ಇದು ಬರೀ ಜಲಗೆರೆಯಲ್ಲ, ಪ್ರಕೃತಿಯೇ ಬರೆದ ಲಕ್ಷ್ಮಣ ರೇಖೆ!
ಮಹಾಮಳೆಯ ಕೆಂಪು ನೀರು ಮನೆಯ ಒಳಗಡೆಯ ಗೋಡೆಯ ಮೇಲೆ ಸೃಷ್ಟಿಸಿದ ಜಲಗೆರೆ ಆ ಮನೆಯ ಒಳಗಡೆ ಬದುಕುವವರ ಪಾಲಿಗೆ ಲಕ್ಷ್ಮಣ ರೇಖೆಯೂ ಹೌದು. ನಮ್ಮ ಹಳ್ಳಿಗಳಲ್ಲಿ 80-90 ವರ್ಷದ ಅಜ್ಜಂದಿರು ತಮ್ಮ ಜನ್ಮ ವರ್ಷಗಳನ್ನು ನೆನಪಿಟ್ಟುಕೊಂಡದ್ದು ಇಂಥದ್ದೇ ಪ್ರಳಯ ರೇಖೆಗಳಿಂದ. ನಮ್ಮಜ್ಜಿ ಹೇಳುತ್ತಿದ್ದದ್ದು ನನಗೆ ಇವತ್ತಿಗೂ ನೆನಪಿದೆ. ನನ್ನಮ್ಮ ಹುಟ್ಟಿದ್ದು ನಮ್ಮ ಊರಿನ ಹೊಳೆ ತುಂಬಿ ಹರಿದು ಕೊಳ್ಳದ ನೀರು ದೇವರಮಾರು ಗದ್ದೆಗೆ ಹರಿದ ವರ್ಷವಂತೆ. ಅದೇ ನನ್ನಮ್ಮನ ಡೇಟ್ ಆಫ್ ಬರ್ತ್. ಸುನಾಮಿ, ಬಿರುಗಾಳಿ, ಚಂಡಮಾರುತ, ಬರಗಾಲ, ಭೂಕಂಪಗಳೆಲ್ಲ ನಮ್ಮೊಳಗಡೆ ಬಿಟ್ಟು ಹೋಗುವ ಕಥೆಗಳು ಬಹುಕಾಲ ಬದುಕುತ್ತವೆ, ಎಚ್ಚರಗಳಾಗುತ್ತವೆ. ಕಾಲಮೀರದಂತೆ ಕಾಡುತ್ತವೆ.
ಯುದ್ಧದ ಹಾಗೆಯೇ ಮಳೆಯೂ ಕೂಡ ಲೋಕ ಮಲಗಿರುವಾಗ ಮಧ್ಯರಾತ್ರಿ ಸುರಿದು ಎಚ್ಚರಿಸಿ ಕಕ್ಕಾಬಿಕ್ಕಿಗೊಳಿಸುತ್ತದೆ. ಬೆಂಗಳೂರಿನ ಗೀತಾ ಮೇಡಂ ಮುಂದಿನ ತಿಂಗಳು ಮದುವೆ ಇದೆಯೆಂದು ಲಕ್ಷಾಂತರ ವೆಚ್ಚ ಮಾಡಿ ಮನೆಗೆ ಸುಣ್ಣ ಬಣ್ಣ ಬಳಿಸಿದ್ದರು. ಆಮಂತ್ರಣ ಪತ್ರಿಕೆ, ಒಡವೆ, ವಸ್ತ್ರ ಎಲ್ಲವನ್ನೂ ಖರೀದಿಸಿ ದೇವರ ಕೋಣೆಯಲ್ಲಿ ಇರಿಸಿ ಕೈಮುಗಿದು ಮಲಗಿದ್ದರು. ಬೆಳಗ್ಗೆದ್ದು ನೋಡುವಾಗ ಅವೆಲ್ಲವೂ ಚಂಡಿಪುಂಡಿ ಗುಂಪಿಯಾಗಿದೆ. ಬರೀ ಮಳೆ ನೀರಾಗಿದ್ದರೆ ಪರವಾಗಿಲ್ಲ, ರಾಜ ಕಾಲುವೆಯ ಕೊಚ್ಚೆ ನೀರು ಮದುವೆ ಮನೆ ತುಂಬಾ ತುಂಬಿಕೊಂಡು ಕೊಳಕು ವಾಸನೆ ಅಡರಿದೆ.
