ಹೆಸರಲ್ಲೇ ನಯವಾಗಿ ಕೊಲ್ಲುವ ಸಾಂಸ್ಕೃತಿಕ ತಂತ್ರಗಾರಿಕೆ

Update: 2015-12-21 11:23 GMT

ಹೆಸರಿನಲ್ಲೇನಿದೆ ಎಂದು ಪ್ರಖ್ಯಾತ ಇಂಗ್ಲಿಷ್ ನಾಟಕಕಾರ ಶೇಕ್ಸ್‌ಪಿಯರ್ ಕೇಳಿದ. ಆತನ ಹೆಸರಿಲ್ಲಿ ಶೇಕ್ ಎಂದು ಇರುವುದರಿಂದ ಆತ ಶೇಖ್ ಅಬ್ದುಲ್ಲಾರಂತೆ ಮುಸ್ಲಿಮನಾಗಿಬೇಕು ಎಂದು ಭಾವಿಸುವ ಜನರೂ ದೇಶದ ಸಂಸ್ಕೃತಿಯ ರಕ್ಷಣೆಗಾಗಿ ಬೀದಿಗಿಳಿಯುತ್ತಿರುವ ಭಾರತದಲ್ಲಿ ಹೆಸರಿನ ಹೆಸರಲ್ಲಿ ರಾಜಕೀಯ, ಸಾಂಸ್ಕೃತಿಕ ಆಕ್ರಮಣಗಳು ಸದ್ದಿಲ್ಲದಂತೆ ನಡೆಯುತ್ತಿದೆ ಮತ್ತು ಹೆಸರೆಂಬುದು ಇಲ್ಲಿ ಬಹುಮುಖ್ಯ ಅಸ್ಮಿತೆಯ ಪ್ರಶ್ನೆಯಾಗಿದೆ ಎಂದು ತಿಳಿದರೆ ಆತನಿಗೆ ಅಚ್ಚರಿಯಾದೀತು.


