುವರಿಸಿ ಆರ್ಟಿಕಲ್ 370 ಅನ್ನೇ ರದ್ದು ಗೊಳಿಸಿದ್ದು ಮತ್ತು ಈವರೆಗೆ ಸರಕಾರಗಳು ಆರ್ಟಿಕಲ್ 370 ಅನ್ನು ಮೋಸದಿಂದ ಟೊಳ್ಳುಗೊಳಿಸಿದ್ದನ್ನೇ ಒಂದು ಕಾರಣವನ್ನಾಗಿ ಬಳಸಿಕೊಂಡ ಸುಪ್ರೀಂ ಕೋರ್ಟ್ ಆರ್ಟಿಕಲ್ 370 ಇವತ್ತಿನ ಸಂದರ್ಭಕ್ಕೆ ಅಗತ್ಯವಿಲ್ಲವೆಂದು ಆರ್ಟಿಕಲ್ 370ರ ರದ್ದನ್ನು ಸಾಂವಿಧಾನಿಕ ಎಂದು ಘೋಷಿಸಿದ್ದು ಇವೆಲ್ಲವೂ ಭಾರತದ ಪ್ರಭುತ್ವದ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗಗಳೂ ಒಟ್ಟುಗೂಡಿ ಕಾಶ್ಮೀರಕ್ಕೆ ದ್ರೋಹ ಬಗೆಯುತ್ತಾ ಬಂದ ಇತಿಹಾಸದ ಹಲವು ದುರಂತ ಮಜಲುಗಳಾಗಿವೆ.

Update: 2023-12-13 03:12 GMT
Editor : Naufal | Byline : ಶಿವಸುಂದರ್,

‘‘Supreme Court is supreme but not infalliable’’ ಎಂಬುದನ್ನು ಭಾರತದ ಸುಪ್ರೀಂಕೋರ್ಟಿನ ಹಲವಾರು ಮುಖ್ಯ ನ್ಯಾಯಾಧೀಶರುಗಳೇ ಹಲವಾರು ಬಾರಿ ಸ್ಪಷ್ಟಪಡಿಸಿದ್ದಾರೆ. ಅಂದರೆ ಸುಪ್ರೀಂ ಕೋರ್ಟ್ ಯಾವುದೇ ಪ್ರಕರಣದಲ್ಲಿ ನೀಡುವ ತೀರ್ಪು ಅಂತಿಮ ಎಂಬುದು ನಿಜವಾದರೂ ಅದು ನ್ಯಾಯಯುತವೂ, ದೋಷರಹಿತವೂ ಆಗಿರುತ್ತದೆ ಎಂದು ಅರ್ಥವಲ್ಲ. ಆದರೆ ಕಾಶ್ಮೀರದ ವಿಷಯದಲ್ಲಿ ಮಾತ್ರ ಸುಪ್ರೀಂನ ಐವರು ಸದಸ್ಯರ ಸಾಂವಿಧಾನಿಕ ಪೀಠ ಕೊಟ್ಟಿರುವ ತೀರ್ಪು, ಬಾಬರಿ ಮಸೀದಿ ತೀರ್ಪಿನಂತೆ, ಅತ್ಯಂತ ಅನ್ಯಾಯಯುತವಾಗಿದೆ. ಭಾರತ ಒಕ್ಕೂಟಕ್ಕೆ ಸೇರಿಕೊಳ್ಳುವ ಮುನ್ನ ಅದರ ಸ್ವಾಯತ್ತತೆಗೆ ಧಕ್ಕೆ ತರುವುದಿಲ್ಲವೆಂದು ಭಾರತವು ಕಾಶ್ಮೀರಕ್ಕೆ ಕೊಟ್ಟ ಸಾರ್ವಭೌಮಿ ಭರವಸೆಗೆ ಮಾಡಿದ ಅಂತಿಮ ದ್ರೋಹವೂ ಆಗಿದೆ.

ಕಾಶ್ಮೀರಿಗಳ ಸ್ವಾಭಿಮಾನ ಮತ್ತು ಸ್ವಾಯತ್ತತೆಯನ್ನು ಕೇವಲ ಇಂದಿನ ಮೋದಿ ಸರಕಾರ ಮಾತ್ರವಲ್ಲದೆ ಈ ಹಿಂದೆ ರಾಜ್ಯಭಾರ ಮಾಡಿದ ಕಾಂಗ್ರೆಸ್ ಸರಕಾರಗಳೂ ಕೂಡ ಕೇವಲ ಮುಸ್ಲಿಮ್ ಪ್ರತ್ಯೇಕತೆಯ ಪ್ರಶ್ನೆಯಾಗಿ ಮಾತ್ರ ಪರಿಗಣಿಸುತ್ತಾ ಬಂದಿವೆ. ಇದನ್ನು ಮುಂದುವರಿಸಿಯೇ ಉಗ್ರ ಹಿಂದುತ್ವವಾದಿ ಮೋದಿ ಸರಕಾರ 2019ರಲ್ಲಿ ಕಾಶ್ಮೀರಿಗಳ ಸ್ವಾಯತ್ತತೆಯನ್ನು ಕಾಪಾಡುವ ಭಾರತದ ಸಾರ್ವಭೌಮಿ ಭರವಸೆಯ ಸಾಂವಿಧಾನಿಕ ಸ್ವರೂಪವಾದ ಆರ್ಟಿಕಲ್ 370 ಅನ್ನೇ ರದ್ದು ಮಾಡಿತು. ಮಾತ್ರವಲ್ಲದೆ ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ನಿರಾಕರಿಸಿ, ರಾಜ್ಯದ ಚುನಾಯಿತ ಸರಕಾರದ ಅರ್ಥಾತ್ ಜನರ ಒಪ್ಪಿಗೆಯನ್ನೇ ಕೇಳದೆ ಕೇಂದ್ರವೇ ಏಕಾಏಕಿ ಅಸಾಂವಿಧಾನಿಕವಾಗಿ ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶದ ಸ್ಥಾನಕ್ಕೆ ಇಳಿಸಿಬಿಟ್ಟಿತು.

ಸರಕಾರದ ಈ ಅಪ್ರಜಾತಾಂತ್ರಿಕ ಹಾಗೂ ಹಿಂದುತ್ವವಾದಿ ಅಸಾಂವಿಧಾನಿಕ ನಡವಳಿಕೆಯನ್ನು ಸರಿತಿದ್ದ ಬೇಕಿದ್ದ ಸುಪ್ರೀಂನ ಸಾಂವಿಧಾನಿಕ ಪೀಠ ಮೋದಿ ಸರಕಾರದ ಈ ಎಲ್ಲಾ ಅಸಾಂವಿಧಾನಿಕ ಸರ್ವಾಧಿಕಾರಿ ಕ್ರಮಗಳನ್ನು ಸಕ್ರಮ ಎಂದು ಘೋಷಿಸಿದೆ. ಅಷ್ಟು ಮಾತ್ರವಲ್ಲ. ಮೋದಿ ಸರಕಾರದ ಅಸಾಂವಿಧಾನಿಕ ಕ್ರಮಗಳನ್ನು ಮಾನ್ಯಗೊಳಿಸುವ ಭರದಲ್ಲಿ ಸುಪ್ರೀಂ ಈ ದೇಶದ ಫೆಡರಲ್ ಸ್ವರೂಪಕ್ಕೆ ಆತಂಕ ಒಡ್ಡುವ ಹೊಸ ನ್ಯಾಯ ಸಂಹಿತೆಯನ್ನೇ ರಚಿಸಿಬಿಟ್ಟಿದೆ.

