ಸಕಲ ಸರಕಾರಿ ಗೌರವಗಳೊಂದಿಗೆ ಲೆ.ಕ.ನಿರಂಜನ್‌ಗೆ ಅಂತಿಮ ವಿದಾಯ
ಪಾಲಕ್ಕಾಡ್(ಕೇರಳ),ಜ.5: ಪಠಾಣ್‌ಕೋಟ್ ವಾಯುಪಡೆ ನೆಲೆಯ ಮೇಲೆ ಭಯೋತ್ಪಾದಕ ದಾಳಿಗಳ ಸಂದರ್ಭ ಗ್ರೆನೇಡ್‌ವೊಂದನ್ನು ನಿಷ್ಕ್ರಿಯಗೊಳಿಸುತ್ತಿದ್ದಾಗ ಅದು ಸ್ಫೋಟಗೊಂಡು ಹುತಾತ್ಮ ಪಟ್ಟಕ್ಕೇರಿದ ಲೆಕಇ.ಕೆ.ನಿರಂಜನ್ ಅವರಿಗೆ ಜನತೆ ಮಂಗಳವಾರ ಭಾವಪೂರ್ಣ ವಿದಾಯವನ್ನು ಕೋರಿತು. ಇಲ್ಲಿಗೆ ಸಮೀಪದ ಎಳಂಬುಳಶ್ಶೇರಿಯ ತನ್ನ ಪೂರ್ವಜರ ಮನೆಯ ಬಳಿ ಸಕಲ ಸರಕಾರಿ ಗೌರವಗಳೊಂದಿಗೆ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತತು.
32ರ ಹರೆಯದ ಎನ್‌ಎಸ್‌ಜಿಯ ಬಾಂಬ್ ತಜ್ಞ ನಿರಂಜನ್ ‘ಹರೇ ರಾಮ್ ಹರೇ ಕೃಷ್ಣ ’ಮಂತ್ರ ಎಲ್ಲೆಡೆ ಅನುರಣಿಸುತ್ತಿರುವಂತೆ ಭೂತಾಯಿಯ ಮಡಿಲು ಸೇರಿದರು. ಸೇನಾ ಸಿಬ್ಬಂದಿಯ ಕಹಳೆ ನಿನಾದಗಳ ನಡುವೆ ಗನ್ ಸೆಲ್ಯೂಟ್ ಸೇರಿದಂತೆ ಸಂಪೂರ್ಣ ಮಿಲಿಟರಿ ಗೌರವವನ್ನು ಅಗಲಿದ ವೀರನಿಗೆ ನೀಡಲಾಯಿತು.
ರಾಜ್ಯ ಸರಕಾರದ ಪ್ರತಿನಿಧಿಯಾಗಿ ಗೃಹಸಚಿವ ರಮೇಶ ಚೆನ್ನಿತ್ತಲ ಅವರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ನಿರಂಜನ ತಂದೆ ಇ.ಕೆ.ಶಿವರಾಜನ್ ಮತ್ತು ಇತರ ಬಂಧುಗಳು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಬೆಳಿಗ್ಗೆ ನಿರಂಜನ್‌ರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಕೆಯುಪಿ ಶಾಲೆಯಲ್ಲಿಡಲಾಗಿದ್ದು, ಶಾಲಾ ಮಕ್ಕಳು ಸೇರಿದಂತೆ ಸಾವಿರಾರು ಜನರು ಮೃತಯೋಧನ ಅಂತಿಮ ದರ್ಶನಕ್ಕಾಗಿ ಸಾಲುಗಟ್ಟಿ ನಿಂತಿದ್ದರು.
ನಿನ್ನೆ ರಾತ್ರಿ ಬೆಂಗಳೂರಿನಿಂದ ಇಲ್ಲಿಗೆ ಹೆಲಿಕಾಪ್ಟರ್ ಮೂಲಕ ತರಲಾಗಿದ್ದ ಪಾರ್ಥಿವ ಶರೀರವನ್ನು ಪುಷ್ಪಾಲಂಕೃತ ಸೇನಾ ವಾಹನದಲ್ಲಿ ಅವರ ಸ್ವಗ್ರಾಮಕ್ಕೆ ಸಾಗಿಸಲಾಗಿತ್ತು. ಹುತಾತ್ಮ ಯೋಧನನ್ನು ಕೊನೆಯ ಬಾರಿ ಕಾಣಲು ಹಲವೆಡೆಗಳಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಕಾದು ನಿಂತಿದ್ದ ಜನರು ವಾಹನ ಬರುತ್ತಿದ್ದಂತೆ ಪುಷ್ಪಗಳನ್ನು ಎರಚಿ ಗೌರವ ಸಲ್ಲಿಸಿದರು. ಪಾರ್ಥಿವ ಶರೀರ ಎಳಂಬುಳಶ್ಶೇರಿ ತಲುಪುತ್ತಿದ್ದಂತೆ ಗ್ರಾಮಸ್ಥರ ಆಕ್ರಂದನ ಕಟ್ಟೆಯೊಡೆದಿದ್ದು,ಎಲ್ಲೆಲ್ಲೂ ರಾಷ್ಟ್ರಭಕ್ತಿಯ ಘೋಷಣೆಗಳು ಮೊಳಗುತ್ತಿದ್ದವು.
ಮುಖ್ಯಮಂತ್ರಿ ಉಮ್ಮನ್ ಚಾಂಡಿ,ಅವರ ಸಂಪುಟ ಸಚಿವರಾದ ಕೆ.ಬಾಬು ಮತ್ತು ಎ.ಪಿ.ಅನಿಲ ಕುಮಾರ್‌ಅವರು ತಡರಾತ್ರಿಯೇ ನಿರಂಜನ್ ನಿವಾಸಕ್ಕೆ ತೆರಳಿ ಶ್ರದ್ಧಾಂಜಲಿಗಳನ್ನು ಸಲ್ಲಿಸಿದರು.