ಸರಕಾರದ ವೈಫಲ್ಯ
ಮಾನ್ಯರೆ,
ಇತ್ತೀಚೆಗೆ ನರೇಂದ್ರ ಮೋದಿಯವರು ಪಾಕಿಸ್ತಾನದಲ್ಲಿ ನವಾಝ್ ಶರೀಫ್ ಜೊತೆಗೆ ಮದುವೆ ಊಟ ಮಾಡಿ ಬಂದ ಮರುದಿನವೇ ಪಠಾಣ್‌ಕೋಟ್‌ನಲ್ಲಿ ಉಗ್ರರು ಭಾರೀ ದಾಳಿ ನಡೆಸಿದರು. ಇಂತಹ ದೊಡ್ಡ ದಾಳಿಗಳೆಲ್ಲ ಬಿಜೆಪಿ ಅಧಿಕಾರದಲ್ಲಿರುವಾಗಲೇ ಯಾಕೆ ನಡೆಯುತ್ತದೆ? ಕಂದಹಾರ್ ವಿಮಾನ ಅಪಹರಣ ಆಗಿರುವುದು ಬಿಜೆಪಿ ಆಡಳಿತದಲ್ಲಿದ್ದಾಗ. ಈ ಸಂದರ್ಭದಲ್ಲಿ ಉಗ್ರರನ್ನು ಸ್ವತಃ ಗೃಹ ಸಚಿವರೇ ಬಿಡುಗಡೆ ಮಾಡಿದರು. ದೇಶದ ವರ್ಚಸ್ಸಿಗೆ ಭಾರೀ ಮುಖಭಂಗವಾಯಿತು. ಕಾರ್ಗಿಲ್ ಯುದ್ಧದ ಸಂದರ್ಭದಲ್ಲೂ ನಮ್ಮ ಬೇಹುಗಾರಿಕೆ ವಿಫಲವಾಯಿತು. ಅನಿವಾರ್ಯವಾಗಿ ಒಂದು ಯುದ್ಧವನ್ನು ಬಿಜೆಪಿ ಸರಕಾರ ದೇಶದ ಮೇಲೆ ಹೇರಿತು. ಅಟಲ್ ಬಿಹಾರಿ ವಾಜಪೇಯಿಯವರ ವೈಫಲ್ಯ ಈ ಸಂದರ್ಭದಲ್ಲಿ ಎದ್ದು ಕಾಣುತ್ತಿತ್ತು. ಸಂಸತ್ತಿನ ಮೇಲೆ ನಡೆದ ದಾಳಿಯು ಬಿಜೆಪಿ ಅಧಿಕಾರದಲ್ಲಿದ್ದಾಗಲೇ ಸಂಭವಿಸಿದೆ. ಬಿಜೆಪಿ ಸರಕಾರ ಸದಾ ಉಗ್ರರನ್ನು ದಮನಿಸಲು ವಿಫಲವಾಗುತ್ತಿದೆ. ಈ ಬಾರಿ ಮೋದಿ ಅಧಿಕಾರದ ಸಂದರ್ಭದಲ್ಲೂ ಅದು ಸಾಬೀತಾಗಿದೆ. ಆದರೂ ಈ ಬಗ್ಗೆ ಸ್ಪಷ್ಟ ಹೇಳಿಕೆಯನ್ನು ನೀಡಲು, ಪಾಕಿಸ್ತಾನಕ್ಕೆ ಸ್ಪಷ್ಟ ಸೂಚನೆಯನ್ನು ನೀಡಲು ನಮ್ಮ ಸರಕಾರ ಅಂಜುತ್ತಿದೆ. ಇದು ನಿಜಕ್ಕೂ ವಿಪರ್ಯಾಸವಾಗಿದೆ.