ಇದು ಬೆಂಗಳೂರಿನ ಬರೀ ಒಂದು ಮನೆ, ಒಂದು ಕೇರಿ, ಗಲ್ಲಿಯ ಕಥೆಯಲ್ಲ. ಸಾವಿರಾರು ಮನೆ ಮನೆಗಳ ವ್ಯಥೆ. ಯಾವುದೋ ಮನೆಯ ನಾಯಿ ನೀರೊಳಗೆ ಅರ್ಧ ತೊಯ್ದು ಬೊಬ್ಬಿಟ್ಟಾಗ ಆ ಮನೆಯವರೆಲ್ಲ ಎಚ್ಚರಗೊಂಡು ಬಾಗಿಲು ತೆರೆದಿದ್ದಾರೆ. ಒಳ ನುಗ್ಗಿದ ರಭಸದ ನೀರು, ಯಾರದೋ ಟಾಯ್ಲೆಟ್‌ನಿಂದ ಎದ್ದು ಬಂದ ಮಲಮೂತ್ರ ಮನೆಯನ್ನು ಕೊಳೆಕಸದ ಚರಂಡಿ ಮಾಡಿದೆ. ಆ ಕಡೆ ನಾಯಿಯೂ ಸತ್ತಿದೆ!
ಇಂಥ ನೂರು ದೃಶ್ಯನೋವುಗಳು ರಾಜಧಾನಿಯಲ್ಲಿ ಮೊದಲ ಮಳೆಗೆ ಆದ್ಯಂತ ತೆರೆದುಕೊಂಡಿದೆ. ಒಂದು ಕಡೆ ನಿದ್ದೆ ಇಲ್ಲ, ಶುದ್ಧ ನೀರಿಲ್ಲ, ಅನ್ನವಿಲ್ಲ, ಬಂದು ಕೇಳುವವರಿಲ್ಲ. ಬಳಗದ ಮಕ್ಕಳು ಹಿರಿಯರನ್ನು ಹೊತ್ತು ಬಂಧುಗಳ ಮನೆ ಸೇರಿಕೊಳ್ಳುವ ಎಂದರೆ ಮನೆ ಮುಂದಿನ ರಸ್ತೆಯೇ ಮುಳುಗಿಹೋಗಿದೆ. ನೀರಿಲ್ಲದ ಎತ್ತರದ ಮಾರ್ಗದಲ್ಲೆ ಲ್ಲ ವಾಹನಗಳು ಮುಗಿಬಿದ್ದಿವೆ.ಜನ ಅಯ್ಯೋ ಒಮ್ಮೆ ಮಳೆ ಹೋದರೆ ಸಾಕಪ್ಪ ಎಂದು ಮುಗಿಲಿನ ಕಡೆಗೆ ಕೈಯೊಡ್ಡಿ ವಿನಂತಿಸುವ ಸ್ಥಿತಿಯಲ್ಲಿದ್ದಾರೆ.
ನಿಜವಾಗಿಯೂ ಬೆಂಗಳೂರಿನಲ್ಲಿ ಮೊನ್ನೆ ಮೊನ್ನೆ ನಮ್ಮ ಮಲೆನಾಡು-ಕರಾವಳಿಯಲ್ಲಿ ವಾರ ಸುರಿಯುವಷ್ಟು ಬೀಸು ಮಳೆ ಬಂದೇ ಇಲ್ಲ, ಎಡೆಬಿಡದೆ ತಲೆ ಹೊರಗಿಡದಷ್ಟು ವಾರಗಟ್ಲೆ ಅಲ್ಲಿ ಮಳೆ ಬರುವುದೂ ಇಲ್ಲ. ಆ ಒಂದೇ ದಿನದ ರಾಜಧಾನಿ ಕತ್ತರಿಸಿ ಹೋಗುವ ಸ್ಥಿತಿಯ ಮಳೆ ಈ ದೇಶದ ಎಲ್ಲಾ ನಗರ, ಮಹಾನಗರಗಳಿಗೂ ಪಾಠವಾಗಬೇಕಾದ ಅಗತ್ಯವಿದೆ. ದುರಂತವೆಂದರೆ ಮಳೆ ಬಿಟ್ಟು ಬಿಸಿಲೆದ್ದು ನೀರು ಆರಿದ ಮೇಲೆ ಅದೆಲ್ಲ ಆಳುವವರಿಗೆ ಅಲ್ಲೇ ಬದುಕುವ ಜನಪ್ರತಿನಿಧಿಗಳಿಗೆ ಮರೆತು ಹೋಗುವುದರಿಂದ ಮುಂದಿನ ಮಳೆಯವರೆಗೆ ಅವರು ನಿಶ್ಚಿಂತೆಯಿಂದ ಇರುತ್ತಾರೆ.
