ಬಾಕಿ ಹಣ ಹೊಂದಿಸಲು ಹೆಣಗಾಡುತ್ತಿರುವ ದಾವೂದ್‌ನ ಆಸ್ತಿ ಖರೀದಿಸಿದ ಮಾಜಿ ಪತ್ರಕರ್ತ
ಮುಂಬೈ, ಜ.8:ಭೂಗತ ಪಾತಕಿ ದಾವೂದು ಇಬ್ರಾಹೀಂಗೆ ಸೇರಿದ ರೆಸ್ಟೊರೆಂಟ್ "ಡೆಲ್ಲಿ ಝೈಕಾ " ವನ್ನು ಹರಾಜಿನ ಮೂಲಕ ಪಡೆದಿದ್ದ ಮುಂಬೈನ ಮಾಜಿ ಪತ್ರಕರ್ತ ಬಾಲಕೃಷ್ಣನ್ , ಆಸ್ತಿಯ ಮೌಲ್ಯವನ್ನು ಪಾವತಿಸಲು ವಿಫಲವಾದ ಘಟನೆ ಬೆಳಕಿಗೆ ಬಂದಿದೆ.
ಪಾಕ್ಮೊಡಿಯ ಸ್ಟ್ರೀಟ್‌ನಲ್ಲಿರುವ ಡೆಲ್ಲಿ ಝೈಕಾವನ್ನು ಬಾಲಕೃಷ್ಣನ್ ಇತ್ತೀಚೆಗೆ ಹರಾಜು ಮೂಲಕ 4.28 ಕೋಟಿ ರೂ.ಗೆ ಖರೀದಿಸಿದ್ದರು. ಖರೀದಿಯ ವೇಳೆ 30 ಲಕ್ಷ ರೂ. ಪಾವತಿಸಿದ್ದರು. ಉಳಿದ ಹಣವನ್ನು ಈವರೆಗೂ ಪಾವತಿಸಿಲ್ಲ ಎಂದು ತಿಳಿದು ಬಂದಿದೆ.
ಬಾಲಕೃಷ್ಣನ್ ಹಣ ಹೊಂದಿಸಲು ಹೆಣಗಾಡುತ್ತಿದ್ದಾರೆ. ಉದ್ಯಮಿಯಾಗಿರುವ ಚೆಂಬೂರಿನ ನಿವಾಸಿ ಬಾಲಕೃಷ್ಣ ತನ್ನ ಸಂಘಟನೆ "ದೇಶ್ ಸೇವಾ ಸಮಿತಿ " ಪರ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ಗದರು. ಒಂದೊಮ್ಮೆ ದಾವೂದ್ ಒಡೆತನಕ್ಕೆ ಸೇರಿದ್ದ ಉಪಹಾರಗೃಹ ಡೆಲ್ಲಿ ಝೈಕಾ ಇದೀಗ ಬಾಲಕೃಷ್ಣನ್ ವಶಕ್ಕೆ ಬಂದಿದ್ದರೂ, ಅವರು ಬಾಕಿ ಹಣವನ್ನು ಪಾವತಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ. ಬಾಲಕೃಷ್ಣನ್ ಅವರು ದಾವೂದ್ ಎದುರಾಳಿ ಚೋಟಾ ರಾಜನ್ ಬಣದ ಪರ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಈ ಕಾರಣದಿಂದಾಗಿ ಬಾಲಕೃಷ್ಣನಿಗೆ ಸಹಾಯ ಮಾಡಲು ಯಾರಿಗೂ ಆಸಕ್ತಿ ಇಲ್ಲ ಎನ್ನಲಾಗಿದೆ.