ನೀವು ಬೇಡವೆಂದರೆ ಸರ್ದಾರ್ ಜೋಕ್‌ಗಳನ್ನು ನಿಷೇಧಿಸುವೆ: ಸಿಖ್ ಸಮುದಾಯಕ್ಕೆ ಸುಪ್ರೀಂ ಕೋರ್ಟ್
ಹೊಸದಿಲ್ಲಿ, ಜ. 5: ತಮ್ಮ ಕುರಿತ ಸಾಂತಾ-ಬಾಂತಾ ಹಾಸ್ಯಗಳ ಬಗ್ಗೆ ಸರ್ದಾರ್‌ಗಳು ಕೆಟ್ಟ ಭಾವನೆ ಹೊಂದಿದ್ದಾರೆಯೇ? ಹಾಗಿದ್ದರೆ, ತಮ್ಮ ಬಗ್ಗೆ ಹಾಸ್ಯಗಳನ್ನು ಪ್ರಸಾರಿಸುವ ವೆಬ್‌ಸೈಟ್‌ಗಳನ್ನು ನಿಷೇಧಿಸಬೇಕೆಂದು ಕೋರುವ ಮನವಿಯನ್ನು ತಾನು ಗಂಭೀರವಾಗಿ ಪರಿಗಣಿಸುವುದಾಗಿ ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.
‘‘ಈ ವಿಷಯದಲ್ಲಿ ನಿಮ್ಮ ಸಮುದಾಯ ನಿಮ್ಮಂದಿಗಿದೆಯೇ?’’ ಎಂದು ನ್ಯಾಯಪೀಠವು ವಕೀಲೆ ಹರ್ವಿಂದರ್ ಚೌಧರಿಯನ್ನು ಕೇಳಿತು. ಅವರು ಈ ವಿಷಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ದಿಲ್ಲಿ ಸಿಖ್ ಗುರುದ್ವಾರ ಪ್ರಬಂಧಕ ಸಮಿತಿಯೂ ಇದೇ ವಿಷಯದಲ್ಲಿ ಅರ್ಜಿಯೊಂದನ್ನು ಸಲ್ಲಿಸಿದೆ ಹಾಗೂ ಅದು ನ್ಯಾಯಾಲಯದಲ್ಲಿ ವಾದಿಸಲು ರಾಮ್ ಜೇಠ್ಮಲಾನಿಯನ್ನು ಒಳಗೊಂಡ ಹಿರಿಯ ವಕೀಲರ ಗಡಣವೊಂದನ್ನು ನೇಮಿಸಿದೆ ಎಂದು ಹರ್ವಿಂದರ್ ಇದಕ್ಕೆ ಪ್ರತಿಕ್ರಿಯಿಸಿದರು.
ಆಗ ನ್ಯಾಯಾಲಯ, ಈ ವಿಷಯದ ಬಗ್ಗೆ ಸ್ವತಃ ಸರ್ದಾರ್ ಆಗಿ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ.ಎಸ್. ಪಟ್ವಾಲಿಯರನ್ನು ಕೇಳಿತು. ಆಗ ವಕೀಲೆ ಜೋರು ದನಿಯಲ್ಲಿ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಪ್ರಕರಣದ ಮುಂದಿನ ವಿಚಾರಣೆಯನ್ನು ದಿಲ್ಲಿ ಸಿಖ್ ಗುರುದ್ವಾರ ಪ್ರಬಂಧಕ ಸಮಿತಿಯ ಅರ್ಜಿಯ ಜೊತೆಗೆ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿತು.