ಸುದ್ದಿ ವಾಹಿನಿಗಳೋ... ಗದ್ದಲ ವಾಹಿನಿಗಳೋ?
ಟಿವಿ ಚಾನೆಲ್‌ಗಳ ಚರ್ಚೆಯ ಸಾಫಲ್ಯ ಏನೇ ಇರಲಿ, ಹಲವು ಬಾರಿ ಇವು ಕೆಲವರ ವೈಯಕ್ತಿಕ ಸಮಸ್ಯೆಗಳನ್ನು ತೆಗೆದು ಕೊಂಡು ಚಿಂತನ-ಮಂಥನ ಮಾಡುತ್ತವೆ. ಅವುಗಳನ್ನು ಜನಸಾಮಾನ್ಯರು ಮತ್ತು ದೇಶ ಎದುರಿಸುತ್ತಿರುವ ಬೃಹತ್ ಮತ್ತು ಜ್ವಲಂತ ಸಮಸ್ಯೆಗಳಂತೆ ಬಿಂಬಿಸುತ್ತವೆ.
ಸರಕಾರಿ ನಿಯಂತ್ರಿತ ಪ್ರಸಾರಭಾರತಿ ಚೇರ್ಮನ್ ಡಾ.ಸೂರ್ಯ ಪ್ರಕಾಶ ಒಮ್ಮೆ ಈ ದೇಶದಲ್ಲಿರುವ ಖಾಸಗಿ ಸುದ್ದಿ ವಾಹಿನಿಗಳನ್ನು’’ಅವು ನ್ಯೂಸ್ ಚಾನೆಲ್‌ಗಳಲ್ಲ...ನೊಯ್ಸೆ ಚಾನೆಲ್ (ಘೆಟಠಿ ಘೆಛಿಡಿ ಚ್ಠಿಠಿ ಘೆಟಜಿಛಿ ಇಚ್ಞ್ಞಛ್ಝಿ )ಗಳು ಎಂದು ಹೇಳಿದ್ದರು. ಬಹುತೇಕ ಖಾಸಗಿ ವಾಹಿನಿಗಳ, ಅದರಲ್ಲೂ ಮುಖ್ಯವಾಗಿ ಇಂಗ್ಲಿಷ್ ಸುದ್ದಿ ವಾಹಿನಿಗಳ ರಾತ್ರಿ ಒಂಬತ್ತರ ನ್ಯೂಸ್ ನೋಡಿದಾಗ, ಅವರ ಅಭಿಪ್ರಾಯ ಅರ್ಥವಾಗದಿರದು. ರಾತ್ರಿ ಒಂಬತ್ತು ಗಂಟೆ, ಮುಂಜಾನೆ ಹೊರಗೆ ಹೋದ ಮನೆಯವರೆಲ್ಲರೂ ಮನೆಗೆ ಮರಳುವ ಸಮಯ. ಊಟಮಾಡುತ್ತಾ ಆ ದಿನದ ದೇಶಾದ್ಯಂತದ ಸುದ್ದಿ ಸಮಾಚಾರಗಳನ್ನು, ವಿಶೇಷ ಘಟನೆಗಳನ್ನು ತಿಳಿದು ಕೊಳ್ಳುವುದು ಲಾಗಾಯ್ತನಿಂದ ನಡೆದುಕೊಂಡು ಬಂದ ಪದ್ಧತಿ. ತೀರಾ ಇತ್ತೀಚೆಗಿನವರೆಗೆ ಸುದ್ದಿವಾಹಿನಿಗಳು ಈ ಸಮಯದಲ್ಲಿ ವೀಕ್ಷಕರಿಗೆ ಆ ದಿನದ ಸುದ್ದಿಗಳನ್ನು ಮತ್ತು ಮಹತ್ವದ ಘಟನಾವಳಿಗಳನ್ನು ಅಂತಾರಾಷ್ಟ್ರೀಯ, ರಾಷ್ಟ್ರೀಯ, ಪ್ರಾದೇಶಿಕ, ಸ್ಥಳೀಯ ಮತ್ತು ಕ್ರೀಡಾ ಸುದ್ದಿಗಳ ಅಡಿಯಲ್ಲಿ ಸಂಕ್ಷಿಪ್ತವಾಗಿ ಕೊಡುತ್ತಿದ್ದವು. ಅಂತೆಯೇ ವೀಕ್ಷಕರೂ ಈ ಸಮಯದ ಸುದ್ದಿಯನ್ನು ತಪ್ಪದೆ ನೋಡುತ್ತಿದ್ದರು. ಈ ಅವಧಿಯ ಸುದ್ದಿಯುನ್ನು ಪ್ರೈಮ್ ಟೈಮ್ ಸುದ್ದಿ ಎಂದೂ ಕರೆಯುತ್ತಿದ್ದರು.
