ಗೇಲ್‌ಗೆ ವಿಶ್ವದಾದ್ಯಂತ ನಿಷೇಧ ಹೇರಬೇಕು: ಇಯಾನ್ ಚಾಪೆಲ್ ಆಗ್ರಹ

Update: 2016-01-08 18:14 GMT

ಮೆಲ್ಬೋರ್ನ್, ಜ.8: ಇತ್ತೀಚೆಗೆ ಬಿಗ್‌ಬ್ಯಾಶ್ ಟ್ವೆಂಟಿ-20 ಟೂರ್ನಿಯ ವೇಳೆ ಚಾನಲ್ 10 ವರದಿಗಾರ್ತಿಗೆ ನೀಡಿದ ಸಂದರ್ಶನದ ವೇಳೆ ಅಸಭ್ಯವಾಗಿ ವರ್ತಿಸಿ ವಿವಾದವನ್ನು ಸೃಷ್ಟಿಸಿರುವ ವಿಂಡೀಸ್ ದಾಂಡಿಗ ಕ್ರಿಸ್ ಗೇಲ್‌ಗೆ ವಿಶ್ವದಾದ್ಯಂತ ನಿಷೇಧ ಹೇರಬೇಕು ಎಂದು ಆಸ್ಟ್ರೇಲಿಯದ ಕ್ರಿಕೆಟ್ ದಂತಕತೆ ಇಯಾನ್ ಚಾಪೆಲ್ ಆಗ್ರಹಿಸಿದ್ದಾರೆ.

ಟಿವಿ ಪತ್ರಕರ್ತೆ ಮೆಲ್ ಮೆಕ್ಲಾಫ್ಲಿನ್‌ಗೆ ನೀಡಿದ ಸಂದರ್ಶನದ ವೇಳೆ ಗೇಲ್ ನಡೆದುಕೊಂಡ ರೀತಿಗೆ ಎಲ್ಲೆಡೆಯಿಂದ ತೀಕ್ಷ್ಣ ಟೀಕೆಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಗೇಲ್ ವಿರುದ್ಧ ವಿಶ್ವದಾದ್ಯಂತ ನಿಷೇಧ ಹೇರುವ ಕುರಿತು ಪ್ರಸ್ತಾವ ಸಲ್ಲಿಸಬೇಕೆಂದು ಕ್ರಿಕೆಟ್ ಆಸ್ಟ್ರೇಲಿಯಕ್ಕೆ ಚಾಪೆಲ್ ಒತ್ತಾಯಿಸಿದ್ದಾರೆ.

‘‘ಆಟಗಾರರ ಅತ್ಯಂತ ಕೆಟ್ಟ ವರ್ತನೆಗೆ ಕ್ರಿಕೆಟ್ ಆಸ್ಟ್ರೇಲಿಯ ಶೂನ್ಯ ಸಹಿಷ್ಣುತೆಯಿಂದ ವರ್ತಿಸುವ ಅಗತ್ಯವಿದೆ. ಮತ್ತೊಮ್ಮೆ ಗೇಲ್‌ರೊಂದಿಗೆ ಐಬಿಎಲ್ ಫ್ರಾಂಚೈಸಿಗಳು ಒಪ್ಪಂದ ಮಾಡಿಕೊಳ್ಳಬಾರದು. ಕ್ರಿಕೆಟ್ ಆಸ್ಟ್ರೇಲಿಯ ಈ ಬಗ್ಗೆ ಐಸಿಸಿಗೆ ದೂರು ನೀಡಿದರೆ ಉತ್ತಮ. ಒಟ್ಟಾರೆ ಗೇಲ್ ವಿರುದ್ಧ ವಿಶ್ವದಾದ್ಯಂತ ನಿಷೇಧ ಹೇರಬೇಕು’’ ಎಂದು ಚಾಪೆಲ್ ಹೇಳಿದ್ದಾರೆ.

 ಟಿವಿ ಪತ್ರಕರ್ತೆಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಗೇಲ್‌ಗೆ ಮೆಲ್ಬೋರ್ನ್ ರೆನೆಗೇಡ್ಸ್ ತಂಡ ಈಗಾಗಲೇ 10,000 ಡಾಲರ್ ದಂಡ ವಿಧಿಸಿದೆ. ಗೇಲ್ ಟಿವಿ ವರದಿಗಾರ್ತಿಯೊಂದಿಗೆ ನೀಡಿದ ಸಂದರ್ಶನದ ವೇಳೆ, ನಾನು ನಿಮ್ಮ ಕಣ್ಣನ್ನು ಇದೇ ಮೊದಲ ಬಾರಿ ನೋಡುತ್ತಿರುವೆ. ಈ ಪಂದ್ಯದಲ್ಲಿ ನಮ್ಮ ತಂಡ ಗೆಲುವು ಸಾಧಿಸಿದ ನಂತರ ನಾವಿಬ್ಬರೂ ಒಟ್ಟಿಗೆ ಕುಳಿತು ಪಾನ ಗೋಷ್ಠಿ ನಡೆಸುವ. ಸಂಕೋಚ ಪಡಬೇಡ ಬೇಬಿ’’ ಎಂದು ಗೇಲ್ ಹೇಳಿದ್ದರು. ಇದಕ್ಕೆ ತಲೆಯಾಡಿಸಿದ್ದ ವರದಿಗಾರ್ತಿ, ನನಗೆ ಸಂಕೋಚವಿಲ್ಲ ಎಂದು ಪ್ರತಿಕ್ರಿಯಿಸಿದ್ದರು.

ಗೇಲ್‌ರ ಈ ವರ್ತನೆಗೆ ಎಲ್ಲೆಡೆಯಿಂದ ಟೀಕೆ ವ್ಯಕ್ತವಾಗಿದ್ದು, ಇದಕ್ಕೆ ಪ್ರತಿಕ್ರಿಯಿಸಿದ್ದ ಗೇಲ್ ತಾನು ತಮಾಷೆ ಮಾಡಿದ್ದೆ. ತನ್ನ ತಪ್ಪಿಗೆ ಕ್ಷಮೆ ಯಾಚಿಸುವೆ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News