×
Ad

ಡಿಡಿಸಿಎ ಹಗರಣ: ಪೊಲೀಸ್ ಆಯುಕ್ತರ ಮೇಲೆ ಜೇಟ್ಲಿ ಒತ್ತಡ - ಆಪ್ ಆರೋಪ

Update: 2015-12-31 17:47 IST

ಹೊಸದಿಲ್ಲಿ,ಡಿ.30: ವಿತ್ತಸಚಿವ ಜೇಟ್ಲಿ ವಿರುದ್ಧ ತನ್ನ ಆಕ್ರಮಣವನ್ನು ಮುಂದುವರಿಸಿರುವ ಆಮ್ ಆದ್ಮಿ ಪಾರ್ಟಿಯು, ಅವರು 2011ರಲ್ಲಿ ಡಿಡಿಸಿಎ ಅಧ್ಯಕ್ಷರಾಗಿದ್ದಾಗ ಬ್ಯಾಂಕೊಂದರ ಕ್ರಿಕೆಟ್ ಕ್ಲಬ್‌ನ್ನು ಒಳಗೊಂಡಿದ್ದ ವಿವಾದದ ತನಿಖೆಯನ್ನು ‘ಕೊನೆಗೊಳಿಸುವಂತೆ’ ಆಗಿನ ಪೊಲೀಸ್ ಆಯುಕ್ತರ ಮೇಲೆ ಒತ್ತಡ ಹೇರಿದ್ದರು ಎಂದು ಆರೋಪಿಸಿದೆ. 


ಡಿಡಿಸಿಎ ಯಾವುದೇ ತಪ್ಪು ಮಾಡಿಲ್ಲವಾದ್ದರಿಂದ ಪ್ರಕರಣವನ್ನು ‘ನ್ಯಾಯಯುತ’ವಾಗಿ ತನಿಖೆ ನಡೆಸಿ ಅದನ್ನು ‘ಕೊನೆಗೊಳಿಸುವಂತೆ’ ಕೋರಿ ಮಾಜಿ ದಿಲ್ಲಿ ಪೊಲೀಸ್ ಆಯುಕ್ತ ಬಿ.ಕೆ.ಗುಪ್ತಾ ಮತ್ತು ಆಗಿನ ವಿಶೇಷ ಆಯುಕ್ತ ರಂಜಿತ್ ನಾರಾಯಣ್ ಅವರನ್ನು ಕೋರಿ ಜೇಟ್ಲಿ ಬರೆದಿದ್ದರೆನ್ನಲಾದ ಎರಡು ಪತ್ರಗಳನ್ನು ಆಪ್ ಬಿಡುಗಡೆಗೊಳಿಸಿದೆ. ಹೊಸ ಆರೋಪಗಳ ಹಿನ್ನೆಲೆಯಲ್ಲಿ ಜೇಟ್ಲಿಯವರ ರಾಜೀನಾಮೆಗೆ ಪಕ್ಷವು ಮತ್ತೆ ಆಗ್ರಹಿಸಿದೆ. ಗುಪ್ತಾರಿಗೆ ಬರೆದಿರುವ ಪತ್ರವು 2011,ಅ.27 ಮತ್ತು ನಾರಾಯಣ್‌ಗೆ ಬರೆದಿರುವ ಪತ್ರ 2012,ಮೇ 5ರ ದಿನಾಂಕ ಹೊಂದಿವೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಆಪ್ ನಾಯಕ ಅಶುತೋಷ್ ಅವರು, 1999ರಿಂದ 2013ರವರೆಗೆ ತಾನು ಅಧ್ಯಕ್ಷನಾಗಿದ್ದ ಡಿಡಿಸಿಎದಲ್ಲಿನ ಯಾವುದೇ ಅಕ್ರಮಗಳಿಗೂ ತನಗೂ ಯಾವುದೇ ಸಂಬಂಧವಿಲ್ಲವೆಂಬ ಜೇಟ್ಲಿಯವರು ಪದೇ ಪದೇ ನೀಡಿದ್ದ ಹೇಳಿಕೆಗಳನ್ನು ಈ ಪತ್ರಗಳು ‘ಠುಸ್ಸೆನಿಸಿವೆ ’ಎಂದು ಹೇಳಿದರು.


