ನ್ಯಾಯ ಅನಾ್ಯಯಗಳ ಗೊಂದಲ

Update: 2016-01-02 19:07 GMT

ಲಿತ ಸಂಘಟನೆಯ ಒಡಲ ಕಿಚ್ಚೆಷ್ಟು ಎಂದು ಯಾರಿಗೂ ಇನ್ನೂ ಅಂದಾಜಿರದ ದಿನಗಳು. ಬೇರೆಯವರಿಗಿರಲಿ, ಸ್ವತಃ ಮುಖಂಡರಿಗೇ ಚಳವಳಿಯ ದಿಕ್ಕೇನು, ಅಂತಿಮವಾಗಿ ಎಲ್ಲಿಗೆ ತಲುಪಬಹುದು ಯಾವ ಕಲ್ಪನೆಯೂ ಇರಲಿಲ್ಲ. ಅವರೆಲ್ಲ ಕಾಲಕಾಲಕ್ಕೆ ಎದುರಾದ ಸವಾಲುಗಳನ್ನು ಕೈಗೆತ್ತಿಕೊಂಡು ಹೆಣಗುತ್ತ, ನಡೆದಿದ್ದೇ ದಾರಿಯೆಂದು ಹೊರಟಿದ್ದರು. ಒಟ್ಟು ಇಂದಿನದು ಇಂದಿಗೆ- ಅಷ್ಟೇ. ಎಲ್ಲರಿಗೂ ಗೊತ್ತು- ದಲಿತ ಚಳವಳಿ ಹುಟ್ಟಿದ್ದೇ ಪ್ರತಿಭಟನೆಯ ಸೊಲ್ಲು ಹಿಡಿದು. ಬಸವಲಿಂಗಪ್ಪನವರ ಬೂಸಾ ಗದ್ದಲಕ್ಕೆ ಪ್ರತಿಕ್ರಿಯೆಯಾಗಿ. ಆಗ ಅದೊಂದು ರಾಜ್ಯವ್ಯಾಪಿ ಆಂದೋಲನವಾಗಿ ಬೆಳೆದೀತು, ಅಸಂಖ್ಯಾತ ಅಸಹಾಯಕರಿಗೆ ಜೀತವಿಮುಕ್ತಿ ದೊರಕಿಸೀತು, ಭೂಹೀನರಿಗೆ ಲಕ್ಷಾಂತರ ಎಕರೆ ಜಮೀನು ಕೊಡಿಸೀತು, ಎಲ್ಲಕ್ಕಿಂತ ಹೆಚ್ಚಾಗಿ ದಲಿತರ ಸ್ವಾಭಿಮಾನದ ಪ್ರತೀಕವಾದೀತು ಎಂದು ಯಾರೂ ಊಹಿಸಿರಲಿಲ್ಲ.

