×
Ad

ಆರ್ಥಿಕ ಬೆಳವಣಿಗೆಯಲ್ಲಿ ಭಾರತ ಅಗ್ರ ಸ್ಥಾನ ಉಳಿಸಿಕೊಳ್ಳಲಿದೆ: ವಿಶ್ವಬ್ಯಾಂಕ್

Update: 2016-01-08 00:08 IST

ಹೊಸದಿಲ್ಲಿ, ಜ.7: ಹಾಲಿ 2016ನೆ ವರ್ಷದಲ್ಲಿ ಭಾರತವು ಅತ್ಯಂತ ವೇಗದಿಂದ ಬೆಳೆಯುತ್ತಿರುವ ಬೃಹತ್ ಆರ್ಥಿಕತೆಯಾಗಿ ಆರಾಮದಿಂದ ಉಳಿಯಲಿದೆಯೆಂದು ವಿಶ್ವಬ್ಯಾಂಕ್ ಬುಧವಾರ ಹೇಳಿದೆ.2016ರಲ್ಲಿ ಭಾರತದ ಆರ್ಥಿಕತೆ ಶೇ.7.8ರಂತೆ ಬೆಳೆಯಲಿದೆ ಹಾಗೂ ಚೀನದ ಆರ್ಥಿಕ ಬೆಳವಣಿಗೆ ಶೇ.6.7ರಷ್ಟರಲ್ಲಿದೆ. ವಿಶ್ವದ ಆರ್ಥಿಕತೆ ಒಟ್ಟಾರೆಯಾಗಿ ಶೇ.2.9ರಂತೆ ಬೆಳೆಯಲಿದೆ. ಅದು 2015ರ ಅಂದಾಜಾಗಿದ್ದ, ಶೇ.2.4ಕ್ಕಿಂತ ಸ್ವಲ್ಪ ಹೆಚ್ಚಾಗಿದೆಯೆಂದು ‘ಜಾಗತಿಕ ಆರ್ಥಿಕ ನಿರೀಕ್ಷೆ’ ಎಂಬ ತನ್ನ ವರದಿಯಲ್ಲಿ ವಿಶ್ವಬ್ಯಾಂಕ್ ಬಿಂಬಿಸಿದೆ. ಈ ಎಲ್ಲ ಅಂದಾಜುಗಳನ್ನು 2015ರ ಜೂನ್‌ನ ಅಂದಾಜಿಗಿಂತ ಕೆಳ ಮುಖವಾಗಿ ಪರಿಷ್ಕರಿಸಲಾಗಿದೆ. ಆದರೆ, ಭಾರತದ ವಿಷಯದಲ್ಲಿ ಶೇ.0.1ರಷ್ಟು ಕೆಳಮುಖ ಪರಿಷ್ಕರಣೆಯು, ಚೀನದ ಅಂದಾಜಿನಲ್ಲಿ ಶೇ. 0.3ರಷ್ಟು ಹೊಂದಾಣಿಕೆ ಹಾಗೂ ಜಾಗತಿಕ ಬೆಳವಣಿಗೆಯಲ್ಲಿ ಶೇ. 0.4ರಷ್ಟು ಕಡಿತಗಳಿಗಿಂತ ಕಡಿಮೆಯಾಗಿದೆ.

