×
Ad

ಊರಿನ ಭಾಗ್ಯ ದೇವಾಲಯವಲ್ಲ -ಶಾಲೆ

Update: 2016-01-11 23:14 IST


ಮಾನ್ಯರೆ,
ಹೆಬ್ರಿಯ ಮದರ್ ಆಫ್ ಗಾಡ್ ಚರ್ಚನ್ನು ಲೋಕಾರ್ಪಣೆ ಮಾಡುತ್ತಾ ಬೆಳ್ತಂಗಡಿ ಧರ್ಮ ಪ್ರಾಂತದ ಧರ್ಮಾಧ್ಯಕ್ಷರು‘‘ ಊರಿಗೆ ದೇವಾಲಯ ಬರುವುದೇ ಭಾಗ್ಯ’’ ಎಂಬ ಸಂದೇಶ ನೀಡಿದರೆಂದು ವರದಿಯಾಗಿತ್ತು. ನಿಜಾರ್ಥದಲ್ಲಿ ಗ್ರಹಿಸಿದರೆ ಊರಲ್ಲಿ ವಿವಿಧ ಜಾತಿ, ಮತ, ಧರ್ಮಗಳ ಜನರ ಮಧ್ಯೆ ಗೋಡೆ ನಿರ್ಮಿಸುವ ದೇವರ ಆರಾಧನಾ ಮಂದಿರಗಳನ್ನು ಕಟ್ಟುವುದಕ್ಕಿಂತ ಕನ್ನಡ ಶಾಲೆಗಳನ್ನು ತೆರೆದು ಅಕ್ಷರ ವಂಚಿತ ಮಕ್ಕಳಿಗೆ ಅಕ್ಷರಭಾಗ್ಯ ಕೊಡುವುದು ಹೆಚ್ಚು ಪುಣ್ಯದ ಕೆಲಸ.
ನಮ್ಮ ಮಠ, ಮಂದಿರಗಳಲ್ಲಿ ಪೀಠಸ್ಥರಾಗಿರುವ ಮಾತನಾಡುವ, ನಡೆದಾಡುವ ದೇವರುಗಳದ್ದೇ ನಮಗೆ ದೊಡ್ಡ ಸಮಸ್ಯೆ. ಹಾಗೆ ನೋಡಿದರೆ ಮಾತನಾಡದ, ಓಡಾಡದ ಕಲ್ಲು ದೇವರುಗಳಿಂದ ಸಮಾಜಕ್ಕೆ ಅಂತಹ ದೊಡ್ಡ ಅಪಾಯಗಳಿಲ್ಲ. ಜನ ಅವರವರ ಭಾವಕ್ಕೆ ಭಕ್ತಿಗೆ ಸರಿಯಾಗಿ ನಡೆದುಕೊಳ್ಳುತ್ತಾರೆ ಬಿಡಿ. ಕನಿಷ್ಠ ಅಂತಹ ದೇವರಿಗೆ ಹೆಣ್ಣು, ಮಣ್ಣು , ಹೊನ್ನು, ರಾಜಕೀಯ ಇತ್ಯಾದಿ ಚಪಲಗಳಿಲ್ಲ ತಾನೇ!
 ಕೆಸರು ಮೆತ್ತಿಕೊಂಡ ದೇವಾಲಯಕ್ಕಿಂತ ಊರಿಗೊಂದು ಶಾಲೆಯೇ ಮುಖ್ಯವಾಗುತ್ತದೆ. ಏಕೆಂದರೆ ಶಿಕ್ಷಿತ ಪ್ರಜಾವರ್ಗವೇ ಪ್ರಜಾಪ್ರಭುತ್ವ ರಾಷ್ಟ್ರ ಒಂದರ ನಿಜವಾದ ಶಕ್ತಿ ಮತ್ತು ಸಂಪತ್ತು. ಸ್ವಾತಂತ್ರ ದೊರೆತು 6-7 ದಶಕಗಳೇ ಕಳೆದರೂ ನಮ್ಮದಿನ್ನೂ ಪೂರ್ಣ ಅಕ್ಷರವಂತ ನಾಡಾಗಿಲ್ಲ. ಕಾರಣ ನಮ್ಮ ಇಡೀ ಶಿಕ್ಷಣ ವ್ಯವಸ್ಥೆ ಎಲ್ಲ ಹಂತಗಳಲ್ಲೂ ಹದಗೆಟ್ಟು ಹೋಗಿದೆ. ಹಾಗಾಗಿ ನಿಜವಾದ ಅರ್ಥದಲ್ಲಿ ನಾವಿನ್ನೂ ವಿದ್ಯಾವಂತರಾಗಿಲ್ಲ. ಪುರಾಣದ ಪೊಳ್ಳುಕಂತೆಗಳು ಜನಸಾಮಾನ್ಯರಿಗೂ ಗೊತ್ತಿದ್ದರೆ, ರಾಷ್ಟ್ರಗ್ರಂಥವಾದ ಸಂವಿಧಾನದ ಆಶಯಗಳ ಬಗ್ಗೆ ಹೆಚ್ಚಿನ ವಿದ್ಯಾವಂತರಿಗೇ ಪ್ರಾಥಮಿಕ ತಿಳುವಳಿಕೆಯ ಕೊರತೆ ಇದೆ. ಆದ್ದರಿಂದಲೇ ಸಮಾಜದಲ್ಲಿನ್ನೂ ವೈಚಾರಿಕತೆಯ ಬದಲಾಗಿ ವೌಢ್ಯಾಚರಣೆ, ಜಾತ್ಯತೀತತೆಯ ಬದಲಾಗಿ ವರ್ಣಾಶ್ರಮ ವ್ಯವಸ್ಥೆ ಇತ್ಯಾದಿಗಳೇ ನಮ್ಮಲ್ಲಿ ಮೇಲುಗೈ ಪಡೆಯುತ್ತದೆ. ಕಡೆಗಣಿಸಲ್ಪಟ್ಟ ವರ್ಗದವರು ಇನ್ನೂ ನೆಟ್ಟಗೆ ನಿಂತು ಉಸಿರಾಡುವುದಕ್ಕೂ ಹಿಂಜರಿಯುವಂತಾಗಿದೆ. ಹಾಗಾಗಿ ಹಳ್ಳಿಯ ಪ್ರತಿಯೊಂದು ಮೂಲೆಯಲ್ಲೂ ಸುಸಜ್ಜಿತ ಶಾಲೆಗಳನ್ನು ತೆರೆದು ಎಲ್ಲ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರಕುವಂತೆ ಮಾಡಲು ಎಲ್ಲ ಧರ್ಮಗುರುಗಳೂ, ಮಠ ಪೀಠಸ್ಥರೂ ಮುಂದಾದರೆ ಅಂತಹವರನ್ನು ಈ ನಾಡು ಗೌರವಿಸುತ್ತದೆ. ಇಲ್ಲವಾದರೆ ದೇವರ ಹೆಸರಲ್ಲಿ ಹರಿದುಬರುತ್ತಿರುವ ಹಣದ ಹೊಳೆಯಲ್ಲಿ ಮಿಂದು, ನಾರಿಯರ ಸೆರಗು ಹಿಡಿವ, ಭೂಮಿಕಬಳಿಸುವ, ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಳ್ಳುವ, ವಿಲಾಸಿ ಭೋಗ ಜೀವನವನ್ನು ನಡೆಸುವ ಧರ್ಮಗುರುಗಳೆಂಬ ಮುಖವಾಡ ಧರಿಸುವವರನ್ನು ನಾವು ಯಾಕಾಗಿ ಗೌರವಿಸಬೇಕು? ಆದ್ದರಿಂದ ಎಲ್ಲೆಂದರಲ್ಲಿ ಮಂದಿರ ಕಟ್ಟುವುದಕ್ಕೆ ಮುಂದಾಗುವ ಮಂದಿ, ಸರ್ವ ಜಾತಿ, ಮತ, ಧರ್ಮಗಳ ಮಕ್ಕಳಿಗೆ ಮುಕ್ತಪ್ರವೇಶವಿರುವ ವಿದ್ಯಾದೇಗುಲಗಳನ್ನು ನಿರ್ಮಿಸಲು ಮುಂದೆ ಬರಲಿ. ಅಲ್ಲಿ ಬ್ರಹ್ಮಕಲಶದ ಬದಲು ಜ್ಞಾನ ಕಲಶದ ಸತ್ರ ನಡೆಯಲಿ. ಇದುವೇ ನಾಡಿನ ನೆಮ್ಮದಿಗೆ ನಾಂದಿ. ಇಲ್ಲಿ ಸ್ಪಷ್ಟವಾಗಿ ಹೇಳಬಹುದಾದ ಅಂಶವೇನೆಂದರೆ, ಊರಿಗೊಂದು ದೇವಾಲಯ ಬಂದಾಗ ಅಲ್ಲಿನ ಜನತೆಗೆ ಒಳಿತಾಗುತ್ತದೆ ಎಂಬುವುದಕ್ಕೆ ಯಾವುದೇ ಸಮೀಕ್ಷಾ ವರದಿಗಳ ಪುರಾವೆಯಿಲ್ಲ ಆದರೆ ಶಾಲೆಯೊಂದು ಬಂದಾಗ ಜನರಲ್ಲಿ ಪ್ರಜ್ಞಾವಂತಿಕೆ ಬೆಳೆಯುತ್ತದೆ ಎಂಬುದು ನಿರ್ವಿವಾದ ಸತ್ಯ.

-ಸಿ. ಎಚ್. ಕ್ರಷ್ಣಶಾಸ್ತ್ರಿ ಬಾಳಿಲ,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News