ಕಡ್ಡಾಯಗೊಳಿಸುವ ಮುನ್ನ ಯೋಚಿಸಿ
ಮಾನ್ಯರೆ,
ಸುಪ್ರೀಂ ಕೋರ್ಟ್ ಸೂಚನೆಯಂತೆ ರಾಜ್ಯ ಸರಕಾರ ದ್ವಿಚಕ್ರ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಮಾಡಲು ಹೊರಟಿದೆ. ಇದು ರಾಜ್ಯ ಸರಕಾರವನ್ನ್ನು ಎಷ್ಟು ಇಕ್ಕಟ್ಟಿಗೆ ಸಿಲುಕಿಸಿದೆಯೋ, ಅದೇ ರೀತಿ ರಾಜ್ಯದ ಜನರನ್ನು ಕೂಡಾ ಗೊಂದಲಕ್ಕೀಡು ಮಾಡಿದೆ. ಹೊಸ ವರ್ಷದಿಂದಲೇ ಹೊಸ ಕಾನೂನು ಜಾರಿ ಎಂದು ಹೇಳಿದರೂ ಸಾರಿಗೆ ಸಚಿವರು, ವಾರದೊಳಗೆ ಜಾರಿಗೆ ತರುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ಇಷ್ಟೊಂದು ಸಂಖ್ಯೆಯ ಹೆಲ್ಮೆಟ್ ಉತ್ಪಾದನೆ ಮತ್ತು ಜಾಗೃತಿ ಕಾರ್ಯಕ್ಕಾಗಿ ಸುಮಾರು 2 ತಿಂಗಳು ಬೇಕು ಎಂಬ ಅಂದಾಜಿದೆ. ಹಾಗಾಗಿ ಈ ಕಾನೂನು ಅದೆಷ್ಟು ಮಟ್ಟಿಗೆ ಪಾಲನೆಯಾಗುತ್ತೆ ಅನ್ನೋದೇ ದೊಡ್ಡ ಪ್ರಶ್ನೆ.
ಆರಂಭದಲ್ಲೇ ಈ ಕಾನೂನಿಗೆ ಪ್ರತಿರೋಧ ವ್ಯಕ್ತವಾಗಿದೆ. ಈವರೆಗೆ ಬೈಕ್ ಸವಾರ ಮಾತ್ರ ಹೆಲ್ಮೆಟ್ ಧರಿಸಬೇಕೆಂಬ ನಿಯಮವಿತ್ತು. ಈ ಹೊಸ ನಿಯಮ ಜಾರಿಯಾದರೆ ಬೈಕ್‌ನಲ್ಲಿ ಇಬ್ಬರು ಪ್ರಯಾಣಿಸುವಾಗ ಎರಡು ಹೆಲ್ಮೆಟ್ ಬೇಕೇ ಬೇಕು. ಅದು ಹಿಂಬದಿಯಲ್ಲಿ ಮಹಿಳೆಯರು ಇರಲಿ, ಮಕ್ಕಳು ಇರಲಿ, ಅಜ್ಜ-ಅಜ್ಜಿ ಇರಲಿ ಹೀಗೇ ಯಾರೇ ಇರಲಿ, ಅವರು ಹೆಲ್ಮೆಟ್ ಧರಿಸಬೇಕೆಂದು ಹೇಳಿದರೆ ಇನ್ಮುಂದೆ ಬೈಕ್‌ನಲ್ಲಿ ಸಂಚರಿಸುವುದು ಜನಸಾಮಾನ್ಯರಿಗೆ ಕಷ್ಟವಾಗುತ್ತದೆ. ಅಲ್ಲದೆ ತುರ್ತು ಸಂದರ್ಭದಲ್ಲೂ ಹೆಲ್ಮೆಟ್ ಇಲ್ಲವೆಂಬ ನೆಪದಲ್ಲಿ ಸಹಾಯ ಸಿಗದಿರಬಹುದು. ಇಂತಹ ಸಮಸ್ಯೆಗಳ ಬಗ್ಗೆ ಸಾರಿಗೆ ಸಚಿವರು ಸ್ಪಷ್ಟ ಉತ್ತರ ನೀಡುವುದಿಲ್ಲ.
ಹೊಸ ಕಾನೂನು ಜಾರಿಗೆ ತರದಿದ್ದರೆ ರಾಜ್ಯ ಸರಕಾರಕ್ಕೆ ನ್ಯಾಯಾಂಗ ನಿಂದನೆ ಎದುರಿಸಬೇಕಾದ ಪರಿಸ್ಥಿತಿಯಿದೆ. ಹಾಗಂತ ಕಾನೂನು ಜಾರಿಗೆ ತರಲು ಅವಸರಿಸಿದರೆ ನೂರಾರು ಸಮಸ್ಯೆಗಳು ಕಟ್ಟಿಟ್ಟ ಬುತ್ತಿ. ಆದ್ದರಿಂದ ಕಾನೂನು ಜಾರಿ ಮಾಡುವ ಮುನ್ನ, ಸರಕಾರ ಜನ ಸಾಮಾನ್ಯರ ಹೆಲ್ಮೆಟ್ ಸಂಬಂಧಿ ಗೊಂದಲ ಪರಿಹರಿಸಬೇಕಾಗಿದೆ.
ಇಬ್ಬರ ಪ್ರಾಣ ಕಾಪಾಡುವ ಉದ್ದೇಶ ಸರಕಾರಕ್ಕಿದ್ದರೂ ಹೊಸ ಕಾನೂನನ್ನು ಜಾರಿ ಮಾಡುವ ಬದಲು ಅದರ ಇತಿ-ಮಿತಿಗಳ ಬಗ್ಗೆ, ಜನರಿಗಾಗುವ ಅಪಾಯಗಳ ಬಗ್ಗೆ ಸರಕಾರ ಯೋಚನೆ ಮಾಡಬೇಕಾಗಿದೆ.