×
Ad

ಕತರ್ ಓಪನ್: ಜೊಕೊವಿಕ್ ಚಾಂಪಿಯನ್

Update: 2016-01-10 23:10 IST

ಕತರ್, ಜ.10: ಕತರ್ ಓಪನ್ ಟೆನಿಸ್ ಟೂರ್ನಿಯ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ರಫೆಲ್ ನಡಾಲ್‌ರನ್ನು ನೇರ ಸೆಟ್‌ಗಳಿಂದ ಮಣಿಸಿರುವ ಸರ್ಬಿಯದ ನೊವಾಕ್ ಜೊಕೊವಿಕ್ 2016ನೆ ಋತುವಿನಲ್ಲಿ ಮೊದಲ ಪ್ರಶಸ್ತಿಯನ್ನು ಜಯಿಸಿ ಶುಭಾರಂಭ ಮಾಡಿದ್ದಾರೆ.

ಶನಿವಾರ ಇಲ್ಲಿ ಒಂದು ಗಂಟೆ ಹಾಗೂ 13 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ ಜೊಕೊವಿಕ್ ಅವರು ಸ್ಪೇನ್‌ನ ನಡಾಲ್‌ರನ್ನು 6-1, 6-2 ಸೆಟ್‌ಗಳ ಅಂತರದಿಂದ ಮಣಿಸಿದರು.

ಈ ಗೆಲುವಿನ ಮೂಲಕ ಜೊಕೊವಿಕ್ ವೃತ್ತಿಜೀವನದಲ್ಲಿ 60ನೆ ಪ್ರಶಸ್ತಿಯನ್ನು ಜಯಿಸಿದ್ದಾರೆ. ಮಾತ್ರವಲ್ಲ ನಡಾಲ್ ವಿರುದ್ಧದ ಮುಖಾಮುಖಿ ದಾಖಲೆಯಲ್ಲಿ ಮುನ್ನಡೆ ಸಾಧಿಸಿದ್ದಾರೆ. ನಡಾಲ್ ಹಾಗೂ ಜೊಕೊವಿಕ್ 47 ಪಂದ್ಯಗಳಲ್ಲಿ ಆಡಿದ್ದು, ಈ ಪೈಕಿ ಜೊಕೊವಿಕ್ ಇದೀಗ 24ನೆ ಬಾರಿ ಗೆಲುವು ಸಾಧಿಸಿದ್ದಾರೆ.

‘‘ನಾನು ಇಂದು ಆರಂಭದಲ್ಲೇ ಉತ್ತಮ ಟೆನಿಸ್ ಆಡಿದೆ. ತಾನು ಬಯಸಿದಂತಹ ಹೊಡೆತ ಬಾರಿಸಲೂ ಯಶಸ್ವಿಯಾದೆ. ನಾನು ಆಡಿರುವ ರೀತಿಯು ತೃಪ್ತಿ ತಂದಿದೆ’’ ಎಂದು ಜೊಕೊವಿಕ್ ತಿಳಿಸಿದ್ದಾರೆ.

ನಡಾಲ್ ವಿರುದ್ಧದ ಪಂದ್ಯದುದ್ದಕ್ಕೂ ಪ್ರಾಬಲ್ಯ ಸಾಧಿಸಿರುವ ಜೊಕೊವಿಕ್ 2015ರಂತೆಯೇ ಈ ವರ್ಷವೂ ಅತ್ಯುತ್ತಮ ಪ್ರದರ್ಶನ ನೀಡುವುದಾಗಿ ವಿಶ್ವ ಟೆನಿಸ್‌ಗೆ ಸಂದೇಶ ರವಾನಿಸಿದ್ದಾರೆ. ಕತರ್‌ನಲ್ಲಿ ಒಂದು ವಾರ ನಡೆದ ಟೂರ್ನಿಯಲ್ಲಿ ಜೊಕೊವಿಕ್ ಒಂದೂ ಸೆಟ್‌ನ್ನು ಕಳೆದುಕೊಂಡಿಲ್ಲ. ಸತತ 16ನೆ ಬಾರಿ ಫೈನಲ್‌ಗೆ ತಲುಪಿದ್ದ ಜೊಕೊವಿಕ್ ಕಳೆದ ವರ್ಷದ ಆಗಸ್ಟ್‌ನಲ್ಲಿ ಯುಎಸ್ ಓಪನ್‌ನಲ್ಲಿ ಕೊನೆಯ ಬಾರಿ ಸೋತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News