ತಮಾಷೆ ಒತ್ತಟ್ಟಿಗಿರಲಿ; ಹೆಸರುಗಳಿಗೆ ಸಂಬಂಸಿದಂತೆ ದೇಶದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ರಾಜಕೀಯವನ್ನು ಬಹುತೇಕ ಕರಾವಳಿ ಜಿಲ್ಲೆಗಳಿಗೆ ಸೀಮಿತಗೊಳಿಸಿ ಪರಿಶೀಲಿ ಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಇಂದಿನ ದಿನಗಳಲ್ಲಿ ಮಗುವಿಗೆ ಹೆಸರಿಡುವ ಮೊದಲು ತುಂಬಾ ಯೋಚಿಸಲಾಗುತ್ತದೆ. ತಂದೆ-ತಾಯಿ ಸೇರಿದಂತೆ ಮನೆಯವರೆಲ್ಲರೂ ಹುಡುಕಾಟದಲ್ಲಿರುತ್ತಾರೆ. ಈಗಂತೂ ಇಂಟರ್ನೆಟ್‌ನಲ್ಲಿಯೇ ಆಕರ್ಷಕ ಹೆಸರುಗಳ ಪಟ್ಟಿಗಳೇ ಸಿಗುತ್ತವೆ. ಈ ಆಕರ್ಷಕ ಹೆಸರಿನ ಚಾಳಿ ಎಲ್ಲಿಯವರೆಗೆ ಹೋಗಿದೆ ಎಂದರೆ ಕೇಳಲು ಚೆನ್ನಾಗಿರುವ, ಆದರೆ ಅರ್ಥವೇ ಇಲ್ಲದ, ಅಥವಾ ಅಪಾರ್ಥವಿರುವ ಹೆಸರುಗಳನ್ನು ಒಳ್ಳೆಯ ಹೆಸರುಗಳೆಂದು ಭ್ರಮಿಸಲಾಗುತ್ತಿದೆ. ಹಿಂದೆ ಹೆಸರಿಡುವ ಮೊದಲು ಜನರು ಪುರೋಹಿತರ ಬಳಿಗೆ ಓಡುತ್ತಿದ್ದರು. ನಕ್ಷತ್ರಕ್ಕೆ ಅನುಗುಣವಾಗಿ ಕೆ,ಕು,ಚು,ಚಿ.. ಇತ್ಯಾದಿಯಾಗಿ ಪಂಚಾಂಗದಲ್ಲಿರುವ, ಹೆಸರೇ ಇಡಲಾಗದ ಅಕ್ಷರಗಳನ್ನು ನೋಡಿ ಪುರೋಹಿತರೇ ಒಂದು ಹೆಸರು ಹೊಸೆದು ಸೂಚಿಸುತ್ತಿದ್ದರು. ಬಂದವರು ಬಡ ಶೂದ್ರರಾಗಿದ್ದರೆ ಚೊಂಗ, ಪೋಂಕ, ಮುದರು ಇತ್ಯಾದಿ ಹೆಸರುಗಳೂ, ಸ್ವಲ್ಪಮೇಲ್ಜಾತಿಯವರು ಅಥವಾ ಸ್ಥಿತಿವಂತರಾಗಿದ್ದರೆ, ಅಂತಪ್ಪ, ಚೆನ್ನಪ್ಪ, ಸಂಕಪ್ಪಇತ್ಯಾದಿ ಹೆಸರುಗಳೂ, ಸಾಕಷ್ಟು ಸ್ಥಿತಿವಂತರೂ, ಸ್ವಲ್ಪವಿದ್ಯಾವಂತರೂ ಆಗಿದ್ದರೆ ಅಶೋಕ, ಲಕ್ಷ್ಮಣ, ಲೀಲಾವತಿ ಇತ್ಯಾದಿಗಳೂ ಪ್ರಾಪ್ತವಾಗುತ್ತಿದ್ದವು.