ನನ್ನ ಮಟ್ಟಿಗೆ ಅದಕ್ಕಿಂತಲೂ ಮುಖ್ಯವಾದದ್ದು, ದಲಿತ ಚಳವಳಿ ಎಲ್ಲ ಜಾತಿಗಳ ಕನಸುಗಾರರನ್ನು ತನ್ನ ಕಡೆಗೆ ಸೆಳೆದ ಪರಿ. ನನ್ನಂಥ ಲೆಕ್ಕವಿಲ್ಲದಷ್ಟು ಎಳೆ ಹುಡುಗರಲ್ಲಿ ಈ ಸಂಘಟನೆ ನಿಜಕ್ಕೂ ಈವತ್ತಲ್ಲ ನಾಳೆ ಜಾತಿರಹಿತ ಸಮಾಜ ಸೃಷ್ಟಿಸುವುದು ಖಂಡಿತ ಎಂಬ ದೊಡ್ಡ ಕನಸು ಬಿತ್ತಿದ್ದು ಸುಳ್ಳಲ್ಲ. ರೈತ ಚಳವಳಿಯೂ ತನ್ನ ತಾತ್ವಿಕ ತಿಳುವಳಿಕೆಯಲ್ಲಿ- ವಿಶೇಷವಾಗಿ ಪ್ರೊ. ನಂಜುಂಡಸ್ವಾಮಿಯವರ ಮಾತುಗಳಲ್ಲಿ- (ಎಲ್ಲ ಬಗೆಯ ಶೋಷಣೆಯ ನಾಶ ರೈತ ಚಳವಳಿಯ ಗುರಿ) ಇದೇ ದಿಕ್ಕಿನ ಸೂಚನೆ ಕೊಟ್ಟಿದ್ದರೂ, ನಮ್ಮಲ್ಲಿ ನಿಜವಾದ ಭರವಸೆ ಹುಟ್ಟಿದ್ದು ದಲಿತ ಚಳವಳಿಯ ಅಂಗಳದಲ್ಲಿಯೇ. ಅಂದರೆ ದಲಿತ ಚಳವಳಿ ಮೂಲತಃ ಅನ್ಯಾಯಗಳ ವಿರುದ್ಧದ ದನಿ ಎತ್ತುವುದು ಸಹಜವಾಗಿದ್ದರೂ, ಅದರ ಅಂತಿಮ ಗುರಿ ಜಾತಿವಿನಾಶ ಎಂದೇ ನಾವೆಲ್ಲ ನಂಬಿಕೊಂಡಿದ್ದೆವು. ಮತ್ತು ಆ ಹಂತದಲ್ಲಿ ಒಂದಲ್ಲ ಒಂದು ದಿನ- ನಮ್ಮ ಜೀವಿತ ಕಾಲದಲ್ಲೇ- ಜಾತಿ ನಶಿಸಿ ಹೋಗುವುದು ಸಾಧ್ಯವೆಂದೇ ದೃಢವಾಗಿ ನಂಬಿದ್ದೆವು.
ಚಳವಳಿಯ ಹಾದಿ ದುರ್ಗಮವಿತ್ತು. ಒಂದೊಂದು ಹೆಜ್ಜೆಯಿಡುವುದೂ ಕಠಿಣವಿತ್ತು. ಅಷ್ಟಾದರೂ ಒಮ್ಮೆ ಸ್ವಾತಂತ್ರ್ಯ ದಿನದಂದು ದಲಿತ ಸಂಘರ್ಷ ಸಮಿತಿ ‘ಒಂದು ಲೋಟ ನೀರು’ ಎಂಬ ಸರಳವಾದ ಪ್ರೀತಿಪೂರ್ವಕ ಕಾರ್ಯಕ್ರಮ ಯೋಜಿಸಿತು. ಏನಿಲ್ಲ, ದಲಿತ ಕೇರಿಯ ಹೊರಗೆ ಒಂದು ಮಣ್ಣಿನ ಮಡಕೆಯಲ್ಲಿ ನೀರು ಇಟ್ಟುಕೊಳ್ಳುವುದು- ‘‘ನಾವು ನಿಮಗೆ ಇನ್ನೇನೂ ಕೊಡಲಾರೆವು, ಬನ್ನಿ, ನಮ್ಮ ಕೇರಿಗೆ ಬಂದು ಒಂದು ಲೋಟ ನೀರು ಕುಡಿದು ಹೋಗಿ’’ ಎಂದು ಸವರ್ಣೀಯರನ್ನು ಆಹ್ವಾನಿಸುವುದು. ಹೀಗೆ ಎದೆಯ ಹನಿ ಬೆರೆಸಿ ಕೊಟ್ಟ ಲೋಟ ನೀರು, ಜಾತಿ ಕಟ್ಟುಗಳನ್ನು ಕ್ಷಣವಾದರೂ ಸಡಿಲಿಸುವ ಪವಾಡ ಸಂಭವಿಸುವುದು ಸಾಧ್ಯವಿತ್ತು.
