ಚುಟುಕು ಸುದ್ದಿಗಳು

Update: 2016-01-01 18:51 GMT

ಚೀನಾ: ಸ್ವದೇಶಿ ತಂತ್ರಜ್ಞಾನ ಬಳಸಿ ಮತ್ತೊಂದು ವಿಮಾನ ವಾಹಕ ನಿರ್ಮಾಣ
ಬೀಜಿಂಗ್, ಜ.1: ಚೀನಾವು ಎರಡನೆ ಬಾರಿಗೆ ವಿಮಾನ ವಾಹಕ ನಿರ್ಮಾಣದಲ್ಲಿ ತೊಡಗಿದ್ದು, ಈ ಬಾರಿ ಅದು ಸಂಪೂರ್ಣವಾಗಿ ದೇಶೀಯ ತಂತ್ರಜ್ಞಾನವನ್ನೇ ಅವಲಂಬಿಸಿದೆ ಎಂದು ವರದಿಯೊಂದು ತಿಳಿಸಿದೆ.

ಡಾಲಿಯನ್ ಬಂದರಿನಲ್ಲಿ ಸುಮಾರು 50 ಸಾವಿರ ಟನ್ ತೂಕದ ವಿಮಾನ ವಾಹಕವನ್ನು ನಿರ್ಮಿಸಲಾಗುತ್ತಿದೆ ಎಂದು ಚೀನಾದ ರಕ್ಷಣಾ ಸಚಿವಾಲಯ ಪ್ರಕಟಿಸಿದೆ.
ಪ್ರಸಕ್ತ ತಯಾರಿಸಲಾಗುತ್ತಿರುವ ವಿಮಾನ ವಾಹಕ ನೌಕೆಯು ಪರಮಾಣು ಶಕ್ತಿಯನ್ನು ಬಳಸಿಕೊಂಡಿಲ್ಲ ಎಂದು ಸಚಿವಾಲಯ ತಿಳಿಸಿದೆ.

ಪೂರ್ವ ಹಾಗೂ ದಕ್ಷಿಣ ಚೀನಾ ಪ್ರದೇಶಗಳಲ್ಲಿನ ನೆರೆಯ ಪ್ರದೇಶಗಳಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಚೀನಾ ತನ್ನ ನೌಕಾ ಸಾಮರ್ಥ್ಯವನ್ನು ವಿಸ್ತರಿಸತೊಡಗಿದೆ.
 ಚೀನಾದ ಮೊದಲ ವಿಮಾನ ವಾಹಕ ‘ದ ಲಿಯಾನಿಂಗ್’ ಸುಮಾರು 25ಕ್ಕೂ ಹೆಚ್ಚು ವರ್ಷಗಳ ಹಿಂದೆ ಸೋವಿಯತ್ ನಿರ್ಮಾಣದ ಬಳಕೆಯಾಗಿರುವ ವಿಮಾನ ವಾಹಕವಾಗಿದೆ.

ಅಫ್ಘಾನಿಸ್ತಾನ ಬಿಕ್ಕಟ್ಟು ಜನವರಿ 16ಕ್ಕೆ ಪಾಕ್‌ನಲ್ಲಿ ನಾಲ್ಕು ರಾಷ್ಟ್ರಗಳ ಸಭೆ
ಇಸ್ಲಾಮಾಬಾದ್, ಜ.1: ಅಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆ ಯತ್ನದ ಭಾಗವಾಗಿ ಜನವರಿ 16ರಂದು ಇಸ್ಲಾಮಾಬಾದ್‌ನಲ್ಲಿ ನಾಲ್ಕು ರಾಷ್ಟ್ರ(ಪಾಕಿಸ್ತಾನ, ಅಫ್ಘಾನಿಸ್ತಾನ, ಚೀನಾ, ಅಮೆರಿಕ)ಗಳ ಮೊದಲ ಸುತ್ತಿನ ಸಭೆ ನಡೆಯಲಿದೆ. ಅರ್ಥಪೂರ್ಣ ಅಫ್ಘಾನ್ ಶಾಂತಿ ಸ್ಥಾಪನೆಗೆ ಸಂಬಂಧಿಸಿ ಸಮಗ್ರ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವಲ್ಲಿ ಈ ಸಭೆಯ ಮಹತ್ವದ್ದಾಗಲಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಗುರುವಾರ ತಿಳಿಸಿದ್ದಾರೆ. ಎರಡನೆ ಸುತ್ತಿನ ಮಾತುಕತೆ ಕಾಬೂಲ್‌ನಲ್ಲಿ ನಡೆಯಲಿದೆ. ಅಫ್ಘಾನಿಸ್ತಾನದ ಬಿಕ್ಕಟ್ಟು ಶಮನಗೊಳಿಸುವ ಕುರಿತು ಈ ಮೊದಲು ಇಸ್ಲಾಮಾಬಾದ್‌ನಲ್ಲಿ ಡಿಸೆಂಬರ್ 9ರಂದು ನಡೆದ ‘ಹಾರ್ಟ್ ಆಫ್ ಏಶ್ಯ’ ಸಮಾವೇಶದಲ್ಲಿ ಚರ್ಚೆ ನಡೆದಿತ್ತು. ಭಾರತ ಕೂಡಾ ಈ ಸಭೆಯಲ್ಲಿ ಭಾಗವಹಿಸಿತ್ತು. ಇದರ ಮುಂದುವರಿದ ಭಾಗವಾಗಿ ಈ ಸಭೆ ನಡೆಯಲಿರುವುದಾಗಿ ಮೂಲಗಳು ತಿಳಿಸಿವೆ.