ಈ ಭೂಮಿಯ ಶಕ್ತಿಯೇ ಅದು. ಅದಕ್ಕೊಂದು ಸುಂದರ ಪಾಯ ಆಯವಿದೆ. ಮೇಲ್ನೋಟಕ್ಕೆ ಬೆಟ್ಟ ಗುಡ್ಡ, ಕಾಡು, ಆಳದ ಪ್ರಪಾತಗಳು ಕಾಣಿಸಬಹುದು. ಸಮತಟ್ಟಾಗಿರುವ ಹುಲ್ಲುಗಾವಲು, ಮರುಭೂಮಿಯೂ ಇರಬಹುದು. ಸುತ್ತಿ ಸುಳಿದು ಸಾಗುವ ಹೊಳೆ, ನದಿ, ತೊರೆ, ಕಣಿವೆ ಎಲ್ಲವೂ ಇರಬಹುದು. ಒಂದೇ ಮಟ್ಟಸವಾಗಿ ಕಾಣಿಸದ ಭೂಮಿಯ ಈ ವಿನ್ಯಾಸಕ್ಕೆ ಲಕ್ಷಾಂತರ ವರ್ಷದ ಬಾಳುವಿಕೆ ಇದೆ. ನಿರ್ಮಾಣದ ಕಸುವು ಇದೆ. ಎತ್ತರದ ನೀರು ತೊರೆಗೆ ಜಿನುಗಿ ಕಣಿವೆಗೆ ಜರಗಿ ಹೊಳೆಗೆ ಹರಿದು ನದಿಗೆ ಸೇರಿ ಕಡಲು ಮುಟ್ಟುವ ದಾರಿ ಅದು ವಿಜ್ಞಾನಿಗಳದ್ದಲ್ಲ, ಬೆಂಗಳೂರಿನ ರಾಜ ಕಾಲುವೆಯನ್ನು ಕಟ್ಟಿದ ತಂತ್ರಜ್ಞರದ್ದೂ ಅಲ್ಲ. ಅದು ಭೂಮಿ ಪಾಲನೆಯ ಪ್ರಾಕೃತಿಕ ಪರಿಜ್ಞಾನ, ಹಸಿರು ಹೊಂದಾಣಿಕೆ. ಲಕ್ಷಾಂತರ ವರ್ಷಗಳ ಆಗು.
ಆದರೆ ಈ ಸಹಜ ತಂತ್ರಜ್ಞಾನವನ್ನು ತೀವ್ರವಾಗಿ ದಿಕ್ಕೆಡಿಸಿದ ಅಪಕೀರ್ತಿ ಬುದ್ಧಿವಂತ ಮನುಷ್ಯನದ್ದು. ಭೂಮಿ ಮೇಲೆ ಎಂದಿಗೂ ನಾಯಿ ಕಟ್ಟಡ ಕಟ್ಟಲು ಹೋಗಲಿಲ್ಲ, ಬೆಕ್ಕು ಅಣೆಕಟ್ಟು ಸೃಷ್ಟಿಸಲಿಲ್ಲ, ಕುದುರೆ ರಸ್ತೆ ಅಗಲಿಸಲಿಲ್ಲ, ಮಂಗ ಕಾರ್ಖಾನೆ ತೆರೆಯಲಿಲ್ಲ, ಕಾಗೆ ಅಭಿವೃದ್ಧಿಯ ರಾಗ ಕೂಗಲಿಲ್ಲ, ಕೋಗಿಲೆ ಗೂಡೇ ಕಟ್ಟಲಿಲ್ಲ. ಆದರೆ ಬುದ್ಧಿವಂತ ಮಹಾಮನುಷ್ಯ ಈ ಭೂಮಿ ಲಕ್ಷಾಂತರ ವರ್ಷಗಳಿಂದ ಕಾಯ್ದುಕೊಂಡು ಬಂದ ಆಯಪಾಯವನ್ನು ಸಡಿಲಿಸಿ ಬೇಕಾಬಿಟ್ಟಿ ಬದಲಿಸಿ ಮನೆಯೊಳಗಡೆ ಬರಬೇಕಾದ ಗಾಳಿ ಬೆಳಕಿನ ಬಗ್ಗೆ ವಾಸ್ತು ಎಂಬ ಹೆಸರಿನಲ್ಲಿ ಮಾತ್ರ ಯೋಚಿಸಿದ. ತನ್ನ ಮನೆಯೂ ಸೇರಿ ತನ್ನ ಬೀದಿ, ಊರು, ಪಟ್ಟಣ ಮಹಾನಗರದಲ್ಲಿ ಸುರಿದ ಹರಿದ ಮಳೆ ನೀರು ದೂರದ ನದಿ ಸಮುದ್ರಕ್ಕೆ ಹೇಗೆ ಮುಟ್ಟಬೇಕು ಎಂದು ಆ ಕಡಲಿಂದ ದೂರ ನಿಂತು ಆತ ಯೋಚನೆ ಮಾಡಲೇ ಇಲ್ಲ.
