ನಿರ್ದಿಷ್ಟ ವಿವರ ನಮೂದಿಸುವಂತೆ ತೆರಿಗೆದಾರರಿಗೆ ನೋಟಿಸ್

Update: 2015-12-31 12:20 GMT

ಹೊಸದಿಲ್ಲಿ, ಡಿ.30: ತೆರಿಗೆ ಪಾವತಿದಾರರಿಗೆ ಕಿರುಕುಳವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಮಹತ್ವದ ನಿರ್ಧಾರ ಕೈಗೊಂಡಿದೆ. ತೆರಿಗೆ ಇಲಾಖೆ ಅಧಿಕಾರಿಗಳು ನೀಡುವ ನೋಟಿಸ್‌ನಲ್ಲಿ ಪಾವತಿದಾರರು ಸಲ್ಲಿಸಬೇಕಾದ ನಿರ್ದಿಷ್ಟ ಮಾಹಿತಿ ಹಾಗೂ ದಾಖಲೆಗಳ ಬಗ್ಗೆ ವಿವರಗಳು ಇರಬೇಕು ಎಂದು ಸೂಚಿಸಿದೆ.


ಮೊದಲ ನೋಟಿಸ್‌ನಲ್ಲಿ ವೌಲ್ಯಮಾಪನ ಅಧಿಕಾರಿಗಳು ಸಾಮಾನ್ಯವಾಗಿ ತೆರಿಗೆ ಪಾವತಿದಾರ ಪ್ರಸ್ತುತಪಡಿಸಬೇಕಾದ ಖಾತೆಯ ವಿವರ ಅಥವಾ ಇತರ ದಾಖಲೆಗಳ ಬಗ್ಗೆ ಸೂಚಿಸುತ್ತಿಲ್ಲ ಎಂದು ಸಿಬಿಡಿಟಿ ಸೂಚನೆಯಲ್ಲಿ ಸ್ಪಷ್ಟಪಡಿಸಿದೆ.


ಸೂಕ್ಷ್ಮ ಪರಿಶೀಲನೆಗಾಗಿ ಆಯ್ದುಕೊಳ್ಳುವ ಪ್ರಕರಣಗಳಲ್ಲಿ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 143 (2)ರ ಅನ್ವಯ ನೀಡುವ ಮೊದಲ ನೋಟಿಸ್‌ನಲ್ಲಿ ಪ್ರಶ್ನಾವಳಿಯ ಜತೆಗೆ, ಸೂಕ್ಷ್ಮ ಪರಿಶೀಲನೆಗೆ ಅಗತ್ಯವಾದ ನಿರ್ದಿಷ್ಟ ದಾಖಲೆಗಳು, ಮಾಹಿತಿ, ಪುರಾವೆಗಳನ್ನು ಸಲ್ಲಿಸುವಂತೆ ವಿವರಗಳನ್ನು ನಮೂದಿಸಬೇಕು ಎಂದು ಸಿಬಿಡಿಟಿ ಹೇಳಿದೆ.


ಕ್ಷೇತ್ರ ಅಧಿಕಾರಿಗಳು ನೀಡುವ ನೋಟಿಸ್‌ಗೆ ಬದ್ಧರಾಗಿರಬೇಕಾದ ತೆರಿಗೆ ಪಾವತಿದಾರರಿಗೆ ತಾವು ಯಾವ ದಾಖಲೆಗಳನ್ನು ಸಲ್ಲಿಸಬೇಕು ಎಂಬ ಬಗ್ಗೆ ಮಾಹಿತಿ ಇಲ್ಲದಿರುವುದು ಸರಿಯಲ್ಲ. ಅವರು ಅಧಿಕಾರಿಯ ಮುಂದೆ ಹಾಜರಾದಾಗ ಯಾವ ಉದ್ದೇಶವೂ ಈಡೇರಿದಂತಾಗುವುದಿಲ್ಲ. ಇದು ತೆರಿಗೆಪಾವತಿದಾರರಿಗೆ ಅನಗತ್ಯ ಕಷ್ಟವಾಗುವುದಲ್ಲದೇ ಅವರ ಸಮಯವನ್ನೂ ವ್ಯರ್ಥಗೊಳಿಸಿದಂತಾಗುತ್ತದೆ ಎಂದು ಹೇಳಿದೆ.
ಈ ನಿರ್ದಿಷ್ಟ ಸೂಚನೆ ಬಗ್ಗೆ ನಾಂಜಿಯಾ ಆ್ಯಂಡ್ ಕಂಪೆನಿಯ ವ್ಯವಸ್ಥಾಪಕ ಪಾಲುದಾರ ರಾಕೇಶ್ ನಾಂಜಿಯಾ ಹೀಗೆ ಹೇಳುತ್ತಾರೆ: ಇದರಿಂದ ಕ್ಷೇತ್ರಾಧಿಕಾರಿಗಳು ಸುತ್ತಿಬಳಸಿ ಪ್ರಶ್ನೆಕೇಳವುದು ಮತ್ತು ಅಮಾಯಕ ತೆರಿಗೆ ಪಾವತಿದಾರರ ಭೀತಿಗೆ ಕಾರಣವಾಗುವ ಅನಗತ್ಯ ಪ್ರಶ್ನೆಗಳನ್ನು ಕೇಳುವುದು ತಪ್ಪುತ್ತದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News