×
Ad

ಪಠಾಣ್‌ಕೋಟ್ ದಾಳಿ: ಭದ್ರತಾ ಲೋಪ ಒಪ್ಪಿಕೊಂಡ ಪಾರಿಕ್ಕರ್

Update: 2016-01-05 23:37 IST

ಪಠಾಣ್‌ಕೋಟ್, ಜ.5: ಭಯೋತ್ಪಾದಕ ದಾಳಿಗೆ ಗುರಿಯಾದ ಇಲ್ಲಿನ ವಾಯುಪಡೆ ನೆಲೆಯಲ್ಲಿ ಭದ್ರತಾ ಲೋಪವಿರುವುದನ್ನು ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಮಂಗಳವಾರ ಒಪ್ಪಿಕೊಂಡಿದ್ದಾರೆ.


ಇಲ್ಲಿನ ಮುಂಚೂಣಿ ವಾಯುಪಡೆ ನೆಲೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 36 ಗಂಟೆಗಳಿಗೂ ಅಧಿಕ ಕಾಲ ನಡೆದ ಕಾರ್ಯಾಚರಣೆಯಲ್ಲಿ ಎಲ್ಲ ಆರೂ ಭಯೋತ್ಪಾದಕರನ್ನು ಹತ್ಯೆಗೈಯಲಾಗಿದೆ ಎಂದರು.


ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯು ಶನಿವಾರ ಮುಂಜಾನೆ 3:30ಕ್ಕೆ ಆರಂಭವಾಗಿತ್ತು.


ಯಾವುದಾದರೂ ಪ್ರಮುಖ ಭದ್ರತಾ ಲೋಪವು ಭಯೋತ್ಪಾದಕ ದಾಳಿಗೆ ಕಾರಣವಾಯಿತೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘‘ಕೆಲವು ಭದ್ರತಾ ಲೋಪಗಳು ನನ್ನ ಗಮನಕ್ಕೆ ಬಂದಿವೆ. ಆದರೆ, ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳಲಾಗಿದೆ ಎಂದು ನನಗನಿಸುವುದಿಲ್ಲ’’ ಎಂದರು.


ತನಿಖೆ ಪೂರ್ಣಗೊಂಡಾಗ ಎಲ್ಲವೂ ಸ್ಪಷ್ಟಗೊಳ್ಳುವುದು ಎಂದು ಹೇಳಿದ ಪಾರಿಕ್ಕರ್, ಭದ್ರತೆಗೆ ಸಂಬಂಧಿಸಿದ ಪ್ರತಿಯೊಂದು ವಿಷಯದ ಬಗ್ಗೆ ಚರ್ಚಿಸಲು ಸಾಧ್ಯವಿಲ್ಲ ಎಂದರು.


ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ವಹಿಸಿದ ಪಾತ್ರವನ್ನು ರಕ್ಷಣಾ ಸಚಿವರು ಶ್ಲಾಘಿಸಿದರು. ಆದಾಗ್ಯೂ, 24 ಕಿಲೋ ಮೀಟರ್ ಸುತ್ತಳತೆ ಹಾಗೂ 2,000 ಎಕರೆ ವಿಸ್ತೀರ್ಣ ಹೊಂದಿರುವ ವಾಯು ನೆಲೆಯೊಳಗೆ ನುಸುಳಲು ಭಯೋತ್ಪಾದಕರಿಗೆ ಹೇಗೆ ಸಾಧ್ಯವಾಯಿತು ಎಂಬ ಬಗ್ಗೆ ತಾನು ಚಿಂತಿತನಾಗಿದ್ದೇನೆ ಎಂದರು.


ಭಯೋತ್ಪಾದಕ ದಾಳಿಗೂ ಪಾಕಿಸ್ತಾನಕ್ಕೂ ಸಂಬಂಧವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪಾರಿಕ್ಕರ್, ಭಯೋತ್ಪಾದಕರು ಬಳಸಿರುವ ಕೆಲವು ಸಲಕರಣೆಗಳು ಪಾಕಿಸ್ತಾನದಲ್ಲಿ ತಯಾರಾದವು ಎಂಬ ಮಾಹಿತಿಯಿದೆ ಎಂದರು.


ಭಯೋತ್ಪಾದಕರ ಬಳಿ 40-50 ಕೆಜಿ ಗುಂಡುಗಳು, ಸುಧಾರಿತ ಅಂಡರ್ ಬ್ಯಾರಲ್ ಗ್ರೆನೇಡ್ ಲಾಂಚರ್‌ನಿಂದ ಸಿಡಿಸುವ ಮೋರ್ಟರ್‌ಗಳು ಮತ್ತು ಕೆಲವು ಮ್ಯಾಗಝಿನ್‌ಗಳಿದ್ದವು ಎಂದು ಅವರು ತಿಳಿಸಿದರು.


ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಎಲ್ಲ ಏಳು ಭದ್ರತಾ ಸಿಬ್ಬಂದಿಯನ್ನು ಹುತಾತ್ಮರು ಎಂಬುದಾಗಿ ಪರಿಗಣಿಸಲಾಗುವುದು ಎಂದು ಅವರು ಘೋಷಿಸಿದರು. ಯುದ್ಧದಲ್ಲಿ ಸಾವು ಸಂಭವಿಸಿದರೆ ಸಿಗುವ ಎಲ್ಲ ಸೌಲಭ್ಯಗಳು ಅವರಿಗೆ ಸಿಗುವುದು.


ಗರುಡ್ ಕಮಾಂಡೊ ಗುರುಸೇವಕ್ ಸಿಂಗ್‌ರನ್ನು ಹೊರತುಪಡಿಸಿ ಉಳಿದ ಸೈನಿಕರ ಸಾವು ನೇರ ಮುಖಾಮುಖಿಯಲ್ಲಿ ನಡೆದಿಲ್ಲ ಎಂದು ಪಾರಿಕ್ಕರ್ ಹೇಳಿದರು. ‘‘ಡಿಫೆನ್ಸ್ ಸೆಕ್ಯುರಿಟಿ ಕಾರ್ಪ್ಸ್‌ನ ಐವರು ಸಿಬ್ಬಂದಿಯ ಸಾವು ದುರದೃಷ್ಟದಿಂದಾಗಿ ಸಂಭವಿಸಿದೆ’’ ಎಂದರು.


‘‘ಈಗ ಒಳಗೆ ಶಂಕಿತ ಭಯೋತ್ಪಾದಕರು ಯಾರೂ ಇಲ್ಲ. ಶೋಧ ಕಾರ್ಯಾಚರಣೆ ಮುಗಿಯುವವರೆಗೂ ನಾನು ನಕಾರಾತ್ಮಕ ವರದಿಯನ್ನು ನೀಡುವುದಿಲ್ಲ. ಶೋಧ ಕಾರ್ಯಾಚರಣೆ ನಾಳೆಯ ವೇಳೆ ಮುಕ್ತಾಯಗೊಳ್ಳಬಹುದು’’ ಎಂದು ಪ್ರಶ್ನೆಗಳಿಗೆ ಉತ್ತರಿಸಿದ ಪಾರಿಕ್ಕರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News