ಆಡಳಿತ ಸಂಬಂಧಿ ದೂರುಗಳಲ್ಲಿ ಆಧಾರ್ ಸಂಖ್ಯೆಯಿರಲಿ: ಸರಕಾರ
ಹೊಸದಿಲ್ಲಿ, ಜ.10: ಪ್ರತೀಕಾರಾತ್ಮಕ ಹಾಗೂ ಕಿರುಕುಳದ ಉದ್ದೇಶದಿಂದ ನೀಡುವ ದೂರುಗಳ ಪ್ರಮಾಣವನ್ನು ತಗ್ಗಿಸಲು, ಆನ್‌ಲೈನ್ ಮೂಲಕ ಆಡಳಿತ ಸಂಬಂಧಿ ವಿಚಾರಗಳ ಬಗ್ಗೆ ದೂರುಗಳನ್ನು ಸಲ್ಲಿಸುವಾಗ ದೂರುದಾರರು ತಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸುವಂತೆ ಉತ್ತೇಜನ ನೀಡಲು ಸರಕಾರ ನಿರ್ಧರಿಸಿದೆ.
ನಾಗರಿಕ-ಕೇಂದ್ರದ ಆಡಳಿತಕ್ಕಾಗಿ ನೀತಿ ಮಾರ್ಗಸೂಚಿ ರಚಿಸುವ ನೋಡಲ್ ಸಂಸ್ಥೆ, ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ದೂರುಗಳ ಇಲಾಖೆ(ಡಿಎಆರ್‌ಪಿಜಿ) ಒಂದು ಕೇಂದ್ರೀಕೃತ ಸಾರ್ವಜನಿಕ ದೂರು ಪರಿಹಾರ ಮತ್ತು ನಿಗಾ ವ್ಯವಸ್ಥೆಯನ್ನು ನಡೆಸುತ್ತಿದೆ.
ಜನರು ತಮ್ಮ ದೂರು ದಾಖಲಿಸುವುದಕ್ಕಾಗಿ-ಡಿಡಿಡಿ.ಜಟ್ಟಠಿಚ್ಝ.್ಞಜ್ಚಿ.ಜ್ಞಿ ಎಂಬ ಸಾರ್ವಜನಿಕ ದೂರುಗಳ ಜಾಲತಾಣಕ್ಕೆ ಭೇಟಿ ನೀಡಬಹುದು. ಈ ಪೋರ್ಟಲ್‌ನ ಮೂಲಕ ದೇಶದ ಯಾವುದೇ ಸರಕಾರಿ ಸಂಘಟನೆಯ ವಿರುದ್ಧ ದೂರು ದಾಖಲಿಸಬಹುದು. ಕೆಲವು ದ್ವೇಷಾತ್ಮಕ ಹಾಗೂ ಗಟ್ಟಿ ಮಾಹಿತಿ ಇಲ್ಲದ ದೂರುಗಳು ಬರುತ್ತವೆ. ಸುಳ್ಳು ದೂರುಗಳನ್ನು ಪ್ರಾಮಾಣಿಕ ದೂರುಗಳಿಂದ ಬೇರ್ಪಡಿಸಲು ಹಾಗೂ ಈ ಪ್ರಕ್ರಿಯೆಯಲ್ಲಿ ಸರಕಾರಿ ಅಧಿಕಾರಿಗಳಿಗೆ ಕಿರುಕುಳವಾಗದಂತೆ ದೂರುಗಳಲ್ಲಿ ಆಧಾರ್ ಸಂಖ್ಯೆ ಉಲ್ಲೇಖಿಸುವಂತೆ ಸಾರ್ವಜನಿಕರಿಗೆ ಉತ್ತೇಜನ ನೀಡಬೇಕೆಂದು ಡಿಎಆರ್‌ಪಿಜಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆಧಾರ್ ಸಂಖ್ಯೆ ನಮೂದಿಸುವುದನ್ನು ಕಡ್ಡಾಯ ಮಾಡಿಲ್ಲ.
ಅದು ದೂರು ಸಲ್ಲಿಸಲು ಆನ್‌ಲೈನ್‌ನಲ್ಲಿ ಲಭ್ಯವಿರುವ ಅರ್ಜಿಯಲ್ಲಿ ಆಯ್ಕೆಯ ಕ್ಷೇತ್ರವಾಗಿದೆ. ಆಧಾರ್ 12 ಅಂಕಗಳ ಒಂದು ಸಂಖ್ಯೆಯಾಗಿದ್ದು, ದೇಶದ ಎಲ್ಲಕಡೆ ಗುರುತು ಹಾಗೂ ವಿಳಾಸದ ದಾಖಲೆಯಾಗಿ ಬಳಕೆಯಾಗುತ್ತದೆ.
ದೂರುಗಳ ಬಗ್ಗೆ ಈಗ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ, ‘ಸಕ್ರಿಯ ಆಡಳಿತ ಮತ್ತು ಸಕಾಲಿಕ ಅನುಷ್ಠಾನ (ಪ್ರಗತಿ) ಆನ್‌ಲೈನ್‌ನ ಮೂಲಕ ನಿಗಾ ವಹಿಸುತ್ತಿದ್ದಾರೆ. ವ್ಯವಸ್ಥೆಯ ಬದಲಾವಣೆಗಾಗಿ ಗುರುತಿಸಲಾದ ದೂರುಗಳ ಬಗ್ಗೆ ಸಂಬಂಧಿತ ಕಾರ್ಯದರ್ಶಿಗಳೊಂದಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಲಾಗುತ್ತಿದೆ.
ದೂರುಗಳನ್ನು ಸಲ್ಲಿಸಲು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮೊಬೈಲ್ ಅಪ್ಲಿಕೇಶನ್ ಒಂದಕ್ಕೂ ಚಾಲನೆ ನೀಡಲಾಗಿದೆ. ಅದನ್ನು ಸ್ಮಾರ್ಟ್ ಫೋನ್‌ನಲ್ಲಿ ಡೌನ್‌ಲೋಡ್ ಮಾಡಬಹುದು. ಪ್ರತಿ ವರ್ಷ ಆನ್‌ಲೈನ್‌ನಲ್ಲಿ ಲಕ್ಷಾಂತರ ಸಾರ್ವಜನಿಕ ದೂರುಗಳು ಬರುತ್ತವೆ. 2012ರಲ್ಲಿ 2.01ಲಕ್ಷ, 2013ರಲ್ಲಿ 2.35ಲಕ್ಷ ಹಾಗೂ 2014ರಲ್ಲಿ ಸುಮಾರು 3ಲಕ್ಷ ದೂರುಗಳು ದಾಖಲಿಸಲಾಗಿವೆಯೆಂದು ಸರಕಾರಿ ಅಂಕಿ-ಅಂಶ ತಿಳಿಸಿದೆ.