ಡಿಡಿಸಿಎ ಅಡಿ ಖಾಸಗಿ ಮತ್ತು ಸಾಂಸ್ಥಿಕ ಹೀಗೆ ಎರಡು ವರ್ಗಗಳ ಕ್ಲಬ್‌ಗಳಿವೆ. ಖಾಸಗಿ ಕ್ಲಬ್‌ಗೆ ಸಹಾಯಧನದ ಸೌಲಭ್ಯವಿದೆ,ಆದರೆ ಸಾಂಸ್ಥಿಕ ಕ್ಲಬ್‌ಗೆ ಈ ಸೌಲಭ್ಯವಿಲ್ಲ. ಸಿಂಡಿಕೇಟ್ ಬ್ಯಾಂಕಿನ ‘ಸಾಂಸ್ಥಿಕ ’ಕ್ಲಬ್‌ನ್ನು ಡಿಡಿಸಿಎ ಅಧಿಕಾರಿಗಳು ಮತ್ತು ಸಂಸ್ಥೆಗೆ ಸಂಬಂಧವಿಲ್ಲದಿದ್ದ ಕೆಲವು ಖಾಸಗಿ ವ್ಯಕ್ತಿಗಳ ಶಾಮೀಲಾತಿಯಲ್ಲಿ ‘ಖಾಸಗಿ ’ ಕ್ಲಬ್‌ನ್ನಾಗಿ ಪರಿವರ್ತಿಸುವ ಮೂಲಕ ಅಕ್ರಮವನ್ನೆಸಗಲಾಗಿತ್ತು ಎಂದು ಆಪ್ ಆರೋಪಿಸಿದೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಜೇಟ್ಲಿ ಈ ಪತ್ರಗಳನ್ನು ಬರೆದಿದ್ದರು ಎನ್ನಲಾಗಿದೆ.


ಇನ್ನಷ್ಟು ರಾಜಕಾರಣಿಗಳ ವಿರುದ್ಧ ಆಝಾದ್ ದಾಳಿ: ಅಮಾನತುಗೊಂಡಿರುವ ಬಿಜೆಪಿ ಸಂಸದ ಕೀರ್ತಿ ಆಝಾದ್ ಅವರು ಬುಧವಾರ ಪಕ್ಷದ ಸಂಸದ ಮತ್ತು ಬಿಸಿಸಿಐ ಕಾರ್ಯದರ್ಶಿ ಅನುರಾಗ ಠಾಕೂರ್ ಸೇರಿದಂತೆ ಕ್ರಿಕೆಟ್ ಆಡಳಿತದೊಂದಿಗೆ ಗುರುತಿಸಿಕೊಂಡಿರುವ ಇನ್ನಷ್ಟು ರಾಜಕಾರಣಿಗಳ ವಿರುದ್ಧ ದಾಳಿ ನಡೆಸಿದರಲ್ಲದೆ, ಡಿಡಿಸಿಎ ವ್ಯವಹಾರಗಳಿಗೆ ಸಂಬಂಧಿಸಿದಂತೆ ವಿತ್ತ ಸಚಿವ ಅರುಣ್ ಜೇಟ್ಲಿಯವರ ವಿರುದ್ಧ ಕಾನೂನು ಕ್ರಮಕ್ಕೆ ಗಂಭೀರ ವಂಚನೆಗಳ ತನಿಖಾ ಕಚೇರಿ(ಎಸ್‌ಎಫ್‌ಐಒ)ಯ ವರದಿಯು ಶಿಫಾರಸು ಮಾಡಿತ್ತು ಎಂದು ಹೇಳಿದರು.
ಡಿಡಿಸಿಎ ಅಧಿಕಾರಿಯೋರ್ವರು ಡಿಡಿಸಿಎ ತಂಡಕ್ಕೆ ತನ್ನ ಪುತ್ರನ ಆಯ್ಕೆಯನ್ನು ಬಯಸಿದ್ದ ಮಹಿಳೆಯನ್ನು ಮಂಚಕ್ಕೆ ಕರೆದಿದ್ದರು ಎಂಬ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆರೋಪವನ್ನು ಪ್ರಸ್ತಾಪಿಸಿದ ಅವರು, ಇದು ಹೊಸದೇನೂ ಅಲ್ಲ, ತಾನು 2007ರಲ್ಲಿ ಇಂತಹುದೇ ವಿಷಯವೊಂದನ್ನೆತ್ತಿದ್ದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News