×
Ad

ತಾರತಮ್ಯಕ್ಕೆ ಪ್ರತಿಭಟನೆ: ಐಎಎಸ್ ಅಧಿಕಾರಿ ಇಸ್ಲಾಮ್‌ಗೆ ಮತಾಂತರ

Update: 2015-12-31 23:45 IST

ಜೈಪುರ, ಡಿ.31: ತಾರತಮ್ಯವನ್ನು ವಿರೋಧಿಸಿ ಪರಿಶಿಷ್ಟ ಜಾತಿಗೆ ಸೇರಿದ ಹಿರಿಯ ಐಎಎಸ್ ಅಧಿಕಾರಿಯೋರ್ವರು ಇಸ್ಲಾಮ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಇನ್ನು ಮುಂದೆ ತಾನು ಉಮ್ರಾವ್ ಖಾನ್ ಹೆಸರಿನಿಂದ ಕರೆಯಲ್ಪಡುತ್ತೇನೆ. ಹಿಂದು ಧರ್ಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದವನಾಗಿ ತಾನು ಸದಾ ಬಲಿಪಶುವಾಗಿದ್ದೇನೆ. ಹೀಗಾಗಿ ಮಸೀದಿಯಲ್ಲಿ ‘ಕಲಿಮಾ’ ಓದಿ ಇಸ್ಲಾಮ್ ಧರ್ಮಕ್ಕೆ ಸೇರಿದ್ದೇನೆ, ಆದರೆ ತನ್ನ ಕುಟುಂಬ ಸದಸ್ಯರು ಮತಾಂತರಗೊಂಡಿಲ್ಲ ಎಂದರು.

ಇಂದು ನಿವೃತ್ತರಾಗಬೇಕಾಗಿದ್ದ ಮುಖ್ಯ ಕಾರ್ಯದರ್ಶಿ ಸಿ.ಎಸ್.ರಾಜನ್ ಅವರ ಅಧಿಕಾರಾವಧಿಯನ್ನು ಇನ್ನೂ ಮೂರು ತಿಂಗಳ ಅವಧಿಗೆ ವಿಸ್ತರಿಸಿರುವುದನ್ನು ಪ್ರತಿಭಟಿಸಿ ಅವರು ಸೇವೆಯಿಂದ ಸ್ವಯಂ ನಿವೃತ್ತಿ(ವಿಆರ್‌ಎಸ್)ಯನ್ನು ಕೋರಿ ಸರಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ತಾನು ಕಳೆದ ನಾಲ್ಕು ವರ್ಷಗಳಿಂದಲೂ ರಾಜಸ್ಥಾನ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದೇನೆ. ಮುಖ್ಯ ಕಾರ್ಯದರ್ಶಿಯ ಹುದ್ದೆಗೆ ಅರ್ಹನಾಗಿದ್ದೇನೆ. ಆದರೆ ರಾಜ್ಯ ಸರಕಾರವು ಹಾಲಿ ಮುಖ್ಯ ಕಾರ್ಯದರ್ಶಿಗಳಿಗೆ ಇನ್ನೂ ಮೂರು ತಿಂಗಳುಗಳ ಸೇವಾವಧಿಯನ್ನು ವಿಸ್ತರಿಸಿದೆ. ಆದ್ದರಿಂದ ಕಿರಿಯ ಅಧಿಕಾರಿಯ ಕೈಕೆಳಗೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಐಎಎಸ್ ಅಧಿಕಾರಿ ಉಮ್ರಾವ್ ಸಲೋದಿಯಾ ಅವರು ಸುದ್ದಿಗಾರರಿಗೆ ತಿಳಿಸಿದರು.

ಪರಿಶಿಷ್ಟ ಜಾತಿಗೆ ಸೇರಿರುವುದರಿಂ ಮತ್ತು ಹಿರಿಯ ಐಎಎಸ್ ಅಧಿಕಾರಿಯಾಗಿರುವುದರಿಂದ ಮುಖ್ಯ ಕಾರ್ಯದರ್ಶಿ ಹುದ್ದೆಗೆ ತನ್ನ ನೇಮಕವಾಗುತ್ತದೆ ಎಂದು ತಾನು ನಿರೀಕ್ಷಿಸಿದ್ದೆ. ಆದರೆ ತನ್ನನ್ನು ಬಲಿಪಶುವನ್ನಾಗಿ ಮಾಡಲಾಗುತ್ತಿದೆ. ಆದ್ದರಿಂದ ವಿಆರ್‌ಎಸ್ ಕೋರಿ ಸರಕಾರಕ್ಕೆ ಮೂರು ತಿಂಗಳ ನೋಟಿಸ್ ನೀಡಿದ್ದೇನೆ. ಅದು ತನ್ನ ಪ್ರತಿಭಟನಾ ಪತ್ರವೂ ಹೌದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News