ಕಾಂಗ್ರೆಸ್‌ಗೆ ಭರ್ಜರಿ ಜಯ: ನೆಲ ಕಚ್ಚಿದ ಬಿಜೆಪಿ ಛತ್ತೀಸ್‌ಗಡ ನಗರ ಪಾಲಿಕೆ ಚುನಾವಣೆ

Update: 2016-01-02 18:23 GMT

ಕಾಂಗ್ರೆಸ್‌ಗೆ ಭರ್ಜರಿ ಜಯ: ನೆಲ ಕಚ್ಚಿದ ಬಿಜೆಪಿ

ಛತ್ತೀಸ್‌ಗಡ ನಗರ ಪಾಲಿಕೆ ಚುನಾವಣೆ

ರಾಯ್ಪುರ, ಜ.2: ಛತ್ತೀಸ್‌ಗಡದಲ್ಲಿ ನಡೆದ ನಾಗರಿಕ ಚುನಾವಣೆಗಳಲ್ಲಿ ಆಳುವ ಬಿಜೆಪಿ ಭಾರೀ ಸೋಲು ಅನುಭವಿಸಿದೆ. 2013ರ ಡಿಸೆಂಬರ್‌ನಲ್ಲಿ ಆಡಳಿತಕ್ಕೆ ಬಂದ ಬಳಿಕ ಒಂದೇ ವರ್ಷದಲ್ಲಿ ಅದು ಅನುಭವಿಸಿರುವ ಸತತ 2ನೆಯ ಪರಾಭವ ಇದಾಗಿದೆ. ಇದರಿಂದಾಗಿ ಛತ್ತೀಸ್‌ಗಡ ಬಿಜೆಪಿಗೆ ಆತ್ಮಾವಲೋಕನದ ಅನಿವಾರ್ಯ ಒದಗಿದೆ. ಆದಾಗ್ಯೂ, ಪಕ್ಷದ ಆಂತರಿಕ ಬಿಕ್ಕಟ್ಟು ಸತತ ಸೋಲಿಗೆ ಕಾರಣವೆಂದು ಬಿಜೆಪಿಯೊಳಗಿನವರು ಹೇಳಿದ್ದಾರೆ.
ಇತ್ತೀಚೆಗೆ ನಡೆದ ಚುನಾವಣೆಗಳ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಒಟ್ಟು 11 ನಗರ ಪಾಲಿಕೆಗಳಲ್ಲಿ 8 ಕಾಂಗ್ರೆಸ್‌ನ ವಶವಾಗಿವೆ. ಈ ಫಲಿತಾಂಶದಿಂದ ನಗರ ಪ್ರದೇಶಗಳಲ್ಲಿ ವಿಪಕ್ಷವು ಮತ್ತೆ ಚೇತರಿಸಿದಂತೆ ತೋರುತ್ತಿದೆ.
ಪ್ರತಿಷ್ಟಿತ ಭಿಲಾಯಿ ಮಹಾನಗರ ಪಾಲಿಕೆಯಲ್ಲಿ ಮೇಯರ್ ಸ್ಥಾನ ಗಳಿಸುವುದರೊಂದಿಗೆ ಕಾಂಗ್ರೆಸ್ ವಿಜಯ ಯಾತ್ರೆ ಆರಂಭಿಸಿತ್ತು. ಈ ಕ್ಷೇತ್ರದಲ್ಲಿ ಸತತ 3ನೆ ಬಾರಿ ಮುಖ್ಯಮಂತ್ರಿಯಾಗಿರುವ ರಮಣ ಸಿಂಗ್, ಹಿರಿಯ ಸಂಪುಟ ಸಚಿವರಾದ ಪ್ರೇಂಪ್ರಕಾಶ್ ಪಾಂಡೆ ರಾಜೇಶ್ ಮುನಾತ್ ಹಾಗೂ ಪಕ್ಷದ ವ್ಯೆಹ ರಚನೆಗಾರ ಹೇಮಚಂದ್‌ರೊಂದಿಗೆ ವ್ಯಾಪಕ ಪ್ರಚಾರ ನಡೆಸಿದ್ದರು.
ಬಿಜೆಪಿಯ ‘ಕಾಂಗ್ರೆಸ್ ಮುಕ್ತ ಭಾರತ’ ಅಭಿಯಾನಕ್ಕೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ. ಜನರು ಭ್ರಷ್ಟಾಚಾರ, ವಚನಭ್ರಷ್ಟತೆ ಹಾಗೂ ಅರಾಜಕತೆಯ ವಿರುದ್ಧ ಮತ ನೀಡಿದ್ದಾರೆ. ನಗರಪಾಲಿಕೆ ಚುನಾವಣೆಗಳಲ್ಲಿ ಬಿಜೆಪಿ ಮಣ್ಣು ಮುಕ್ಕಿದೆಯೆಂದು ಛತ್ತೀಸ್‌ಗಡ ಕಾಂಗ್ರೆಸ್‌ನ ಅಧ್ಯಕ್ಷ ಭೂಪೇಶ್ ಬಾೇಲ್ ಹೇಳಿದ್ದಾರೆ.