ಈ ಭೂಮಿಗೊಂದು ಜಲಮಟ್ಟ ಎಂಬುದೊಂದಿದೆ. ಬೇಕಾದರೆ ನಿಮ್ಮ ನಿಮ್ಮ ಮನೆ ಕಟ್ಟಿದ ಮೇಸ್ತ್ರಿಯನ್ನು ಒಮ್ಮೆ ಕೇಳಿ ನೋಡಿ. ಆತ ಪಾರದರ್ಶಕ ಪೈಪಿನೊಳಗಡೆ ನೀರು ತುಂಬಿಸಿ ನಿಮ್ಮ ಮನೆಯ ಪಾಯಕ್ಕೆ ಕಲ್ಲಿಡುತ್ತಾನೆ. ಅದೇ ಜಲಮಟ್ಟದ ಆಯಪಾಯ ರೂಪರೇಖೆಯಲ್ಲಿ ನಿಮ್ಮ ಮನೆ, ಊರಿನ ನೂರಾರು ಮನೆಗಳು, ಇಡೀ ನಗರದ ವಸತಿ ಸಮುಚ್ಚಯಗಳು ಎದ್ದು ನಿಲ್ಲುತ್ತವೆ. ಆದರೆ ಅದೇ ಮನೆಯ ಮಾಡಿನ, ಕಟ್ಟಡದ ಮಳೆ ನೀರು ಪಾಯಕ್ಕೆ ಬಂದು ನಿಲ್ಲುವಾಗ ಜಲಮಟ್ಟ ಕೈ ಕೊಡುತ್ತದೆ. ತಾನು ಬದುಕುವ ಮನೆ ಒಂದು ಸುಂದರ ಕಲಾಕೃತಿಯಾಗಿ ಎದ್ದು ನಿಂತರೆ ಸಾಕು, ನಮ್ಮ ಊರಿನಲ್ಲಿ ಇದೊಂದೇ ಸುಂದರ ಮನೆಯೆಂದು ಭ್ರಮಿಸಿ ಭಾವಿಸುವ ನಾವು ನಮ್ಮ ಮನೆಯೂ ಸೇರಿ ಇಡೀ ಬೀದಿಯ ನೀರು ಹೇಗೆ ಹರಿಯಬೇಕು? ಎಲ್ಲಿ ಮುಟ್ಟಬೇಕು ಎಂದು ಯೋಚಿಸುವುದೇ ಇಲ್ಲ. ನಮ್ಮ ಮನೆಯ ಅಂಗಳದ ನೀರು ಮಾತ್ರ ಸುರಿದು ಮುಂದಕ್ಕೆ ಸರಿದರೆ ನಮ್ಮ ಕಾರ್ಯ ಮುಗಿದೋಯ್ತು. ಅದು ಮುಂದೆ ಎಲ್ಲಿ ಹೋಗುತ್ತದೆ, ಅದರ ಕಡೆಯೆಲ್ಲಿ ಕೊಡಿಯೆಲ್ಲಿ ಯಾವ ಯೋಚನೆ ಮಾಡದ ಪರಿಣಾಮವೇ ಹೀಗೆ ನಗರ ಒಂದೇ ಒಂದು ಮಳೆಗೆ ಮುಳುಗಿ ಹೋಗುತ್ತಿರುವುದು!
