ಕಾಂಗ್ರೆಸ್ ಸಾರಥ್ಯಕ್ಕೆ ರಾಹುಲ್ ಸಿದ್ಧ?

Update: 2016-01-02 18:18 GMT

ಹೊಸದಿಲ್ಲಿ, ಜ.2: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮುಂದಿನ ವಾರ ಯುರೋಪ್‌ನಿಂದ ಮರಳಿದ ಬಳಿಕ ಪಕ್ಷದ ಬಹು ವಿಳಂಬಿತ ಸಾಂಸ್ಥಿಕ ಚುನಾವಣೆಗಳು ನಡೆಯುವ ಸಾಧ್ಯತೆಯಿದ್ದು, ರಾಹುಲ್‌ರ ಬಹು ಚರ್ಚಿತ ಭಡ್ತಿಯೂ ಶೀಘ್ರವೇ ನಡೆಯುವ ಸೂಚನೆ ದೊರೆತಿದೆ.

ಕೆಲವು ದಿನ ತಾನು ಯುರೋಪ್ ಪ್ರವಾಸ ನಡೆಸಲಿದ್ದೇನೆಂದು ಡಿ.27ರಂದು ರಾಹುಲ್ ಟ್ವಿಟರ್‌ನಲ್ಲಿ ಪ್ರಕಟಿಸಿದ್ದರು. ಅವರು ತನ್ನ ಪ್ರವಾಸದ ಕುರಿತು ಸಾರ್ವಜನಿಕ ಮಾಹಿತಿ ನೀಡಿರುವುದು ಇದೇ ಮೊದಲ ಸಲವಾಗಿದೆ.

ರಾಹುಲ್ ಜ.8ರ ಬಳಿಕ ಯಾವುದೇ ದಿನ ಮರಳಿ ಬರಬಹುದು. ಅವರು ಬಂದ ಬಳಿಕ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯೊಂದು ನಡೆಯುವ ಸಾಧ್ಯತೆಯಿದೆಯೆಂದು ಪಕ್ಷದ ಮೂಲಗಳು ಹೇಳಿವೆ.

ರಾಹುಲ್ ಪಕ್ಷದ ಾರಥ್ಯ ವಹಿಸಲು ಸಿದ್ಧರಾಗಿದ್ದಾರೆ. ಅವರು ಅಧ್ಯಕ್ಷರಾಗಲು ಬಯಸುತ್ತಿಲ್ಲವೆನ್ನುವುದು ಸರಿಯಲ್ಲ. ಕಾಂಗ್ರೆಸ್ ಅಧ್ಯಕ್ಷರಾಗಿ ಭಡ್ತಿ ಪಡೆಯುವ ಮೊದಲು ಅವರು ಅಸ್ಸಾಂ ವಿಧಾನಸಭಾ ಚುನಾವಣೆ ಮುಗಿಯುವುದನ್ನು ಕಾಯಬಹುದು ಎಂಬ ಊಹಪೋಹವೂ ಸತ್ಯವಲ್ಲವೆಂದು ಅಜ್ಞಾತವಾಗುಳಿಯ ಬಯಸಿದ ಪಕ್ಷದ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಹುಲ್‌ರ ಭಡ್ತಿಯು ಬೇಗನೆ ನಡೆಯಲಿದೆ ಎಂದ ಅವರು, ಅದಕ್ಕೆ ಸಮಯ ಮಿತಿ ಹಾಕಲು ನಿರಾಕರಿಸಿದ್ದಾರೆ.
ಕೆಲವು ದಿನಗಳ ಹಿಂದೆ ಪಕ್ಷದ ಸ್ಥಾಪನಾ ದಿನ ಸಮಾರಂಭವೊಂದರಲ್ಲಿ ರಾಹುಲ್‌ರ ಭಡ್ತಿಯ ಕುರಿತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ‘‘ಆತನನ್ನೇ ಕೇಳಿ’’ ಎಂದು ಉತ್ತರಿಸಿದ್ದರು.


ತಳಮಟ್ಟದ ಕಾರ್ಯಕರ್ತರು ಬೇಗನೆ ಭಡ್ತಿ ನೀಡಬೇಕೆಂದು ಬಯಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಅಧ್ಯಕ್ಷೆಯಷ್ಟೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಸಾಧ್ಯವೆಂದು ಪಕ್ಷದ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಕೆಲವು ತಿಂಗಳ ಹಿಂದೆ ಹೇಳಿದ್ದರು.


ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ನಡೆದಿದ್ದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯು ಪಕ್ಷದ ಆಂತರಿಕ ಚುನಾವಣೆಗಳನ್ನು 2016ರ ತನಕ ಒಂದು ವರ್ಷ ಮುಂದೂಡಲು ನಿರ್ಧರಿಸಿತ್ತು. ಇದು ರಾಹುಲ್‌ರ ಭಡ್ತಿ ಒಂದು ವರ್ಷ ಮುಂದೂಡಲ್ಪಟ್ಟಿತೆಂಬ ನಿರೀಕ್ಷೆಗೆ ಕಾರಣವಾಗಿತ್ತು. ಆದರೆ ಕಾಂಗ್ರೆಸ್ ಉಪಾಧ್ಯಕ್ಷರಿಗೆ ಮೊದಲೇ ಹೊಣೆಗಾರಿಕೆ ಒಪ್ಪಿಸಬಹುದು. ಒಂದು ವರ್ಷ ವಿಸ್ತರಣೆಯು ಕೇವಲ ಆಂತರಿಕ ಚುನಾವಣೆಗೆ ಅಂತಿಮ ಗಡುವಾಗಿರುತ್ತದೆಂದು ಬಳಿಕ ಪಕ್ಷವು ಸೂಚನೆ ನೀಡಿತ್ತು. ಸೋನಿಯಾರ ಈಗಿನ ಅಧ್ಯಕ್ಷೀಯ ಅವಧಿ ಈ ವರ್ಷ ಡಿಸೆಂಬರ್‌ಗೆ ಮುಕ್ತಾಯಗೊಳ್ಳಲಿದೆ.

ಐದು ವರ್ಷಗಳ ಬಳಿಕ ನಡೆಯುವ ಪಕ್ಷದ ಸಾಂಸ್ಥಿಕ ಚುನಾವಣೆಗಳು ಹೊಸ ಅಧ್ಯಕ್ಷನ ಆಯ್ಕೆಯೊಂದಿಗೆ ಮುಕ್ತಾಯಗೊಳ್ಳಬಹುದು.


1998ರಲ್ಲಿ ಕಾಂಗ್ರೆಸ್ ಅಧ್ಯಕ್ಷೆಯಾದ ಸೋನಿಯಾ, 129 ವರ್ಷ ಹಳೆಯ ಪಕ್ಷದಲ್ಲಿ ಅತಿ ದೀರ್ಘ ಕಾಲ ಸೇವೆ ಸಲ್ಲಿಸಿದ ಅಧ್ಯಕ್ಷೆಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಾಹುಲ್ 2013ರಲ್ಲಿ ಪಕ್ಷದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News