ಹಲವು ಚಾನೆಲ್‌ಗಳು ಈ ಪದ್ಧತಿಯನ್ನು ಮುಂದುವರಿಸಿದರೂ, ಕೆಲವು ಚಾನೆಲ್‌ಗಳು, ಮುಖ್ಯವಾಗಿ ‘ಟಜ್ಞಿಜಿಟ್ಞ ಞಛ್ಟಿ ’ ಎಂದು ಹಣೆಪಟ್ಟಿ ಹಾಕಿಕೊಂಡಿರುವ ಚಾನೆಲ್‌ಗಳು ಈ ಸುದ್ದಿ ಸಮಯವನ್ನು ‘ಚರ್ಚಾಕೂಟ’ಗಳನ್ನಾಗಿ ಪರಿವರ್ತಿಸಿವೆ. ಆ ದಿನದ ಯಾವುದಾದರೂ ಮುಖ್ಯ ಸುದ್ದಿ ಅಥವಾ ಘಟನಾವಳಿಯ ಸುತ್ತ ಅವರ ಚರ್ಚೆ ನಡೆಯುತ್ತದೆ. ಇದರಲ್ಲಿ ರಾಜಕೀಯ ಪಕ್ಷದ ವಕ್ತಾರರು, ಸೆಲೆಬ್ರಿಟಿಗಳು, ವಕೀಲರು, ನಿವೃತ್ತ ಸೈನ್ಯಾಧಿಕಾರಿಗಳು, ಕೆಲವು ದೊಡ್ಡ ಪತ್ರಿಕೆಗಳ ಸಂಪಾದಕರು, ಬಾಲಿವುಡ್ ಬಾದಶಾಹಗಳು ಮತ್ತು ಬೆಡಗಿಯರು, ಹರಿತ ನಾಲಗೆಯವರು, ತೀಕ್ಷ್ಣವಾಗಿ ಪ್ರತಿಕ್ರಿಯಿಸುವವರು ಇರುತ್ತಾರೆ. ಚಾನೆಲ್ ನಿರೂಪಕರು ಆಯ್ದುಕೊಂಡ ವಿಷಯದ ಮೇಲೆ ಚರ್ಚೆ ಆಗುತ್ತದೆ. ಸಾಮಾನ್ಯವಾಗಿ ಆ ದಿನದ ಮುಖ್ಯ ಘಟನಾವಳಿಯ ಬಗೆಗೆ ಚರ್ಚೆ ಯಾಗುತ್ತದೆ. ಚರ್ಚೆಯಲ್ಲಿ ಭಾಗವಹಿಸುವವರೆಲ್ಲ ತಾವು ನಂಬಿಕೊಂಡು ಬಂದ ರಾಜಕೀಯ, ಸಾಮಾಜಿಕ ಮತ್ತು ವೈಚಾರಿಕ ಸಿದ್ಧಾಂತಗಳ ಮೇಲೆ ಮತ್ತು ತಾವು ಗೌರವಿಸುವ ಧುರೀಣರ ಅಪೇಕ್ಷೆಯಂತೆ ತಮ್ಮ ವಾದವನ್ನು ಮಂಡಿಸುತ್ತಿದ್ದು, ವಾಸ್ತವ ನೇಪಥ್ಯಕ್ಕೆ ಸರಿಯುತ್ತದೆ. ಎಷ್ಟೋ ಬಾರಿ ವಸ್ತುನಿಷ್ಠ ಚರ್ಚೆ ಹಳ್ಳ ಹಿಡಿದು ವ್ಯಕ್ತಿ ನಿಷ್ಟ ಚರ್ಚೆ ಮುನ್ನುಗ್ಗುತ್ತದೆ. ತಮ್ಮ ವಾದ ವಿವಾದದಲ್ಲಿ ಸಮಸ್ಯೆಯ ವಿಶ್ಲೇಷಣೆ ಮಾಡಿ ಪರಿಹಾರ ಸೂಚಿಸುವ ಬದಲು ವಾದ ವಿವಾದದಲ್ಲಿ ಇನ್ನೊಬ್ಬರ ತೇಜೋವಧೆ ಮಾಡುವುದೇ ಎದ್ದು ಕಾಣುತ್ತದೆ. ವೀಕ್ಷಕ ರಿಗೆ ಯಾರು ಏನು ಮಾತನಾಡುತ್ತಾರೆ ಮತ್ತು ಯಾರಿಗೆ ಏನು ಹೇಳುತ್ತಾರೆ ಎನ್ನುವುದೇ ತಿಳಿಯುವುದಿಲ್ಲ. ವೀಕ್ಷಕರು ನಾವು ಈ ಭಾಗ್ಯಕ್ಕೆ ಈ ಕಾರ್ಯಕ್ರಮವನ್ನು ನೋಡಬೇಕೇ ಎಂದು ನಿಟ್ಟುಸಿರು ಬಿಡುತ್ತಾರೆ.
