×
Ad

ಪಠಾಣ್‌ಕೋಟ್: ಮುಂದುವರಿದ ಘರ್ಷಣೆ

Update: 2016-01-03 23:50 IST

♦ ವಾಯುನೆಲೆಯಲ್ಲಿ ಅಡಗಿರುವ ಉಗ್ರರಿಂದ ಗುಂಡಿನ ದಾಳಿ  ♦ ಹುತಾತ್ಮ ಯೋಧರ ಸಂಖ್ಯೆ ಏಳಕ್ಕೇರಿಕೆ
   
 ಪಠಾಣ್‌ಕೋಟ್, ಜ.3: ಶನಿವಾರ ಭಯೋತ್ಪಾದಕರ ಭೀಕರ ದಾಳಿಗೆ ಗುರಿಯಾದ ಪಠಾಣ್‌ಕೋಟ್‌ನ ವಾಯುನೆಲೆಯಲ್ಲಿ ಅವಿತುಕೊಂಡಿರುವ ಉಗ್ರರು ಹಾಗೂ ಭದ್ರತಾ ಸಿಬ್ಬಂದಿಯ ನಡುವೆ ರವಿವಾರ ಮತ್ತೆ ಭಾರೀ ಗುಂಡಿನ ಚಕಮಕಿ ನಡೆದಿದೆ. ಈ ಮಧ್ಯೆ ಭಯೋತ್ಪಾದಕರ ಜೊತೆ ನಡೆದ ದಾಳಿಯಲ್ಲಿ ಗಂಭೀರ ಗಾಯಗೊಂಡಿದ್ದ ಮೂವರು ಯೋಧರು ಶನಿವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ ಹಾಗೂ ಇನ್ನೋರ್ವ ಯೋಧ ಇಂದು ಗ್ರೆನೇಡ್ ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ದಾಳಿಯಲ್ಲಿ ಹುತಾತ್ಮರಾದ ಯೋಧರ ಸಂಖ್ಯೆ ಏಳಕ್ಕೇರಿದೆ.

ರವಿವಾರ ಭದ್ರತಾಪಡೆಗಳು ಇನ್ನೋರ್ವ ಉಗ್ರನನ್ನು ಹತ್ಯೆಗೈದಿರುವುದಾಗಿ ಹೇಳಲಾಗಿದೆ. ಪಠಾಣ್‌ಕೋಟ್‌ನ ವಾಯುಪಡೆ ನೆಲೆಯಲ್ಲಿ ಇನ್ನೂ ಇಬ್ಬರು ಉಗ್ರರು ಅವಿತುಕೊಂಡಿದ್ದು,ರವಿವಾರ ಅವರು ಗುಂಡಿನ ದಾಳಿ ನಡೆಸಿದ್ದಾರೆಂದು ಸೇನಾ ಮೂಲಗಳು ತಿಳಿಸಿವೆ. ಸಂಜೆ ಏಳುಗಂಟೆಯ ಹೊತ್ತಿಗೆ ಮತ್ತೆ ವಾಯು ನೆಲೆಯೊಳಗೆ ಸ್ಫೋಟದ ಸದ್ದು ಕೇಳಿಬಂದಿದೆ. ಭದ್ರತಾಪಡೆಗಳು ಶನಿವಾರ ನಡೆಸಿದ ಪ್ರತಿದಾಳಿಯಲ್ಲಿ ನಾಲ್ವರು ಉಗ್ರರು ಸಾವನ್ನಪ್ಪಿದ್ದರು.

ಮುಂದುವರಿದ ಘರ್ಷಣೆ
 ವಾಯುಪಡೆ ನೆಲೆಯಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆಗೆ ಸುಮಾರು 500 ಸೈನಿಕರಿರುವ ಐದು ತುಕಡಿಗಳು ಧಾವಿಸುತ್ತಿದ್ದಂತೆಯೇ, ಒಳಗೆ ಅವಿತಿದ್ದ ಉಗ್ರರು ಗುಂಡಿನ ದಾಳಿಯನ್ನು ನಡೆಸಿದರು. ಗುಂಡಿನ ಘರ್ಷಣೆ ಸಂಜೆಯವರೆಗೂ ಮುಂದುವರಿದಿದೆಯೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

  ಶನಿವಾರ ನಡೆದ ಭಯೋತ್ಪಾದಕ ದಾಳಿಯ ಬಳಿಕ ರಾತ್ರಿ ಕೂಂಬಿಂಗ್ ಕಾರ್ಯಾಚರಣೆ ಡೆದ ವೇಳೆ ಗ್ರೇನೆಡೊಂದು ಸ್ಫೋಟಿಸಿ, ಬಾಂಬ್ ನಿಷ್ಕ್ರಿಯದಳದ ಸದಸ್ಯ, ಕೇರಳ ನಿವಾಸಿ ಲೆ.ಕ.ನಿರಂಜನ್ ಸಾವನ್ನಪ್ಪಿದ್ದಾರೆ. ಮೃತ ಭಯೋತ್ಪಾದಕನೊಬ್ಬನ ಬಳಿಯಿದ್ದ ಸಜೀವ ಗ್ರೆನೇಡ್‌ಗಳನ್ನು ತೆಗೆಯುವ ಸಂದರ್ಭದಲ್ಲಿ ಅದು ಸ್ಫೋಟಿಸಿ ಅವರು ಸಾವನ್ನಪ್ಪಿದ್ದಾರೆ.

