ಭಾರತದ ಫುಟ್ಬಾಲ್ ಐಕಾನ್ ಬೆಂಬೆಮ್ ದೇವಿ ವಿದಾಯ

Update: 2016-01-02 18:06 GMT

 ಕಳೆದ ಎರಡು ದಶಕಗಳಿಂದ ಭಾರತದ ಮಹಿಳಾ ಫುಟ್ಬಾಲ್ ತಂಡದಲ್ಲಿ ತನ್ನ ಛಾಪನ್ನು ಮೂಡಿಸಿರುವ ಮಣಿಪುರದ ಹಿರಿಯ ಆಟಗಾರ್ತಿ ಬೆಂಬೆಮ್ ದೇವಿ ಶನಿವಾರ ನಿವೃತ್ತಿ ಘೋಷಿಸಿದ್ದಾರೆ.

ಸುಮಾರು 20 ವರ್ಷಗಳ ಕಾಲ ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವ ತಾನು ನಿವೃತ್ತಿಯಾಗಲು ಯೋಜನೆ ಹಾಕಿಕೊಂಡಿದ್ದೇನೆ ಎಂದು 35ರ ಹರೆಯದ ದೇವಿ ಆಂಗ್ಲ ಪತ್ರಿಕೆಗೆ ತಿಳಿಸಿದ್ದಾರೆ. ಭಾರತದ ಪರ ಅತ್ಯಂತ ಹೆಚ್ಚು 18 ಪಂದ್ಯಗಳನ್ನಾಡಿರುವ ದೇವಿ ಅವರ ನಿವೃತ್ತಿಯ ಕುರಿತು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್(ಎಐಎಫ್‌ಎಫ್) ಅಧಿಕೃತ ಪ್ರಕಟನೆ ಹೊರಡಿಸಿಲ್ಲ. ‘‘ಕ್ರೀಡಾಳುವಿನ ಬಾಳಿನಲ್ಲಿ ನಿವೃತ್ತಿ ಬಂದೇ ಬರುತ್ತದೆ. ಯುವ ಆಟಗಾರ್ತಿಯರಿಗೆ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಸಮಯ ಬಂದಿದೆ. ನಾನು ಯುವ ಪೀಳಿಗೆಗೆ ಅವಕಾಶ ನೀಡಲು ಬಯಸಿದ್ದೇನೆ. ದೇಶದ ಪರ 20 ವರ್ಷಗಳ ಕಾಲ ಹಾಗೂ ತನ್ನ ರಾಜ್ಯದ(ಮಣಿಪುರ) ಪರ 24 ವರ್ಷಗಳ ಕಾಲ ಆಡಿರುವ ತನಗೆ ಉತ್ತಮ ಫಾರ್ಮ್‌ನಲ್ಲಿರುವಾಗ ನಿವೃತ್ತಿಯಾಗಬೇಕೆಂಬ ಆಸೆಯಿದೆ’’ ಎಂದು ಬುಧವಾರ ತನ್ನ ಫೇಸ್‌ಬುಕ್‌ನಲ್ಲಿ ಬರೆದಿರುವ ಬೆಮ್ ಬೆಮ್ ದೇವಿ ನಿವೃತ್ತಿಯ ಬಗ್ಗೆ ಸುಳಿವು ನೀಡಿದ್ದರು.

 ‘‘ನಾನು ಇದೀಗ ಅಧಿಕೃತವಾಗಿ ಫುಟ್ಬಾಲ್‌ನಿಂದ ನಿವೃತ್ತಿಯಾಗುತ್ತಿದ್ದೇನೆ. ದೇಶದ ಪರ 20ವರ್ಷ ಹಾಗೂ ರಾಜ್ಯದ ಪರ 24 ವರ್ಷಗಳ ಕಾಲ ಆಡುವ ಭಾಗ್ಯ ನನಗೆ ಲಭಿಸಿತು. ಮುಂಬರುವ ಎಐಎಫ್‌ಎಫ್‌ನ 21ನೆ ಆವೃತ್ತಿಯ ಹಿರಿಯ ಮಹಿಳೆಯರ ಫುಟ್ಬಾಲ್ ಟೂರ್ನಿಯಲ್ಲಿ ತನ್ನ ರಾಜ್ಯದ ಪರ ಕೊನೆಯ ಪಂದ್ಯ ಆಡುವೆ. ನನ್ನ ವೃತ್ತಿಜೀವನದ ಪಯಣ ಅದ್ಭುತವಾಗಿತ್ತು. ತಾನು ಆಟದ ಪ್ರತಿ ಕ್ಷಣವನ್ನು ಆನಂದಿಸಿದ್ದೇನೆ’’ ಎಂದು ಬೆಂಬೆಮ್‌ದೇವಿ ಹೇಳಿದ್ದಾರೆ.