ನನ್ನ ಪ್ರಕಾರ ಇದು ದಲಿತ ಚಳವಳಿಯ ಆಧ್ಯಾತ್ಮಿಕ ಉತ್ತುಂಗದ ಕ್ಷಣಗಳಲ್ಲೊಂದು. ಮುಖ್ಯವಾಗಿ ಪ್ರತಿಭಟನೆಯನ್ನೇ ಉಸಿರಾಡುವ ಸಂಘಟನೆಯೊಂದು, ಎಲ್ಲ ಜಾತಿಗಳನ್ನೂ ತೆರೆದ ತೋಳುಗಳಿಂದ ಕರೆದು ಅಪ್ಪಿಕೊಂಡ ಆ ಆರ್ದ್ರ ಗಳಿಗೆಯೇ, ನನ್ನಲ್ಲಿ ದಲಿತ ಚಳವಳಿ ಒಂದಲ್ಲ ಒಂದು ದಿನ ಜಾತಿಯನ್ನು ತೊಡೆದು ಹಾಕುವುದು ಖಂಡಿತ ಎಂಬ ನಂಬಿಕೆ ಹುಟ್ಟಿಬಿಟ್ಟಿತ್ತು. ಆಗ ನಾವು ಕೆಲವು ಗೆಳೆಯರು ‘ಸುದ್ದಿ ಸಂಗಾತಿ’ ವಾರಪತ್ರಿಕೆ ಹೊರತರುತ್ತಿದ್ದೆವು. ನಾನು ಈ ಒಂದು ಲೋಟ ನೀರಿನ ದಿನ ಈ ಕಾರ್ಯಕ್ರಮ ಸೋಲಬಾರದೆಂದು ಬೇಡಿಕೊಳ್ಳುತ್ತ ಯಾರಿಗೂ ಹೇಳದೆ ಇಡೀ ದಿನ ನನ್ನ ಪಾಡಿಗೆ ನಾನು ಉಪವಾಸ ಮಾಡಿದ್ದೆ!... ಮತ್ತು ನನ್ನ ಉಪವಾಸದ ಹಂಗೇ ಇಲ್ಲದೆ ಆ ಕಾರ್ಯಕ್ರಮ ಸಾಕಷ್ಟು ಯಶಸ್ವಿಯೂ ಆಯಿತು...
ಆ ಕನಸಿನ ದಿನಗಳಲ್ಲಿ ನಮಗೆ ಸಾಮಾಜಿಕ ನ್ಯಾಯ ಎಂದರೆ ಹಂಚುಣ್ಣುವ ತತ್ವವಾಗಿ ಕಾಣಿಸುತ್ತಿತ್ತು. ಜಾತಿವಿನಾಶದ ಹಾದಿಯಲ್ಲಿ ಅನಿವಾರ್ಯವಾದ ಒಂದು ಹಂತವಾಗಿ, ಸಮಾಜದ ಪ್ರಾಯಶ್ಚಿತ್ತದ ರೂಪವಾಗಿ ಗೋಚರಿಸುತ್ತಿತ್ತು. ಅದು ಒತ್ತಟ್ಟಿಗಿರಲಿ.