ಉದಾಹರಣೆಗೆ, ಕಾಶ್ಮೀರದಲ್ಲಿ ಚುನಾಯಿತ ಸರಕಾರವಿಲ್ಲದೆ, ಕಾಶ್ಮೀರದಲ್ಲಿ ಕೇಂದ್ರದ ಆಡಳಿತವು (ರಾಷ್ಟ್ರಪತಿ ಆಡಳಿತ) ಜಾರಿಯಲ್ಲಿದ್ದಾಗ, ಕಾಶ್ಮೀರದ ಚುನಾಯಿತ ಸರಕಾರದ ಒಪ್ಪಿಗೆ ಇಲ್ಲದೆ ರಾಷ್ಟ್ರಪತಿಯ ಆದೇಶದ ಮೂಲಕ ಕೇಂದ್ರವೇ ಕಾಶ್ಮೀರದ ರಾಜ್ಯವನ್ನು ವಿಭಜೀಕರಿಸಿ ರಾಜ್ಯದ ಸ್ವರೂಪವನ್ನು ಬದಲಿಸಿಬಿಟ್ಟಿತು ಹಾಗೂ ಕಾಶ್ಮೀರವನ್ನು ರಾಜ್ಯದ ಸ್ಥಾನಮಾನದಿಂದ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನಕ್ಕೆ ಇಳಿಸಿಬಿಟ್ಟಿತು. ಇದು ಕಾಶ್ಮೀರಕ್ಕೆ ಮೋದಿ ಸರಕಾರ ದುರುದ್ದೇಶಪೂರ್ವಕವಾಗಿ ಮಾಡಿದ ಘನಘೋರ ಅವಮಾನ.

ಆದರೆ ಅದನ್ನು ಸುಪ್ರೀಂ ಈಗ ಎತ್ತಿ ಹಿಡಿದಿರುವುದು ಮಾತ್ರವಲ್ಲದೆ ಕೇಂದ್ರವು ರಾಜ್ಯಗಳ ಸ್ವರೂಪವನ್ನು ಬದಲಿಸುವಾಗ ರಾಜ್ಯದ ಅಭಿಪ್ರಾಯವನ್ನು ಕೇಳಬೇಕಿರುವುದು ಕಡ್ಡಾಯವೇನಿಲ್ಲ ಎಂದು ಸಂವಿಧಾನದ ಆರ್ಟಿಕಲ್ 3 ಅನ್ನು ವ್ಯಾಖ್ಯಾನಿಸಿ ಕೇಂದ್ರದ ಏಕಾಧಿಪತ್ಯಕ್ಕೆ ಪೂರಕವಾದ ಹೊಸ ನ್ಯಾಯ ಸಂಹಿತೆಯನ್ನೇ ಬರೆದುಬಿಟ್ಟಿದೆ. ಭಾರತದ ಫೆಡರಲ್ ಸ್ವರೂಪಕ್ಕೆ ದೊಡ್ಡ ಪೆಟ್ಟನ್ನು ನೀಡಿದೆ. ಮೋದಿ ಮತ್ತು ಆರೆಸ್ಸೆಸ್ನ ಒಂದು ದೇಶ- ಒಂದೇ ರಾಜ್ಯಭಾರ ಎಂಬ ಅತ್ಯಂತ ಸಾಂವಿಧಾನಿಕ ಮತ್ತು ಅಪ್ರಜಾತಾಂತ್ರಿಕ ಯೋಜನೆಗಳಿಗೆ ಪರೋಕ್ಷವಾಗಿ ನ್ಯಾಯಿಕ ಸಮರ್ಥನೆ ನೀಡಿದೆ.

ಹೀಗಾಗಿ ಈ ತೀರ್ಪು ಕೇವಲ ಕಾಶ್ಮೀರಿಗಳಿಗೆ ಮಾತ್ರ ಅನ್ಯಾಯ ಮಾಡುತ್ತಿರುವ ತೀರ್ಪಲ್ಲ. ಬದಲಿಗೆ ಭಾರತದ ಫೆಡರಲ್ ತತ್ವಕ್ಕೆ ಮತ್ತು ಭಾರತದ ಭಾಗವಾಗಿಯೇ ಇದ್ದುಕೊಂಡು ಸ್ವಾಯತ್ತತೆ ಮತ್ತು ಅಸ್ಮಿತೆಯನ್ನು ಕಾಪಾಡಿಕೊಳ್ಳುವ ನಿರೀಕ್ಷೆಯನ್ನು ಹೊಂದಿರುವ ಕರ್ನಾಟಕವನ್ನು ಒಳಗೊಂಡಂತೆ ಇತರ ಎಲ್ಲಾ ರಾಜ್ಯಗಳ ಸ್ವಾಯತ್ತ ಅಸ್ತಿತ್ವಕ್ಕೆ ಮತ್ತು ಅಸ್ಮಿತೆಗೂ ಧಕ್ಕೆ ತರುವ ಅತ್ಯಂತ ಅಪ್ರಜಾತಾಂತ್ರಿಕ ತೀರ್ಪಾಗಿದೆ.

ಹೀಗಾಗಿ ಈ ತೀರ್ಪು ಬಿಜೆಪಿ-ಆರೆಸ್ಸೆಸ್ ನ ಹಿಂದೂ ಸರ್ವಾಧಿಕಾರಿ ರಾಷ್ಟ್ರ ಯೋಜನೆಯ ಸಾಧನವೂ ಆಗಿದೆ. ಆರ್ಟಿಕಲ್ 370ರ ರದ್ದತಿ ಒಟ್ಟಾರೆ ಭಾರತದ ಸಂವಿಧಾನ ಮತ್ತು ಪ್ರಜಾತಂತ್ರಕ್ಕೆ ಹೇಗೆ ಮಾರಕ ಎಂದು ಅರ್ಥವಾಗಬೇಕೆಂದರೆ ಅದರ ಇತಿಹಾಸವನ್ನು ಗಮನಿಸಬೇಕು.

ಬ್ರಿಟಿಷ್ ವಸಾಹತುಶಾಹಿ ಆಡಳಿತದಿಂದ ಸ್ವತಂತ್ರಗೊಂಡು ಭಾರತ ಒಕ್ಕೂಟ ರಚನೆಯಾದ ರೀತಿ, ಆ ಪ್ರಕ್ರಿಯೆಯಲ್ಲಿ ಕಾಶ್ಮೀರವನ್ನು ಭಾರತದ ಭಾಗವಾಗಿಸಿಕೊಳ್ಳಲು ಕಾಶ್ಮೀರದ ಜನತೆಯ ಸ್ವಾಯತ್ತತೆ ಕಾಪಾಡುತ್ತೇವೆಂದು ಕೊಟ್ಟ ಭರವಸೆ, ಅದರ ಸಾಂವಿಧಾನಿಕ ರೂಪವಾದ ಆರ್ಟಿಕಲ್ 370, ಕಳೆದ 70 ವರ್ಷಗಳಲ್ಲಿ ಈ ಹಿಂದಿನ ಕಾಂಗ್ರೆಸ್ ಸರಕಾರ ವಂಚನೆ ಮತ್ತು ಕುತಂತ್ರಗಳಿಂದ ಆರ್ಟಿಕಲ್ 370ನ್ನು ಒಳಗೊಳಗಿಂದಲೇ ಟೊಳ್ಳು ಮಾಡುತ್ತಾ ಬಂದದ್ದು ಮತ್ತು ಮೋದಿ ಸರಕಾರ ಅದನ್ನು ಮುಂದುವರಿಸಿ ಆರ್ಟಿಕಲ್ 370 ಅನ್ನೇ ರದ್ದು ಗೊಳಿಸಿದ್ದು ಮತ್ತು ಈವರೆಗೆ ಸರಕಾರಗಳು ಆರ್ಟಿಕಲ್ 370 ಅನ್ನು ಮೋಸದಿಂದ ಟೊಳ್ಳುಗೊಳಿಸಿದ್ದನ್ನೇ ಒಂದು ಕಾರಣವನ್ನಾಗಿ ಬಳಸಿಕೊಂಡ ಸುಪ್ರೀಂ ಕೋರ್ಟ್ ಆರ್ಟಿಕಲ್ 370 ಇವತ್ತಿನ ಸಂದರ್ಭಕ್ಕೆ ಅಗತ್ಯವಿಲ್ಲವೆಂದು ಆರ್ಟಿಕಲ್ 370ರ ರದ್ದನ್ನು ಸಾಂವಿಧಾನಿಕ ಎಂದು ಘೋಷಿಸಿದ್ದು ಇವೆಲ್ಲವೂ ಭಾರತದ ಪ್ರಭುತ್ವದ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗಗಳೂ ಒಟ್ಟುಗೂಡಿ ಕಾಶ್ಮೀರಕ್ಕೆ ದ್ರೋಹ ಬಗೆಯುತ್ತಾ ಬಂದ ಇತಿಹಾಸದ ಹಲವು ದುರಂತ ಮಜಲುಗಳಾಗಿವೆ.

