ಪಾಕ್ ವಿರುದ್ಧ ಟ್ವೆಂಟಿ-20 ಸರಣಿಗೆ ಸೌಥಿ ಅಲಭ್ಯ
ಹ್ಯಾಮಿಲ್ಟನ್, ಜ.10: ಎಡಗಾಲಿನ ನೋವಿಗೆ ತುತ್ತಾಗಿರುವ ನ್ಯೂಝಿಲೆಂಡ್‌ನ ವೇಗದ ಬೌಲರ್ ಟಿಮ್ ಸೌಥಿ ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಿಂದ ಹೊರಗುಳಿದಿದ್ದಾರೆ ಎಂದು ನ್ಯೂಝಿಲೆಂಡ್ ಕ್ರಿಕೆಟ್ ಮಂಡಳಿ ರವಿವಾರ ದೃಢಪಡಿಸಿದೆ.
ಶ್ರೀಲಂಕಾ ವಿರುದ್ಧದ ಮೂರನೆ ಏಕದಿನ ಪಂದ್ಯದ ವೇಳೆ ಸೌಥಿಗೆ ಕಾಲುನೋವು ಕಾಣಿಸಿಕೊಂಡಿತ್ತು. ಆರಂಭದಲ್ಲಿ ಅವರು ಪಾಕಿಸ್ತಾನ ವಿರುದ್ಧ ಟ್ವೆಂಟಿ-20 ಸರಣಿ ವೇಳೆಗೆ ಚೇತರಿಸಿಕೊಳ್ಳಲಿದ್ದಾರೆ ಎಂದು ನಂಬಲಾಗಿತ್ತು. ಆದರೆ, ಸಿಟಿ ಸ್ಕಾನಿಂಗ್‌ನಲ್ಲಿ ಅವರ ಗಾಯ ಗಂಭೀರವಾಗಿರುವ ಅಂಶ ಬೆಳಕಿಗೆ ಬಂದಿತು.
ಸೌಥಿ ಯಾವಾಗ ತಂಡಕ್ಕೆ ವಾಪಸಾಗಲಿದ್ದಾರೆ ಎಂದು ಸ್ಪಷ್ಟವಾಗಿಲ್ಲ. ಬ್ಯಾಟಿಂಗ್ ಕೋಚ್ ಕ್ರೆಗ್ ಮೆಕ್‌ಮಿಲನ್ ಪ್ರಕಾರ, ಫೆ.3 ರಿಂದ ಆರಂಭವಾಗಲಿರುವ ಏಕದಿನ ಸರಣಿಗೆ ಅವರು ತಂಡಕ್ಕೆ ವಾಪಸಾಗಲಿದ್ದಾರೆ.
ಸದ್ಯಕ್ಕೆ ಅವರು ಪಾಕಿಸ್ತಾನ ವಿರುದ್ಧದ ಟ್ವೆಂಟಿ-20 ಸರಣಿಯಿಂದ ಹೊರಗುಳಿಯಲಿದ್ದಾರೆ. ಪಾಕಿಸ್ತಾನ-ನ್ಯೂಝಿಲೆಂಡ್ ನಡುವಿನ ಮೊದಲ ಟ್ವೆಂಟಿ-20 ಪಂದ್ಯ ಜ.15 ರಿಂದ ಆಕ್ಲಂಡ್‌ನಲ್ಲಿ ಆರಂಭವಾಗಲಿದೆ. ಏಕದಿನ ಸರಣಿಯು ಜ.25 ರಿಂದ ಆರಂಭವಾಗಲಿದೆ.