ಮುಂದಕ್ಕೆ ದಲಿತ ಚಳವಳಿ ವಿಘಟನೆಯ ಇಳಿಜಾರಿನಲ್ಲಿ ಜಾರಿ ಹೋಗುವ ಸಂದರ್ಭದಲ್ಲಿ ಚಳವಳಿಯ ಒಡಲಿಂದಲೇ ನಮ್ಮೆಲ್ಲರ ಎದೆಯಿರಿಯುವ ಪ್ರಶ್ನೆಯೊಂದು ಉದ್ಭವವಾಯಿತು- ದಲಿತ ಸಂಘಟನೆಯಲ್ಲಿ ದಲಿತೇತರರಿಗೇನು ಕೆಲಸ?...! ಒಂದು ಬಗೆಯಲ್ಲಿ ಚಳವಳಿಯ ನೈತಿಕ ಪತನವನ್ನು ಸಂಕೇತಿಸುವ ಈ ಪ್ರಶ್ನೆಯೇ ವಿಘಟನೆಯ ಬೀಜಪ್ರಶ್ನೆಯೇನೋ ಎಂದೂ ಈಗ ಅನಿಸುತ್ತಿದೆ. ಯಾಕೆಂದರೆ ಎಲ್ಲ ಜಾತಿವರ್ಗಗಳ ಸಡಗರದ ವೇದಿಕೆಯಾಗಿದ್ದ ದಲಿತ ಚಳವಳಿ, ಮತ್ತೊಂದು ಜಾತಿ ಸಂಘಟನೆಯಾಗಿ ರೂಪಾಂತರಗೊಳ್ಳಲು ಇದೊಂದು ಪ್ರಶ್ನೆ ಕಾರಣವಾಯಿತು. ಇದಕ್ಕೆ ಸ್ವಲ್ಪಮುಂಚೆ ದಲಿತ ಸಂಘರ್ಷ ಸಮಿತಿ ಮೊದಲ ಬಾರಿ 1985ರ ಚುನಾವಣೆಗಳಲ್ಲಿ ಸಕ್ರಿಯವಾಗಿ ಜನತಾ ಪಕ್ಷವನ್ನು ಬೆಂಬಲಿಸುವ ನಿರ್ಧಾರ ತೆಗೆದುಕೊಂಡಿತ್ತು. ಅದುವರೆಗೆ ದಲಿತ ಸಂಘರ್ಷ ಸಮಿತಿ ಎಂದೂ ಯಾವುದೇ ಪಕ್ಷದ ಪರ ಅಥವಾ ವಿರುದ್ಧ ನಿಂತಿರಲಿಲ್ಲ. 1984ರಲ್ಲಿ ಇಂದಿರಾ ಗಾಂಧಿ ಹತ್ಯೆಯಾಗಿತ್ತು. ಆಗ ದಲಿತರ ಕಾಂಗ್ರೆಸ್ ಜೀತವನ್ನು ಕೊನೆಗಾಣಿಸಲೆಂದು ಸಂಘಟನೆ ಅದೇ ಮೊದಲ ಬಾರಿ ನಿರ್ದಿಷ್ಟ ರಾಜಕೀಯ ನಿಲುವು ತಳೆಯಿತು. ಅಷ್ಟೇ ಅಲ್ಲ, ತನ್ನ ರಾಜಕೀಯ ನಿರ್ಣಯದ ಫಲವಾಗಿ 1985ರ ಚುನಾವಣೆಯಲ್ಲಿ ಸಕ್ರಿಯವಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿತು ಕೂಡ. ಈ ಹೊಸ ಅನುಭವ ಸಂಘಟನೆಯ ಸ್ವರೂಪದಲ್ಲಿ ಮೂಲಭೂತ ಬದಲಾವಣೆಯೊಂದನ್ನು ತಂದುಬಿಟ್ಟಿತು. ಅದೇ ಚುನಾವಣೆಯಲ್ಲಿ ಜನತಾ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದ ಮೇಲಂತೂ ಸಂಘಟನೆಯ ಸ್ವರೂಪವೇ ಬದಲಾಗಿಹೋಯಿತು. ಸಂಘಟನೆಯ ನಾಯಕರು ಮತ್ತು ಕಾರ್ಯಕರ್ತರು, ಮೊದಲ ಬಾರಿ ಹಿಂದೆಂದೂ ಇಲ್ಲದ ಮಟ್ಟಿಗೆ ಅಧಿಕಾರ ಕೇಂದ್ರದ ಸಮೀಪ ಬಂದರು. ಆ ಅಧಿಕಾರ ಸಹಜವಾಗಿ ಇವರ ಅಸ್ಥಿಗಳಲ್ಲೇ ಸಂಚರಿಸತೊಡಗಿತು. ಫಲವಾಗಿ ಸಂಘಟನೆ ಒಂದು ಲಾಭದಾಯಕ ಹೂಡಿಕೆಯಾಗಿ, ಆಸ್ತಿಯಾಗಿ ಕಾಣತೊಡಗಿತು; ಅದನ್ನು ಹಂಚಿಕೊಳ್ಳಬಾರದೆಂಬ ಸ್ವಾರ್ಥ ಕೆಲವರಲ್ಲಾದರೂ ಮೊಳಕೆಯೊಡೆಯಿತು. ಅದರ ಪರಿಣಾಮವೇ ಆ ಪ್ರಶ್ನೆ- ದಲಿತ ಸಂಘಟನೆಯಲ್ಲಿ ದಲಿತೇತರರಿಗೇನು ಕೆಲಸ?... ಅಲ್ಲಿಗೆ ಜಾತಿವಿನಾಶದ ಮಹಾ ಕನಸು ಶಾಶ್ವತವಾಗಿ ಕಣ್ಣು ಮುಚ್ಚಿತು.
*
ಸಾಮಾಜಿಕ ನ್ಯಾಯ ಅಂದ ಕೂಡಲೇ ನನ್ನ ಮನಸ್ಸಿನಲ್ಲಿ ಬರೀ ಗೊಂದಲಗಳೇ.
ಭಾರತೀಯ ಸಂವಿಧಾನವನ್ನು ಸ್ವೀಕರಿಸುವಾಗ ಅಂಬೇಡ್ಕರ್ ಪ್ರವಾದಿಯಂತೆ ಹೇಳಿದ ಪ್ರಸಿದ್ಧ ಮಾತುಗಳನ್ನು ಇಲ್ಲಿ ನೆನೆಯಬೇಕು:
ಇಂದು ನಾವು ವಿರೋಧಾಭಾಸದ ಯುಗವೊಂದನ್ನು ಪ್ರವೇಶಿಸುತ್ತಿದ್ದೇವೆ. ದೇಶದಲ್ಲಿ ರಾಜಕೀಯ ಸಮಾನತೆಯನ್ನು ಸಾಧಿಸಿಯಾಯಿತು. ಆದರೆ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ಹಾಗೇ ಮುಂದುವರೆದಿದೆ. ಈ ವಿರೋಧಾಭಾಸವೇ ಭಾರತೀಯ ಸಮಾಜದ ಎದುರು ಬಹು ದೊಡ್ಡ ಸವಾಲಾಗಿ ನಿಲ್ಲಲಿದೆ...
ನಿಖರವಾಗಿ ಇವೇ ಮಾತುಗಳು ಎಂದಲ್ಲ. ಭಾವ ಇದೇ. ಒಟ್ಟಿನಲ್ಲಿ ಅಂಬೇಡ್ಕರ್ ಎತ್ತಿ ತೋರಿದ ಈ ಬೀಜರೂಪದ ವಿರೋಧಾಭಾಸವನ್ನು ನಿವಾರಿಸುವುದೇ ಸಾಮಾಜಿಕ ನ್ಯಾಯ ಎಂದು ನಾವು ಅರ್ಥ ಮಾಡಿಕೊಳ್ಳಬಹುದು.