ಆರ್ಟಿಕಲ್ 370 ತಾತ್ಕಾಲಿಕ, ಆದರೆ ಶರತ್ತುಗಳು ಶಾಶ್ವತವಲ್ಲವೇ?

ಬ್ರಿಟಿಷ್ ಆಡಳಿತದಿಂದ ಭಾರತವು ಮುಕ್ತಗೊಳ್ಳುವ ಹೊತ್ತಿನಲ್ಲಿ ಬ್ರಿಟಿಷ್ ಭಾರತದಲ್ಲಿ ಬ್ರಿಟಿಷರಿಂದ ನೇರ ಆಡಳಿತಕ್ಕೆ ಒಳಪಟ್ಟ ಪ್ರದೇಶಗಳು ಮತ್ತು ಪರೋಕ್ಷವಾಗಿ ಬ್ರಿಟಿಷರು ಆಳುತ್ತಿದ್ದ 580ಕ್ಕೂ ರಾಜ ಸಂಸ್ಥಾನಗಳೂ ಇದ್ದವು. ದೇಶ ವಿಭಜನೆಯ ಕಾರಣದಿಂದ ಬ್ರಿಟಿಷ್ ಭಾರತದಿಂದ ಮುಕ್ತವಾದ ಭಾರತ ಮತ್ತು ಪಾಕಿಸ್ಥಾನ ಎಂಬ ಎರಡು ಸಾರ್ವಭೌಮಿ ದೇಶಗಳು ರೂಪುಗೊಂಡಿದ್ದವು. ಹೀಗಾಗಿ ಬ್ರಿಟಿಷರು 582 ರಾಜಸಂಸ್ಥಾನಗಳಿಗೆ ತಮ್ಮಿಂದ ಸ್ವಾತಂತ್ರ್ಯವನ್ನು ನೀಡಿದ್ದಲ್ಲದೆ ಭವಿಷ್ಯದಲ್ಲಿ ಭಾರತ ಅಥವಾ ಪಾಕಿಸ್ತಾನ ಗಣರಾಜ್ಯಗಳೊಂದಿಗೆ ವಿಲೀನಗೊಳ್ಳುವ ಅಥವಾ ಸ್ವತಂತ್ರವಾಗಿರುವ ಅವಕಾಶಗಳನ್ನು ನೀಡಿದರು.

ಇದರಲ್ಲಿ ಬಹುಪಾಲು ಸಂಸ್ಥಾನಗಳು ಭಾರತ ಅಥವಾ ಪಾಕಿಸ್ತಾನದೊಂದಿಗೆ ವಿಲೀನಗೊಳ್ಳುವ ತೀರ್ಮಾನ ತೆಗೆದುಕೊಂಡವು. ಆದರೆ ಕಾಶ್ಮೀರ, ಹೈದರಾಬಾದ್ ಜುನಾಘಡ್ (ಈಗ ಗುಜರಾತಿನ ಭಾಗ) ಸಂಸ್ಥಾನಗಳು ಸ್ವತಂತ್ರವಾಗಿರುವ ತೀರ್ಮಾನವನ್ನು ಕೈಗೊಂಡವು. ಇದರಲ್ಲಿ ಜುನಾಘಡ್ ಮತ್ತು ಹೈದರಾಬಾದ್ ಸಂಸ್ಥಾನಗಳಲ್ಲಿ ಮುಸ್ಲಿಮ್ ದೊರೆಗಳು, ಹಿಂದೂ ಜನ ಸಾಮಾನ್ಯರು. ಕಾಶ್ಮೀರದಲ್ಲಿ ಮುಸ್ಲಿಮ್ ಜನರು ಆದರೆ ಹಿಂದೂ (ಡೋಗ್ರ) ದೊರೆಗಳು. ಹೀಗಾಗಿ ಸರ್ದಾರ್ ಪಟೇಲ್ ನೇತೃತ್ವದ ಭಾರತದ ಗೃಹ ಇಲಾಖೆಗೆ ಕಾಶ್ಮೀರವನ್ನು ಭಾರತದ ಜೊತೆಗೆ ಸೇರಿಸಿಕೊಳ್ಳಲು ಹೆಚ್ಚಿಗೆ ಆಸಕ್ತಿ ಇರಲಿಲ್ಲ. ವಾಸ್ತವವಾಗಿ ಪಟೇಲರು ಪಾಕಿಸ್ತಾನದೊಂದಿಗಿನ ಮಾತುಕತೆಯಲ್ಲಿ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟು ಹೈದರಾಬಾದನ್ನು ಭಾರತಕ್ಕೆ ಬಿಟ್ಟುಕೊಡಬೇಕೆಂಬ ಪ್ರಸ್ತಾಪವನ್ನು ಮಾಡಿದ್ದರು.

ಇದರ ಜೊತೆಗೆ ಭಾರತದೊಂದಿಗೆ ವಿಲೀನಗೊಳ್ಳದಿರುವ ಆ ಸಂಸ್ಥಾನಗಳ ರಾಜರುಗಳ ತೀರ್ಮಾನವನ್ನು ನಿರಾಕರಿಸಿ ಅಲ್ಲಿ ಜನಮತಗಣನೆ ನಡೆಯಬೇಕೆಂಬ ಪ್ರಸ್ತಾವನೆಯನ್ನು ಇಟ್ಟಿದ್ದು ಪಟೇಲರ ನೇತೃತ್ವದ ಭಾರತವೇ. ಜುನಾಘಡ್ ಮತ್ತು ಹೈದರಾಬಾದ್ನಲ್ಲಿ ಬಹುಸಂಖ್ಯಾತರು ಹಿಂದೂಗಳೇ ಇದ್ದಿದ್ದರಿಂದ ಜನಮತಗಣನೆಯಾದರೆ ಜನರು ಭಾರತವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದು ಭಾರತದ ಆಳುವ ವರ್ಗಗಳ ನಿರೀಕ್ಷೆಯಾಗಿತ್ತು. ಆದರೆ ಅದೇ ತತ್ವವನ್ನು ಕಾಶ್ಮೀರಕ್ಕೆ ಅದರಲ್ಲೂ ಅಲ್ಲಿನ ಮುಸ್ಲಿಮರಿಗೆ ಅನ್ವಯಿಸಲು ಭಾರತ ಸಿದ್ಧವಿರದಿದ್ದುದರ ಹಿಂದೆ ಕಾಶ್ಮೀರವನ್ನು ಮತ್ತು ಕಾಶ್ಮೀರಿಗಳನ್ನು ಒಂದು ಸ್ವಾಯತ್ತ ರಾಷ್ಟ್ರೀಯತೆಯನ್ನಾಗಿ ಪರಿಗಣಿಸಲು ನಿರಾಕರಿಸುತ್ತಿದ್ದ ಸುಪ್ತ ಹಿಂದೂ ಸರ್ವಾಧಿಕಾರಿ ಮನಸ್ಥಿತಿಯಿತ್ತು.