ನಿಮ್ಮ ಮನೆಯ ಮಟ್ಟ, ಆಕಾರ ವಿನ್ಯಾಸ, ಆಯಪಾಯ, ಗೋಡೆಯ ಬಣ್ಣ, ದೇವರ ಕೋಣೆ ಇವೆಲ್ಲ ನಿಮ್ಮ ಕೈಯಲ್ಲಿರುತ್ತದೆ. ನಿಮ್ಮ ಮನೆಯ ಮಾಡು ಸುರಿಸುವ ನೀರು ಮಾತ್ರ ಬೇರೆಯವರದಾಗಿರುತ್ತದೆ! ನಿಮ್ಮಂಥ ನೂರಾರು ಮನೆಗಳು ಬೆಳೆದು ನಿಲ್ಲುವ ಬೀದಿಯ ಪಾಯವನ್ನು ನಿರ್ಧರಿಸುವ ಆಳುವವರು, ಅಧಿಕಾರಿಗಳು, ಜನಪ್ರತಿನಿಧಿಗಳು ಲಂಚ- ಪ್ರಭಾವಕ್ಕೆ ಒಳಗಾಗಿ ಮಟ್ಟಸ ಬದಲಾಯಿಸಿದರೆ ಸುಲಭವಾಗಿ ಒಂದೇ ಮಳೆಗೆ ನಿಮ್ಮ ಊರು ನೀರೊಳಗಡೆ ಮುಳುಗುತ್ತದೆ!
ದಿಲ್ಲಿ, ಬೆಂಗಳೂರು, ಮುಂಬೈಯಂಥ ಮಹಾನಗರಗಳಲ್ಲಿ ರಾಜಕಾಲುವೆ-ಮಳೆನೀರು ಚರಂಡಿಗಳ ನಿರ್ಮಾಣವು ಮಳೆನೀರಿನ ಹರಿವು ಮತ್ತು ಪ್ರವಾಹ ನಿಯಂತ್ರಣಕ್ಕಾಗಿ ಅತ್ಯಂತ ಉಪಕಾರಿಯಾಗಿದೆ. ಇಂತಹ ರಾಜಕಾಲುವೆಗಳನ್ನು ನಿರ್ಮಿಸುವ ಮೊದಲು ಭೂಗೋಳದ ಸಮೀಕ್ಷೆಯನ್ನು ನಡೆಸಲಾಗುತ್ತದೆ. ಭೂಮಿಯ ಮಟ್ಟ, ಇಳಿಜಾರು, ಮಣ್ಣಿನ ಗುಣಮಟ್ಟ, ಮೊದಲಿದ್ದ ಸಹಜ ಮಳೆನೀರಿನ ಹರಿವಿನ ಮಾರ್ಗ, ಅದು ತಲುಪಬೇಕಾದ ಸಮೀಪದ ಕೆರೆಗಳು, ನದಿಗಳ ಸಂಪರ್ಕವನ್ನು ಅಧ್ಯಯನ ಮಾಡಲಾಗುತ್ತದೆ. ಮಹಾನಗರದ ಒಳಗಡೆ ಇಡೀ ಭೂಮಿಪಾಯ ಕಾಂಕ್ರಿಟ್‌ಮಯವಾಗಿರುವುದರಿಂದ ಅಲ್ಲಿ ಯಾವುದೇ ನೀರಿನ ಸಹಜ ಇಂಗುವಿಕೆಗೆ ಅವಕಾಶವೇ ಇರುವುದಿಲ್ಲ.