ಬ್ರಾಹ್ಮಣ ಮಕ್ಕಳಿಗೆ ಭವಾನಿಶಂಕರ, ಸತ್ಯನಾರಾಯಣ, ಮಹಾಲಕ್ಷ್ಮೀ ಇತ್ಯಾದಿ ಘನ ಹೆಸರುಗಳು ಅನಾಯಾಸವಾಗಿ ಸಿಗುತ್ತಿದ್ದವು. ಸಮಾಜದ ಅತ್ಯಂತ ಕೆಳಸ್ತರದ ಶೋಷಿತ ಜನರ ಮಕ್ಕಳಿಗೆ ಹೆಸರಿಡುವಾಗ ಪಂಚಾಂಗ ನೋಡುವ ಕಷ್ಟವನ್ನೂ ಯಾರೂ ತೆಗೆದುಕೊಳ್ಳುತ್ತಿರಲಿಲ್ಲ. ವಾರದ ದಿನಗಳ ತುಳು ಹೆಸರುಗಳಿಗೆ ಅನುಗುಣವಾಗಿ ಆದಿತ್ಯವಾರಕ್ಕೆ ಐತ, ಸೋಮವಾರಕ್ಕೆ ಸೋಮ ಅಥವಾ ಚೋಮ, ಮಂಗಳಕ್ಕೆ ಅಂಗಾರ, ಬುಧಕ್ಕೆ ಬೂದ, ಗುರುವಾರಕ್ಕೆ ಗುರುವ, ಶುಕ್ರಕ್ಕೆ ತುಕ್ರ, ಶನಿವಾರಕ್ಕೆ ತನಿಯ ಎಂಬ ಹೆಸರುಗಳನ್ನು ಬಿಸಾಕಲಾಗುತ್ತಿತ್ತು. ಹೆಣ್ಣು ಮಕ್ಕಳಿಗೆ ಹೆಸರಿಡಲೂ ಒದ್ದಾಡಬೇಕಿರಲಿಲ್ಲ- ಐತನನ್ನು ಐತೆ, ಚೋಮನನ್ನು ಚೋಮು ಮಾಡಿದರೆ ಮುಗಿಯಿತು. ಇದೇ ಹೆಸರುಗಳಿಗೆ ಅಪ್ಪಸೇರಿಸಿದರೆ ಕಡುಬಡವರ ಹೆಸರಾಗುತ್ತಿತ್ತು. ಪುರೋಹಿತರಿಗೆ ಇದರಿಂದ ಒಂದು ಅನುಕೂಲವಿತ್ತು. ಹಿಂದೂಗಳಲ್ಲಿ ಪೂಜೆ ಮಾಡಿಸಬೇಕಾದಾಗ ನಕ್ಷತ್ರ ಹೇಳಬೇಕಾಗುತ್ತದೆ. ಅದನ್ನು ನೆನಪಿಡುವ ಕಷ್ಟದಿಂದ ಶೂದ್ರರನ್ನು ಪಾರು ಮಾಡಲಾಗಿತ್ತು. ಅವರು ತಮ್ಮ ಹೆಸರುಗಳನ್ನು ಮರೆತುಬಿಡುವ ಭಯ ಇಲ್ಲವಾದುದರಿಂದ ಹೆಸರು ಹೇಳಿದರೆ ಸಾಕು ಭಟ್ಟರು ಪಟಕ್ಕನೇ ನಕ್ಷತ್ರ ಏನೆಂದು ಹೇಳುತ್ತಿದ್ದರು. ಆದುದರಿಂದ ಕಡಿಮೆ ಹೆಸರುಗಳು ಇದ್ದಷ್ಟು ದೊಡ್ಡ ಸಂಖ್ಯೆಯ ಹೆಸರುಗಳನ್ನು ನೆನಪಿಡುವ ಭಾರ ಅವರ ಮಸ್ತಿಷ್ಕದ ಮೇಲೆ ಬೀಳುತ್ತಿರಲಿಲ್ಲ.

ಪರಿಶಿಷ್ಟ ಜಾತಿ ಪಂಗಡಗಳವರಿಗೆ ಪೂಜೆಗಳಲ್ಲಿ ಭಾಗವಹಿಸಿ ಕೃತಾರ್ಥರಾಗುವ ಮಹಾಭಾಗ್ಯವನ್ನು ಕರುಣಿಸಲಾಗದಿದ್ದುದರಿಂದ ಅವರಿಗೆ ವಾರದ ದಿನಗಳ ತುಚ್ಛೀಕರಣಗೊಂಡ ಹೆಸರುಗಳೇ ಸಾಕಾಗುತ್ತಿದ್ದವು. ಅಷ್ಟು ಮಾತ್ರವಲ್ಲ; ಅವರಿಗೆ ಬೊಗ್ರ (ಗಂಡು ನಾಯಿ), ಪಿಜಿನ್ (ಇರುವೆ) ಕಜವು (ಕಸ) ಇತ್ಯಾದಿ ಹೆಸರುಗಳನ್ನೂ ಇಡಲಾಗುತ್ತಿತ್ತು. ಇವೆಲ್ಲದರ ಹಿಂದಿನ ನಿಕೃಷ್ಟ ಮತ್ತು ತಣ್ಣಗಿನ ಕ್ರೌರ್ಯವನ್ನು ನೋಡಿದ್ದರೆ, ಶೇಕ್ಸ್‌ಪಿಯರ್ ಖಂಡಿತವಾಗಿಯೂ ಹೆಸರಲ್ಲೇನಿದೆ ಎಂದು ಕೇಳುತ್ತಿರಲಿಲ್ಲ. 1952ರಲ್ಲಿ ಹೊರಬಂದ ಸ್ವತಂತ್ರ ಭಾರತದ ಮೊದಲ ಮತದಾರರ ಯಾದಿಯನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ. ಅಲ್ಲಿ ಬೆರಳೆಣಿಕೆಯ ಆಧುನಿಕ ಹೆಸರುಗಳನ್ನು ನೋಡಬಹುದು. ಮುಸ್ಲಿಮರು ಮತ್ತು ಕ್ರೆಸ್ತರಲ್ಲಿಯೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಚೈಯ್ಯಬ್ಬ, ಪೊಡಿಯ ಬ್ಯಾರಿ, ಪಾತುಮ್ಮ ಇತ್ಯಾದಿ ಮುಸ್ಲಿಂ ಹೆಸರುಗಳೂ, ಕ್ರೆಸ್ತರಲ್ಲಿ ಅಬುಟ (ಆಲ್ಬರ್ಟ್), ಪೋಕ ಪೊರ್ಬು, ಕರ್ಮಿನ ಬಾಯಿ (ಕಾರ್ಮಿನ್) ಇತ್ಯಾದಿ ಗ್ರಾಮ್ಯಗೊಂಡ ಹೆಸರುಗಳೂ ಅಲ್ಲಿ ಕಂಡುಬರುತ್ತವೆ.