 ಭಿಲಾಯಿ ಮಾತ್ರವಲ್ಲದೆ, ಜಮುಲ್ (ದುರ್ಗ್), ಖೈರಗಢ(ರಾಜಾನಂದ ರಾವ್), ವೈಕುಂಠಪುರ ಹಾಗೂ ಶಿವಪುರ-ಚರ್ಚಾ(ಎರಡೂ ಕೇರಿಯ) ನಗರಪಾಲಿಕೆಗಳಲ್ಲೂ ಜಯಭೇರಿ ಬಾರಿಸಿದೆ. ಚುನಾವಣೆ ನಡೆದ 6 ನಗರ ಪಂಚಾಯತ್‌ಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ತಲಾ ಮೂರನ್ನು ಬುಟ್ಟಿಗೆ ಹಾಕಿಕೊಂಡಿವೆ.
ತಮ್ಮ ನಿರೀಕ್ಷೆಯಂತೆ ಫಲಿತಾಂಶ ಯಾಕೆ ಬರಲಿಲ್ಲವೆಂಬ ಕುರಿತು ತಾವು ಕಳವಳಗೊಂಡಿದ್ದೇವೆ. ಅದಕ್ಕೆ ಹಲವು ಕಾರಣಗಳಿರಬಹುದು. ಸಂಘಟನೆ ಹಾಗೂ ಪಕ್ಷ ಸಾಧನೆಯ ವೌಲ್ಯಮಾಪನ ನಡೆಸಲಿವೆ ಹಾಗೂ ಪಕ್ಷದ ಸೋಲಿನ ಕುರಿತು ಆತ್ಮಾವಲೋಕನ ನಡೆಸಲಿವೆಯೆಂದು ಭಿಲಾಯಿಯಲ್ಲಿ ಬಿಜೆಪಿಯ ಚುನಾವಣಾ ಉಸ್ತುವಾರಿಯಾಗಿದ್ದ ಪ್ರೇಂಪ್ರಕಾಶ್ ಪಾಂಡೆ ಹೇಳಿದ್ದಾರೆ.
ಪಕ್ಷದಲ್ಲಿ ವಿವಿಧ ಮಟ್ಟಗಳಲ್ಲಿ ಅಸಮಾಧಾನ ತುಂಬಿದೆ. ಕಾರ್ಯಕರ್ತರು ತಮ್ಮನ್ನು ಉಪೇಕ್ಷಿಸಲಾಗಿದೆಯೆಂದು ಭಾವಿಸುತ್ತಿದ್ದಾರೆ. ಬಿಜೆಪಿಗೆ ಕೇವಲ ಚುನಾವಣೆಯ ವೇಳೆ ಮಾತ್ರ ಕಾರ್ಯಕರ್ತರ ನೆನಪಾಗುತ್ತದೆ. ಆ ಬಳಿಕ ಪಕ್ಷದ ನಾಯಕರು ತಮ್ಮತ್ತ ಕಣ್ಣೆತ್ತಿ ನೋಡುವುದಿಲ್ಲವೆಂದು ರಾಯ್ಪುರದ ಬಿಜೆಪಿ ಮುಖ್ಯಾಲಯ ‘ಏಕಾತ್ಮ ಪರಿಸರ’ದಲ್ಲಿ ಪಕ್ಷದ ಪದಾಧಿಕಾರಿಯೊಬ್ಬರು ಆರೋಪಿಸಿದ್ದಾರೆ. ಇದು ಸೋಲಿಗೆ ಮುಖ್ಯ ಕಾರಣವಾಗಿರಬಹುದು. ಆದರೆ, ಜನರ ಆಶೋತ್ತರಗಳಿಗೆ ಸ್ಪಂದಿಸದ ಸ್ಥಳೀಯ ನಾಯಕರನ್ನೂ ಅದಕ್ಕಾಗಿ ದೂರಬೇಕಾಗುತ್ತದೆಂದು ರಾಜಕೀಯ ಪರಿಣತ ಅನಿರುದ್ಧ ಶರ್ಮಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News