ಆದರೆ ಅದನ್ನು ಸಾಧಿಸುವುದು ಹೇಗೆ? ಅದಕ್ಕೇ ಆರಂಭಿಕ ಕ್ರಮವಾಗಿ, ಅಂಬೇಡ್ಕರ್ ಪುಣೆ ಒಪ್ಪಂದವನ್ನು ಅಳವಡಿಸಿಕೊಂಡ ಮೀಸಲಾತಿ ನೀತಿ ತಂದರು. (ಅದನ್ನು ಅವರು ಮೀಸಲಾತಿ ಎನ್ನಲಿಲ್ಲ, ಪ್ರಾತಿನಿಧ್ಯ ಎಂದು ಕರೆದರು). ಸ್ವಾತಂತ್ರ್ಯ ಬಂದ ಹೊಸದರಲ್ಲಿ ದಲಿತರಿಗೆ ಮಾತ್ರ ಮೀಸಲಾಗಿದ್ದ ಮೀಸಲಾತಿ, ಕ್ರಮೇಣ ಹಿಂದುಳಿದ ವರ್ಗಗಳಿಗೂ ವಿಸ್ತರಣೆಯಾಯಿತು. ಅದೇನು ವಿಶೇಷವೂ ಅಲ್ಲ, ಅನಪೇಕ್ಷಿತವೂ ಅಲ್ಲ. ಹಾಗೆ ನೋಡಿದರೆ ಮೈಸೂರು ಸಂಸ್ಥಾನದಲ್ಲಿ ಮೊದಲು ಮೀಸಲಾತಿ ಹೋರಾಟ ಆರಂಭಿಸಿದವರು ಸ್ಥಳೀಯ ಬ್ರಾಹ್ಮಣರು. ಅಂದರೆ ಇಡೀ ಆಡಳಿತಯಂತ್ರವನ್ನು ಆಕ್ರಮಿಸಿಕೊಂಡಿದ್ದ ತಮಿಳು ಬ್ರಾಹ್ಮಣರ ಏಕಸ್ವಾಮ್ಯದ ವಿರುದ್ಧ ಕನ್ನಡಿಗ ಬ್ರಾಹ್ಮಣರು ಮೀಸಲಾತಿಗಾಗಿ ಒತ್ತಾಯ ತಂದರು. ಹಾಗಾಗಿ ಕನ್ನಡದ ನೆಲದಲ್ಲಿ ನಡೆದ ಮೊದಲ ಮೀಸಲಾತಿ ಚಳವಳಿ, ಕನ್ನಡಿಗ ಬ್ರಾಹ್ಮಣರದ್ದು. ಕಾಲ ಸರಿದಂತೆ ಮಿಲ್ಲರ್ ಸಮಿತಿ ಮೂಲಕ ಆಡಳಿತ ವ್ಯವಸ್ಥೆಯಲ್ಲಿ ಬ್ರಾಹ್ಮಣೇತರರನ್ನೂ ಒಳಗೊಳ್ಳುವಂತಾದದ್ದು, ಮೀಸಲಾತಿಯ ಎರಡನೆ ಹಂತ.
ಮುಂದಕ್ಕೆ ನಾವು ಮೀಸಲಾತಿಯನ್ನೂ ಜಾತಿವಿನಾಶದ ಅಸ್ತ್ರವಾಗಿಯೇ ನೋಡುತ್ತ ಬಂದೆವು. ಆದರೆ ದಲಿತ ಚಳವಳಿ ಹುಟ್ಟಿಸಿದ್ದ ಜಾತಿವಿನಾಶದ ಕನಸು ಕಮರಿ ಹೋದ ಮೇಲೆ ಸಾಮಾಜಿಕ ನ್ಯಾಯದ ಸೊಲ್ಲು ಕೂಡ ಸಿಕ್ಕ ಸಿಕ್ಕ ದಿಕ್ಕುಗಳಲ್ಲಿ ದಿಕ್ಕೆಟ್ಟು ಅಲೆಯತೊಡಗಿತು ಅನಿಸುತ್ತದೆ. ಅದಕ್ಕೇ ಜಾತಿವಿನಾಶದ ಮಾತು ಒಂದು ಹಂತದಲ್ಲಿ ಜಾತಿಗಳ ಸಮಾನತೆಯ ಪ್ರಶ್ನೆಯಾಗಿ ಬದಲಾಯಿತು. ಆಗ ಕೆ. ರಾಮದಾಸ್ ‘‘ಏನ್ರೀ ಇದು? ನಾವು ಜಾತಿ ಹೋಗಲಿ ಅಂತಂದ್ರೆ, ಇವರು ಜಾತಿಗಳ ನಡುವೆ ಸಮಾನತೆ ಬರಲಿ ಅಂತಿದ್ದಾರಲ್ಲ?’’ ಎಂದು ರೇಗಿದ್ದರು.