ಆದರೆ ಜಮ್ಮು-ಕಾಶ್ಮೀರದ ರಾಜ ಹರಿಸಿಂಗ್ ಪ್ರತ್ಯೇಕವಾಗುಳಿಯುವ ತೀರ್ಮಾನ ಮಾಡಿದ್ದರೂ ಅದಕ್ಕೆ ತದ್ವಿರುದ್ಧವಾಗಿ ಅಲ್ಲಿನ ಬಹುಸಂಖ್ಯಾತ ಮುಸ್ಲಿಮ್ ರೈತಾಪಿ ಜನರು ಶೇಕ್ ಅಬ್ದುಲ್ಲಾ ಅವರ ನೇತೃತ್ವದಲ್ಲಿ ಭಾರತವನ್ನು ಸೇರಬೇಕೆಂದು ರಾಜನ ಮೇಲೆ ಒತ್ತಾಯ ಹಾಕುತ್ತಿದ್ದರು. ಅದೇ ಸಮಯದಲ್ಲಿ ಪಾಕಿಸ್ತಾನದ ಸರಕಾರದ ಬೆಂಬಲದೊಂದಿಗೆ ಗುಡ್ಡಗಾಡು ದಾಳಿಕೋರರು ಕಾಶ್ಮೀರದ ಮೇಲೆ ದಾಳಿ ಮಾಡಿದಾಗ ರಾಜ ಅನಿವಾರ್ಯವಾಗಿ ಭಾರತ ಸೈನ್ಯದ ಸಹಾಯ ಬೇಡಬೇಕಾಯಿತು. ಆ ಕಾರಣದಿಂದಲೇ 1947ರ ಅಕ್ಟೋಬರ್ 27ರಂದು ಭಾರತ ಸರಕಾರ ಮತ್ತು ರಾಜಾ ಹರಿಸಿಂಗ್ ನಡುವೆ ಸೇರ್ಪಡೆ ಒಪ್ಪಂದವಾಯಿತು.

ಸೇರ್ಪಡೆ ಒಪ್ಪಂದದ ಪ್ರಕಾರ ಕಾಶ್ಮೀರವು ಭಾರತಕ್ಕೆ ಸೇರಿಕೊಳ್ಳುತ್ತದೆ. ಆದರೆ ಕಾಶ್ಮೀರದ ಮೇಲೆ ಭಾರತ ಸರಕಾರದ ಅಧಿಕಾರ ಕೇವಲ ರಕ್ಷಣೆ, ವಿದೇಶಾಂಗ ಮತ್ತು ಸಂಪರ್ಕಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಇನ್ನುಳಿದ ಎಲ್ಲಾ ಅಧಿಕಾರಗಳು ಕಾಶ್ಮೀರದ ಜನ ರಚಿಸಿಕೊಳ್ಳುವ ಶಾಸನ ಸಭೆಗೆ ಸೇರಿರುತ್ತದೆ. ಕಾಶ್ಮೀರದ ಸಂವಿಧಾನ ಸಭೆ/ ಶಾಸನ ಸಭೆಯ ಒಪ್ಪಿಗೆ ಇಲ್ಲದೆ ಭಾರತವು ಇನ್ಯಾವುದೇ ಅಧಿಕಾರವನ್ನು ಕಾಶ್ಮೀರದ ಮೇಲೆ ಚಲಾಯಿಸುವಂತಿಲ್ಲ ಹಾಗೂ ಕಾಶ್ಮೀರದಲ್ಲಿ ಶಾಂತಿ ನೆಲೆಸಿದ ಮೇಲೆ ಕಾಶ್ಮೀರದ ಜನಾಭಿಪ್ರಾಯದ ಮೇರೆಗೇ ಈ ಒಪ್ಪಂದವನ್ನು ಶಾಶ್ವತಗೊಳಿಸಲಾಗುವುದು ಎಂಬುದು ಭಾರತ ಕೊಟ್ಟ ಆಶ್ವಾಸನೆಯಾಗಿತ್ತು ಹಾಗೂ ಆ ಸೇರ್ಪಡೆ ಒಪ್ಪಂದದ ತಾತ್ಪರ್ಯವೂ ಆಗಿತ್ತು.

ಭಾರತ ಸರಕಾರವು ರಾಜಾ ಹರಿಸಿಂಗ್ ಜೊತೆ ಈ ಒಪ್ಪಂದ ಮಾಡಿಕೊಳ್ಳುವಾಗ ಇಂದಿನ ಬಿಜೆಪಿಯ ಪಿತಾಮಹ ಶ್ಯಾಮ ಪ್ರಸಾದ್ ಮುಖರ್ಜಿ ಕೂಡಾ ಆಗ ಇದರ ಬಗ್ಗೆ ಚಕಾರವೆತ್ತಿರಲಿಲ್ಲ. ಇನ್ನು ಇಂದು ಬಿಜೆಪಿ ಆರಾಧಿಸುವ ಸರ್ದಾರ್ ವಲಭಭಾಯಿ ಪಟೇಲರೇ ಆ ಮಾತುಕತೆಯ ಒಟ್ಟಾರೆ ಉಸ್ತುವಾರಿ ವಹಿಸಿದ್ದರು.

ಆ ನಂತರದಲ್ಲಿ ಈ ಒಪ್ಪಂದವನ್ನು ಆರ್ಟಿಕಲ್ 370ರ (ಆಗ ಆರ್ಟಿಕಲ್ 306-ಎ) ರೂಪದಲ್ಲಿ ಭಾರತ ಸಂವಿಧಾನದಲ್ಲಿ ಸೇರಿಸುವ ಪ್ರಕ್ರಿಯೆ ಪ್ರಾರಂಭವಾಯಿತು. ಆ ಒಟ್ಟಾರೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದವರು ಕಾಶ್ಮೀರದ ರಾಜನಿಂದ ಕಾಶ್ಮೀರದ ತಾತ್ಕಾಲಿಕ ಸರಕಾರದ ಮುಖ್ಯಸ್ಥರಾದ ಶೇಕ್ ಅಬ್ದುಲ್ಲಾ ಮತ್ತು ಇತರರು ಹಾಗೂ ಭಾರತ ಪ್ರಭುತ್ವದ ಕಡೆಯಿಂದ ನೆಹರೂ, ಸರ್ದಾರ್ ವಲ್ಲಭಭಾಯಿ ಪಟೇಲ್, ಸಂವಿಧಾನ ರಚನಾ ಸಭೆಯ ಕರಡು ಸಮಿತಿಯ ಸದಸ್ಯರಾದ ಗೋಪಾಲ್ಸ್ವಾಮಿ ಅಯ್ಯಂಗಾರ್. ಇದರ ಬಹು ಪಾಲು ಚರ್ಚೆಗಳು ವಲ್ಲಭಭಾಯಿ ಪಟೇಲರ ಗೃಹ ಕಚೇರಿಯಲ್ಲೇ ನಡೆಯುತ್ತಿದ್ದವು.

