×
Ad

5 ಪ್ರಮುಖ ಶಾಸನಗಳಿಗೆ ರಾಷ್ಟ್ರಪತಿ ಅಸ್ತು

Update: 2016-01-03 23:57 IST

ಹೊಸದಿಲ್ಲಿ,ಜ.3: ಆಯ್ದ ಹೈಕೋರ್ಟ್ ಗಳಲ್ಲಿ ವಾಣಿಜ್ಯ ಮೊಕದ್ದಮೆಗಳ ಕುರಿತ ವಿಚಾರಣಾ ನ್ಯಾಯಪೀಠಗಳ ಸ್ಥಾಪನೆ ಹಾಗೂ ಉನ್ನತ ಮಟ್ಟದ ಔದ್ಯಮಿಕ ಮೊಕದ್ದಮೆಗಳನ್ನು ಮಧ್ಯಸ್ಥಿಕೆ ಸಮಿತಿ(ಆರ್ಬಿಟ್ರೇಶನ್) ಯ ಮೂಲಕ ಇತ್ಯರ್ಥಪಡಿಸುವ ಕುರಿತಾದ ಕಾನೂನುಗಳು ಸೇರಿದಂತೆ ಐದು ಶಾಸನಗಳಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅನುಮೋದನೆ ನೀಡಿದ್ದಾರೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವ್ಯಕ್ತಿಗಳ ವಿರುದ್ಧ ಅಪರಾಧಗಳನ್ನು ಎಸಗಿದವರಿಗೆ ಕಠಿಣ ಶಿಕ್ಷೆಯನ್ನು ವಿಧಿಸುವ ಕುರಿತಾದ ಕಾನೂನಿಗೂ ರಾಷ್ಟ್ರಪತಿ ಸಹಿಹಾಕಿದ್ದಾರೆ.

  ಮಧ್ಯಸ್ಥಿಕೆ ಹಾಗೂ ಸಂಧಾನ (ತಿದ್ದುಪಡಿ) ಕಾಯ್ದೆ, ಪರಿಶಿಷ್ಟ ಜಾತಿಗಳ ಹಾಗೂ ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ತಿದ್ದುಪಡಿ ಕಾಯ್ದೆ, ವಾಣಿಜ್ಯ ನ್ಯಾಯಾಲಯಗಳು, ವಾಣಿಜ್ಯ ವಿಭಾಗ ಹಾಗೂ ವಾಣಿಜ್ಯ ಮೇಲ್ಮನವಿಗಳ ಹೈಕೋರ್ಟ್ ಕಾಯ್ದೆ, ಅಣುಶಕ್ತಿ (ತಿದ್ದುಪಡಿ ) ಕಾಯ್ದೆ ಹಾಗೂ ಬೋನಸ್ ಪಾವತಿ (ತಿದ್ದುಪಡಿ) ಕಾಯ್ದೆ 2015, ಇವುಗಳಿಗೂ ಅವರು ಗುರುವಾರ ಅನುಮೋದನೆ ನೀಡಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ.

 ಸರಕಾರಿ ಸ್ವಾಮ್ಯದ ಭಾರತೀಯ ಅಣುಶಕ್ತಿ ನಿಗಮ (ಎನ್‌ಪಿಸಿಐಎಲ್)ವು, ಅಣುಶಕ್ತಿ ಕ್ಷೇತ್ರಕ್ಕೆ ಸಂಬಂಧಿಸಿ ಸಾರ್ವಜನಿಕ ರಂಗದ ಇತರ ಸಂಸ್ಥೆಗಳ ಜೊತೆ ಒಪ್ಪಂದವನ್ನು ಏರ್ಪಡಿಸಿಕೊಳ್ಳುವುದಕ್ಕೆ , ಅಣುಶಕ್ತಿ (ತಿದ್ದುಪಡಿ) ಕಾಯ್ದೆ ಅವಕಾಶ ನೀಡುತ್ತದೆ.

    2015ರ ಬೋನಸ್ ಪಾವತಿ (ತಿದ್ದುಪಡಿ) ಕಾಯ್ದೆಯು, ಮಾಸಿಕ ಬೋನಸ್‌ಗೆ ಇರುವ 3, 500 ರೂ.ಗಳ ಮಿತಿಯನ್ನು 7 ಸಾವಿರಕ್ಕೆ ಹೆಚ್ಚಿಸಲು ಅನುಮತಿ ನೀಡುತ್ತದೆ. ಬೋನಸ್ ಪಾವತಿಗೆ ಇರುವ ಅರ್ಹತೆಯ ಮಿತಿಯನ್ನು ಮಾಸಿಕ 10 ಸಾವಿರ ರೂ.ಗಳಿಂದ 21 ಸಾವಿರ ರೂ.ಗೆ ಹೆಚ್ಚಿಸಲು ಅದು ಅವಕಾಶ ನೀಡುತ್ತದೆ. ಈ ಕಾಯ್ದೆಯು ಬೋನಸ್ ಪಾವತಿಗೆ ಇರುವ ಅರ್ಹತಾ ವೇತನ ಮಿತಿಯನ್ನು 10 ಸಾವಿರ ರೂ.ಗಳಿಂದ 21 ಸಾವಿರ ರೂ.ಗೆ ಏರಿಸಿದೆ.

 ಪರಿಶಿಷ್ಟ ಜಾತಿಗಳು ಹಾಗೂ ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ತಿದ್ದುಪಡಿ ಕಾಯ್ದೆಯು, ಪರಿಶಿಷ್ಟ ಮಹಿಳೆಯರ ಮೇಲೆ ಹಲ್ಲೆ ನಡೆಸುವುದನ್ನು ಹಾಗೂ ಅವರನ್ನು ಲೈಂಗಿಕವಾಗಿ ಶೋಷಿಸುವುದನ್ನು ಅಪರಾಧವೆಂದು ಪರಿಗಣಿಸುತ್ತದೆ.

  ಪರಿಶಿಷ್ಟ ಮಹಿಳೆಯನ್ನು ಲೈಂಗಿಕ ಭಾವನೆಯಿಂದ ಆಕೆಯ ಒಪ್ಪಿಗೆಯಿಲ್ಲದೆ ಉದ್ದೇಶಪೂರ್ವಕವಾಗಿ ಸ್ಪರ್ಶಿಸುವುದನ್ನು, ಲೈಂಗಿಕವಾದ ಪದ ಬಳಕೆ, ಲೈಂಗಿಕವಾದ ವರ್ತನೆಗಳು ಹಾಗೂ ಸನ್ನೆಗಳನ್ನು ಮಾಡುವುದು, ಆಕೆಯನ್ನು ದೇವಾಲಯದಲ್ಲಿ ದೇವದಾಸಿಯನ್ನಾಗಿ ಮಾಡುವುದು ಅಥವಾ ಇಂತಹ ಯಾವುದೇ ಆಚರಣೆಯನ್ನು ಈ ಕಾಯ್ದೆಯಡಿ ಅಪರಾಧವೆಂಬುದಾಗಿ ಪರಿಗಣಿಸಲಾಗುತ್ತದೆ.

 ಈ ಎಲ್ಲಾ ವಿಧೇಯಕಗಳಿಗೆ ಇತ್ತೀಚೆಗೆ ಮುಕ್ತಾಯಗೊಂಡ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಅಂಗೀಕಾರ ದೊರೆತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News