ಗುರುದಾಸ್‌ಪುರ,ಪಠಾಣ್‌ಕೋಟ್ ಜಿಲ್ಲೆಗಳಲ್ಲಿ ಕಟ್ಟೆಚ್ಚರ
ಗುರುದಾಸ್‌ಪುರ,ಜ.7: ಸೇನಾ ಸಮವಸ್ತ್ರದಲ್ಲಿದ್ದ ಇಬ್ಬರು ವ್ಯಕ್ತಿಗಳ ಅನುಮಾನಾಸ್ಪದ ಚಲನವಲನಗಳ ಬಗ್ಗೆ ಸಮೀಪದ ಪಂಧೇರ್ ಗ್ರಾಮಸ್ಥರು ಬುಧವಾರ ಮಾಹಿತಿಯನ್ನು ನೀಡಿರುವ ಹಿನ್ನೆಲೆಯಲ್ಲಿ ಇಲ್ಲಿಯ ತಿಬ್ರಿ ದಂಡುಪ್ರದೇಶದಲ್ಲಿ ಮತ್ತು ಸುತ್ತುಮುತ್ತಲ ಪ್ರದೇಶಗಳಲ್ಲಿ ಭದ್ರತಾ ಸಂಸ್ಥೆಗಳು ಕಟ್ಟೆಚ್ಚರವನ್ನು ವಹಿಸಿವೆ.
ತಿಬ್ರಿ ದಂಡುಪ್ರದೇಶದ ಸುತ್ತಲಿನ ಪ್ರದೇಶಗಳಲ್ಲಿ ಸರ್ಪಗಾವಲು ಏರ್ಪಡಿಸಲಾಗಿದು,್ದ ಶೋಧ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಆದರೆ ಈವರೆಗೆ ಯಾವುದೇ ಶಂಕಾಸ್ಪದ ಚಲನವಲನಗಳು ಕಂಡುಬಂದಿಲ್ಲ ಎಂದು ಗುರುದಾಸ್‌ಪುರ ಎಸ್‌ಎಸ್‌ಪಿ ಗುರಪ್ರೀತ್ ಸಿಂಗ್ ತೂರ್ ಅವರು ತಿಳಿಸಿದರು.
ಪ್ರದೇಶದಲ್ಲಿ ಸಂಚರಿಸುವ ಎಲ್ಲ ವಾಹನಗಳು ಮತ್ತು ಜನರನ್ನು ತಪಾಸಣೆಗೊಳಪಡಿಸಲಾಗುತ್ತಿದೆ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ. ಗಡಿಜಿಲ್ಲೆಗಳಾದ ಗುರುದಾಸ್‌ಪುರ ಮತ್ತು ಪಠಾಣಕೋಟ್‌ಗಳಲ್ಲಿ ಕಟ್ಟೆಚ್ಚರವನ್ನು ವಹಿಸಲಾಗಿದೆ ಎಂದ ಅವರು, ನಾವು ಯಾವುದೇ ಅಪಾಯವನ್ನು ಎದುರು ಹಾಕಿಕೊಳ್ಳಲು ಬಯಸುತ್ತಿಲ್ಲ. ಪ್ರದೇಶವನ್ನು ಸೂಕ್ಷ್ಮವಾಗಿ ಶೋಧಿಸಲಾಗುವುದು ಎಂದರು.
ಐವರು ಭಯೋತ್ಪಾದಕರು ಗುರುದಾಸ್‌ಪುರ ಮತ್ತು ಪಠಾಣ್‌ಕೋಟ್ ಜಿಲ್ಲೆಗಳ ಗಡಿ ಪ್ರದೇಶಗಳಲ್ಲಿ ನುಸುಳಿದ್ದಾರೆಂಬ ವರದಿಗಳೂ ಲಭಿಸಿರುವ ಹಿನ್ನೆಲೆಯಲ್ಲಿ ಸೇನಾ ಪಡೆಗಳನ್ನು ಕಟ್ಟೆಚ್ಚರದಲ್ಲಿರಿಸಲಾಗಿದೆ ಎಂದೂ ತೂರ್ ತಿಳಿಸಿದರು.
.