ಕಟ್ಟೆಚ್ಚರ: 2 ರೈಲು ನಿಲ್ದಾಣಗಳ ತೆರವು

Update: 2016-01-01 18:45 GMT

ಮ್ಯುನಿಚ್: ಸಂಭಾವ್ಯ ಐಸಿಸ್ ದಾಳಿ ಸುಳಿವು
ಮ್ಯುನಿಚ್, ಜ.1: ಹೊಸ ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲಿ ಐಸಿಸ್ ಉಗ್ರರು ಆತ್ಮಹತ್ಯಾ ದಾಳಿ ನಡೆಸುವ ಸಾಧ್ಯತೆಯ ಬಗ್ಗೆ ಸುಳಿವು ಲಭಿಸಿದ ಹಿನ್ನೆಲೆಯಲ್ಲಿ ಜರ್ಮನಿಯ ಮ್ಯುನಿಚ್‌ನಲ್ಲಿ ಎರಡು ರೈಲು ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಕಾರ್ಯಸ್ಥಗಿತಗೊಳಿಸಿ ಜನರನ್ನು ತೆರವುಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮ್ಯುನಿಚ್, ದಕ್ಷಿಣ ಜರ್ಮನಿಯ ಬವರಿಯ ಸೇರಿದಂತೆ ಹಲವು ಪ್ರಮುಖ ಪ್ರದೇಶಗಳಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ ಎಂದವರು ಹೇಳಿದ್ದಾರೆ.

ಹೊಸ ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲಿ 5ರಿಂದ 7 ಮಂದಿ ಐಸಿಸ್ ಆತ್ಮಹತ್ಯಾ ದಾಳಿಕಾರರು ಮ್ಯುನಿಚ್‌ನಲ್ಲಿ ಆತ್ಮಹತ್ಯಾ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂಬ ಸುಳಿವು ಗುಪ್ತಚರ ಮೂಲಗಳಿಂದ ಲಭಿಸಿದೆ ಎಂದು ಜರ್ಮನಿ ಪೊಲೀಸರು ತಿಳಿಸಿದ್ದಾರೆ.
ಬವರಿಯಾ ಪ್ರಾಂತದ ಆಂತರಿಕ ಸಚಿವ ಜೋಕಿಂ ಹರ್ಮನ್ ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ. ಸಂಭಾವ್ಯ ದಾಳಿಯನ್ನು ತಡೆಯಲು ಜರ್ಮನಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಇಲ್ಲಿನ ಬೆಳವಣಿಗೆಗಳ ಮೇಲೆ ನಿಗಾ ವಹಿಸಲು 550 ಮಂದಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಗುಂಪುಗೂಡದಂತೆ ಜನರಿಗೆ ಮನವಿ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News