ಅಫ್ಘಾನಿಸ್ತಾನದಲ್ಲಿ 14 ವರ್ಷಗಳಿಂದ ಮುಂದುವರಿದಿರುವ ಬಂಡಾಯವನ್ನು ಕೊನೆಗೊಳಿಸುವ ಉದ್ದೇಶದಿಂದ ಅಫ್ಘಾನ್ ಸರಕಾರ ಮತ್ತು ತಾಲಿಬಾನ್ ಬಂಡುಕೋರರ ನಡುವೆ ಮೊದಲ ಸುತ್ತಿನ ಶಾಂತಿ ಮಾತುಕತೆ ನಡೆದಿತ್ತು. ಈ ಸಭೆಯಲ್ಲಿ ಅಮೆರಿಕ ಹಾಗೂ ಚೀನಾದ ಪ್ರತಿನಿಧಿಗಳೂ ಪಾಲ್ಗೊಂಡಿದ್ದರು. ಆದರೆ, ತಾಲಿಬಾನ್ ಮುಲ್ಲಾ ಉಮರ್ ಮೃತಪಟ್ಟ ವಿಷಯ ಪ್ರಕಟಗೊಂಡ ಬಳಿಕ ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿದ್ದ ಎರಡನೆ ಸುತ್ತಿನ ಮಾತುಕತೆ ರದ್ದುಗೊಂಡಿತ್ತು.

ಏರ್‌ಕೆನಡಾ ವಿಮಾನ ತುರ್ತು ಭೂಸ್ಪರ್ಶ
21 ಮಂದಿಗೆ ಗಾಯ

ಟೊರೊಂಟೊ, ಜ.1: ಕೆನಡಾಕ್ಕೆ ತೆರಳುತ್ತಿದ್ದ ಏರ್‌ಕೆನಡಾ ವಿಮಾನವು ತೀವ್ರ ಪ್ರಕ್ಷುಬ್ಧ ವಾತಾವರಣದ ಹಿನ್ನೆಲೆಯಲ್ಲಿ ತುರ್ತು ಭೂಸ್ಪರ್ಶಗೈಯಬೇಕಾದ ಅನಿವಾರ್ಯ ಸಂಭವಿಸಿದ್ದು, ಮೂವರು ಮಕ್ಕಳು ಸೇರಿದಂತೆ ಕನಿಷ್ಠ 21 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಾಂೈಯಿಂದ ಟೊರೊಂಟೊದತ್ತ ಹಾರಾಟ ನಡೆಸಿದ್ದ ವಿಮಾನವು ತೀವ್ರ ಮಾರುತದ ಪರಿಣಾದ ಅರ್ಧದಲ್ಲೇ ಕ್ಯಾಲಗರಿಯತ್ತ ಸಂಚರಿಸಿ ಭೂಸ್ಪರ್ಶಗೈದಿರುವುದಾಗಿ ಅವರು ಹೇಳಿದ್ದಾರೆ.
ಗಾಯಗಳನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವರೆಲ್ಲರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತುರ್ತು ಸೇವೆಗಳ ವಕ್ತಾರರು ತಿಳಿಸಿದ್ದಾರೆ.

ಪಾಕ್: 9 ಮಂದಿಗೆ ಗಲ್ಲು ಖಚಿತ

ಇಸ್ಲಾಮಾಬಾದ್, ಜ.1: ಭಯೋತ್ಪಾದನೆಗೆ ಸಂಬಂಧಿ ಪ್ರಕರಣಗಳಲ್ಲಿ ಈ ಹಿಂದೆ ಸೇನಾ ನ್ಯಾಯಾಲಯಗಳು 9 ಮಂದಿ ಭಯೋತ್ಪಾದಕರಿಗೆ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಸೇನಾ ಮುಖ್ಯಸ್ಥರು ಶುಕ್ರವಾರ ದೃಢಪಡಿಸಿದರು.
ಆತ್ಮಾಹುತಿ ದಾಳಿ, ಮಾನವ ಹತ್ಯೆ ಹಾಗೂ ಸೇನೆಯ ಮೇಲಿನ ದಾಳಿ ಪ್ರಕರಣಗಳಿಗೆ ಸಂಬಂಧಿಸಿ ನಾಲ್ವರು ಉಗ್ರರನ್ನು ಗಲ್ಲಿಗೇರಿಸಿ ಮೂರು ದಿನಗಳ ಸೇನಾ ಮುಖ್ಯಸ್ಥ ರಹೀಲ್ ಶರೀಫ್ ಈ ನಿರ್ಧಾರ ಪ್ರಕಟಿಸಿರುವುದಾಗಿ ಆಂತರಿಕ ಸೇವೆಗಳ ಸಾರ್ವಜನಿಕ ಸಂಪರ್ಕ (ಐಎಸ್‌ಪಿಆರ್) ಇಲಾಖೆಯ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News