ರಾಮಮಂದಿರಕ್ಕೆ ರಾಜೀವ್ ಬೆಂಬಲ: ಸುಬ್ರಹ್ಮಣ್ಯನ್ ಸ್ವಾಮಿ ಹೊಸ ಬಾಂಬ್

Update: 2016-01-11 03:28 GMT

ನವದೆಹಲಿ: ರಾಮಮಂದಿರ ಪುನರ್ ನಿರ್ಮಾಣ ಕುರಿತು ದೆಹಲಿ ವಿಶ್ವವಿದ್ಯಾನಿಲಯದಲ್ಲಿ ನಡೆದ ವಿಚಾರ ಸಂಕಿರಣವೊಂದರಲ್ಲಿ ಸುಬ್ರಹ್ಮಣ್ಯನ್ ಸ್ವಾಮಿ ಹೊಸ ಬಾಂಬ್ ಸಿಡಿಸಿದ್ದು, ರಾಮಮಂದಿರ ನಿರ್ಮಾಣಕ್ಕೆ ರಾಜೀವ್‌ಗಾಂಧಿ ಬೆಂಬಲ ನೀಡಿದ್ದರು ಎಂದು ಬಹಿರಂಗಪಡಿಸಿದ್ದಾರೆ.

ನಮ್ಮ ಸಂಸ್ಕೃತಿ ಪುನರುಜ್ಜೀವನಗೊಳಿಸುವ ಸಲುವಾಗಿ ರಾಮಮಂದಿರ ಪುನರ್ ನಿರ್ಮಾಣ ಅನಿವಾರ್ಯ. ಕಾಂಗ್ರೆಸ್ ಪಕ್ಷ ಈ ಕಾರ್ಯಕ್ಕೆ ಸಹಕಾರ ನೀಡುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಕಲಾ ವಿಭಾಗದಲ್ಲಿ ವಿಎಚ್‌ಪಿ ಮುಖಂಡ ಅಶೋಕ್ ಸಿಂಘಾಲ್ ಆರಂಭಿಸಿದ್ದ ಅರುಂಧತಿ ವಸಿಷ್ಠ ಅನುಸಂಧಾನಪೀಠ ವ್ಯವಸ್ಥೆಗೊಳಿಸಿದ್ದ ಈ ವಿಚಾರಸಂಕಿರಣಕ್ಕೆ ಕಾಂಗ್ರೆಸ್ ಹಾಗೂ ಎಡಪಕ್ಷ ಬೆಂಬಲಿತ ವಿದ್ಯಾರ್ಥಿ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಇದು ಕ್ಯಾಂಪಸ್ ವಾತಾವರಣವನ್ನು ಕೋಮುವಾದೀಕರಿಸುವ ಹುನ್ನಾರ ಎಂದು ಆಪಾದಿಸಿ ಬೃಹತ್ ಪ್ರತಿಭಟನೆ ನಡೆಸಿದವು.

ಸ್ವಾಮಿಯವರ ಐದು ಪ್ರಮುಖ ಅಂಶಗಳ ಉಲ್ಲೇಖ ಹೀಗಿದೆ:
"ರಾಮಮಂದಿರ ನಿರ್ಮಾಣವಾಗಲೇಬೇಕು. ನನಗೆ ಅವಕಾಶ ಸಿಕ್ಕಿದಾಗ ಪಕ್ಷ ವಿರೋಧಿಸಿದರೂ ನಾನು ಖಂಡಿತವಾಗಿಯೂ ಅಗತ್ಯ ಸಹಕಾರ ನೀಡುತ್ತೇನೆ ಎಂದು ವೈಯಕ್ತಿಕವಾಗಿ ನನಗೆ ತಿಳಿಸಿದ್ದರು. ಅವರು ದೂರದರ್ಶನದಲ್ಲಿ ರಾಮಾಯಣ ಧಾರಾವಾಹಿ ಆರಂಭಿಸಿದರು. ಇದು ಜನರ ಕುತೂಹಲಕ್ಕೆ ಕಾರಣವಾಯಿತು"

