ಇಬ್ಬರು ನಕ್ಸಲರ ಹತ್ಯೆ, ಓರ್ವ ಸೆರೆ
Update: 2016-01-06 00:36 IST
ರಾಯಪುರ,ಜ.5: ಛತ್ತೀಸ್‌ಗಡದ ಕೊಂಡಗಾಂವ ಜಿಲ್ಲೆಯ ಮರ್ದಾಪಾಲ್‌ನ ಕುಧುರ್ ಗ್ರಾಮದಲ್ಲಿ ಮಂಗಳವಾರ ಭದ್ರತಾ ಪಡೆಗಳೊಂದಿಗಿನ ಭೀಷಣ ಗುಂಡಿನ ಕಾಳಗದಲ್ಲಿ ಓರ್ವ ಕಮಾಂಡರ್ ಸೇರಿದಂತೆ ಇಬ್ಬರು ನಕ್ಸಲರು ಕೊಲ್ಲಲ್ಪಟ್ಟಿದ್ದು, ಇನ್ನೋರ್ವನನ್ನು ಬಂಧಿಸಲಾಗಿದೆ.
ಘಟನಾ ಸ್ಥಳದಲ್ಲಿ ಸಮವಸ್ತ್ರದಲ್ಲಿದ್ದ ಇಬ್ಬರು ನಕ್ಸಲರ ಶವಗಳು ಪತ್ತೆಯಾಗಿದ್ದು, ಅವರನ್ನು ಮಾವೋವಾದಿಗಳ ಕುಧುರ್ ಸ್ಥಳೀಯ ಕಾರ್ಯಾಚರಣೆ ದಳ(ಎಲ್‌ಒಎಸ್)ದ ಕಮಾಂಡರ್ ಜತಿರಾಂ ಮತ್ತು ಸದಸ್ಯ ಹಲ್ಧರ್ ಕಶ್ಯಪ್ ಎಂದು ಗುರುತಿಸಲಾಗಿದೆ. ಸ್ಥಳದಿಂದ ಪರಾರಿಯಾಗುತ್ತಿದ್ದ ನಕ್ಸಲ್ ಜೈ ಸಿಂಗ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.