ಗೀತಾರ ಹೆತ್ತವರು ತಾವು ಎಂದ ಭೋಪಾಲ್ ದಂಪತಿ
ಇಂದೋರ್, ಜ. 9: ಪಾಕಿಸ್ತಾನದಿಂದ ಮರಳಿದ ಕಿವುಡಿ ಹಾಗೂ ಮೂಗಿ ಯುವತಿ ಗೀತಾ ತಮ್ಮ ಮಗಳು ಎಂದು ಹೇಳಿಕೊಂಡು ಇನ್ನೊಂದು ದಂಪತಿ ಮುಂದೆ ಬಂದಿದೆ.
‘‘ಗೀತಾ ನಮ್ಮ ಮಗಳು, 27 ವರ್ಷಗಳ ಹಿಂದೆ ನಾವು ಪ್ರಯಾಣಿಸುತ್ತಿದ್ದಾಗ ಆಕೆ ತಪ್ಪಿಸಿಕೊಂಡಿದ್ದಳು ಎಂಬುದಾಗಿ ರಂಜೀತ್ ಸಿಂಗ್ ಮತ್ತು ಅವರ ಪತ್ನಿ ಮಾಯಾ ಹೇಳಿದ್ದಾರೆ. ಗೀತಾರನ್ನು ನೋಡಲು ಅನುಮತಿ ನೀಡುವಂತೆ ಅವರು ಕೋರಿದ್ದಾರೆ’’ ಎಂದು ಜಿಲ್ಲೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
‘‘ಅರ್ಜಿಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡುವ ಮುನ್ನ ಈಗ ಪರಿಶೀಲಿಸಲಾಗುತ್ತಿದೆ. ಭೋಪಾಲ್‌ನ ಈ ದಂಪತಿಗೆ ಗೀತಾರನ್ನು ಭೇಟಿಯಾಗಲು ಅವಕಾಶ ನೀಡಬೇಕೇ ಬೇಡವೇ ಎನ್ನುವುದನ್ನು ಕೇಂದ್ರ ಸರಕಾರ ತೀರ್ಮಾನಿಸಲಿದೆ’’ ಎಂದು ಅವರು ಹೇಳಿದರು.
ಈವರೆಗೆ, ಗೀತಾ ತಮ್ಮ ಮಗಳು ಎಂದು ಹೇಳಿಕೊಳ್ಳುವವರಿಂದ ಜಿಲ್ಲಾಡಳಿತಕ್ಕೆ ಐದು ಅರ್ಜಿಗಳು ಬಂದಿವೆ ಎಂದು ಅವರು ತಿಳಿಸಿದರು.
ಗೀತಾ ತುಂಬಾ ಹಿಂದೆ ಕಾಣೆಯಾದ ತನ್ನ ಮಗಳು ನಜ್ಜೊ ಎಂಬುದಾಗಿ ಕಳೆದ ತಿಂಗಳು ಜಬಲ್ಪುರ ಜಿಲ್ಲೆಯ ಅನೀಸಾ ಬಿ ಎಂಬ 40 ವರ್ಷದ ಮಹಿಳೆ ಹೇಳಿಕೊಂಡಿದ್ದರು. ಆದರೆ, ಗೀತಾ ಆಕೆಯ ಚಿತ್ರವನ್ನು ಗುರುತಿಸಲಿಲ್ಲ. ನವೆಂಬರ್‌ನಲ್ಲಿ, ಗೀತಾರ ನಿಜವಾದ ಹೆಸರು ಹೀರಾ ಮಹಾತೊ ಎಂದು ಹೇಳಿಕೊಂಡು ಬಿಹಾರದ ಕುಟುಂಬವೊಂದು ಬಂದಿತ್ತು. ಆದಾಗ್ಯೂ, ಡಿಎನ್‌ಎ ಪರೀಕ್ಷೆಯಲ್ಲಿ ಅವರ ಸಂಬಂಧ ಸಾಬೀತಾಗಲಿಲ್ಲ.
ಅದಕ್ಕೂ ಮುನ್ನ, ಉತ್ತರಪ್ರದೇಶದ ದಂಪತಿಯೊಂದು ಗೀತಾ ತಮ್ಮ ಮಗಳೆಂದು ಹೇಳಿಕೊಂಡು ಬಂದಿತ್ತು. ಅವರನ್ನೂ ಗೀತಾ ಗುರುತಿಸಲಿಲ್ಲ.
ಇತರ ಕೆಲವು ಕುಟುಂಬಗಳೂ ಗೀತಾ ತಮ್ಮ ಮಗಳು ಎಂದು ಹೇಳಿಕೊಂಡು ಬಂದಿದ್ದವು. ಗೀತಾ ಇಂದೋರ್‌ನಲ್ಲಿ ಕಿವುಡ-ಮೂಗರಿಗೆ ನೆರವು ನೀಡುವ ಸಂಸ್ಥೆಯೊಂದರಲ್ಲಿ ಆಶ್ರಯ ಪಡೆದಿದ್ದಾರೆ.
ಗೀತಾ ಸುಮಾರು 15 ವರ್ಷಗಳ ಹಿಂದೆ ಆಕಸ್ಮಿಕವಾಗಿ ಭಾರತದ ಗಡಿ ದಾಟಿ ಪಾಕಿಸ್ತಾನಕ್ಕೆ ಹೋಗಿದ್ದಾಗ ಆಕೆಗೆ 7 ಅಥವಾ 8 ವರ್ಷವಾಗಿತ್ತು ಎನ್ನಲಾಗಿದೆ. ಲಾಹೋರ್ ರೈಲ್ವೆ ನಿಲ್ದಾಣದಲ್ಲಿ ಸಂರೆತಾ ಎಕ್ಸ್‌ಪ್ರೆಸ್‌ನಲ್ಲಿ ಏಕಾಂಗಿಯಾಗಿ ಕುಳಿತಿದ್ದ ಆಕೆಯನ್ನು ಪಾಕಿಸ್ತಾನ್ ರೇಂಜರ್ಸ್‌ಗಳು ಪತ್ತೆಹಚ್ಚಿದ್ದರು. ಬಳಿಕ ಆಕೆಯನ್ನು ಇದಿ ಫೌಂಡೇಶನ್‌ನ ಬಿಲ್ಕಿಸ್ ಇದಿ ದತ್ತು ತೆಗೆದುಕೊಂಡಿದ್ದರು.