×
Ad

ಸ್ವೀಡಿಶ್ ಕಪ್ ಗ್ರಾನ್‌ಪ್ರಿ ಟೂರ್ನಿ: ಅಪೂರ್ವಿಗೆ ಮತ್ತೊಂದು ಸ್ವರ್ಣ

Update: 2016-01-07 23:44 IST

 ಹೊಸದಿಲ್ಲಿ, ಜ.7: ಸ್ವೀಡನ್‌ನಲ್ಲಿ ನಡೆದ ಸ್ವೀಡಿಶ್ ಕಪ್ ಗ್ರಾನ್‌ಪ್ರಿ ಟೂರ್ನಿಯಲ್ಲಿ ಭಾರತದ ಶೂಟರ್ ಅಪೂರ್ವಿ ಚಾಂಡೇಲಾ ಸತತ ಎರಡನೆ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ. ಈ ಮೂಲಕ ‘ಟೂರ್ನಮೆಂಟ್‌ನ ಶೂಟರ್’ ಆಗಿ ಹೊರಹೊಮ್ಮಿದ್ದಾರೆ.

23ರ ಹರೆಯದ ಅಪೂರ್ವಿ ಮಹಿಳೆಯರ 10 ಮೀ. ಟ್ರೈಸಿರೀಸ್ ಇವೆಂಟ್ ಫೈನಲ್‌ನಲ್ಲಿ 208.9 ಅಂಕವನ್ನು ಸಂಪಾದಿಸಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರು. ಅಪೂರ್ವಿಗೆ ತೀವ್ರ ಪೈಪೋಟಿ ನೀಡಿದ ನಾರ್ವೆಯ ಮಲಿನ್ ವೆಸ್ಟರ್‌ಹೆಲ್ಮ್(208.4) ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಈಗಾಗಲೇ ರಿಯೋ ಒಲಿಂಪಿಕ್ಸ್‌ನಲ್ಲಿ ತನ್ನ ಸ್ಥಾನವನ್ನು ದೃಢಪಡಿಸಿಕೊಂಡಿರುವ ಚಾಂಡೇಲಾ ಮಂಗಳವಾರ ನಡೆದ ಮಹಿಳೆಯರ 10 ಮೀ.ಏರ್ ರೈಫಲ್ ಟೂರ್ನಿಯಲ್ಲಿ 211.2 ಅಂಕವನ್ನು ಗಳಿಸಿ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದ್ದರು. ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಅಪೂರ್ವಿ ಟೂರ್ನಿಯ ಶ್ರೇಷ್ಠ ಶೂಟರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅರ್ಹತಾ ಸುತ್ತಿನಲ್ಲಿ 416.1 ಅಂಕವನ್ನು ಗಳಿಸಿದ್ದ ಅಪೂರ್ವಿ ನಾಲ್ಕನೆ ಸ್ಥಾನ ಪಡೆದರು. ಟ್ರೈಸಿರೀಸ್ ಫೈನಲ್‌ನಲ್ಲಿ ಚಾಂಪಿಯನ್ ಆಟಗಾರ್ತಿಯಂತೆ ಆಡಿದ ಅಪೂರ್ವಿ ಚಿನ್ನದ ಪದಕವನ್ನು ಜಯಿಸಿದ್ದಾರೆ. ಸತತ ಎರಡು ಚಿನ್ನದ ಪದಕವನ್ನು ಜಯಿಸಿರುವ ಅಪೂರ್ವಿ ಮುಂಬರುವ ರಿಯೋ ಒಲಿಂಪಿಕ್ಸ್‌ಗೆ ಉತ್ತಮ ತಯಾರಿ ನಡೆಸಿದ್ದಾರೆ.

ಅಪೂರ್ವಿ ಕಳೆದ ತಿಂಗಳು ನಡೆದಿದ್ದ ನ್ಯಾಶನಲ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದರು. ಕಳೆದ ವರ್ಷದ ಎಪ್ರಿಲ್‌ನಲ್ಲಿ ಕೊರಿಯಾದಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಕಂಚಿನ ಪದಕವನ್ನು ಜಯಿಸುವುದರೊಂದಿಗೆ ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News