  ನಿನ್ನೆ ಪಠಾಣ್‌ಕೋಟ್ ವಾಯುಪಡೆ ನೆಲೆಯಲ್ಲಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಓರ್ವ ‘ಗರುಡ ’ ಕಮಾಂಡೊ ಹಾಗೂ ರಕ್ಷಣಾ ಭದ್ರತಾ ದಳ (ಡಿಎಸ್‌ಸಿ)ದ ಮೂವರು ಯೋಧರು ಸಾವನ್ನಪ್ಪಿದ್ದರು. ಕಾಳಗದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇತರ ಮೂವರು ಡಿಎಸ್‌ಸಿ ಯೋಧರು, ಮಧ್ಯರಾತ್ರಿಯ ವೇಳೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಗುಂಡಿನಕಾಳಗದಲ್ಲಿ ಪಾಕ್ ಮೂಲದ ನಾಲ್ವರು ಭಯೋತ್ಪಾದಕರು ಕೂಡಾ ಹತರಾಗಿದ್ದರು.

ಕಾಳಗದಲ್ಲಿ ಗಾಯಗೊಂಡಿರುವ ಇತರ 12 ಮಂದಿ ಡಿಎಸ್‌ಸಿ ಯೋಧರು ಹಾಗೂ ಓರ್ವ ಗರುಡ ಕಮಾಂಡೊನ ಪರಿಸ್ಥಿತಿ ಚಿಂತಾಜಕವಾಗಿರುವುದಾಗಿ ಮೂಲಗಳು ತಿಳಿಸಿವೆ.

ಈ ಮಧ್ಯೆ ಪಠಾಣ್‌ಕೋಟ್ ನೆಲೆಯ ಪ್ರಸಕ್ತ ಪರಿಸ್ಥಿತಿಯ ಬಗ್ಗೆ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾಹಿತಿ ನೀಡಿದ್ದಾರೆ. ಇವರಿಬ್ಬರೂ ತುಮಕೂರಿನ ಗುಬ್ಬಿ ಸಮೀಪ ಎಚ್‌ಲೆಲ್‌ನ ಹೆಲಿಕಾಪ್ಟರ್ ನಿರ್ಮಾಣ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 ಪಠಾಣ್‌ಕೋಟ್ ವಾಯುನೆಲೆಯು ಭಾರತ-ಪಾಕ್ ಗಡಿಯಿಂದ ಕೇವಲ 35 ಕಿ.ಮೀ. ದೂರದಲ್ಲಿದೆ.  ಪಠಾಣ್‌ಕೋಟ್ ವಾಯುನೆಲೆಯಲ್ಲಿ ಸಶಸ್ತ್ರಪಡೆಗಳು, ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಜಂಟಿಯಾಗಿ ಕೂಂಬಿಂಗ್ ಕಾರ್ಯಾಚರಣೆ ಯನ್ನು ಮುಂದುವರಿಸಿವೆ ಹಾಗೂ ಇಡೀ ಘಟನೆಯ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆಯನ್ನು ಆರಂಭಿಸಿದೆ.


 ಪ್ರಧಾನಿ ನರೇಂದ್ರ ಮೋದಿಯಿಂದ ದಿಲ್ಲಿಯಲ್ಲಿ ಉನ್ನತ ಮಟ್ಟದ ಸಭೆ

ಈ ಮಧ್ಯೆ ಪಠಾಣ್ ಕೋಟ್ ದಾಳಿ ಘಟನೆಗೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಹೊಸದಿಲ್ಲಿಯಲ್ಲಿ ರಾಷ್ಟ್ರೀಯ ಭದ್ರತಾಸಲಹೆಗಾರ ಅಜಿತ್ ಧೋವಲ್, ವಿದೇಶಾಂಗ ಕಾರ್ಯದರ್ಶಿ ಎಸ್.ಜೈ ಶಂಕರ್ ಜೊತೆ ಉನ್ನತ ಮಟ್ಟದ ಸಭೆ ನಡೆಸಿದರು.