 ಬಾಂಗ್ಲಾದೇಶವು ಶೇ.6.7ರಷ್ಟು ಹಾಗೂ ಪಾಕಿಸ್ತಾನವು ಶೇ. 5.5ರಷ್ಟು ಆರ್ಥಿಕ ಬೆಳವಣಿಗೆ ಸಾಧಿಸುವುದರೊಂದಿಗೆ ದಕ್ಷಿಣ ಏಶ್ಯವು ವಿಶ್ವದಲ್ಲೇ ಅತ್ಯಂತ ವೇಗದಲ್ಲಿ ಬೆಳವಣಿಗೆ ಸಾಧಿಸುತ್ತಿರುವ ಪ್ರದೇಶವೆನಿಸಲಿದೆ. ಇತರ ‘ಬ್ರಿಕ್ಸ್’ ಆರ್ಥಿಕತೆಗಳಲ್ಲಿ, ರಶ್ಯದ ಆರ್ಥಿಕತೆ 2016ರಲ್ಲಿ ಶೇ. 0.7ರಷ್ಟು ಹಾಗೂ ಬ್ರೆಝಿಲ್‌ನ ಆರ್ಥಿಕತೆ ಶೇ.2.5ರಷ್ಟು ಕುಸಿಯಲಿದೆ. ದಕ್ಷಿಣ ಆಫ್ರಿಕವು ಶೇ.1.4ರಂತೆ ನಿಧಾನವಾಗಿ ಆರ್ಥಿಕ ಬೆಳವಣಿಗೆಯನ್ನು ಕಾಣಲಿದೆಯೆಂದು ವರದಿ ವಿವರಿಸಿದೆ. ಈ ಅಂದಾಜನ್ನು ನಡೆಸುವ ವೇಳೆ ವಿಶ್ವಬ್ಯಾಂಕ್ ವರದಿಯು, ‘ಚೀನದಲ್ಲಿ ನಿರೀಕ್ಷೆಗಿಂತಲೂ ವೇಗದ ಆರ್ಥಿಕ ಹಿನ್ನಡೆಯೊಂದಿಗೆ ಇತರ ದೊಡ್ಡ ಪ್ರಗತಿಶೀಲ ಮಾರುಕಟ್ಟೆಗಳಲ್ಲಿ ಹೆಚ್ಚು ವಿಳಂಬಿತ ಹಿನ್ನಡೆ ಒಂದು ಅಪಾಯವಾಗಿದೆ’ ಎಂಬ ಷರಾ ಬರೆದಿದೆ. ಇದು ಕಡಿಮೆ ಸಾಧ್ಯತೆಯ ದೃಶ್ಯವಾಗಿದೆ. ಆದರೆ, ಒಂದೊಮ್ಮೆ ಅದು ಸಂಭವಿಸಿದಲ್ಲಿ ಉಳಿದ ಜಗತ್ತಿಗೆ ಮಹತ್ವದ ಸಾಂಕ್ರಾಮಿಕ ಅಪಾಯವಾಗುವ ಭೀತಿಯಿದೆಯೆಂದು ಅದು ಹೇಳಿದೆ.

ಈ ಅಪಾಯದೊಂದಿಗೆ, ದೃಗ್ಗೋಚರ ಹಾಗೂ ಅಭಿವೃದ್ಧಿಶೀಲ ಆರ್ಥಿಕತೆಗಳಾದ್ಯಂತ ಸಂಭಾವ್ಯ ಬೆಳವಣಿಗೆಯ ಸುದೀರ್ಘ ಇಳಿಕೆಯ ಸಾಧ್ಯತೆ, ಪ್ರಮುಖ ಭಾರೀ ಆದಾಯದ ರಾಷ್ಟ್ರಗಳಲ್ಲಿ ಸತತ ನಿಯಂತ್ರಿತ ಬೆಳವಣಿಗೆ ಹಾಗೂ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಹೆಚ್ಚಳಗಳು ಸೇರಿಕೊಳ್ಳುವ ಸಾಧ್ಯತೆಯಿವೆ. ಅಮೆರಿಕದ ಬಡ್ಡಿ ದರಗಳ ಭವಿಷ್ಯದ ಪಥದ ಕುರಿತ ನಿರೀಕ್ಷೆಯ ಹಠಾತ್‌ಮರುಹೊಂದಾಣಿಕೆ ಸಹ, ಕೆಲವು ಅಭಿವೃದ್ಧಿಶೀಲ ದೇಶಗಳ ಸ್ಥಳೀಯ ಅಸ್ಥಿರತೆ ಹಾಗೂ ನೀತಿಯ ಅನಿಶ್ಚಿತತೆಗಳೊಂದಿಗೆ ಸೇರಿ ಅಸ್ಥಿರತೆ ಉಂಟು ಮಾಡ ಬಹುದೆಂದು ವರದಿ ಎಚ್ಚರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News