(Article 370- A Constitutional History Of Jammu And Kasmir- A.G. Noorani)

ಒಪ್ಪಿತ ಕರಡನ್ನು ಗೋಪಾಲ್ಸ್ವಾಮಿ ಅಯ್ಯಂಗಾರ್ ಅವರು ೧೯೪೯ರ ಅಕ್ಟೋಬರ್ ೧೭ರಂದು ಸಂವಿಧಾನ ರಚನಾ ಸಭೆಯಲ್ಲಿ ಮಂಡಿಸಿದರು. ಅಂದು ಸಭೆಯಲ್ಲಿದ್ದ ಶ್ಯಾಮ ಪ್ರಸಾದ್ ಮುಖರ್ಜಿಯವರು ಅರ್ಧ ಮಾತಿನ ಆಕ್ಷೇಪಣೆಯನ್ನೂ ವ್ಯಕ್ತಪಡಿಸಲಿಲ್ಲ. ವಲ್ಲಭಭಾಯಿ ಪಟೇಲರೇ ಅದನ್ನು ಅನುಮೋದಿಸುವ ಚರ್ಚೆಯ ನಾಯಕತ್ವ ವಹಿಸಿದರು. ಅಂದು ಈ ಆರ್ಟಿಕಲ್ ಸೇರ್ಪಡೆ ಮಾಡಲು ನಮ್ಮ ಸಂವಿಧಾನ ಸಭೆಯು ತೆಗೆದುಕೊಂಡ ಸಮಯ ಅರ್ಧ ದಿನಕ್ಕಿಂತಲೂ ಕಡಿಮೆ! ಈ ಪ್ರಸ್ತಾಪವನ್ನು ವಿರೋಧಿಸಿದ್ದವರು ಸಂವಿಧಾನ ಸಭೆಯ ಕಮ್ಯುನಿಸ್ಟ್ ಸದಸ್ಯರಾಗಿದ ಹಝರತ್ ಮೊಹಾನಿ. ಅವರ ಆಕ್ಷೇಪಣೆ ಇದ್ದದ್ದು ಕಾಶ್ಮೀರಕ್ಕೆ ವಿಶೇಷ ಮಾನ್ಯತೆ ಕೊಟ್ಟಿದ್ದರ ಬಗ್ಗೆ ಅಲ್ಲ. ಬದಲಿಗೆ ಭಾರತದ ಎಲ್ಲಾ ರಾಜ್ಯಗಳಿಗೂ ಅದೇ ಬಗೆಯ ವಿಕೇಂದ್ರೀಕೃತ ಅಧಿಕಾರ ಕೊಡಬೇಕೆಂಬುದಾಗಿತ್ತು. ಅವರು ಭಾರತವು ಯುನೈಟೆಡ್ ಸೊಷಿಯಲಿಸ್ಟ್ ರಿಪಬ್ಲಿಕ್ ಅಫ್ ಇಂಡಿಯಾ ಆಗಬೇಕೆಂದು ಕನಸು ಕಂಡಿದ್ದರು.

(ಇವೆಲ್ಲವೂ ಸಂವಿಧಾನ ಸಭೆಯ ನಡಾವಳಿಯಲ್ಲಿ ದಾಖಲುಗೊಂಡಿದ್ದು ಆಸಕ್ತರು ಈ ವೆಬ್ ವಿಳಾಸದಲ್ಲಿ ಇದನ್ನು ಪರಿಶೀಲಿಸಬಹುದು: http://164.100.47.194/loksabha/writereaddata/cadebatefiles/C17101949.html)

ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಕಾಶ್ಮೀರದ ಜನರು ಭಾರತಕ್ಕೆ ವಹಿಸಿಕೊಟ್ಟ ವಿದೇಶಾಂಗ, ರಕ್ಷಣೆ ಮತ್ತು ಹಣಕಾಸು ವಿಚಾರಗಳನ್ನು ಬಿಟ್ಟರೆ ಮಿಕ್ಕೆಲ್ಲಾ ವಿಷಯಗಳ ಬಗ್ಗೆ ಸಾರ್ವಭೌಮಿ ಅಧಿಕಾರವನ್ನು ಹೊಂದಿರುತ್ತಾರೆ. ಅದನ್ನು ನಿರ್ವಹಿಸಲು ತಮ್ಮದೇ ಆದ ಸಂವಿಧಾನ ಸಭೆಯನ್ನು ರಚಿಸಿಕೊಂಡು ಅದರ ಮೂಲಕ ತಮ್ಮದೇ ಆದ ಸಂವಿಧಾನವನ್ನು ರಚಿಸಿಕೊಳ್ಳುತ್ತಾರೆ ಎಂಬುದು ಸಹ ಆ ಒಪ್ಪಂದದ ಸಾರಾಂಶ ಮತ್ತು ಆರ್ಟಿಕಲ್ 370 ಇರಬೇಕೋ ಅಥವಾ ಅದರ ಬದಲಿಗೆ ಭಾರತದೊಂದಿಗೆ ಯಾವ ಸಾಂವಿಧಾನಿಕ ಸಂಬಂಧವನ್ನು ಹೊಂದಿರಬೇಕೆಂಬುದರ ತೀರ್ಮಾನವನ್ನು ಕಾಶ್ಮೀರಿಗಳ ಶಾಸನ ಸಭೆಯೇ ತೀರ್ಮಾನಿಸಬೇಕಿತ್ತು ಹೊರತು ಭಾರತ ಸಂಸತ್ತೂ ಅಲ್ಲ. ಭಾರತದ ರಾಷ್ಟ್ರಪತಿಯೂ ಅಲ್ಲ.

ಆರ್ಟಿಕಲ್ 370-ವಿಶ್ವಾಸದ್ರೋಹ ಮಾಡಿದ ಭಾರತ ಸರಕಾರಗಳು

ಆದರೆ ವಾಸ್ತವವಾಗಿ ನಡೆದದ್ದೇ ಬೇರೆ. 1953ರಲ್ಲಿ ಕಾಶ್ಮೀರಿಗಳು ಒಂದು ಸಂವಿಧಾನ ಸಭೆ ರಚಿಸಿಕೊಂಡರು. ಆದರೆ ಕಾಶ್ಮೀರಿಗಳ ಪ್ರಶ್ನಾತೀತ ನಾಯಕರಾಗಿದ್ದ ಶೇಕ್ ಅಬ್ದುಲ್ಲಾ ಕಾಂಗ್ರೆಸ್ನ ಬದ್ಧತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರಿಂದ ನೆಹರೂ ಸರಕಾರ ಅವರನ್ನು ಸೆರೆಗೆ ದೂಡಿತು. 1957ರಲ್ಲಿ ಕಾಶ್ಮೀರದ ಸಂವಿಧಾನ ಸಭೆ ಆರ್ಟಿಕಲ್ 370 ಮುಂದಿನ ತೀರ್ಮಾನದವರೆಗೆ ಮುಂದುವರಿಯುತ್ತದೆ ಎಂದು ತೀರ್ಮಾನ ಮಾಡಿತು. ಆದರೆ ಮುಂದಿನ ಸಭೆಯಾಗುವ ಮುಂಚೆ ಸಂವಿಧಾನ ಸಭೆಯೇ ಬರ್ಖಾಸ್ತ್ ಆಗುವಂತೆ ಭಾರತ ನೋಡಿಕೊಂಡಿತು. ಹೀಗಾಗಿ ಆರ್ಟಿಕಲ್ 370ರ ಭವಿಷ್ಯದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಸಾಂವಿಧಾನಿಕ ಅಧಿಕಾರ ಹೊಂದಿದ್ದ ಏಕೈಕ ಸಂಸ್ಥೆಯಾಗಿದ್ದ ಕಾಶ್ಮೀರದ ಸಾಂವಿಧಾನಿಕ ಸಭೆಯೇ ಇಲ್ಲದಂತಾಯಿತು.