ಇಂತಹ ಕಾರ್ಯಕ್ರಮಗಳಲ್ಲಿ ನಿರೂಪಕರೇ ತ್ರಿಕಾಲ ಜ್ಞಾನಿಗಳು ಮತ್ತು ಬ್ರಹ್ಮ ಜ್ಞಾನಿಗಳು ಕೂಡಾ. ಅವರ ಮಾತೇ ಕೊನೆಯ ಮತ್ತು ಅಂತಿಮ ಮಾತು. ಚರ್ಚೆಯಲ್ಲಿ ಭಾಗವಹಿಸುವವರು ನೆಪಮಾತ್ರಕ್ಕೆ. ಕುತ್ತಿಗೆಯ ನರ ಉಬ್ಬಿಸಿ ಕೂಗಿದ್ದಷ್ಟೇ ಅವರ ಕೊಡುಗೆ. ಚರ್ಚೆಯ ಹಾದಿ ಅವರು ನಿರೀಕ್ಷಿಸಿದಂತೆ ಸಾಗದಿದ್ದರೆ, ನಿರೂಪಕರು ಮಧ್ಯದಲ್ಲಿ ಬಾಯಿ ಹಾಕಿ ಭಾಗವಹಿಸಿದವರ ಬಾಯ್ಮುಚ್ಚಿಸುತ್ತಾರೆ. ತಾವೇ ಸರಿ ಎಂದು ವಿಷಯಾಂತರ ಮಾಡುತ್ತಾರೆ. ಅವರ ಮಾತಿನ ವೈಖರಿ ನೋಡಿದರೆ, ಅವರು ತೋರಿಸುವ ಜ್ಞಾನ ಭಂಡಾರವನ್ನು ನೋಡಿದಾಗ ವೀಕ್ಷಕರು ಕೆಲವು ಬಾರಿ ಆಡಳಿತ ಯಂತ್ರದ ಚುಕ್ಕಾಣಿಯನ್ನು ಇವರ ಕೈಗೇಕೆ ಕೊಡಬಾರದು ಎಂದೂ ಚಿಂತಿಸುತ್ತಾರೆ. ಅವರು ಶಾಲಾ ಶಿಕ್ಷಕರಂತೆ ಭಾಗವಹಿಸಿದವರನ್ನು ಗದರಿಸುತ್ತಾರೆ ಕೂಡಾ? ಚರ್ಚೆಯ ಅಂತ್ಯದಲ್ಲಿ ಇಲ್ಲಿ ಯಾರು ಗೆದ್ದರು...ಯಾರು ಸೋತರು.. ಯಾರು ಸರಿ..ಯಾರು ತಪ್ಪುಎನ್ನುವುದು ನಿರ್ಧಾರ ಆಗುವುದಿಲ್ಲ. ಸಂತೆ ಮಾರುಕಟ್ಟೆ ತರಹದ ಗಲಾಟೆಯಲ್ಲಿ ವೀಕ್ಷಕ ಕೊನೆಗೆ ಗೊಂದಲದಲ್ಲಿಯೇ ಟಿವಿ ಆಫ್ ಮಾಡುತ್ತಾನೆ.
