ಡಬ್ಲುಟಿಎ ರ್ಯಾಂಕಿಂಗ್: ಸಾನಿಯಾಗೆ ಅಗ್ರ ಸ್ಥಾನ
Update: 2016-01-11 23:40 IST
ಹೊಸದಿಲ್ಲಿ, ಜ.11: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಝಾ ಸೋಮವಾರ ಇಲ್ಲಿ ಬಿಡುಗಡೆಯಾದ ಡಬ್ಲುಟಿಎ ರ್ಯಾಂಕಿಂಗ್‌ನಲ್ಲಿ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ.
ಸ್ವಿಸ್‌ನ ಮಾರ್ಟಿನಾ ಹಿಂಗಿಸ್ ಕೂಡ ಎರಡನೆ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಸಾನಿಯಾ 11,395 ಅಂಕ ಹಾಗೂ ಹಿಂಗಿಸ್ 11,355 ಅಂಕಗಳೊಂದಿಗೆ ಕ್ರಮವಾಗಿ ಮೊದಲನೆ ಹಾಗೂ ಎರಡನೆ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.
ರವಿವಾರ ಬ್ರಿಸ್ಬೇನ್‌ನಲ್ಲಿ ಸತತ 26ನೆ ಪಂದ್ಯವನ್ನು ಜಯಿಸಿದ್ದ ಸಾನಿಯಾ ಹಾಗೂ ಮಾರ್ಟಿನಾ ಆರನೆ ಪ್ರಶಸ್ತಿಯನ್ನು ಜಯಿಸಿದ್ದರು. 2012ರ ಬಳಿಕ ಸಾನಿಯಾ-ಮಾರ್ಟಿನಾ ಜೋಡಿ ಸುದೀರ್ಘ ಗೆಲುವು ದಾಖಲಿಸುತ್ತಾ ಬಂದಿದೆ.
ಪುರುಷರ ಸಿಂಗಲ್ಸ್‌ನಲ್ಲಿ ಸರ್ಬಿಯದ ನೊವಾಕ್ ಜೊಕೊವಿಕ್,ಬ್ರಿಟನ್‌ನ ಆ್ಯಂಡಿ ಮರ್ರೆ ಹಾಗೂ ರೋಜರ್ ಫೆಡರರ್ ಅಗ್ರ-3 ಸ್ಥಾನದಲ್ಲಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಭಾರತದ ರೋಹನ್ ಬೋಪಣ್ಣ ಟಾಪ್-10ರಲ್ಲಿದ್ದಾರೆ.