ಇದರ ಜೊತೆಗೆ ಸರಕಾರವೂ 1953ರಿಂದ ಮಾಡುತ್ತಾ ಬಂದ ವಂಚನೆಯಿಂದಾಗಿ ಏಳನೇ ಶೆಡ್ಯೂಲಿನಲ್ಲಿ ಕೇಂದ್ರದ ಪಟ್ಟಿಯಲ್ಲಿರುವ 97 ವಿಷಯಗಳಲ್ಲಿ 94 ವಿಷಯಗಳು ಈಗಾಗಲೇ ಕಾಶ್ಮೀರಕ್ಕೆ ಅನ್ವಯವಾಗುತ್ತಿದೆ. ಸಮವರ್ತಿ ಪಟ್ಟಿಯಲ್ಲಿರುವ 47 ವಿಷಯಗಳಲ್ಲಿ 27 ವಿಷಯಗಳಲ್ಲಿ ಕೇಂದ್ರದ ಶಾಸನವೇ ಕಾಶ್ಮೀರಕ್ಕೂ ವರ್ತಿಸುತ್ತದೆ. ಹಾಗೆಯೇ ಭಾರತದ ಸಂವಿಧಾನದಲ್ಲಿರುವ 395 ಕಲಮುಗಳಲ್ಲಿ 260 ಕಲಮುಗಳು ಕಾಶ್ಮೀರಕ್ಕೆ ಅನ್ವಯವಾಗುತ್ತಿವೆ. ಬಾಕಿ 135 ಕಲಮುಗಳು ಈಗಾಗಲೇ ಕಾಶ್ಮೀರದ ಸಂವಿಧಾನದಲ್ಲಿದ್ದವು. ಹೀಗಾಗಿ ಕಾಶ್ಮೀರದಲ್ಲಿದ್ದದ್ದು ಪ್ರಾಣವನ್ನು ಕಳೆದುಕೊಂಡ ಆರ್ಟಿಕಲ್ 370 ಮಾತ್ರ. ಬಿಜೆಪಿ 2019ರಲ್ಲಿ ಆರ್ಟಿಕಲ್ 370 ಅನ್ನು ರದ್ದುಗೊಳಿಸುವ ಮೂಲಕ ಆ ಅಸ್ಥಿಪಂಜರವನ್ನು ಹೊಡೆದು ಪುಡಿ ಮಾಡಿದೆ.

ಇದು ಭಾರತದ ಶಾಸಕಾಂಗ ಮತ್ತು ಕಾರ್ಯಾಂಗಗಳು ಭಾರತದ ಸಂವಿಧಾನವು ಕಾಶ್ಮೀರಿಗಳಿಗೆ ಕೊಟ್ಟ ಭರವಸೆಗೆ ಮಾಡುತ್ತಾ ಬಂದ ದ್ರೋಹ. ಅಂದರೆ ಭಾರತದ ಸಂವಿಧಾನಕ್ಕೇ ಮಾಡಿದ ದ್ರೋಹ. ಈ ದ್ರೋಹವನ್ನು ಹಿಂದಿನ ಕಾಂಗ್ರೆಸ್ ಮತ್ತಿತರ ಸರಕಾರಗಳು ಹಂತಹತವಾಗಿ ಮಾಡುತ್ತಾ ಬಂದಿದ್ದರೆ ಬಿಜೆಪಿ ಸರಕಾರ ಸರ್ಜಿಕಲ್ ಸ್ಟ್ರೈಕ್ ಮಾಡಿ ಆರ್ಟಿಕಲ್ 370ನ್ನೇ ರದ್ದುಗೊಳಿಸಿದೆ.

ಸುಪ್ರೀಂ ವಿಶ್ವಾಸದ್ರೋಹ

ಆದರೆ ಭಾರತದ ಸಂವಿಧಾನವನ್ನು ಮತ್ತದರ ಘನತೆಯನ್ನು ಎತ್ತಿಹಿಡಿಯಬೇಕಿದ್ದ ನ್ಯಾಯಾಂಗ-ಸುಪ್ರೀಂ ಕೋರ್ಟ್ ಸರಕಾರಗಳು ಮಾಡಿದ ಈ ವಿಶ್ವಾಸ ದ್ರೋಹವನ್ನು ಮತ್ತು ಸಂವಿಧಾನ ದ್ರೋಹವನ್ನು ಸರಿಪಡಿಸಬೇಕಿತ್ತಲ್ಲವೇ?

ಅದರ ಬದಲಿಗೆ ಸುಪ್ರೀಂ ಕೋರ್ಟ್ ಭಾರತದ ಪ್ರಭುತ್ವದ ಇತರ ಅಂಗಸಂಸ್ಥೆಗಳು ಕಾಶ್ಮೀರಕ್ಕೆ ಮಾಡಿದ್ದ ಎಲ್ಲಾ ಅನ್ಯಾಯವನ್ನು ಸಕ್ರಮವೆಂದು ಎತ್ತಿಹಿಡಿದು ಭಾರತ ಸಂವಿಧಾನದ ಘನತೆಯನ್ನು ಕೆಳಗಿಳಿಸಿದೆ.

ಆರ್ಟಿಕಲ್ 370 ತಾತ್ಕಾಲಿಕ ಕ್ರಮವಾಗಿತ್ತು ಎಂಬ ಸರಕಾರದ ತಾಂತ್ರಿಕ ವಾದವನ್ನು ಆರ್ಟಿಕಲ್ 370ರ ಸಾರವನ್ನು ನಾಶಮಾಡಿದೆಯೆಂಬುದನ್ನು ಸುಪ್ರೀಂ ಗಮನಿಸಿಯೇ ಇಲ್ಲ. ಏಕೆಂದರೆ ಆರ್ಟಿಕಲ್ 370ರ ಸಾರ ಕಾಶ್ಮೀರಿಗಳ ಸ್ವಾಯತ್ತತೆಯನ್ನು ಭಾರತವು ಆಕ್ರಮಿಸಬಾರದೆಂಬ ಭರವಸೆ. ಏಕೆಂದರೆ ಇತರ ಸಂಸ್ಥಾನಗಳು ಭಾರತದಿಂದ ಯಾವುದೇ ವಿಶೇಷ ಸಾಂವಿಧಾನಿಕ ಭರವಸೆಯನ್ನು ಪಡೆದುಕೊಳ್ಳದೆ ಅಲ್ಲಿಯ ರಾಜರು ಭಾರತದೊಂದಿಗೆ ಮಾಡಿಕೊಂಡ ಒಪ್ಪಂದದ ಮೇರೆಗೆ ಭಾರತದ ಅವಿಭಾಜ್ಯ ಅಂಗವಾದರು. ಆದರೆ ಕಾಶ್ಮೀರ ಭಾರತದ ಭಾಗವಾಗಿದ್ದು ವಿದೇಶಾಂಗ, ರಕ್ಷಣೆ ಮತ್ತು ಹಣಕಾಸು ಹೊರತುಪಡಿಸಿ ಮಿಕ್ಕೆಲ್ಲಾ ವಿಷಯಗಳ ಮೇಲೆ ಕಾಶ್ಮೀರಿ ಜನರ ಸಾರ್ವಭೌಮತೆಯ ಶರತ್ತಿನ ಮೇಲೆ. ಹೀಗಾಗಿ ಆರ್ಟಿಕಲ್ 370 ತಾತ್ಕಾಲಿಕವೇ ಹೊರತು ಈ ಶರತ್ತುಗಳಲ್ಲ. ಆದರೆ ಸುಪ್ರೀಂ ಇದನ್ನು ಸಂಪೂರ್ಣವಾಗಿ ಅವಗಣನೆ ಮಾಡಿದೆ.