ಈ ಹಿನ್ನೆಲೆಯಲ್ಲಿ ವರ್ಷದ ಗರಿಷ್ಠ ಮಳೆಯ ಪ್ರಮಾಣವನ್ನು ಆಧರಿಸಿ ಚರಂಡಿಯ ಗಾತ್ರ- ಸಾಮರ್ಥ್ಯವನ್ನು ನಿರ್ಧರಿಸಲಾಗುತ್ತದೆ. ಇದಕ್ಕಾಗಿ ಹೈಡ್ರಾಲಿಕ್ ಮಾದರಿಗಳನ್ನು ಬಳಸಲಾಗುತ್ತದೆ. ರಾಜಕಾಲುವೆಗಳನ್ನು ಸಾಮಾನ್ಯವಾಗಿ ಕಲ್ಲು, ಕಾಂಕ್ರಿಟ್‌ನಿಂದಲೇ ನಿರ್ಮಿಸಲಾಗುತ್ತದೆ, ಕಾಲುವೆಯ ಆಕಾರವು U ಅಥವಾ ಟ್ರಾಪಿಜಾಯಿಡ್ ಆಕಾರದಲ್ಲಿರುವುದರಿಂದ ಇದು ನೀರಿನ ಹರಿವಿನ ಸಾಮರ್ಥ್ಯವನ್ನು ಗರಿಷ್ಠಗೊಳಿಸುತ್ತದೆ.
ಕನಿಷ್ಠ ನದಿಗಳಿರುವ ಮಹಾನಗರಗಳಲ್ಲಿ ಮಾತ್ರ ರಾಜಕಾಲುವೆಗಳನ್ನು ನೇರವಾಗಿ ಕೆರೆಗಳಿಗೆ ಸಂಪರ್ಕಿಸಲಾಗುತ್ತದೆ, ಇದರಿಂದ ಮಳೆನೀರು ಅಂತರ್ಜಲವನ್ನು ಪುನರ್ಭರ್ತಿ ಮಾಡಬಹುದು. ಮೊದಲು ಕಾಲುವೆಯ ಮಾರ್ಗವನ್ನು ನಿಗದಿಗೊಳಿಸಿ ಅಲ್ಲೆಲ್ಲ ಇರುವ ಮಾನವ ನಿರ್ಮಿತ ತಡೆ, ಪ್ರಕೃತಿ ಸಹಜ ತೊಡಕುಗಳನ್ನು ತೆರವುಗೊಳಿಸಿ, ಸಮತಟ್ಟುಗೊಳಿಸ ಲಾಗುತ್ತದೆ. ಒತ್ತುವರಿಗಳನ್ನು ತೆರವುಗೊಳಿಸಲಾಗುತ್ತದೆ, ಆದರೆ ಇದು ಬೆಂಗಳೂರಿನಲ್ಲಿ ಎಷ್ಟೊಂದು ಜಟಿಲ ಸವಾಲಿನ ಕಾರ್ಯ ಎಂಬುವುದು ನಿಮಗೆ ಗೊತ್ತೇ ಇದೆ.
ಭೂಮಿಯ ಮೇಲೆ ಹರಿಯುವ ರಸ್ತೆಗಳನ್ನು, ಹೈಟೆನ್ಶನ್ ವಿದ್ಯುತ್ ತಂತಿಗಳನ್ನು ಪ್ರಭಾವಿಗಳು ದಾರಿ ಬದಲಾಯಿಸಿದ ಹಾಗೆ ಹರಿಯುವ ನೀರಿನ ದಾರಿಯನ್ನು ಬದಲಾಯಿಸುವುದರ, ಕಿರಿದುಗೊಳಿಸುವುದರ ಪರಿಣಾಮವೇ ಬೆಂಗಳೂರಿನ ಈ ಅನಾಹುತಕ್ಕೆ ನೇರ ಕಾರಣ. ಬಹಳಷ್ಟು ಕಡೆ ಇಂಥ ರಾಜಕಾಲುವೆಗಳ ದಡದಲ್ಲಿ ಅಕ್ರಮ ಕಟ್ಟಡಗಳು, ಅಪಾರ್ಟ್‌ಮೆಂಟ್‌ಗಳು ಮತ್ತು ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಲಾಗಿದೆ. ಇದರಿಂದ ಕಾಲುವೆಯ ಸಾಮರ್ಥ್ಯ ಕಡಿಮೆಯಾಗುತ್ತದೆ ಮತ್ತು ನೀರಿನ ಹರಿವಿಗೆ ಅಡ್ಡಿಯಾಗುತ್ತದೆ. ಕಾಲುವೆಗಳಲ್ಲಿ ಕಸ, ಪ್ಲಾಸ್ಟಿಕ್ ಮತ್ತು ಒಡ್ಡು ತುಂಬಿಕೊಳ್ಳುವುದರಿಂದ ನೀರಿನ ಹರಿವು ತಡೆಯಾಗುತ್ತದೆ. ಇವುಗಳಿಗೆ ಕಾರಣ ಭಾಗಶಃ ಸಾರ್ವಜನಿಕರದ್ದೇ ಆಗಿರುತ್ತದೆ.ಅವರೇ ಕಸವನ್ನು ಕಾಲುವೆಗೆ ಎಸೆಯುವುದು ಮತ್ತು ಅಸಮರ್ಪಕ ಕಸ ವಿಲೇವಾರಿ ವ್ಯವಸ್ಥೆಯೂ ಒಂದು ಕಾರಣ.