ಪಾಕ್ ಗಡಿಯಲ್ಲಿ ಬಿಎಸ್‌ಎಫ್ ಯೋಧರ ಹೆಚ್ಚಳಕ್ಕೆ ಪಂಜಾಬ್ ಆಗ್ರಹ

ಪಠಾಣ್‌ಕೋಟ್, ಜ.3: ಕಳೆದ ಆರು ತಿಂಗಳುಗಳಲ್ಲಿ ಎರಡು ಭಯೋತ್ಪಾದಕ ದಾಳಿಗಳನ್ನು ಎದುರಿಸಿರುವ ಪಂಜಾಬ್, ಪಠಾಣ್‌ಕೋಟ್‌ನಲ್ಲಿ ಕಮಾಂಡೊ ಬೆಟಾಲಿಯನ್ ಹಾಗೂ ವಿಶೇಷ ಶಸ್ತ್ರಾಸ್ತ್ರ ಹಾಗೂ ತಂತ್ರಗಾರಿಕೆ ತಂಡ(ಸ್ವಾಟ್)ವನ್ನು ನಿಯೋಜಿಸುವುದಾಗಿ ರವಿವಾರ ಘೋಷಿಸಿದೆ. ಪಾಕ್ ಜೊತೆಗಿನ ಗಡಿ ಪ್ರದೇಶದಲ್ಲಿ, ಬಿಎಸ್‌ಎಫ್ ಯೋಧರ ಸಂಖ್ಯೆಯನ್ನು ಹೆಚ್ಚಿಸಬೇಕೆಂದು ಅದು ಕೇಂದ್ರವನ್ನು ಕೋರಿದೆ. ನೆರೆಯ ಜಮ್ಮುಕಾಶ್ಮೀರ ರಾಜ್ಯಕ್ಕೆ ಸರಿಸಮಾನವಾಗಿ ,ಪಾಕ್ ಜೊತೆಗಿನ ಪಂಜಾಬ್ ಗಡಿಯಲ್ಲಿಯೂ ಬಿಎಸ್‌ಎಫ್ ಯೋರ ನಿಯೋಜನೆಯನ್ನು ಹೆಚ್ಚಿಸಬೇಕೆಂದು ಭಾರತ ಸರಕಾರಕ್ಕೆ ಪತ್ರ ಬರೆದಿರುವುದಾಗಿ ಉಪಮುಖ್ಯಮಂತ್ರಿ ಸುಖಬೀರ್‌ಸಿಂಗ್ ಬಾದಲ್ ತಿಳಿಸಿದ್ದಾರೆ.

ಮಾಜಿ ರಾಜತಾಂತ್ರಿಕರ  ಜೊತೆ ಸುಷ್ಮಾ ಸಮಾಲೋಚನೆ

ಹೊಸದಿಲ್ಲಿ: ಪಠಾಣ್‌ಕೋಟ್ ವಾಯುಪಡೆ ನೆಲೆಯ ಮೇಲೆ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರವಿವಾರ ಮಾಜಿ ವಿದೇಶಾಂಗ ಕಾರ್ಯದರ್ಶಿಗಳು ಹಾಗೂ ಪಾಕ್‌ನಲ್ಲಿ ಈ ಹಿಂದೆ ರಾಯಭಾರಿಗಳಾಗಿ ಸೇವೆ ಸಲ್ಲಿಸಿದ್ದವರ ಜೊತೆ ಸಮಾಲೋಚನೆ ನಡೆಸಿದರು. ಪಾಕ್ ಜೊತೆ ಅನುಸರಿಸಬೇಕಾದ ಕಾರ್ಯತಂತ್ರದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತೆಂದು ಅಧಿಕೃತ ಮೂಲಗಳು ತಿಳಿಸಿವೆ.

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನೇತೃತ್ವದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಎಸ್.ಕೆ.ಲಾಂಬಾ, ಜಿ.ಪಾರ್ಥಸಾರಥಿ, ಶ್ಯಾಮ್ ಶರಣ್,ಶಿವಶಂಕರ್ ಮೆನನ್, ಸತ್ಯಬ್ರತ ಪಾಲ್, ಶರದ್ ಸಬರ್‌ವಾಲ್ ಹಾಗೂ ಟಿಸಿಎ ರಾಘವನ್ ಪಾಲ್ಗೊಂಡಿದ್ದರು.

 ಸಭೆಯ ಬಗ್ಗೆ ಯಾವುದೇ ವಿವರಗಳನ್ನು ನೀಡಲು ವಿದೇಶಾಂಗ ಸಚಿವಾಲಯ ನಿರಾಕರಿಸಿದೆ.ಆದರೆ ಸಭೆಯಲ್ಲಿ ಪಾಕ್ ಕುರಿತ ನೀತಿಯ ಬಗ್ಗೆ ಸಮಾಲೋಚನೆ ನಡೆಸಲಾಯಿತೆಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News