ಆಗಲೂ ನನಗೆ ಗೊಂದಲವುಂಟಾಗಿತ್ತು. ಜಾತಿವಿನಾಶ ಅಂದರೆ ಅದು ಜಾತಿ ಶ್ರೇಣಿಯ- ಮೇಲು ಕೀಳು ಭಾವದ- ನಾಶ ಅನ್ನುವುದಾದರೆ, ಜಾತಿಗಳ ಸಮಾನತೆ (ಅಂಥದ್ದೊಂದು ಸಾಧ್ಯವಾಗುವುದಾದರೆ) ಕೂಡ ಜಾತಿಗಳ ನಡುವಣ ಮೇಲು ಕೀಳು ಭಾವಗಳನ್ನು ತೊಡೆಯುವುದಾದ್ದರಿಂದ, ಅದೇ ನಾಳೆ ಸಂಪೂರ್ಣ ಜಾತಿವಿನಾಶಕ್ಕೆ ದಾರಿ ಮಾಡಿಕೊಡಲಾರದೇ? ನಾನು ಹೀಗೂ ಯೋಚಿಸಿದ್ದುಂಟು! ಗೆಳೆಯ ಕೆ.ಬಿ. ಸಿದ್ದಯ್ಯನವರ ಜೊತೆ ಈ ವಿಷಯ ಒಮ್ಮೆ ಚರ್ಚಿಸಿಯೂ ಇದ್ದೆ. ಒಂದು ರೀತಿ ‘ಜಾತಿಗಳು ಎಂದೂ ಹೋಗಲಾರವೇನೋ’ ಎಂಬ ಹತಾಶೆಯೂ ಈ ಅರೆಬರೆ ರಾಜಿ ಮನೋಭಾವದ ಹಿಂದೆ ಇದ್ದಿರಬಹುದು....
ಈಗಂತೂ ಪರಿಸ್ಥಿತಿ ಇನ್ನೂ ಹದಗೆಟ್ಟುಹೋಗಿದೆ. ಈಗ ಸಾಮಾಜಿಕ ನ್ಯಾಯದ ಮಾತಾಡುತ್ತಿರುವವರು ಯಾರೂ ಇಡೀ ಸಮಾಜವನ್ನು ಮನಸ್ಸಿನಲ್ಲಿಟ್ಟುಕೊಂಡು ತಮ್ಮ ವಾದಗಳನ್ನು ಮುಂದಿಡುತ್ತಿಲ್ಲ; ಬದಲಿಗೆ ಅಣುಅಣುವೂ ಜಾತಿಪ್ರಜ್ಞೆಯಲ್ಲಿ ಮಿಂದೆದ್ದ ಈ ಸಮಾಜದಲ್ಲಿ ತಮ್ಮ ಜಾತಿಗೆ ಸಲ್ಲಬೇಕಾದ ನ್ಯಾಯದ ಮಾತಾಡುತ್ತಾರೆ...
