ಮಾಲ್ಡಾ ಹಿಂಸಾಚಾರ: ಬಿಜೆಪಿ ಶಾಸಕನ ಬಂಧನ
Update: 2016-01-06 23:46 IST
ಮಾಲ್ಡಾ(ಪ.ಬಂ), ಜ.6: ಕಾಲಿಯಾ ಚೌಕ್ ಪ್ರದೇಶದಲ್ಲಿ ರವಿವಾರ ಗುಂಪೊಂದು ಪೊಲೀಸ್ ಠಾಣೆಯೊಂದರ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಶಾಸಕ ಶಮೀಕ್ ಭಟ್ಟಾಚಾರ್ಯ ಹಾಗೂ ಇತರ 10 ಮಂದಿಯನ್ನು ಬುಧವಾರ ಪಶ್ಚಿಮ ಬಂಗಾಳದ ಮಾಲ್ಡಾದಿಂದ ಬಂಧಿಸಲಾಗಿದೆ.
ಪ್ರವಾದಿ ಮುಹಮ್ಮದರ ಬಗ್ಗೆ ಅಪಮಾನಕರ ಟೀಕೆ ಮಾಡಿದ್ದ ಹಿಂದೂ ಮಹಾಸಭಾದ ನಾಯಕ ಕಮಲೇಶ್ ತಿವಾರಿಯವರ ವಿರುದ್ಧ ರವಿವಾರ ಅಂಜುಮಾನ್ ಅಹ್ಲೆ ಸುನ್ನತುಲ್ ಜಮಾತ್ (ಎಜೆಎಸ್) ಎಂಬ ಅಲ್ಪಸಂಖ್ಯಾತರ ಸಂಘಟನೆಯೊಂದು ಪ್ರತಿಭಟನಾ ರ್ಯಾಲಿ ನಡೆಸಿದ ವೇಳೆ ಕಾಲಿಯಾ ಚೌಕ್ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆದಿತ್ತು. ಈಗಾಗಲೇ ಉದ್ವಿಗ್ನಗೊಂಡಿರುವ ಪ್ರದೇಶ ಇನ್ನಷ್ಟು ಪ್ರಕ್ಷುಬ್ಧಗೊಳ್ಳದಂತೆ ಮುನ್ನೆಚರಿಕೆಯ ಕ್ರಮವಾಗಿ ಭಟ್ಟಾಚಾರ್ಯರನ್ನು ಮಾಲ್ಡಾ ಪಟ್ಟಣದ ರಥಬಾರಿಯಿಂದ ಬಂಧಿಸಲಾಯಿತೆಂದು ಮೂಲಗಳು ತಿಳಿಸಿವೆ.
ಪ್ರದೇಶದಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು, ಪರಿಸ್ಥಿತಿಯ ಪರಾಮರ್ಶೆಗಾಗಿ ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ಕರೆಸಲಾಗಿದೆ.