ನ್ಯೂಝಿಲೆಂಡ್-ಶ್ರೀಲಂಕಾ ನಾಲ್ಕನೆ ಪಂದ್ಯ ಮಳೆಗಾಹುತಿ

Update: 2016-01-02 18:14 GMT

ಹ್ಯಾಮಿಲ್ಟನ್,ಜ.2: ನ್ಯೂಝಿಲೆಂಡ್ ಹಾಗೂ ಶ್ರೀಲಂಕಾ ನಡುವಿನ ಏಕದಿನ ಸರಣಿಯ ನಾಲ್ಕನೆ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಶನಿವಾರ ನಡೆದ ನಾಲ್ಕನೆ ಪಂದ್ಯದಲ್ಲಿ ಕೇವಲ 9 ಓವರ್‌ಗಳ ಪಂದ್ಯ ಆಡಲಷ್ಟೇ ಸಾಧ್ಯವಾಯಿತು. ಪಂದ್ಯ ಆರಂಭವಾದ ತಕ್ಷಣವೇ ಮಳೆಯೂ ಆರಂಭವಾಯಿತು. ಈ ಹಿನ್ನೆಲೆಯಲ್ಲಿ ಪಂದ್ಯವನ್ನು 24 ಓವರ್‌ಗೆ ಕಡಿತಗೊಳಿಸಲಾಯಿತು. ಟಾಸ್ ಜಯಿಸಿದ ಶ್ರೀಲಂಕಾ ಮೊದಲು ಬೌಲಿಂಗ್ ಆಯ್ದುಕೊಂಡಿತು. ಪಂದ್ಯ ಮಳೆಯಿಂದಾಗಿ ರದ್ದಾಗುವ ಮೊದಲು ನ್ಯೂಝಿಲೆಂಡ್ 3 ವಿಕೆಟ್ ನಷ್ಟಕ್ಕೆ 75 ರನ್ ಗಳಿಸಿತ್ತು.

 ಹಂಗಾಮಿ ನಾಯಕ ಕೇನ್ ವಿಲಿಯಮ್ಸನ್ 12 ರನ್‌ಗೆ ದುಶ್ಮಂತಾ ಚಾಮೀರಾ ಎಸೆತದಲ್ಲಿ ಔಟಾದರು. ಬಿಗ್ ಹಿಟ್ಟರ್ ಮಾರ್ಟಿನ್ ಗಪ್ಟಿಲ್(27 ರನ್, 14 ಎಸೆತ) ಹಾಗೂ ಟಾಮ್ ಲಾಥಮ್(9) ಕೂಡ ಬೇಗನೆ ವಿಕೆಟ್ ಒಪ್ಪಿಸಿದರು. ಆಟ ಆರಂಭವಾಗಿ 42 ನಿಮಿಷ ಕಳೆಯುವಷ್ಟರಲ್ಲಿ ಮತ್ತೊಮ್ಮೆ ಮಳೆ ಸುರಿದಾಗ ರಾಸ್ ಟೇಲರ್(20) ಹಾಗೂ ಹೆನ್ರಿ ನಿಕೋಲ್ಸ್(4) ಕ್ರೀಸ್ ಕಾಯ್ದುಕೊಂಡಿದ್ದರು.

ಪಿಚ್ ಪಂದ್ಯ ಆಡಲು ಸೂಕ್ತವಾಗಿಲ್ಲ ಎಂಬ ಕಾರಣದಿಂದ ಅಂಪೈರ್‌ಗಳಾದ ರಿಚರ್ಡ್ ಇಲ್ಲಿಂಗ್‌ವರ್ತ್ ಹಾಗೂ ಬಿಲ್ಲಿ ಬೌಡನ್ ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಿದರು.

 ಸರಣಿಯ ಕೊನೆಯ ಪಂದ್ಯ ಮಂಗಳವಾರ ನಡೆಯಲಿದೆ. ನ್ಯೂಝಿಲೆಂಡ್ ಮೊದಲ ಪಂದ್ಯವನ್ನು ಏಳು ವಿಕೆಟ್‌ಗಳಿಂದಲೂ, ಎರಡನೆ ಪಂದ್ಯವನ್ನು 10 ವಿಕೆಟ್‌ಗಳಿಂದ ಗೆದ್ದುಕೊಂಡು ಸರಣಿಯಲ್ಲಿ 2-1 ಮುನ್ನಡೆಯಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News