ಸ್ವಚ್ಛ ಭಾರತ: ಸಮೀಕ್ಷೆ ಆರಂಭ
ಹೊಸದಿಲ್ಲಿ,ಜ.9: ಕೇಂದ್ರ ನಗರಾಭಿವೃದ್ಧಿ ಸಚಿವಾಲಯವು ಸ್ವಚ್ಛ ಭಾರತ ಅಭಿಯಾನದ ಈ ವರೆಗಿನ ಪ್ರಗತಿಯ ಅಧ್ಯಯನಕ್ಕಾಗಿ ಮತ್ತು ನೈರ್ಮಲ್ಯ ಹಾಗೂ ಸ್ವಚ್ಛತೆಗೆ ಸಂಬಂಧಿಸಿದಂತೆ ದೇಶಾದ್ಯಂತದ 75 ನಗರಗಳಿಗೆ ಶ್ರೇಣಿಗಳನ್ನು ನಿಗದಿಗೊಳಿಸಲು ವ್ಯಾಪಕ ಸಮೀಕ್ಷೆಯನ್ನು ಕೈಗೊಂಡಿದೆ.
ಸ್ವಚ್ಛ ಸರ್ವೇಕ್ಷಣ್ ಎಂದು ಹೆಸರಿಸಲಾಗಿರುವ ಈ ಸಮೀಕ್ಷೆಯನ್ನು ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ(ಕ್ಯೂಸಿಐ) ನಡೆಸುತ್ತಿದೆ. ಎಲ್ಲ ರಾಜ್ಯ ರಾಜಧಾನಿಗಳು ಮತ್ತು ಇತರ 53 ನಗರಗಳು ಸಮೀಕ್ಷೆಯ ವ್ಯಾಪ್ತಿಗೊಳಪಟ್ಟಿವೆ. ಸಮೀಕ್ಷೆಯು ಜ.5ರಿಂದ ಆರಂಭಗೊಂಡಿದ್ದು ಜ.20ರವರೆಗೂ ನಡೆಯಲಿದೆ. ಜ.25ರಂದು ಮೈ ಗವ್ ಜಾಲತಾಣದಲ್ಲಿ ಫಲಿತಾಂಶಗಳು ಪ್ರಕಟಗೊಳ್ಳುವ ನಿರೀಕ್ಷೆಯಿದೆ.
2014 ಅಕ್ಟೋಬರ್‌ನಲ್ಲಿ ಸ್ವಚ್ಛ ಭಾರತ ಅಭಿಯಾನವು ಆರಂಭಗೊಂಡಾಗಿನಿಂದ ಸ್ವಚ್ಛ ಸರ್ವೇಕ್ಷಣ್ ಮೊದಲ ಸಮೀಕ್ಷೆಯಾಗಿದೆ. ವರ್ಷದಿಂದ ವರ್ಷಕ್ಕೆ ಅಭಿಯಾನದ ಪರಿಣಾಮವನ್ನು ಅಳೆಯಲು ತಳಮಟ್ಟದ ಮಾಹಿತಿಗಳು ಅಗತ್ಯವಾಗಿವೆ ಎಂದು ನಗರಾಭಿವೃದ್ಧಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಹಾಗೂ ಅಭಿಯಾನದ ನಿರ್ದೇಶಕ ಪ್ರವೀಣ್ ಪ್ರಕಾಶ ಅವರು ತಿಳಿಸಿದರು.