ಗೋವಾ ಪ್ರವಾಸಿಗಳಿಗೆ ಶೀಘ್ರವೇ ಸೀಪ್ಲೇನ್,ಹೆಲಿಕಾಪ್ಟರ್ ಸೇವೆ ಲಭ್ಯ

Update: 2016-01-02 18:25 GMT

ಪಣಜಿ,ಜ.2: ಗೋವಾದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸೀಪ್ಲೇನ್‌ಗಳು, ಹೆಲಿಕಾಪ್ಟರ್‌ಗಳು ಮತ್ತು ಉಭಯಚರಿ ವಾಹನಗಳು ಶೀಘ್ರವೇ ಲಭ್ಯವಾಗಲಿವೆ. ಈ ವರ್ಷ 75 ಲಕ್ಷ ಪ್ರವಾಸಿಗಳು ಗೋವಾಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.

ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೋವಾ ಪ್ರವಾಸೋದ್ಯಮ ಸಚಿವ ದಿಲೀಪ ಪರುಳೇಕರ್ ಅವರು, ಸೀಪ್ಲೇನ್ ಯೋಜನೆಗೆ ಜ.6ರಿಂದ ಚಾಲನೆ ದೊರೆಯಲಿದೆ. ದಾಬೋಲಿಂ ವಿಮಾನ ನಿಲ್ದಾಣವನ್ನು ರಾಜ್ಯದ ವಿವಿಧ ನದಿಗಳೊಂದಿಗೆ ಸಂಪರ್ಕಿಸುವ ಸೀಪ್ಲೇನ್‌ಗಳನ್ನು ಮುಂಬೈನ ‘ಮೆಹೇರ್ ’ಕಂಪೆನಿಯು ನಿರ್ವಹಿಸಲಿದೆ ಎಂದು ತಿಳಿಸಿದರು. ಇದರ ಜೊತೆಗೆ ಪ್ರವಾಸಿಗಳನ್ನು ನಗರಗಳಿಂದ ಒಳನಾಡು ನದಿ ಪ್ರದೇಶಗಳಿಗೆ ಕರೆದೊಯ್ಯಲು ಉಭಯಚರಿ ವಾಹನ ಸೇವೆಯನ್ನು ಆರಂಭಿಸುವ ಯೋಜನೆಯೂ ಅಂತಿಮ ಹಂತದಲ್ಲಿದೆ ಎಂದರು. ಸೀಪ್ಲೇನ್‌ನ ಪ್ರಾಯೋಗಿಕ ಹಾರಾಟವನ್ನು ಕಳೆದ ವರ್ಷದ ಮೇ 23ರಂದು ಯಶಸ್ವಿಯಾಗಿ ಕೈಗೊಳ್ಳಲಾಗಿತ್ತು.
ದಾಬೋಲಿಂ ವಿಮಾನ ನಿಲ್ದಾಣವನ್ನು ರಾಜ್ಯದ ವಿವಿಧೆಡೆಗಳಲ್ಲಿರುವ ಹೆಲಿಪ್ಯಾಡ್‌ಗಳೊಂದಿಗೆ ಸಂಪರ್ಕಿಸುವ ಖಾಸಗಿ ಹೆಲಿಕಾಪ್ಟರ್ ಸೇವೆಯನ್ನು ಜ.15ರಿಂದ ಆರಂಭಿಸಲಾಗುವುದು. ಅರೆ ಸರಕಾರಿ ಸಂಸ್ಥೆಯಾಗಿರುವ ಪವನಹಂಸ್ ಈ ಸೇವೆಯನ್ನು ನಿರ್ವಹಿಸಲಿದೆ ಎಂದ ಅವರು, ಪ್ರವಾಸೋದ್ಯಮ ಇಲಾಖೆಯು ಉಭಯಚರಿ ಬಸ್‌ಗಳೊಂದಿಗೆ ಸಿದ್ಧವಾಗಿದ್ದು ಕೇಂದ್ರ ನೌಕಾ ಸಚಿವಾಲಯದಿಂದ ಸೂಕ್ತ ಪರವಾನಿಗೆ ದೊರೆತ ಬಳಿಕ ಇವು ಕಾರ್ಯಾರಂಭ ಮಾಡಲಿವೆ ಎಂದು ತಿಳಿಸಿದರು. ಕಳೆದ ವರ್ಷ 65 ಲಕ್ಷ ಪ್ರವಾಸಿಗಳು ಗೋವಾಕ್ಕೆ ಭೇಟಿ ನೀಡಿದ್ದು, ಈ ವರ್ಷ ಈ ಸಂಖ್ಯೆ 75 ಲಕ್ಷಕ್ಕೆ ಹೆಚ್ಚುವ ನಿರೀಕ್ಷೆಯಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News