ಟಿವಿ ಚಾನೆಲ್‌ಗಳ ಚರ್ಚೆಯ ಸಾಫಲ್ಯ ಏನೇ ಇರಲಿ, ಹಲವು ಬಾರಿ ಇವು ಕೆಲವರ ವೈಯಕ್ತಿಕ ಸಮಸ್ಯೆಗಳನ್ನು ತೆಗೆದು ಕೊಂಡು ಚಿಂತನ-ಮಂಥನ ಮಾಡುತ್ತವೆ. ಅವುಗಳನ್ನು ಜನಸಾಮಾನ್ಯರು ಮತ್ತು ದೇಶ ಎದುರಿಸುತ್ತಿರುವ ಬೃಹತ್ ಮತ್ತು ಜ್ವಲಂತ ಸಮಸ್ಯೆಗಳಂತೆ ಬಿಂಬಿಸುತ್ತವೆ. ಅವುಗಳನ್ನು ಒಂದು ರಾಷ್ಟ್ರೀಯ ದುರಂತ, ವಿಪತ್ತು, ಅಗ ಬಾರದ್ದು ಆಗಿಹೋಗಿದೆ ಎನ್ನುವಂತೆ ತೋರಿಸುತ್ತಾರೆ. ಸುನಂದಾ ತರೂರ್ ಮತ್ತು ಇಂದ್ರಾಣಿ ಮುಖರ್ಜಿ ಪ್ರಕರಣಗಳನ್ನು ವಾರಗಟ್ಟಲೇ ಪ್ರಸಾರ ಮಾಡಿದ ವೈಖರಿಯನ್ನು ಬಹುತೇಕ ವೀಕ್ಷಕರು ಮೆಚ್ಚಲಿಲ್ಲ. ತೀರಾ ಸಾಮಾನ್ಯವಾದ ಮತ್ತು ದೇಶದಲ್ಲಿ ನಡೆಯುವ ಇಂತಹ ಸಾವಿರಾರು ಪ್ರಕರಣಗಳಂತಿರುವ ಇವುಗಳಿಗೆ ಈ ರೀತಿಯ ಪ್ರಚಾರ ಅಗತ್ಯ ಇತ್ತೇ? ಸೆಲೆಬ್ರಿಟಿಗಳು ಇದ್ದರೂ ಲಕ್ಷ ಸತ್ತರೂ ಲಕ್ಷ ಎನ್ನುವುದನ್ನು ಇವು ದೃಢೀಕರಿಸುತ್ತವೆ. ಪ್ರಸಾರ ಮಾಡಲು ಇದಕ್ಕೂ ಮುಖ್ಯ ಮತ್ತು ಆದ್ಯತೆಯ ವಿಷಯಗಳು ಸಾಕಷ್ಟು ಇದ್ದಿದ್ದವು. ಈ ವಾಹಿನಿಗಳಲ್ಲಿ ಹಸಿವು, ನಿರುದ್ಯೋಗ, ಮತ್ತು ಅಭಿವೃದ್ಧಿಗೆ ಏಕೆ ಮಹತ್ವ ಇಲ್ಲ. ಸೆಲೆಬ್ರಿಟಿಗಳ ಅಂಗಳವನ್ನು ಬಿಟ್ಟು ಅವರೇಕೆ ಹೊರ ಬರುವುದಿಲ್ಲ?
ಯಾವುದೇ ಪಕ್ಷ ಅಧಿಕಾರದಲ್ಲಿ ಇರಲಿ, ಸರಕಾರಿ ನಿಯಂತ್ರಿತ ದೂರದರ್ಶನ ಅಡಳಿತ ಪಕ್ಷದ ಮುಖ ವಾಣಿ ಅಗಿ ಕಾರ್ಯ ನಿರ್ವಹಿಸುತ್ತದೆ ಎನ್ನುವುದು ಲಾಗಾಯ್ತಿನಿಂದ ಕೇಳಿದ ಅರೋದಿಂದ ವೀಕ್ಷಕರು ಸರಕಾರದ ತುತ್ತೂರಿಯನ್ನು ಕೇಳಲು ಮತ್ತು ನೋಡಲು ಇಚ್ಚಿಸದೆ, ನೇರ, ದಿಟ್ಟ, ನಿರಂತರ ಮತ್ತು ನಿಷ್ಪಕ್ಷಪಾತ ಸುದ್ದಿಗಳಿಗಾಗಿ ಖಾಸಗಿ ಸುದ್ದಿ ವಾಹಿನಿಗಳತ್ತ ಹೊರಳಿದ್ದು, ಈಗ ಅವುಗಳಿಂದ ಕೂಡಾ ವೀಕ್ಷಕ ವಿಮುಖನಾಗುವ ಲಕ್ಷಣಗಳು ಗೋಚರಿಸುತ್ತಿವೆ.