ಎರಡನೆಯದಾಗಿ ಆರ್ಟಿಕಲ್ 370 ಮತ್ತದರ ಶರತ್ತುಗಳು ಬೇಡವೆಂದು ತೀರ್ಮಾನಿಸುವ ಮತ್ತು ಭಾರತದ ಸಂವಿಧಾನದ ಸಂಪೂರ್ಣ ಸಾರ್ವಭೌಮತೆಯನ್ನು ಒಪ್ಪಿಕೊಳ್ಳುವ ಅಧಿಕಾರ ಯಾರದು? ಅದು ಕಾಶ್ಮೀರಿ ಜನತೆಯದ್ದೇ ಹೊರತು ಭಾರತದ ಸಂಸತ್ತಿನದ್ದಲ್ಲ. ಏಕೆಂದರೆ ಆರ್ಟಿಕಲ್ 370 ತಾತ್ಕಾಲಿಕವೇ ಆದರೂ ಅದನ್ನು ರದ್ದುಗೊಳಿಸಿ ಭಾರತದೊಂದಿಗೆ ಹೊಸ ಸಂಬಂಧವನ್ನು ಕಟ್ಟಿಕೊಳ್ಳುವ ಅಧಿಕಾರ ಇದ್ದದ್ದು ಕಾಶ್ಮೀರದ ಸಂವಿಧಾನ ಸಭೆಗೆ ಅರ್ಥಾತ್ ಕಾಶ್ಮೀರದ ಜನತೆಯ ಪರಮಾಧಿಕಾರಕ್ಕೆ ಮಾತ್ರ ಆ ಅಧಿಕಾರವಿದೆ. ಅದು ಕಾಶ್ಮೀರದ ಸಂವಿಧಾನ ಸಭೆಯನ್ನು ಹೊರತುಪಡಿಸಿ ಕಾಶ್ಮೀರದ ಚುನಾಯಿತ ರಾಜ್ಯ ಶಾಸನಸಭೆಗೂ ಇಲ್ಲ. ಆದರೆ ಕಾಶ್ಮೀರ ಸಂವಿಧಾನ ಸಭೆ ರದ್ದಾಗಿದ್ದರಿಂದ ಮತ್ತು ಅದು ತಾತ್ಕಾಲಿಕವಾಗಿದ್ದರಿಂದ ಹಾಗೂ ಭಾರತದೊಂದಿಗೆ ವಿಲೀನವಾದ ಮೇಲೆ ಕಾಶ್ಮೀರಕ್ಕೆ ತನ್ನದೇ ಇತರ ವಿಷಯಗಳ ಮೇಲೂ ಸಾರ್ವಭೌಮತೆ ಇರುವುದಿಲ್ಲವಾದ್ದರಿಂದ ಭಾರತದ ರಾಷ್ಟ್ರಪತಿ ಅದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಬಹುದು ಎಂದು ವ್ಯಾಖ್ಯಾನಿಸುವ ಮೂಲಕ ಭಾರತದ ಸುಪ್ರೀಂ ಕೋರ್ಟ್ ಎತ್ತಿಹಿಡಿದದ್ದು ಪ್ರಜಾತಂತ್ರವನ್ನಲ್ಲ. ವಸಾಹತುಶಾಹಿ ಧೋರಣೆಯನ್ನು ಮತ್ತು ಸರ್ವಾಧಿಕಾರವನ್ನು.

ಹಾಗೆಯೇ ಒಂದು ಪ್ರಜಾತಂತ್ರ ಪ್ರಭುತ್ವವು ತನ್ನೊಳಗೆ ವಿಲೀನವಾಗುವಂತಹ ತೀರ್ಮಾನವನ್ನು ಒಂದು ಪ್ರದೇಶದ ದೊರೆಗಳಿಗಿಂತ ಆ ಪ್ರದೇಶದ ಜನರು ತೆಗೆದುಕೊಳ್ಳುವುದು ಹೆಚ್ಚು ಸಾರ್ವಭೌಮಿ ಮತ್ತು ಹೆಚ್ಚು ಮಾನ್ಯ ಎಂದು ತಾನೇ ಭಾವಿಸಬೇಕು? ಪಟೇಲರ ನೇತೃತ್ವದಲ್ಲಿ ಭಾರತವೂ ಜುನಾಘಡ್ ಹಾಗೂ ಹೈದರಾಬಾದಿನಲ್ಲಿ ಅದನ್ನು ತಾನೇ ಆಗ್ರಹಿಸಿದ್ದು? ಅದನ್ನು ತಾನೇ ನೆಹರೂ ಕಾಶ್ಮೀರಕ್ಕೂ ಭರವಸೆ ನೀಡಿದ್ದು? ಆದರೆ ಒಂದೆಡೆ ಕಾಶ್ಮೀರದ ಸಂವಿಧಾನ ಸಭೆ ಭಾರತದೊಂದಿಗೆ ಸಂಪೂರ್ಣ ವಿಲೀನಗೊಳ್ಳಲು ಯಾವುದೇ ತೀರ್ಮಾನ ತೆಗೆದುಕೊಂಡಿರಲಿಲ್ಲ ಎಂಬ ಸತ್ಯ ಎದುರಿಗಿದ್ದರೂ, ‘‘ಭಾರತದೊಂದಿಗೆ ಸಂಪೂರ್ಣ ವಿಲೀನಗೊಳ್ಳಲು ನಮ್ಮ ಒಪ್ಪಿಗೆ ಇದೆ’’ ಎಂದು ಆಗಿನ ಕಾಶ್ಮೀರದ ಯುವರಾಜ ಕರಣ್ ಸಿಂಗ್ ಕೊಟ್ಟ ಹೇಳಿಕೆಯನ್ನು ಮೋದಿ ಸರಕಾರ ತನ್ನ ವಂಚಕ ತಂತ್ರದ ಭಾಗವಾಗಿ ಮುಂದಿಟ್ಟರೆ ಭಾರತದ ಸುಪ್ರೀಂ ಕೋರ್ಟ್ ಅದನ್ನು ಮಾನ್ಯ ಮಾಡಿಬಿಟ್ಟಿತು.

ಭಾರತದೊಂದಿಗೆ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕೊಡುವ ಆರ್ಟಿಕಲ್ 370ರ ಅಗತ್ಯ ಈಗ ಇಲ್ಲ ಎಂಬುದಕ್ಕೆ ಸುಪ್ರೀಂ ಕೊಡುವ ಮತ್ತೊಂದು ಕಾರಣ ಹೇಗಿದ್ದರೂ ಕಳೆದ 75 ವರ್ಷಗಳಲ್ಲಿ ಭಾರತದ ಸಂವಿಧಾನದ ಹೆಚ್ಚು ಹೆಚ್ಚು ಕಲಂಗಳು ಅನ್ವಯಗೊಂಡಿವೆ ಎಂಬುದು. ಈ ಹಿಂದಿನ ಸರಕಾರಗಳು ಅತ್ಯಂತ ಅಪ್ರಜಾತಾಂತ್ರಿಕವಾಗಿ ಹಾಗೂ ಸಂವಿಧಾನ ಬಾಹಿರವಾಗಿ ಅಲ್ಲಿ ಅನ್ವಯಿಸಿವೆ ಎಂಬ ಚಾರಿತ್ರಿಕ ಸಂಗತಿಗಳನ್ನು ಸುಪ್ರೀಂ ಬೇಕೆಂತಲೇ ಗಮನಕ್ಕೆ ತೆಗೆದುಕೊಳ್ಳಲಿಲ್ಲ. ಹೇಗಿದ್ದರೂ ಮಾರಣಾಂತಿಕ ಗಾಯವಾಗಿದೆ, ಆಕ್ಸಿಜನ್ ಸಿಲಿಂಡರ್ ಕೊಟ್ಟರೂ ಬದುಕುವುದು ಕಷ್ಟ ಹಾಗಿದ್ದ ಮೇಲೆ ಸಾಯಿಸುವುದೇ ಸರಿ ಎಂಬ ತರ್ಕ ಒಂದು ಪ್ರಜಾತಂತ್ರದ ಘನತೆಯನ್ನು ಉಳಿಸುವುದೇ?