"1989ರ ಚುನಾವಣೆಯಲ್ಲಿ ಅವರು ಭಾಷಣದ ವೇಳೆ ಭಾರತ ರಾಮರಾಜ್ಯವಾಗಬೇಕು ಎಂದು ಸ್ಪಷ್ಟವಾಗಿ ಹೇಳಿದ್ದರು. ಕಾಂಗ್ರೆಸ್ ಕೂಡಾ ಇದು ಕೇವಲ ನಮ್ಮ ಆಗ್ರಹವಲ್ಲ; ದೇಶದ ಆಗ್ರಹ ಎಂದು ಅರಿತುಕೊಂಡು ಕಾಂಗ್ರೆಸ್ ಕೂಡಾ ಇದಕ್ಕೆ ಕೈಜೋಡಿಸುತ್ತದೆ ಎಂಬ ನಂಬಿಕೆ ನನಗಿದೆ"

"ನಮ್ಮ ಸಾಂಸ್ಕೃತಿಕ ಪುನರುಜ್ಜೀವನಕ್ಕೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಬೇಕಾದ್ದು ಅನಿವಾರ್ಯ. ನಾವು ಈಗಾಗಲೇ ಆರಂಭಿಸಿದ್ದು, ಮುಗಿಯವವರೆಗೂ ವಿರಮಿಸುವುದಿಲ್ಲ. ರಾಮಮಂದಿರ ನಮ್ಮ ಗುರಿ. ಅಲ್ಲಿ ಹಿಂದೆ ದೇವಾಲಯ ಇತ್ತು ಎನ್ನುವುದನ್ನು ಮುಸಲ್ಮಾನರೂ ಒಪ್ಪಿಕೊಂಡಿದ್ದಾರೆ. ನಾವೀಗ ಅದನ್ನು ಪುನರ್ ನಿರ್ಮಾಣ ಮಾಡಿಕೊಳ್ಳಲು ಅವಕಾಶ ನೀಡಲಿ. ಬದ್ಧತೆಯನ್ನು ಪೂರ್ಣಗೊಳಿಸುವುದು ನ್ಯಾಯಾಲಯ ನಿಂದನೆಯಾಗದು"

"ನಮ್ಮ ದೇಶದಲ್ಲಿ 40 ಸಾವಿರ ದೇವಸ್ಥಾನಗಳು ಧ್ವಂಸವಾಗಿವೆ. ಅವೆಲ್ಲವನ್ನೂ ಪುನರ್ ನಿರ್ಮಾಣ ಮಾಡಬೇಕು ಎಂದು ನಾವು ಹೇಳುವುದಿಲ್ಲ. ಆದರೆ ಈ ಮೂರು ದೇವಸ್ಥಾನಗಳ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ರಾಮಜನ್ಮಭೂಮಿ, ಮಥುರಾ ಕೃಷ್ಣ ದೇವಾಲಯ ಹಾಗೂ ಕಾಶಿವಿಶ್ವನಾಥ ದೇಗುಲ. ರಾಮಮಂದಿರ ನಿರ್ಮಾಣವಾದರೆ, ಇತರ ದೇಗುಲ ನಿರ್ಮಾಣ ಮಾರ್ಗ ಸುಲಭವಾಗುತ್ತದೆ. ಚರ್ಚೆ ಮಾಡಬಹುದು; ಆದರೆ ರಾಜಿ ಮಾಡಿಕೊಳ್ಳಲಾಗದು"
"ಆದರೆ ಯಾವುದನ್ನೂ ಬಲಾತ್ಕಾರವಾಗಿ ಕಾನೂನು ವಿರುದ್ಧ ಮಾಡಿಲ್ಲ. ನ್ಯಾಯಾಲಯದಲ್ಲಿ ಜಯ ಗಳಿಸುತ್ತೇವೆ ಎಂಬ ವಿಶ್ವಾಸವಿದೆ"

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News