ವಿಜ್ಞಾನ ಕಾಂಗ್ರೆಸ್ ಎಂಬ ಸರ್ಕಸ್: ನೊಬೆಲ್ ಪುರಸ್ಕೃತ ವಿಜ್ಞಾನಿ ವೆಂಕಟರಾಮನ್ ರಾಮಕೃಷ್ಣನ್

Update: 2016-01-06 06:29 GMT

ಚಂಡೀಗಢ: ಭಾರತದ ವಿಜ್ಞಾನ ಕಾಂಗ್ರೆಸ್ ಎನ್ನುವುದು ಅತಿದೊಡ್ಡ ಪ್ರಹಸನ ಎಂದು ಭಾರತ ಮೂಲದ ವಿಜ್ಞಾನಿ ನೊಬೆಲ್ ಪುರಸ್ಕೃತ ವೆಂಕಟರಾಮನ್ ರಾಮಕೃಷ್ಣನ್ ಟೀಕಿಸಿದ್ದಾರೆ. ಇನ್ನೆಂದೂ ಇಂಥ ಸಮಾವೇಶದಲ್ಲಿ ಭಾಗವಹಿಸುವುದಿಲ್ಲ ಎಂದು ಅವರು ಕಿಡಿ ಕಾರಿದ್ದಾರೆ.

ಮೈಸೂರು ವಿಜ್ಞಾನ ಕಾಂಗ್ರೆಸ್‌ನಲ್ಲಿ ಏಕೆ ಭಾಗವಹಿಸುತ್ತಿಲ್ಲ ಎಂಬ ಪ್ರಶ್ನೆಗೆ, "ಒಂದು ದಿನ ನಾನು ಭಾಗವಹಿಸಿದೆ. ಅಲ್ಲಿ ವಿಜ್ಞಾನದ ಬಗೆಗೆ ಯಾವ ಚರ್ಚೆಯೂ ನಡೆಯಲಿಲ್ಲ. ಅದೊಂದು ಸರ್ಕಸ್. ನನ್ನ ಜೀವನದಲ್ಲಿ ಎಂದಿಗೂ ಮತ್ತೆ ಇಂಥ ವಿಜ್ಞಾನ ಕಾಂಗ್ರೆಸ್‌ನಲ್ಲಿ ಪಾಲ್ಗೊಳ್ಳುವುದಿಲ್ಲ" ಎಂದು ಉತ್ತರಿಸಿದರು. ವಿಜ್ಞಾನದಲ್ಲಿ ರಾಜಕೀಯ ಹಾಗೂ ಧಾರ್ಮಿಕ ಸಿದ್ಧಾಂತಗಳನ್ನು ಸೇರಿಸುವುದನ್ನು ಅವರು ವಿರೋಧಿಸಿದ್ದರು.

ಪಂಜಾಬ್ ವಿಶ್ವವಿದ್ಯಾನಿಲಯದಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, 2015ರಲ್ಲಿ ಮುಂಬೈ ವಿಜ್ಞಾನ ಸಮಾವೇಶದಲ್ಲಿ ಮಾಡಿದ ಹೇಳಿಕೆಯನ್ನು ಟೀಕಿಸಿದರು. "ವಿಮಾನಗಳನ್ನು ವೇದಗಳ ಕಾಲದಲ್ಲೇ ಸಂತರು ಕಂಡುಹಿಡಿದಿದ್ದರು" ಎಂದು ಸಮಾವೇಶದಲ್ಲಿ ವಿವರಿಸಲಾಗಿತ್ತು. ಇದನ್ನು ಪ್ರಸ್ತಾಪಿಸಿದ ಅವರು, "ಎರಡು ಸಾವಿರ ವರ್ಷಗಳ ಹಿಂದೆ ಭಾರತೀಯರು ವಿಮಾನ ಕಂಡುಹಿಡಿದಿದ್ದರು ಎನ್ನುವ ವಾದ ನನಗೆ ತರ್ಕಬದ್ಧವಲ್ಲ ಎನಿಸಿತು. ಇದನ್ನು ನಾನು ಒಪ್ಪಲಿಲ್ಲ. ವಿಜ್ಞಾನ ಎಂದರೆ ಒಂದು ಸಂಶೋಧನೆಯನ್ನು ಯಾರು ಬೇಕಾದರೂ, ಪುನರ್ ಉತ್ಪಾದಿಸುವಂತಿರಬೇಕು"
ವೆಂಟರಾಮನ್ ಅವರು ತಮಿಳುನಾಡು ಮೂಲದವರಾಗಿದ್ದು, ಕ್ಯಾಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಸ್ಟ್ರಕ್ಚರಲ್ ಬಯಾಲಜಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು 2009ರಲ್ಲಿ ನೊಬೆಲ್ ಪುರಸ್ಕಾರಕ್ಕೆ ಪಾತ್ರರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News