×
Ad

ಭಾರತ ಟ್ವೆಂಟಿ-20 ವಿಶ್ವಕಪ್ ಗೆಲ್ಲಲಿದೆ: ಝಹೀರ್

Update: 2016-01-11 23:39 IST

ಮುಂಬೈ, ಜ.11: ‘‘ಆತಿಥೇಯ ಭಾರತ ತಂಡ ಮುಂಬರುವ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಉಪ ಖಂಡದ ವಾತಾವರಣದ ಲಾಭ ಪಡೆದು ಚಾಂಪಿಯನ್ ಆಗಲಿದೆ’’ ಎಂದು ಭಾರತದ ಮಾಜಿ ವೇಗದ ಬೌಲರ್ ಝಹೀರ್ ಖಾನ್ ವಿಶ್ವಾಸ ವ್ಯಕ್ತಪಡಿಸಿದರು.

ವಿಶ್ವಕಪ್ ಟೂರ್ನಿಯು ಭಾರತದ 8 ಸ್ಟೇಡಿಯಂಗಳಲ್ಲಿ ಮಾ.8 ರಿಂದ ಎಪ್ರಿಲ್ 3ರ ತನಕ ನಡೆಯಲಿದೆ. ಎ.3 ರಂದು ಕೋಲ್ಕತಾದ ಈಡನ್‌ಗಾರ್ಡನ್ಸ್ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯುವುದು. ಮಾ.10 ರಂದು ಸೂಪರ್-10 ಹಂತದ ಮೊದಲ ಪಂದ್ಯದಲ್ಲಿ ನ್ಯೂಝಿಲೆಂಡ್‌ನ್ನು ಎದುರಿಸುವ ಮೂಲಕ ಭಾರತ ತನ್ನ ಅಭಿಯಾನ ಆರಂಭಿಸಲಿದೆ.

‘‘ಈ ಬಾರಿಯ ವಿಶ್ವಕಪ್‌ನಲ್ಲಿ ಸ್ಪಿನ್ ಬೌಲರ್‌ಗಳು ಪ್ರಮುಖ ಪಾತ್ರವಹಿಸಲಿದ್ದಾರೆ. ಇದು ತಂಡಗಳಿಗೆ ಸವಾಲು ಹಾಗೂ ಲಾಭವಾಗಿದೆ. ಭಾರತ ತವರು ನೆಲದಲ್ಲಿ ಉತ್ತಮ ಪ್ರದರ್ಶನ ನೀಡಿ ಚಾಂಪಿಯನ್ ಆಗಲಿದೆ’’ ಎಂದು ಹಣಕಾಸು ವರ್ಗಾವಣೆ ಕಂಪೆನಿ ಮನಿಗ್ರಾಮ್‌ಯೊಂದಿಗೆ ಐಸಿಸಿ 8 ವರ್ಷಗಳ ಪ್ರಾಯೋಜಕ ಒಪ್ಪಂದಕ್ಕೆ ಸಹಿ ಹಾಕಿದ ಕಾರ್ಯಕ್ರಮದಲ್ಲಿ ಝಹೀರ್ ಅಭಿಪ್ರಾಯಪಟ್ಟರು.

ಈ ಕಾರ್ಯಕ್ರಮದಲ್ಲಿ ಕಂಪನಿಯ ಅಧಿಕಾರಿಗಳು ಹಾಗೂ ಐಸಿಸಿ ಸಿಇಒ ಡೇವಿಡ್ ರಿಚರ್ಡ್‌ಸನ್ ಉಪಸ್ಥಿತರಿದ್ದರು.

 ಭಾರತದಲ್ಲಿ ನಡೆದಿದ್ದ 2011ರ ವಿಶ್ವಕಪ್‌ನಲ್ಲಿ 21 ವಿಕೆಟ್‌ಗಳನ್ನು ಕಬಳಿಸಿ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದ್ದ ಝಹೀರ್, ‘‘ವಿಶ್ವಕಪ್ ಎನ್ನುವುದು ಒಂದು ವಿಶೇಷ ಟೂರ್ನಿ. ಎಲ್ಲರೂ ಖುಷಿಯಿಂದ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಾರೆ. ಏಕೆಂದರೆ, ಮುಂದಿನ ವಿಶ್ವಕಪ್‌ನಲ್ಲಿ ಆಡುತ್ತೇವೆಂಬ ಬಗ್ಗೆ ಯಾರಿಗೂ ಖಾತ್ರಿಯಿರುವುದಿಲ್ಲ’’ ಎಂದು ಝಹೀರ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News