ಹಾಗೂ ಅಂತಿಮವಾಗಿ ಈ ಮೊದಲೇ ಹೇಳಿದಂತೆ ಭಾರತಕ್ಕೆ ಸೇರಿದ ಯಾವುದೇ ರಾಜ್ಯಗಳ ಮೇಲೆ ಯಾವುದೇ ರೀತಿಯ ಪರಮಾಧಿಕಾರ ಕೇಂದ್ರಕ್ಕಿದೆ ಎಂಬಂತಹ ತೀರ್ಪನ್ನು ಕೊಡುವ ಮೂಲಕ ಸುಪ್ರೀಂ ಕಾಶ್ಮೀರದ ಮೇಲೆ ಭಾರತ ಸರಕಾರ ನಡೆಸುತ್ತಿರುವ ದೌರ್ಜನ್ಯವನ್ನು ಎತ್ತಿಹಿಡಿದದ್ದು ಮಾತ್ರವಲ್ಲದೆ ಇತರ ರಾಜ್ಯಗಳಿಗೂ ವಿಸ್ತರಿಸಿದೆ.

ಇದು ಭಾರತದ ಪ್ರಜಾತಂತ್ರಕ್ಕೆ ಮಾರಕ. ಹಿಂದುತ್ವ ಸರ್ವಾಧಿಕಾರಿ ರಾಷ್ಟ್ರ ನಿರ್ಮಾಣಕ್ಕೆ ಅನುಕೂಲಕಾರಿ. ಈ ಹಿಂದೆ ದೇಶದ ಹಂದರವನ್ನೇ ನಾಶ ಮಾಡಿದ ಬಾಬರಿ ಮಸೀದಿ ಪ್ರಕರಣದಲ್ಲೂ ಸುಪ್ರೀಂ ಭಾರತದ ಸಂವಿಧಾನ ವನ್ನು ಸೋಲಿಸಿತು. ಕಾಶ್ಮೀರದ ಪ್ರಕರಣಕ್ಕೂ ಅದಕ್ಕೂ ಸಾಕಷ್ಟು ಸಾಮ್ಯತೆಗಳಿವೆ.

ಕಾಶ್ಮೀರ ಮತ್ತು ಬಾಬರಿ ತೀರ್ಪುಗಳ ಸಾಮ್ಯತೆಗಳು

ಕಾಕತಾಳೀಯವಲ್ಲ!

ಬಾಬರಿ ಮಸೀದಿ ತೀರ್ಪು:

ಮಸೀದಿ ಕೆಡವಿದ್ದು ತಪ್ಪು. ಮಸೀದಿ ಕೆಳಗೆ ಮಂದಿರವಿರಲಿಲ್ಲ.

ಆದರೆ ಬಹುಸಂಖ್ಯಾತರ ನಂಬಿಕೆಗಳಿಗೆ ಪುರಾವೆ ಬೇಕಿಲ್ಲವಾದ್ದರಿಂದ ಕೆಡವಿದ ಮಸೀದಿಯ ಮೇಲೆ ಮಂದಿರ ಕಟ್ಟಬಹುದು.

ಆರ್ಟಿಕಲ್ 370 ತೀರ್ಪು:

ಆರ್ಟಿಕಲ್ 307 ಕೊಡುವ ಅಧಿಕಾರ ಬಳಸಿಕೊಂಡು ಆರ್ಟಿಕಲ್ 370 ನ್ನು ರದ್ದು ಮಾಡಬಹುದಾದ ತಿದ್ದುಪಡಿ ಮಾಡಿರುವುದು ಸರಿಯಲ್ಲ.

ಆದರೆ ಅದೇ ತಿದ್ದುಪಡಿಯನ್ನು ಬಳಸಿಕೊಂಡು ಆರ್ಟಿಕಲ್ ೩೭೦ ರದ್ದು ಮಾಡಿದ್ದು ಸರಿ!!!


ಸಾಂವಿಧಾನಿಕ ಪೀಠ:

ಬಾಬರಿ ಮಸೀದಿ ಹಾಗೂ ಆರ್ಟಿಕಲ್ ೩೭೦ ರದ್ದು ಪ್ರಕರಣದ ವಿಚಾರಣೆ ನಡೆಸಿದ ಎರಡೂ ಸಾಂವಿಧಾನಿಕ ಪೀಠಗಳು ಹಾಲಿ ಮತ್ತು ಸರದಿಯಲ್ಲಿದ್ದ ಭಾವಿ ಮುಖ್ಯ ನ್ಯಾಯಾಧೀಶರುಗಳನ್ನು ಒಳಗೊಂಡ ಪೀಠಗಳಾಗಿದ್ದವು.

ಮತ್ತು ಎರಡೂ ತೀರ್ಪುಗಳು ಸರ್ವ ಸಮ್ಮತ ತೀರ್ಪುಗಳಾಗಿದ್ದವು. ಅರ್ಥಾತ್ ಎರಡೂ ವಿಷಯಗಳ ಬಗ್ಗೆ ಆ ತೀರ್ಪುಗಳು ಭಾರತದ ಪ್ರಭುತ್ವ ಕೊಟ್ಟಿರುವ ಅತ್ಯುಚ್ಚ ಹಾಗೂ ಅಂತಿಮ ಎಂಬ ಎಚ್ಚರಿಕೆಯ ಆದೇಶವನ್ನು ಹೊಂದಿದ್ದವು. ಎರಡೂ ಅನ್ಯಾಯಯುತ ತೀರ್ಪುಗಳ ಮುಖ್ಯ ರೂವಾರಿ ಹಾಲಿ ಮುಖ್ಯ ನ್ಯಾಯಾಧೀಶ ನ್ಯಾ. ಚಂದ್ರಚೂಡ್ ಅವರೇ.

ಆದ್ದರಿಂದಲೇ ಉನ್ನತ ನ್ಯಾಯಾಂಗದ ಈ ಆಳುವ ವರ್ಗದ ಪರವಾದ ಧೋರಣೆ ಕಾಕತಾಳೀಯವೂ ಅಲ್ಲ...ಪ್ರಜಾತಾಂತ್ರಿಕವೂ ಅಲ್ಲ.. ಅದು ಭಾರತದ ಉನ್ನತ ನ್ಯಾಯಾಂಗ ಸಂವಿಧಾನದ ರಕ್ಷಕನಾಗುವ ಬದಲಿಗೆ ಹಿಂದೂ ರಾಷ್ಟ್ರ ಸಾಧನವಾಗುತ್ತಿದೆ ಎಂಬುದರ ಮುನ್ಸೂಚನೆಯನ್ನು ಕೊಡುತ್ತಿದೆ. ಹೀಗಾಗಿ ಈ ದೇಶದ ಸಂವಿಧಾನದ ಮಾಲಕರಾದ ‘‘ನಾವು ಈ ದೇಶದ ಜನರೇ’’ ಈ ಪ್ರಜಾತಂತ್ರವನ್ನು ನ್ಯಾಯವನ್ನು ಉಳಿಸಲು ಮುಂದಾಗಬೇಕಿದೆ. ಹೊಸ ಭಾರತ ಕಟ್ಟುವ ಮೂಲಕ. ಜನರ ಭಾರತ ಕಟ್ಟುವ ಮೂಲಕ..

ಅಂದಹಾಗೆ, ನ್ಯಾಯಾಂಗವನ್ನೂ ಒಳಗೊಂಡಂತೆ ಪ್ರಭುತ್ವ ಎನ್ನುವುದು ಆಳುವ ವರ್ಗದ ದಮನದ ಸಾಧನ ಎಂದು ಕಾರ್ಲ್ ಮಾರ್ಕ್ಸ್ ಎಂಬ ಮುದುಕ ತುಂಬ ಹಿಂದೆಯೇ ಹೇಳಿದ್ದನಲ್ಲವೇ?

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ಶಿವಸುಂದರ್,

contributor

Similar News