×
Ad

ಕರೆ ಕಡಿತ ಪರಿಹಾರ ನೀಡಿಕೆ ಆರಂಭಿಸಿ: ಟೆಲಿಕಾಂ ಕಂಪೆನಿಗಳಿಗೆ ಟ್ರಾಯ್ ಸೂಚನೆ

Update: 2016-01-03 23:53 IST

ಹೊಸದಿಲ್ಲಿ, ಜ.3: ಜ.1ರಿಂದ ಜಾರಿಗೊಂಡಿರುವ ಕಾಲ್ ಡ್ರಾಪ್ ಅಥವಾ ಕರೆ ಕಡಿತ ನಿಯಮಾವಳಿಗಳ ಪಾಲನೆಯನ್ನು ಖಚಿತ ಪಡಿಸುವಂತೆ ಟ್ರಾಯ್ ಟೆಲಿಕಾಮ್ ಕಂಪೆನಿಗಳಿಗೆ ಲಿಖಿತ ಸೂಚನೆಯನ್ನು ನೀಡಿದೆ. ಆದರೆ ತಮ್ಮ ಮೊಂಡುತನವನ್ನು ಮುಂದುವರಿಸಿರುವ ಟೆಲಿಕಾಮ್ ಕಂಪೆನಿಗಳು ನ್ಯಾಯಾಲಯವು ಆದೇಶಿಸಿದರೆ ಮಾತ್ರ ತಾವು ಚಂದಾದಾರರಿಗೆ ಕರೆ ಕಡಿತ ಪರಿಹಾರವನ್ನು ಪಾವತಿಸುವುದಾಗಿ ಹೇಳಿವೆ.

2015,ಅ.16ರಂದು ದೂರಸಂಪರ್ಕ ಬಳಕೆದಾರರ ಸಂರಕ್ಷಣೆ ನಿಯಮಾವಳಿಗಳಿಗೆ ತಿದ್ದುಪಡಿಯೊಂದನ್ನು ಹೊರಡಿಸಿರುವ ಟ್ರಾಯ್, ನೆಟ್‌ವರ್ಕ್‌ನಲ್ಲಿನ ತಾಂತ್ರಿಕ ದೋಷಗಳಿಂದಾಗಿ ಕರೆಗಳು ಕಡಿತಗೊಂಡರೆ ಮೊಬೈಲ್ ಸೇವೆಗಳನ್ನು ಒದಗಿಸುವ ಕಂಪೆನಿಗಳಿಂದ ಚಂದಾದಾರರಿಗೆ ಪರಿಹಾರ ನೀಡಿಕೆಯನ್ನು ಕಡ್ಡಾಯಗೊಳಿಸಿರುವ ನಿಯಮವೊಂದನ್ನು ಸೇರಿಸಿದೆ. ಇದರನ್ವಯ ಟೆಲಿಕಾಮ್ ಕಂಪೆನಿಗಳು ಪ್ರತಿ ಕರೆ ಕಡಿತಕ್ಕೆ ಒಂದು ರೂ.ಪರಿಹಾರವನ್ನು ಪಾವತಿಸಬೇಕಾಗುತ್ತದೆ ಮತ್ತು ಇದಕ್ಕೆ ದಿನವೊಂದಕ್ಕೆ ಮೂರು ರೂ.ಗರಿಷ್ಠ ಮಿತಿಯನ್ನು ವಿಧಿಸಲಾಗಿದೆ.

ಈ ನಿಯಮದ ವಿರುದ್ಧ ಟೆಲಿಕಾಮ್ ಕಂಪೆನಿಗಳು ದಿಲ್ಲಿ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿವೆ. ವಿಷಯವು ಈಗ ವಿಚಾರಣಾಧೀನವಾಗಿದ್ದು, ಚಂದಾದಾರರಿಗೆ ಪರಿಹಾರ ಪಾವತಿಸುವಂತೆ ನ್ಯಾಯಾಲಯವು ನಮಗೆ ಆದೇಶಿಸಿದರೆ ನಾವು ಅದನ್ನು ಪಾಲಿಸುತ್ತೇವೆ ಎಂದು ಟೆಲಿಕಾಮ್ ಕಂಪೆನಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ ಸೂದ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು. ನ್ಯಾಯಾಲಯವು ನೂತನ ನಿಯಮಕ್ಕೆ ಯಾವುದೇ ತಡೆಯಾಜ್ಞೆಯನ್ನು ನೀಡಿಲ್ಲ ಎನ್ನುವುದು ನಮ್ಮ ಅರಿವಿನಲ್ಲಿದೆ ಎಂದರು.

ಪ್ರಕರಣದ ಮುಂದಿನ ವಿಚಾರಣೆ ದಿನಾಂಕವಾಗಿರುವ ಜ.6ರವರೆಗೆ ಟೆಲಿಕಾಮ್ ಕಂಪೆನಿಗಳ ವಿರುದ್ಧ ತಾನು ಯಾವುದೇ ಬಲವಂತದ ಕ್ರಮವನ್ನು ಜರಗಿಸುವುದಿಲ್ಲ ಎಂದು ಟ್ರಾಯ್ ನ್ಯಾಯಾಲಯಕ್ಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News