ಪ್ರಣವ್ ಧನವಾಡೆಗೆ ತೆಂಡುಲ್ಕರ್ ಬ್ಯಾಟ್ ಗಿಫ್ಟ್

Update: 2016-01-07 18:16 GMT

ಮುಂಬೈ, ಜ.7: ಇತ್ತೀಚೆಗೆ ಮುಂಬೈ ಕ್ರಿಕೆಟ್ ಸಂಸ್ಥೆ ಆಯೋಜಿಸಿದ್ದ ಅಂತರ್-ಶಾಲಾ ಟೂರ್ನಿಯಲ್ಲಿ 1009 ರನ್ ಗಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದ ಮುಂಬೈ ಬಾಲಕ ಪ್ರಣವ್ ಧನವಾಡೆ ಮತ್ತೊಂದು ಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾದರು.

ಐಕಾನ್ ದಾಂಡಿಗ ಸಚಿನ್ ತೆಂಡುಲ್ಕರ್ ತನ್ನ ಆಟೋಗ್ರಾಫ್ ಇರುವ ಬ್ಯಾಟನ್ನು ಧನವಾಡೆಗೆ ಉಡುಗೊರೆಯಾಗಿ ನೀಡಿ ಶುಭ ಹಾರೈಸಿದ್ದಾರೆ.

ಮಾಸ್ಟರ್ ಬ್ಲಾಸ್ಟರ್ ಸಚಿನ್ ಅವರು ಹಸ್ತಾಕ್ಷರವಿರುವ ತನ್ನದೇ ಬ್ಯಾಟನ್ನು ಪ್ರಣವ್‌ಗೆ ಉಡುಗೊರೆಯಾಗಿ ನೀಡಿದ್ದಾರೆ. ಪ್ರಣವ್‌ರ ವಿಶ್ವ ದಾಖಲೆಯ ಸಾಧನೆಗೆ ಸಚಿನ್ ಈ ಕೊಡುಗೆ ನೀಡಿದ್ದಾರೆ ಎಂದು ಬಿಸಿಸಿಐ ಟ್ವೀಟ್ ಮಾಡಿದೆ.

ಇನಿಂಗ್ಸ್‌ವೊಂದರಲ್ಲಿ 1009 ರನ್ ಗಳಿಸಿದ ಮೊದಲ ಕ್ರಿಕೆಟ್ ಆಟಗಾರ ಎನಿಸಿಕೊಂಡಿರುವ ಪ್ರಣವ್ ಧನವಾಡೆಗೆ ಅಭಿನಂದನೆಗಳು. ಕಠಿಣ ಶ್ರಮದ ಮೂಲಕ ಉತ್ತಮ ಸಾಧನೆ ಮಾಡಿರುವೆ. ನೀನು ಇನ್ನೂ ಎತ್ತರಕ್ಕೆ ಏರಬೇಕು ಎಂದು ತೆಂಡುಲ್ಕರ್ ಮಂಗಳವಾರ ಟ್ವೀಟ್ ಮಾಡಿದ್ದರು.

ಪ್ರಣವ್‌ಗೆ ಏರ್ ಇಂಡಿಯಾ ಆಫರ್

ಹೊಸದಿಲ್ಲಿ, ಜ.7: ಔಟಾಗದೆ 1009 ರನ್ ಗಳಿಸಿ ಕ್ರಿಕೆಟ್‌ನಲ್ಲಿ ಹೊಸ ಚರಿತ್ರೆ ಬರೆದಿರುವ ಮುಂಬೈ ಬಾಲಕ ಪ್ರಣವ್ ಧನವಾಡೆಗೆ ದೇಶದ ವಿಮಾನ ಯಾನ ಸಂಸ್ಥೆ ಏರ್ ಇಂಡಿಯಾದ ಕ್ರಿಕೆಟ್ ತಂಡದಲ್ಲಿ ಆಡಲು ಆಹ್ವಾನ ನೀಡಲಾಗಿದೆ.

ವಿವಿಧ ಕ್ಷೇತ್ರಗಳ ಸುಪ್ತ ಪ್ರತಿಭೆಯನ್ನು ಪ್ರೋತ್ಸಾಹಿಸುವ ಅಂಗವಾಗಿ ಏರ್ ಇಂಡಿಯಾ 15ರ ಹರೆಯದ ಕ್ರಿಕೆಟಿಗ ಧನವಾಡೆಗೆ ಈ ಆಫರ್‌ನ್ನು ನೀಡಿದೆ. ಶಿಷ್ಯ ವೇತನದ ಆಧಾರದಲ್ಲಿ ಏರ್ ಇಂಡಿಯಾಗೆ ಸೇರ್ಪಡೆಯಾಗುವಂತೆ ನಾವು ಪ್ರಣವ್‌ಗೆ ತಿಳಿಸಿದ್ದೇವೆ ಎಂದು ಏರ್ ಇಂಡಿಯಾದ ಮೂಲಗಳು ತಿಳಿಸಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News