ಇಂತಹ ಹೆಸರುಗಳು ನಂತರದ ದಿನಗಳಲ್ಲಿ ಮುಖ್ಯವಾಗಿ ಕಲಿತವರಿಗೆ ಮುಜುಗರ ಹುಟ್ಟಿಸಿ ಕೀಳರಿಮೆಗೆ ಕಾರಣವಾಗಿದ್ದಿರಲೂಬಹುದು. ಸ್ವಾತಂತ್ಯಾನಂತರದ ಕೆಲದಶಕಗಳಲ್ಲಿ ತಮ್ಮ ಹೆಸರುಗಳನ್ನು ಮರೆಮಾಚಿ, ತಮ್ಮ ಜಾತಿ ಅಥವಾ ಊರಿನ ಹೆಸರಿನ ಹಿಂದೆ ಇಂಗ್ಲೀಷ್ ಅಕ್ಷರಗಳನ್ನು (ಇನಿಷಿಯಲ್ಸ್) ಸೇರಿಸುವ ಪರಿಪಾಠ ಹೆಚ್ಚಾಗಿ, ಕೊನೆಗೆ ್ಯಾಷನ್ ಆಗಿ ಬೆಳೆಯಿತು. ಆಥವಾ ತಮ್ಮ ಊರಿಗಿಂತ ಉದ್ದವಾದ ಹೆಸರುಗಳನ್ನು ಆಳುವ ಬ್ರಿಟಿಷ್ ಧಣಿಗಳಿಗೆ ಅರ್ಥವಾಗುವಂತೆ ಚುಟುಕುಗೊಳಿಸಲು ಮೇಲ್ಜಾತಿ ಜನರು ಅನುಸರಿಸಿದ ಕ್ರಮವನ್ನು ಇವರೂ ಅನುಸರಿಸಿದರೋ ಎಂದು ಹೇಳಲಾಗದು. ಇಂದು ಎಲ್ಲರೂ ತಮಗೆ ಇಷ್ಟವಾದ ಹೆಸರುಗಳನ್ನು ಇಟ್ಟುಕೊಳ್ಳುವ ಅವಕಾಶ ಹೊಂದಿದ್ದಾರೆ. ಮುಸ್ಲಿಮರಲ್ಲಿಯೂ ಆಕರ್ಷಕ, ಅರ್ಥಪೂರ್ಣ ಹೆಸರುಗಳು ಬರುತ್ತಿವೆ. ಕ್ರೆಸ್ತರು ಒಂದು ಹೆಜ್ಜೆ ಮುಂದೆ ಹೋಗಿ ಕ್ರೆಸ್ತ ಹೆಸರಿನ ಮುಂದೆ ಒಂದು ಧಾರ್ಮಿಕವಲ್ಲದ ಭಾರತೀಯ ಹೆಸರನ್ನು ಇಟ್ಟುಕೊಂಡು ಎರಡು ಹೆಸರುಗಳ (ಉದಾ: ಅನಿಲ್ ಆಲ್ಬರ್ಟ್, ವಿನೋದ್ ವಿಕ್ಟರ್ ಇತ್ಯಾದಿ) ಕ್ರಮ ಅನುಸರಿಸಲಾರಂಭಿಸಿದ್ದಾರೆ. ಇದೇ ಹೊತ್ತಿಗೆ ಹಿಂದೂಗಳಲ್ಲಿ ಕೆಲವರು ತಮ್ಮ ಮೂಲ ಹೆಸರಿಗೆ ಗಂಡಾದರೆ ರಾಜ್, ಹೆಣ್ಣಾದರೆ ಶ್ರೀ ಇತ್ಯಾದಿಗಳನ್ನು ಸೇರಿಸಿಕೊಂಡು ತಮ್ಮ ಹೆಸರಿನ ತೂಕ ಹೆಚ್ಚಿಸಿದ್ದಾರೆ.