‘‘ನಾವು ಈ ತನಕ ಅಧಿಕೃತ ಪತ್ರವನ್ನು ಸ್ವೀಕರಿಸಿಲ್ಲ. ಅದೊಂದು ವೈಯಕ್ತಿಕ ನಿರ್ಧಾರ. ಪತ್ರ ಸ್ವೀಕರಿಸಿದ ಬಳಿಕ ಪ್ರತಿಕ್ರಿಯೆ ನೀಡುತ್ತೇವೆ’’ ಎಂದು ಎಐಎಫ್‌ಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಬೆಮ್ ದೇವಿ 2010ರಲ್ಲಿ ದಕ್ಷಿಣ ಏಷ್ಯಾ ಗೇಮ್ಸ್‌ನಲ್ಲಿ ಭಾರತ ಪ್ರಥಮ ಬಾರಿ ಪ್ರಶಸ್ತಿ ಜಯಿಸಲು ಕಾರಣರಾಗಿದ್ದರು. ಈ ವರ್ಷ ಫೆ.6 ರಿಂದ ಶಿಲ್ಲಾಂಗ್‌ನಲ್ಲಿ ಆರಂಭವಾಗಲಿರುವ ದಕ್ಷಿಣ ಏಷ್ಯಾ ಗೇಮ್ಸ್‌ನಲ್ಲಿ ದೇವಿ ಭಾಗವಹಿಸುವುದಿಲ್ಲ.

ಬೆಂಬೆಮ್ ದೇವಿ ಪರಿಚಯ

ಹೆಸರು: ಒ. ಬೆಂಬೆಮ್ ದೇವಿ

ಹುಟ್ಟಿದ ದಿನಾಂಕ: ಎಪ್ರಿಲ್ 4,1981(35 ವರ್ಷ)

ಹುಟ್ಟಿದ ಸ್ಥಳ: ಇಂಫಾಲ್, ಮಣಿಪುರ

ಹಾಲಿ ಫುಟ್ಬಾಲ್ ಕ್ಲಬ್: ನ್ಯೂ ರಾಡಿಯಂಟ್

ಭಾರತದ ಪರ 18 ಪಂದ್ಯಗಳು, 11 ಗೋಲು

ವೃತ್ತಿಜೀವನ: 1991ರಲ್ಲಿ ಫುಟ್ಬಾಲ್ ಆಡಲು ಆರಂಭ. ಸಬ್-ಜೂನಿಯರ್ ಫುಟ್ಬಾಲ್ ಟೂರ್ನಿಯಲ್ಲಿ ಮಣಿಪುರ ಅಂಡರ್-13 ತಂಡಕ್ಕೆ ಆಯ್ಕೆ. 1993 ರಿಂದ ಮಣಿಪುರ ರಾಜ್ಯ ತಂಡದ ಖಾಯಂ ಸದಸ್ಯೆ. 15ನೆ ವರ್ಷದಲ್ಲಿ ಏಷ್ಯನ್ ಮಹಿಳಾ ಚಾಂಪಿಯನ್‌ಶಿಪ್‌ನಲ್ಲಿ ಗುವಾಮ್ ವಿರುದ್ಧ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ಪಾದಾರ್ಪಣೆ.

2003ರಲ್ಲಿ ಭಾರತ ಫುಟ್ಬಾಲ್ ತಂಡದ ನಾಯಕಿಯಾಗಿ ಆಯ್ಕೆ. ಬಾಂಗ್ಲಾದೇಶದಲ್ಲಿ 2010ರಲ್ಲಿ ನಡೆದ ಸೌತ್ ಏಷ್ಯನ್ ಗೇಮ್ಸ್‌ನಲ್ಲಿ ದೇವಿ ನೇತೃತ್ವದ ಭಾರತಕ್ಕೆ ಚಿನ್ನದ ಪದಕ. 2001 ಹಾಗೂ 2013ರಲ್ಲಿ ಎಐಎಫ್‌ಎಫ್ ವರ್ಷದ ಮಹಿಳಾ ಆಟಗಾರ್ತಿ ಪ್ರಶಸ್ತಿ.

2014ರ ಜೂ.9 ರಂದು ಮಾಲ್ಡೀವ್ಸ್ ಫುಟ್ಬಾಲ್ ಕ್ಲಬ್ ನ್ಯೂ ರಾಡಿಯಂಟ್‌ನೊಂದಿಗೆ ಒಪ್ಪಂದಕ್ಕೆ ಸಹಿ. ವಿದೇಶದ ವೃತ್ತಿಪರ ಲೀಗ್‌ಗೆ ಸೇರ್ಪಡೆಯಾದ ಭಾರತದ ಮೊದಲ ಮಹಿಳಾ ಆಟಗಾರ್ತಿ. ಲೀಗ್ ಪರ 3 ಪಂದ್ಯಗಳಲ್ಲಿ 6 ಗೋಲು ಬಾರಿಸಿ ಟಾಪ್ ಸ್ಕೋರರ್ ಎನಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News