ಹಾಗೆ ಸಮಾಜದ ಎಲ್ಲರಿಗೂ, ಅಂದರೆ ಎಲ್ಲ ಜಾತಿಗಳಿಗೂ ಬದುಕಿನ ಅವಕಾಶಗಳು ಸಿಗಬೇಕು ಎಂಬುದರಲ್ಲೇನೂ ಅನುಮಾನವಿಲ್ಲ. ಹಾಗಾಗಿ ಒಳ ಮೀಸಲಾತಿ ವಿರುದ್ಧ ಮಾತಾಡುವುದೂ ಕಷ್ಟವೇ. ಆದರೆ ಮೂಲತಃ ಜಾತಿವಿನಾಶವನ್ನು ಬಯಸುವ ಮನಸ್ಸು- ಅವಕಾಶಗಳನ್ನು ‘ದೋಚುವ’ ಬದಲು ‘ಬಿಟ್ಟುಕೊಡುವ’ ಅಂದರೆ ‘ತ್ಯಾಗಕ್ಕೆ ಹಿಂಜರಿಯದ’- ಮನಸ್ಸಾಗಿರುತ್ತದೆ ಎಂಬುದು ನನ್ನ ಗ್ರಹಿಕೆ. ಅದು ಒಂದು ಲೋಟ ನೀರು ಹಂಚಿಕೊಳ್ಳುವ ಮನಸ್ಸು. ಅದು ಸ್ವಾರ್ಥಸಾಧನೆಯ ಜಿದ್ದಿನ ಮನಸ್ಸಾಗಿರುವುದು ಸಾಧ್ಯವಿಲ್ಲ. ಅಥವಾ ಹಾಗೆ ಅಂದುಕೊಳ್ಳುವುದೂ ತಪ್ಪಿರಬಹುದೇ?... ಮತ್ತೆ ಗೊಂದಲ!

ಆದರೆ ನಾವು ಎಂಥ ಕಾಲಘಟ್ಟದಲ್ಲಿ ಬದುಕಿದ್ದೇವೆ ನೋಡಿ: ಅಂಬೇಡ್ಕರ್ ಒಬ್ಬ ಈಡಿಯಟ್ ಎಂದು ಕರೆದು, ಮೀಸಲಾತಿಗೆ ಆತುಕೊಂಡವರನ್ನು ಕತ್ತೆಗಳು ಎಂದು ಜರೆಯುವವರನ್ನು ‘ಸಂಶೋಧಕರು’ ಅನ್ನುತ್ತಿದ್ದೇವೆ; ದೇಶ ಹಾಳಾಗಿರುವುದೇ ಮೀಸಲಾತಿಯಿಂದ ಎಂದು ನಿರ್ಭಿಡೆಯಿಂದ ತೀರ್ಪು ಬರೆಯುವ ನ್ಯಾಯಾಧೀಶರಿದ್ದಾರೆ. ನಮ್ಮ ಸಾರ್ವಜನಿಕ ಜೀವನವನ್ನು ಇಂಥವರೇ ಆವರಿಸಿಕೊಂಡಿದ್ದಾರೆ. ಅತ್ತ ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ್, ‘‘ಮೀಸಲಾತಿ ಬಗ್ಗೆ ಮರುಚಿಂತನೆ ನಡೆಯಲಿ’’ ಎಂದು ನಿಗೂಢವಾಗಿ ಅಪ್ಪಣೆ ಕೊಡುತ್ತಿದ್ದಾರೆ. ಇಂಥ ವಾತಾವರಣದಲ್ಲಿ ಸಾಮಾಜಿಕ ನ್ಯಾಯದ ವ್ಯಾಖ್ಯಾನವೇ ದಾರಿ ತಪ್ಪುತ್ತಿದೆ ಎಂದು ಹಲುಬಲೋ ಅಥವಾ, ಸಾಮಾಜಿಕ ನ್ಯಾಯವನ್ನೇ ನುಂಗಿ ಹಾಕಲು ತಯಾರಾದವರ ಬಗ್ಗೆ ತಲೆ ಕೆಡಿಸಿಕೊಳ್ಳಲೋ ಗೊತ್ತಾಗುತ್ತಿಲ್ಲ. ಕ್ಷಮಿಸಿ.

Writer - ಎನ್.ಎಸ್. ಶಂಕರ್

contributor

Editor - ಎನ್.ಎಸ್. ಶಂಕರ್

contributor

Similar News