ಹಿಂದೆ ಪುರೋಹಿತಶಾಹಿಗಳು ಇಟ್ಟ ನಿಕೃಷ್ಟ ಹೆಸರುಗಳ ಕಾರಣದಿಂದಲೋ, ನಮಗೆ ನಮ್ಮ ಹೆಸರುಗಳ ಬಗ್ಗೆ ಕೀಳರಿಮೆ ಇರುವಂತಿದೆ. ಇಂತಹ ಹೆಸರುಗಳೇ ಆಕರ್ಷಕ, ಇಂತವು ಕಳಪೆ ಎಂಬ ಭ್ರಮೆ ನಮ್ಮಲ್ಲಿದೆ. ಈ ಕಾರಣದಿಂದಲೇ ಹಿಂದಿ ಸೇರಿದಂತೆ ಬಹುತೇಕ ಹೆಚ್ಚಿನ ನಟ-ನಟಿಯರು ತಮ್ಮ ಮೂಲ ಹೆಸರುಗಳನ್ನು ಬದಲಿಸಿಯೇ ಪ್ರಖ್ಯಾತರಾಗಿದ್ದಾರೆ. ಕೆಲವರ ಮೂಲ ಹೆಸರುಗಳೇ ಜನರಿಗೆ ಗೊತ್ತಿಲ್ಲ. ಕೆಲವು ಉದಾಹರಣೆಗಳನ್ನು ನೀಡುವುದಾದಲ್ಲಿ ದಿಲೀಪ್ ಕುಮಾರ್ ಆದ ಯೂಸ್ುಖಾನ್, ರಾಜ್‌ಕುಮಾರ್ ಆದ ಮುತ್ತು ರಾಜ್, ಕಲ್ಪನಾ ಆದ ಶರತ್, ರಜನಿಕಾಂತ್ ಆದ ಶಿವಾಜಿ ರಾವ್- ಹೀಗೆ ಪಟ್ಟಿ ಬೆಳೆಯುತ್ತದೆ. ಸೂಪರ್‌ಸ್ಟಾರ್ ಶಾರುಕ್ ಖಾನ್ ಅವರ ಮೂಲ ಹೆಸರು ಕೂಡಾ ಅದಲ್ಲವೆಂದರೆ ಕೆಲವರಿಗೆ ಅಚ್ಚರಿಯಾದೀತು. ಸಂಖ್ಯಾಶಾಸ (ನ್ಯುಮೋಲಜಿ) ಎಂಬ ಸ್ವಯಂಘೋಷಿತ ಶಾಸಕ್ಕೆ ಅನುಗುಣವಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪಸಹಿತ ಅನೇಕರು ತಮ್ಮ ಹೆಸರುಗಳಿಗೆ ಅಕ್ಷರಗಳನ್ನು ಸೇರಿಸಿ ಅಥವಾ ಕಳೆದು ತಮ್ಮ ಹಣೆಬರಹ ಬದಲಿಸಲು ಯತ್ನಿಸಿದ್ದಾರೆ. ಭಾರತೀಯ ಹೆಸರುಗಳಲ್ಲಿ ಬರುವ ಇಂಗ್ಲಿಷ್ ಅಕ್ಷರಮಾಲೆಯ ಅಕ್ಷರಗಳಿಗೆ ಆರೋಪಿಸಿದ ಅಂಕೆ-ಸಂಖ್ಯೆಗಳಿಗೂ ಒಬ್ಬ ವ್ಯಕ್ತಿಯ ಜೀವನ-ಭವಿಷ್ಯಗಳಿಗೂ ಯಾವ ಬಾದರಾಯಣ ಸಂಬಂಧವಿದೆ ಎಂದು ಅರ್ಥವಾಗದಿದ್ದರೂ, ನಾಮ ಹೆಸರಿಗೆ ನೀಡುತ್ತಿರುವ ಅತಿಮಹತ್ವ ಅರ್ಥವಾಗುತ್ತದೆ.