ಕಾಲುವೆ ಕೆರೆಗಳನ್ನು ಅತಿಕ್ರಮಿಸಿ ಒಡ್ಡಿಕೊಂಡೇ ಕಟ್ಟಡಗಳನ್ನು ನಿರ್ಮಿಸಿರುವುದರಿಂದ ಕಾಲುವೆಗಳಿಂದ ಕೆರೆಗಳಿಗೆ ನೀರು ತಲುಪದೇ ರಸ್ತೆಗಳಲ್ಲಿ ಉಕ್ಕಿ ಹರಿಯುತ್ತದೆ ಭಾರೀ ಮಳೆಯ ಸಂದರ್ಭದಲ್ಲಿ ಆ ಹರಿವು ನಿರ್ವಹಿಸಲು ಕಾಲುವೆಗಳ ಸಾಮರ್ಥ್ಯ ಸಾಕಾಗುವುದಿಲ್ಲ. ಹಳೆಯ ಕಿರಿದಾದ ವಿನ್ಯಾಸಗಳು ಈಗಿನ ಜನಸಂಖ್ಯೆಯ ಒತ್ತಡ ಮತ್ತು ಅತಿವೃಷ್ಟಿಯನ್ನು ಎದುರಿಸಲು ಸಾಧ್ಯವಾಗುವುದಿಲ್ಲ. ನಿಯಮಿತ ಹೂಳೆತ್ತುವಿಕೆ ಮತ್ತು ದುರಸ್ತಿಯ ಕೊರತೆಯಿಂದಲೂ ಕಾಲುವೆಗಳ ಕಾರ್ಯಕ್ಷಮತೆ ಸಾಕಾಗುವುದಿಲ್ಲ. ನಗರೀಕರಣದ ವೇಗ ಕಾಂಕ್ರೀಟ್ ರಚನೆಗಳ ವೃದ್ಧಿ ಒಟ್ಟಾರೆ ಅಭಿವೃದ್ಧಿ ಶಾಪವಾಗಿ, ಮಳೆನೀರು ಭೂಮಿಗೆ ಒಸರದೆ ಕಾಲುವೆಗಳ ಮೇಲೆ ಒತ್ತಡವನ್ನುಂಟುಮಾಡುತ್ತದೆ.
ರಾಜಧಾನಿ ಬೆಂಗಳೂರಿನಲ್ಲಿ ಅಂದಾಜು 860 ಕಿ.ಮೀ. ರಾಜಕಾಲುವೆಗಳಿದ್ದು, 197 ಕಿ.ಮೀ. ಉದ್ದದ ಕಾಲುವೆ ನಿರ್ಮಾಣಕ್ಕಾಗಿ 2,000 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಶೇ. 70 ಪ್ರದೇಶಗಳಲ್ಲಿ ಮಳೆನೀರಿನ ಸಮಸ್ಯೆಗಳನ್ನು ನಿವಾರಿಸಲಾಗಿದೆ ಎಂದು ಘೋಷಿಸಲಾಗಿದೆ. ಈ ಕೊರತೆಗಳನ್ನು ಸರಿಪಡಿಸದಿದ್ದರೆ, ಅತಿವೃಷ್ಟಿಯ ಸಂದರ್ಭದಲ್ಲಿ ಬೆಂಗಳೂರು ಮುಂತಾದ ನಗರಗಳು ಇಂತಹದ್ದೇ ಮುಳುಗಡೆಯ ಸಮಸ್ಯೆಯನ್ನು ಆಗಾಗ ಎದುರಿಸುತ್ತವೆ, ಇದು ಜನಜೀವನವನ್ನು ಅಸ್ತವ್ಯಸ್ತಗೊಳಿಸುತ್ತದೆ.
