ಅರೆಸೇನಾ ಪಡೆಗಳ ಕಾನ್‌ಸ್ಟೇಬಲ್ ಹುದ್ದೆ: ಮಹಿಳೆಯರಿಗೆ ಶೇ.33 ಮೀಸಲಾತಿ
ಹೊಸದಿಲ್ಲಿ, ಜ.5: ಅರೆಸೇನಾ ಪಡೆ ಸಿಆರ್‌ಪಿಎಫ್ ಹಾಗೂ ಸಿಐಎಸ್‌ಎಫ್‌ಗಳಲ್ಲಿ ಶೇ.33ರಷ್ಟು ಹಾಗೂ ಗಡಿ ಸಂರಕ್ಷಿಸುತ್ತಿರುವ ಬಿಎಸ್‌ಎಫ್, ಎಸ್‌ಎಸ್‌ಬಿ ಹಾಗೂ ಐಟಿಬಿಪಿಗಳಲ್ಲಿ ಶೇ.15ರಷ್ಟು ಮಹಿಳೆಯರು ಶೀಘ್ರವೇ ಕಾನ್‌ಸ್ಟೇಬಲ್ ಮಟ್ಟದ ಸಿಬ್ಬಂದಿಯಾಗಿ ನೇಮಕಗೊಳ್ಳಲಿದ್ದಾರೆ.
ಈ ಪಡೆಗಳಲ್ಲಿ ಒಟ್ಟು ಸುಮಾರು 9 ಲಕ್ಷ ಸಿಬ್ಬಂದಿಯಿದ್ದು, ಅವರಲ್ಲಿ ಮಹಿಳೆಯರ ಸಂಖ್ಯೆ ಈಗ ಕೇವಲ 20 ಸಾವಿರದಷ್ಟಿದೆ. ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್) ಹಾಗೂ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗಳಲ್ಲಿ (ಸಿಐಎಸ್‌ಎಫ್) ಕಾನ್‌ಸ್ಟೇಬಲ್ ಮಟ್ಟದ ಹುದ್ದೆಗಳಲ್ಲಿ ಶೇ.33 ಹಾಗೂ ಗಡಿಗಳಲ್ಲಿ ಕಾಯುವ ಗಡಿ ಸಂರಕ್ಷಣಾ ಪಡೆ (ಬಿಎಸ್‌ಎಫ್), ಸಶಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ) ಮತ್ತು ಇಂಡೊ-ಟಿಬೇಟಿಯನ್ ಗಡಿ ಪೊಲೀಸ್‌ಗಳಲ್ಲಿ (ಐಟಿಬಿಪಿ) ಶೇ.14-15 ಮೀಸಲು ಹುದ್ದೆಗಳ ನೇಮಕಾತಿ ಶೀಘ್ರವೇ ಆರಂಭಗೊಳ್ಳಲಿದೆ.
ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಿಸಲು ಕಾನ್‌ಸ್ಟೇಬಲ್ ಮಟ್ಟದ ಹುದ್ದೆಗಳಿಗೆ ಶೇ.33ರಷ್ಟು ಮಹಿಳೆಯರನ್ನು ಸೇರಿಸಿಕೊಳ್ಳಲು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮಂಜೂರಾತಿ ನೀಡಿದ್ದಾರೆಂದು ಗೃಹ ಸಚಿವಾಲಯದ ಹೇಳಿಕೆಯೊಂದು ತಿಳಿಸಿದೆ. ಮಹಿಳಾ ಸಬಲೀಕರಣ ಕುರಿತಾದ ಸಮಿತಿಯು ತನ್ನ 6ನೆ ವರದಿಯಲ್ಲಿ ಮಾಡಿರುವ ಶಿಫಾರಸಿನಂತೆ ಈ ಕ್ರಮ ಕೈಗೊಳ್ಳಲಾಗಿದೆ.
ಅರೆ ಸೇನಾ ಪಡೆಗಳಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ಒದಗಿಸುವ ತುರ್ತು ಅಗತ್ಯವಿದೆಯೆಂದು ಅದು ಸಲಹೆ ನೀಡಿದೆ.
ಹೆಚ್ಚಾಗಿ ಕಾನೂನು-ಶಿಸ್ತು ಕರ್ತವ್ಯ ಹಾಗೂ ನಕ್ಸಲ್-ವಿರೋಧಿ ಕಾರ್ಯಾಚರಣೆಗಳಿಗೆ ನಿಯೋಜಿಸಲಾಗುವ ಸಿಆರ್‌ಪಿಎಫ್, ವಿಶ್ವದಲ್ಲೇ ಅತಿ ದೊಡ್ಡ ಅರೆ ಸೇನಾ ಪಡೆಯಂದು ಪರಿಗಣಿಸಲಾಗಿದೆ. ಅದರಲ್ಲಿ ಕೇವಲ ಸುಮಾರು 6,300 ಮಹಿಳೆಯರಿದ್ದಾರೆ.
ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯು ಇತ್ತೀಚೆಗೆ ದಿಲ್ಲಿ ಪೊಲೀಸ್ ಪಡೆಯಲ್ಲಿ ಕೇವಲ ಶೇ.9ಕ್ಕಿಂತ ಸ್ವಲ್ಪ ಹೆಚ್ಚು ಮಹಿಳಾ ಸಿಬ್ಬಂದಿಯಿರುವುದನ್ನು ಕಂಡುಕೊಂಡಿತ್ತು. ಅವರ ಸಂಖ್ಯೆ ಶೇ.33ಕ್ಕೆ ಹೆಚ್ಚುವಂತೆ ಖಚಿತಪಡಿಸಲು ಅದು ಗೃಹ ಸಚಿವಾಲಯಕ್ಕೆ ಸೂಚಿಸಿತ್ತು.
ಆದಾಗ್ಯೂ, 2015ರ ಮಾ.20ರಂದು ಭಾರತ ಸರಕಾರವು ಸಮಾಂತರವಾಗಿ ಹಾಗೂ ಪ್ರತಿ ಪ್ರವರ್ಗದಲ್ಲಿ (ಎಸ್ಸಿ,ಎಸ್ಟಿ, ಒಬಿಸಿ ಹಾಗೂ ಇತರ) ದಿಲ್ಲಿ ಪೊಲೀಸ್ ಸಹಿತ ಎಲ್ಲ ಕೇಂದ್ರಾಡಳಿತ ಪ್ರದೇಶಗಳಲ್ಲಿ, ಕಾನ್‌ಸ್ಟೇಬಲ್‌ಗಳಿಂದ ಸಬ್ ಇನ್‌ಸ್ಪೆಕ್ಟರ್‌ಗಳವರೆಗಿನ ನೇರ ನೇಮಕಾತಿಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಗೆ ಅನುಮೋದನೆ ನೀಡಿತ್ತು.