ಜೊತೆಗೆ ಹೆಸರನ್ನು ಒಬ್ಬ ವ್ಯಕ್ತಿಯನ್ನು ಕೀಳುಗಾಣಿಸಲು ಮಾತ್ರವಲ್ಲ, ಮೂಢನಂಬಿಕೆಯನ್ನು ಪ್ರಚೋದಿಸಲು ಕೂಡಾ ಬಳಸಲಾಗುತ್ತಿರುವುದು ತಿಳಿಯುತ್ತದೆ. ಉದಾಹರಣೆಯಾಗಿ ಮದುವೆಯಾದ ಬಳಿಕ ಗಂಡನ ಮನೆಯಲ್ಲಿ ಹೆಣ್ಣಿನ ಹೆಸರನ್ನು ಬದಲಿಸುವ ಚಾಳಿಯನ್ನು ನೋಡಬಹುದು. ಒಂದು ಹೆಸರು ವ್ಯಕ್ತಿಯ ಮುಖ್ಯಗುರುತಾಗಿದ್ದರೂ, ಅದರಲ್ಲಿ ಒಳಿತು ಕೆಡುಕು ಅಡಗಿದೆ ಎಂದು ನಂಬುವುದು ಮೂಢನಂಬಿಕೆ ಅಲ್ಲದೆ ಇನ್ನೇನು?ಹೆಸರುಗಳು ನಮ್ಮ ವಿದೇಶಿ ಮೋಹ ಮತ್ತು ಮಾನಸಿಕ ದಾಸ್ಯಕ್ಕೂ ಉದಾಹರಣೆಗಳನ್ನು ಕೊಡುತ್ತವೆ. ಕ್ರಿಕೆಟಿಗ ಕಪಿಲ್ ದೇವ್ ಅವರನ್ನು ವಿದೇಶಿ ವೀಕ್ಷಕ ವಿವರಣೆಗಾರರು ಕ್ಯಾಪಿಲ್ ಡೇವ್ ಎಂದು ಕರೆದಾಗ ನಮಗದು ಸಾಮಾನ್ಯ ಎನಿಸುತ್ತದೆ. ನಾವು ಮಾತ್ರ ಶೇನ್ ವಾನ್ ಹೆಸರನ್ನು ವಾರ್ನೆಯಿಂದ ಹಿಡಿದು ವಾರ್ನ್‌ಗೆ ಬಂದು ಕೊನೆಗೆ ಸರಿಯಾದ ಉಚ್ಛಾರವನ್ನು ಕಲಿತುಕೊಂಡೆವು. ಉದ್ಯಮಗಳ ವಿಷಯಕ್ಕೆ ಬಂದಾಗ ಟಾಟಾ, ಬಿರ್ಲಾ ಮುಂತಾದ ಕೆಲವು ಬ್ರಾಂಡ್‌ಗಳು ವಿಶ್ವವಿಖ್ಯಾತವಾಗಿದ್ದರೂ, ನಮ್ಮ ಹೆಚ್ಚಿನ ಬ್ರಾಂಡ್‌ಗಳು ವಿದೇಶಿ ಹೆಸರುಗಳನ್ನು ಹೊಂದಿವೆ. ಅದೇ ಹೊತ್ತಿಗೆ ಸುಝುಕಿ, ಯಮಾಹ ಮುಂತಾದ ಅಪ್ಪಟ ಜಪಾನಿ ಹೆಸರುಗಳು ನಮಗೆ ಸ್ಟೆಲಿಷ್ ಆಗಿ ಕಾಣುತ್ತವೆ.