ಮಹಾಮಳೆಯ ಕೆಂಪು ನೀರು ಮನೆಯ ಒಳಗಡೆಯ ಗೋಡೆಯ ಮೇಲೆ ಸೃಷ್ಟಿಸಿದ ಜಲಗೆರೆ ಆ ಮನೆಯ ಒಳಗಡೆ ಬದುಕುವವರ ಪಾಲಿಗೆ ಲಕ್ಷ್ಮಣ ರೇಖೆಯೂ ಹೌದು. ನಮ್ಮ ಹಳ್ಳಿಗಳಲ್ಲಿ 80-90 ವರ್ಷದ ಅಜ್ಜಂದಿರು ತಮ್ಮ ಜನ್ಮ ವರ್ಷಗಳನ್ನು ನೆನಪಿಟ್ಟುಕೊಂಡದ್ದು ಇಂಥದ್ದೇ ಪ್ರಳಯ ರೇಖೆಗಳಿಂದ. ನಮ್ಮಜ್ಜಿ ಹೇಳುತ್ತಿದ್ದದ್ದು ನನಗೆ ಇವತ್ತಿಗೂ ನೆನಪಿದೆ. ನನ್ನಮ್ಮ ಹುಟ್ಟಿದ್ದು ನಮ್ಮ ಊರಿನ ಹೊಳೆ ತುಂಬಿ ಹರಿದು ಕೊಳ್ಳದ ನೀರು ದೇವರಮಾರು ಗದ್ದೆಗೆ ಹರಿದ ವರ್ಷವಂತೆ. ಅದೇ ನನ್ನಮ್ಮನ ಡೇಟ್ ಆಫ್ ಬರ್ತ್. ಸುನಾಮಿ, ಬಿರುಗಾಳಿ, ಚಂಡಮಾರುತ, ಬರಗಾಲ, ಭೂಕಂಪ ಗಳೆಲ್ಲ ನಮ್ಮೊಳಗಡೆ ಬಿಟ್ಟು ಹೋಗುವ ಕಥೆಗಳು ಬಹುಕಾಲ ಬದುಕುತ್ತವೆ, ಎಚ್ಚರಗಳಾಗುತ್ತವೆ. ಕಾಲಮೀರದಂತೆ ಕಾಡುತ್ತವೆ.
ಕೇರಳದ 2018ರ ಪ್ರವಾಹದ ವಿನಾಶದ ಕಥೆಗಳು ಇವತ್ತಿಗೂ ಅಲ್ಲಿಯವರಿಗೆ ತಿಳುವಳಿಕೆಯಾಗಿ ಉಳಿದಿವೆ. ಈ ಕಥೆಗಳಿಂದ ಸರಕಾರ ಮತ್ತು ಸಮುದಾಯಗಳು ಉತ್ತಮ ಒಡನಾಟದ ವ್ಯವಸ್ಥೆಗಳನ್ನು, ಪ್ರವಾಹ ನಿರ್ವಹಣಾ ಯೋಜನೆಗಳನ್ನು ಮತ್ತು ಮುನ್ಸೂಚನೆ ವ್ಯವಸ್ಥೆಗಳನ್ನು ಸುಧಾರಿಸಿದವು. ಒಂದು ಸಲಕ್ಕೆ ಅವು ಭಯಾನಕ ಕಥೆಗಳೇ, ಆದರೆ ಮುಂದೆ ಅವು ಕೇವಲ ಭಯವನ್ನುಂಟು ಮಾಡುವುದಿಲ್ಲ, ಜನರಿಗೆ ತಯಾರಿ, ಒಗ್ಗಟ್ಟು ಮತ್ತು ಜಾಗೃತಿಯನ್ನು ಒದಗಿಸುವ ಮೂಲಕ ಭವಿಷ್ಯದ ನಾಗರಿಕರಿಗೆ ಸಹಾಯ ಮಾಡಬಹುದು. ಆದರೆ, ಈ ಕಥೆಗಳನ್ನು ಜನರಿಗೆ ಭಯವನ್ನುಂಟು ಮಾಡದಂತೆ, ಸಕಾರಾತ್ಮಕವಾಗಿ ಕ್ರಿಯಾಶೀಲತೆಯನ್ನು ಪ್ರೇರೇಪಿಸುವ ರೀತಿಯಲ್ಲಿ ಹೇಳಬೇಕು.