ನಮ್ಮದೇ ಮಾರುತಿ ಸುಝುಕಿಯನ್ನು ನಾವು ಟಿ.ವಿ. ಜಾಹೀರಾತಿನಲ್ಲಿ ಮಾರುತಿ ಸುಝುಕಿ ಎಂದು ಕರೆದು ಕೃತಾರ್ಥರಾಗುತ್ತೇವೆ. ಗೋಲ್ಡ್‌ಸ್ಮಿತ್ (ಅಕ್ಕಸಾಲಿಗ) ಎಂಬ ಉಪನಾಮ ನಮಗೆ ಅಪ್ಯಾಯಮಾನವಾಗಿ ಗೋಚರಿಸುತ್ತದೆ. ಆದರೆ, ಸ್ಥಳೀಯ ಭಾಷೆಯಲ್ಲಿ ಕರೆದರೆ ಸಿಟ್ಟುಬರುತ್ತದೆ.ತಮಗೆ ಬೇಕಾದ ಹೆಸರುಗಳನ್ನು ಇಟ್ಟುಕೊಳ್ಳುವುದು ಅವರವರಿಗೆ ಬಿಟ್ಟ ವಿಚಾರ. ಆದರೆ, ಊರುಗಳ ಮತ್ತು ರಸ್ತೆಗಳ ಹೆಸರುಗಳನ್ನು ಬದಲಿಸುವುದು ಅಥವಾ ಹೊಸದಾಗಿ ಇಡುವುದು ಜಾತಿ, ಧರ್ಮ, ಸಂಸ್ಕೃತಿ ಮತ್ತು ರಾಜಕೀಯಕ್ಕೆ ಸಂಬಂಸಿದ ಸೂಕ್ಷ್ಮ ವಿಚಾರ. ಹೆಚ್ಚಿನ ಭಾರತೀಯರಿಗೆ ತಮ್ಮ ಹೆಸರೂ ಸೇರಿದಂತೆ ತಮ್ಮ ನೆಲದ ಸಂಸ್ಕೃತಿಯ ಕುರಿತು ಇರುವ ಕೀಳರಿಮೆ ಮತ್ತು ಪಾಶ್ಚಾತ್ಯ ಹಾಗೂ ಶಿಷ್ಟವಾದುದರ ಕುರಿತು ಇರುವ ಕುರುಡು ಮೋಹವನ್ನು ಬಳಸಿಕೊಂಡು ಹೆಸರುಗಳ ಮೂಲಕ ಸೂಕ್ಷ್ಮ ಸಾಂಸ್ಕೃತಿಕ ಪಲ್ಲಟದ ಪ್ರಯತ್ನಗಳು ನಡೆಯುತ್ತಿವೆ.

Writer - ನಿಖಿಲ್ ಕೋಲ್ಪೆ

contributor

Editor - ನಿಖಿಲ್ ಕೋಲ್ಪೆ

contributor

Similar News